Sunday, August 31, 2008

ಲವ್ವೇ ಬೇರೆ... ಇಷ್ಟವೇ ಬೇರೆ...


ಕ್ಲಾಸುಗಳು ಇನ್ನೂ ಸರಿಯಾಗಿ ಪ್ರಾರಂಭವಾಗಿಲ್ಲ. ಹೊಸ- ಹೊಸ ಪರಿಚಯ. ಹೈಸ್ಕೂಲಿನಲ್ಲಾದರೆ ಅಲ್ಲಿನ ಸುತ್ತಮುತ್ತಲವರೇ ಆಗಿದ್ದರು. ಆದರೆ ಇಲ್ಲಿ ಬಹಳ ದೂರ-ದೂರದಿಂದ ಬಂದವರು...ಯಾವ ಯಾವ ತರಹದವರು ಇರುತ್ತಾರೋ.. ಇನ್ನು ಯಾರೂ ಸರಿಯಾಗಿ ಪರಿಚಯ ಆಗಿಲ್ಲ. ಮೊದಲು ಈ ನೆಂಟರಮನೆಯನ್ನು ಬಿಟ್ಟು ಬೇರೆ ಎಲ್ಲಾದರೂ ಸೇರಿಕೊಳ್ಳಬೇಕು; ನನ್ನ ಪ್ರೀತಿಸುವ ಜಾಗದಲ್ಲಿ. ಹಿಂದೆ... ಮುಂದಕ್ಕೆ...

ಮಳೆಗಾಲ, ಅದರಲ್ಲೂ ಮಲೆನಾಡಿನ ಮಳೆಗಾಲವೆಂದರೆ ಅದರದ್ದೇ ಒಂದು ವೈಶಿಷ್ಯ. ವರ್ಷದ ಆರು ತಿಂಗಳು ಮಳೆಗಾಲವೇ. ಎಡೆಬಿಡದೇ ಹೊಯ್ಯುವ ಮಳೆ. ಎಲ್ಲೆಲ್ಲೂ ಕೆಂಪು-ಹಸಿರು ಸಂಯೋಗದ ದೃಶ್ಯ. ಇನಿಯನ ಪ್ರೀತಿಯಂತೆ ಒಮ್ಮೆ ರಭಸದಿಂದ ಮತ್ತೊಮ್ಮೆ ಮೃದುವಾಗಿ ಹೊಯ್ಯುವ ಮಳೆ...

ಪ್ರತಿ ಜೂನ್‌ನಲ್ಲಿ ಕಾಲೇಜಿಗೆ ಯೌವನ ಮರುಕಳಿಸುತ್ತದೆ. ಎಲ್ಲೆಲ್ಲೂ ಹೊಸದಾಗಿ ಕಾಲೇಜ್ ಗೆ ಬಂದಿರುವವರ ಕಲರವ..ಎರಡನೆ ಪಿಯೂಸಿಯವರು ಮಾತ್ರ ಗಂಭೀರ. ಈಗತಾನೆ ಹೈಸ್ಕೂಲ್ ಮುಗಿಸಿ ಬಂದಿರುವುದರಿಂದ, ಅದೇ ಮುಗ್ಧತೆ..ಚಿಕ್ಕಮಕ್ಕಳ ಹಾಗೆ ಗಲಾಟೆ ಮಾಡುತ್ತ ನಮ್ಮದೇ ಲೋಕದಲ್ಲಿ ಕ್ಲಾಸಿನಲ್ಲಿ ಕುಳಿತುಕೊಂಡಿದ್ದೆವು.

ಎಲ್ಲ ಬೇರೆ ಬೇರೆ ಹೈಸ್ಕೂಲುಗಳಿಂದ ಬಂದವರು. ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳುವ ತವಕ. ಜೊತೆಯಲ್ಲಿ ಕುಮ್ಮಿ ಕೂಡಾ ಇದ್ದುದರಿಂದ ಕ್ಲಾಸಿನಲ್ಲಿ ನನಗೆ ಅಂತಹ ಒಂಟಿತನವೇನೂ ಕಾಡಲಿಲ್ಲ. ನಾನು ಕುಮ್ಮಿ ಒಂದು ಮೂಲೆಯ ಬೇಂಚಿನ ಮೇಲೆ ಕುಳಿತು ಒಬ್ಬಬ್ಬರನ್ನೇ ಆರಿಸಿಕೊಂಡು ವಿಮರ್ಶೆ ಮಾಡುತ್ತಿದ್ದೆವು. "ಅವಳು ಬಹಳ ಸ್ಟೈಲ್ ಹೊಡೆಯುತ್ತಾಳೆ. ಇವಳು ಬಹಳ ಬುದ್ಧಿವಂತೆ ಅನಿಸುತ್ತಾಳೆ... ಓ! ಅವನನ್ನು ನೋಡು ತನ್ನನ್ನ ತಾನು ಹೃತಿಕ್ ರೋಷನ್ ಎಂದುಕೊಂಡುಬಿಟ್ಟಿದ್ದಾನೆ"... ಹೀಗೆ ಕಾಮೆಂಟ್‌ಗಳು..

ಸುಮ್ಮನೆ ಕೂತು ಅವರನ್ನೆಲ್ಲ ಗಮನಿಸುತ್ತಿದ್ದೆ... ಈ ಹುಡುಗಿಯರೆಲ್ಲ ಟೆಂತ್ ಲ್ಲಿ ಎಷ್ಟು ಮಾರ್ಕ್ಸ್ ತೆಗೆದೆ, ಯಾವೂರು, ಯಾರ ಜಡೆ ಉದ್ದ ಇದೆ... ಹೀಗೆ ಒಂದಕ್ಕೊಂದು ಸಂಬಂಧವಿಲ್ಲದಂತೆ, ಇವತ್ತೇ ಕಾಲೇಜಿನ ಕಡೆಯ ದಿನ ಎಂಬಂತೆ ಹೊಸ ಸ್ನೇಹಿತೆಯರಲ್ಲಿ ಮಾತಾಡುತ್ತ ಕುಳಿತಿದ್ದರು. ಹುಡುಗರೆಲ್ಲ ಹುಡುಗಿಯರ ಸಾಲಿನ ಕಡೆ ತಿರುಗಿ ತಮ್ಮ ಕ್ಲಾಸಿನ 'ಬ್ಯೂಟಿಕ್ವೀನ್' ಯಾರಾಗಬಹುದೆಂದು ಚರ್ಚೆಯಲ್ಲಿ ತೊಡಗಿದ್ದರು. ಮತ್ತೆ ಕೆಲವರು ಹುಡುಗಿಯರೆಲ್ಲ ತಮ್ಮನ್ನೇ ನೋಡುತ್ತಾರೆ ಎಂಬಂತೆ ಎದೆಯುಬ್ಬಿಸಿ ಅತ್ತಿತ್ತ ತಿರುಗುತ್ತಿದ್ದರು.

ಇನ್ನು ಗಟ್ಟಿಯಾಗಿ ಮೂಡದ ಮೀಸೆ, ಹುಡುಗಿಯರ ಮೇಲೆ ಆಸೆಯಿದ್ದರೂ ಕಾಮದ ಸೋಂಕಿಲ್ಲದ ನೋಟ.. ಹೈಸ್ಕೂಲ್ ಮಕ್ಕಳ ತುಂಟಾಟ.. 16 ವರ್ಷದ ನಂತರ ಸ್ವಾತಂತ್ಯ್ರ ಸಿಕ್ಕಹಾಗೆ ಸಂಭ್ರಮಿಸುವ ರೀತಿ.. ಇಂಥ ಹುಡುಗರನ್ನು ನೋಡಲು ಖುಷಿ..

ಪಕ್ಕದಲ್ಲಿ ಕುಮ್ಮಿಗೆ ಹೀಗೆ ನನಗನ್ನಿಸಿದ್ದನ್ನು ಹೇಳಬೇಕೆಂದು ಕೊಂಡರೂ ಏನೋ ಮುಜುಗರ. 'ಅಯ್ಯೋ! ಹುಡುಗರ ಸುಮಿ ಹೀಗೆಲ್ಲ ಅಂದುಕೊಳ್ಲುತ್ತಾರಲ್ಲ' ಎಂದು ಅವಳು ತಿಳಿದುಕೊಂಡು. ಅವಳ ದೃಷ್ಟಿಯಲ್ಲಿ ಹಗುರಾಗಿ ಬಿಡುವ ಆತಂಕದಿಂದ ಸುಮ್ಮನಿದ್ದೆ.

ಹೀಗೆ ಎದುರಾಎದುರು ಹುಡುಗರ ಬಗ್ಗೆ ಆಪ್ತ ಸ್ನೇಹಿತೆಯ ಹತ್ತಿರವೂ ಚರ್ಚಿಸುವಹಾಗಿಲ್ಲ. ಏಕೆಂದರೆ ಹೀಗೆ ಮಾತನಾಡುವವಳನ್ನು ಹುಡುಗರಾದಿಯಾಗಿ ಎಲ್ಲರೂ 'ಚಾಲೂ' ಎಂದೇ ಗುರುತಿಸುತ್ತಾರೆ. ಆದ್ರೂ ಸಾಮಾನ್ಯವಾಗಿ ಎಲ್ಲ ಹುಡುಗಿಯರೂ ನನ್ನ ತರಹವೇ ಹುಡುಗರ ಬಗ್ಗೆ ವಿಚಾರ ಮಾಡುತ್ತಾರಲ್ಲ. ಅದನ್ನು ಹೇಳಿಬಿಟ್ಟರೆ 'ಚಾಲು' ಏಕೆ ಆಗುತ್ತಾರೆ?

ಕುಮ್ಮಿಯ ಪ್ರಕಾರ ಒಂದುವೇಳೆ ಇಷ್ಟಪಡುವುದಾದರೆ ಒಬ್ಬನನ್ನೇ ಇಷ್ಟಪಡಬೇಕು ಮತ್ತು 'ಲವ್' ಮಾಡಬೇಕಂತೆ.. ಅಂದರೆ ಎಲ್ಲವೂ 'ಅವನಿಗೇ ಸಮರ್ಪಣೆ' ಅಂತ. ಇದರ ವಿರುದ್ಧ ಹೋದರೆ ಗ್ಯಾರಂಟಿ ಅವಳಿಗೆ 'ಫ್ಲರ್ಟ್' ಪಟ್ಟ ಕಟ್ಟಿಟ್ಟ ಬುತ್ತಿ.

ನನಗೇಕೋ ಕುಮ್ಮಿಯ ಈ ಮಾತು ಸರಿ ಎನಿಸುತ್ತಿಲ್ಲ. ಇಷ್ಟವೇ ಬೇರೆ; ಇಷ್ಟಪಡಬಹುದು. ಆದರೆ ಒಬ್ಬನ ಪ್ರೀ ತಿ ಮಾಡಬೇಕು. ಆದರೆ ಒಬ್ಬನನ್ನು ಪ್ರೀತಿ ಮಾಡುತ್ತಿದ್ದಾಳೆಂದು ಮತ್ತೊಬ್ಬನನ್ನು ಇಷ್ಟಪಡಬಾರದು ಎನ್ನುವುದು ಯಾವ ನ್ಯಾಯ?

ನನಗನ್ನಿಸಿದಂತೆ ಒಬ್ಬಳು ಹುಡುಗಿ ಒಬ್ಬ ಹುಡುಗನೊಂದಿಗೆ ಎಷ್ಟೇ ಆಳವಾದ ಪ್ರೀತಿಯಲ್ಲಿರಲಿ; ಬೇರೆ ಹುಡುಗರನ್ನು ಇಷ್ಟಪಡದೇ ಹೋಗಲಾರಳು. ಅವಳು ಹೇಳಿಕೊಳ್ಳುವುದಿಲ್ಲ; ಅಷ್ಟೇ. ಹೇಳಿಕೊಂಡರೆ ಆಗಲಿರುವ ಅನಾಹುತದ ಬಗ್ಗೆ ಅವಳು ಯೋಚಿಸಿಯೇ ಸುಮ್ಮನಾಗಿಬಿಡುತ್ತಾಳೆ. ಮುಚ್ಚಿಟ್ಟರೆ ಯಾರಿಗೂ ಗೊತ್ತಾಗುವುದಿಲ್ಲ ಸರಿ; ಆದರೆ ವಿಷಯ ಮಾತ್ರ ಸತ್ಯ ಆಗಿರುವುದಿಲ್ಲವೆ?

ನನಗೆ ಗೊತ್ತು, ಇದನ್ನು ಡೈರಿಯಲ್ಲಲ್ಲದೆ ಇನ್ನೆಲ್ಲೂ ಹೇಳಲಾರೆ. ಹೇಳಿದರೆ ನನಗೂ 'ಫ್ಲರ್ಟ್' ಎನಿಸಿಕೊಳ್ಳುವ ಭಯ!

Saturday, August 23, 2008

ಏನೂ ಓದದೆ ಇರುವುದು ಕೆಟ್ಟ ಸಾಹಿತ್ಯ ಓದುವುದಕ್ಕಿಂತ ಅಪಾಯಕಾರಿ


ಅಕಸ್ಮಾತ್ ಫೇಲಾದರೂ ಅಷ್ಟು ಫೀಲ್ ಆಗಲಾರರು. ಅದೇ, ಎಕ್ಯುಪ್‌ಮೆಂಟ್, ಟ್ಯೂಷನ್ , ಕ್ಲಾಸು, ಟೆಸ್ಟ್ ಗಳು ಎಂದು ದಿನದ ಹದಿನಾಲ್ಕು-ಹದಿನೈದು ತಾಸು ಅಭ್ಯಾಸದಲ್ಲೇ ಮುಳುಗಿರುವ ವಿದ್ಯಾರ್ಥಿ ಫೇಲ್ ಆದರೆ, ಆ ಆಘಾತವನ್ನು 17-18ರ ಎಳೆಯ ಮನಸ್ಸು ಸಹಿಸಿಕೊಳ್ಳಲು ಸಾಧ್ಯವಿದೆಯೆ? 'ಆರ್ಟ್ಸ್ ತೆಗೆದುಕೊಂಡು ನಾನು ಡಾಕ್ಟರ್ ಆಗಲು ಸಾಧ್ಯವಿಲ್ಲದಿರಬಹುದು, ಆದರೆ ಅದಕ್ಕಾಗಿ ಇಷ್ಟೆಲ್ಲ ಬೆಲೆ ತೆರಲು ನಾನು ಸಿದ್ಧಳಿಲ್ಲ!
(ಮುಂದಕ್ಕೆ).....

ಅಪ್ಪನದೊಂದು ದೊಡ್ಡ ಪುಸ್ತಕ ಸಂಗ್ರಹವೇ ಇದೆ. ಪ್ರಮುಖವಾಗಿ ಇತಿಹಾಸ, ವಿಜ್ಞಾನ, ವಿವೇಕಾನಂದರಿಗೆ ಸಂಬಂಧಿಸಿದ ಪುಸ್ತಕಗಳು. ಬಹುಶಃ ಇದೇ ನನ್ನ ಪುಸ್ತಕ ಪ್ರೀತಿಗೆ ಕಾರಣವೇನೋ. ಓದಲು ಬಾರದಿದ್ದವಳಷ್ಟಿದ್ದಾಗ ಅದರಲ್ಲಿನ ಶಿಲಾಯುಗದ ಮಾನವ, ವಿವಿಧ ದೇಶಗಳ, ವೈಜ್ಞಾನಿಕ ಉಪಕರಣಗಳ ಚಿತ್ರಗಳನ್ನು ನೋಡುತ್ತ ಖುಷಿಪಡುತ್ತಿದ್ದೆ.

ಓದಲು ಕಲಿತ ನಂತರ ಆ ಪುಸ್ತಕಗಳೆಲ್ಲ ಬಹಳ ಬೋರು ಎನಿಸಿಬಿಟ್ಟವು. ಬಾಲಮಂಗಳ, ಚಂದಮಾಮಗಳೇ ಚೆಂದ ಎನಿಸುತ್ತಿದ್ದವು. ಹೈಸ್ಕೂಲ್ ಸೇರಿದ ಮೇಲೆ ಬಾಲಮಂಗಳಗಳು 'ಚಿಕ್ಕವರ ಪುಸ್ತಕ' ಎಂಬ ಅಸಡ್ಡೆ ಮೂಡಿಬಿಟ್ಟಿತು. 8-9ನೇ ಕ್ಲಾಸಿನವಳಿರುವಾಗ ಕದ್ದು-ಮುಚ್ಚಿ, ಹುಲ್ಲು ಅಟ್ಟಗಳಲ್ಲೆಲ್ಲ ಅಡಗಿ 'ಕೈಮ್' 'ಸ್ಪೈ' ಓದುತ್ತಿದ್ದೆ. ಬಿ.ವಿ.ಅನಂತರಾಮ್, ಕೌಂಡಿನ್ಯರ ಸಸ್ಪೆನ್ಸ್ ಕಥೆಗಳು. ಅನಂತರಾಮರ 'ಮಹೇಶ'ನ ಸಾಹಸಗಳೆಲ್ಲ ಬಹಳ ಇಷ್ಟವಾಗಿದ್ದವು.

ಈ ಸಸ್ಪೆನ್ಸ್ ಕಥೆಗಳ ಏಕತಾನತೆ ಬಹಳ ಬೇಗ ಬೋರ್ ಹಿಡಿಸಿಬಿಟ್ಟವು.ಆದರೆ ಇವು ಏನೋ ಓದುವ ಉತ್ಸಾಹವನ್ನು ಹೆಚ್ಚಿಸಿದ್ದು ಮಾತ್ರ ಸುಳ್ಳಲ್ಲ. ಆಗ ಶೀಲಕ್ಕನಿಂದ ಪರಿಚಯವಾದದ್ದೇ ಯಂಡಮೂರಿ ಕಾದಂಬರಿಗಳು. ನನ್ನ ಗೆಳತಿಯರಲ್ಲಿ ಕೆಲವರು " ನಾನು ಕಾದಂಬರಿಗಳನ್ನು ಓದುವುದೇ ಇಲ್ಲ'' ಎಂದು ಹೆಮ್ಮಯಿಂದ ಹೇಳುತ್ತಾರೆ...

ಕಾದಂಬರಿಗಳನ್ನು ಓದುವುದು ಒಂದು ಕೀಳು ಚಟ ಎನ್ನುವುದು ಅವರ ಭಾವನೆ. ಕಾದಂಬರಿಗಳಲ್ಲಿ ಸಂದರ್ಭಕ್ಕನುಗುಣವಾಗಿ ಬರುವ ರಸಗಳಿಗೆಗಳು ಅವರಿಗೆ ಮೈಲಿಗೆ ವಸ್ತು. ಎಲ್ಲರೆದುರಿಗೂ 'ಇಶ್ಷೀ' ಎಂದರೂ ಒಳಗೊಳಗೇ 'ಅಂತಹವನ್ನು' ಓದಲು ಹವಣಿಸುತ್ತಿದ್ದರು......!

ನನ್ನ ಅಜ್ಜಿಯ ಮನೆಯ ಹತ್ತಿರ ಒಂದು ಸಮೃದ್ಧವಾದ ಲೈಬ್ರರಿ ಇದೆ. ಅಲ್ಲಿರುವ? ಯಂಡಮೂರಿಯ ಪುಸ್ತಕಗಳನ್ನು ಓದಿ, ಇಲ್ಲದಿದ್ದನ್ನು ಯಾರಯಾರ ಹತ್ತಿರವೋ ಬೇಡಿ-ಕಾಡಿ ಕಾದಂಬರಿಗಳನ್ನು ತಂದು ನಾನು- ಕುಮ್ಮಿ ಓದುತ್ತಿದ್ದೆವು. ಆ ಪುಸ್ತಕದೊಳಗೆ ನಮ್ಮನ್ನು ಪ್ರಭಾವಿಸಿದ ಸಾಲುಗಳನ್ನು ಬರೆದುಕೊಳ್ಳುತ್ತಿದ್ದೆವು. ಯಂಡಮೂರಿ ನಮ್ಮ ಆರಾಧ್ಯ ದೈವವಾಗಿಬಿಟ್ಟಿದ್ದ. ಅವರ ಕಾದಂಬರಿಗಳು ನಮ್ಮನ್ನು ಎಲ್ಲೋ ಕನಸಿನ ಲೋಕಕ್ಕೆ ಸೆಳೆದೊಯ್ಯುತ್ತಿದ್ದವು.

ಅಲ್ಲಿ ಬರುವ ಯಾವುದೋ ಆದರ್ಶ ಕ್ಯಾರಕ್ಟರಿನಂತೆ ನಾನೂ ಆಗಬೇಕು ಎಂದು ಬಯಸುತ್ತಿದ್ದೆ. ಜೀವನವನ್ನು ಇನ್ನೂ ಪ್ರೀತಿಸುವಂತೆ ಆ ಕಾದಂಬರಿಗಳು ಮಾಡುತ್ತಿದ್ದವು. 'ಬೆಳದಿಂಗಳ ಬಾಲೆ' ಓದಿ ಗಳಗಳನೆ ಅತ್ತುಬಿಟ್ಟಿದ್ದೆ. 'ದುಡ್ಡು ದುಡ್ಡು ಓದಿ ಗಾಂಧಿಯ ಬುದ್ಧಿವಂತಿಕೆಗೆ ಮಾರುಹೋಗಿದ್ದೆ. 'ಪವಿತ್ರ ಯುದ್ಧ' ಓದಿ ಆಹಾ, ಪ್ರೇಮಿ ಅಂದ್ರೆ ಹೀಗಿರಬೇಕು ಅಂದುಕೊಂಡಿದ್ದೆ. ಆ ಕಾದಂಬರಿಗಳಿಂದ ಎಂತಹ ಕನಸಿನ ಲೋಕ ಸೃಷ್ಟಿಸಿಕೊಳ್ಳುತ್ತಿದ್ದೆ ಅಂದರೆ ಅವು `ಸುಳ್ಳು' ಎನಿಸುತ್ತಲೇ ಇರಲಿಲ್ಲ.

ಇನ್ನೂ ಕಾಲೇಜಿಗೆ ಹೋಗಲು ಒಂದು ತಿಂಗಳು ಬಾಕಿ ಇದೆ. ಆರಾಮವಾಗಿ ಒಂದಿಷ್ಟು ಪುಸ್ತಕಗಳನ್ನು ಓದಿಕೊಳ್ಳಬಹುದು. ಆಹಾ! ಏನು ಸುಖ ಆ ಅಕ್ಷರಗಳ ಕಲ್ಪನಾ ಲೋಕದಲ್ಲಿ ವಿಹರಿಸುವುದು. ಅಲ್ಲಿ ಬರುವ ಪ್ರತಿ ಘಟನೆಯೂ ನನ್ನ ಕಣ್ಣಮುಂದೆಯೇ ನಡೆದಿದ್ದೇನೋ ಅನ್ನುವ? ಅನುಭವಿಸುವುದು ಎಂತಹ ರೋಮಾಂಚನಕಾರಿ!

ಪುಸ್ತಕಗಳು ಅನೇಕ ಸಾಧನೆಗಳಿಗೆ ಪ್ರೇರಕ. ಹೊಸ ದೃಷ್ಟಿಕೋನ ರೂಪಿಸಿಕೊಳ್ಳಲು ಸಹಾಯಕಾರಿ... ಅದ್ಯಾವ ಗಳಿಗೆಯಲ್ಲಿ ಕುಮ್ಮಿ ಯಂಡಮೂರಿ ಬರೆದ 'ಧ್ಯೇಯ'ವನ್ನು ನನ್ನ ಕೈಗಿತ್ತಳೋ..ನನ್ನನ್ನು ಅತ್ಯಂತ ಪ್ರಭಾವಿತಗೊಳಿಸಿದ ಪುಸ್ತಕ ಅದು. ಅಲ್ಲಿಯ ಪ್ರಮುಖ ಪಾತ್ರ 'ನಿಖಿತಾ'ಳನ್ನು ಬಹುಶಃ ನಾನು ಜೀವನದ ಕೊನೆಯತನಕವೂ ಮರೆಯಲಾರೆ. 'ನಾನು ಹೀಗೆ ಬದುಕಬೇಕು' ಎಂದು ಜೀವನದ ಬಗ್ಗೆ ಒಂದು ಸ್ಪಷ್ಟ ಗುರಿಯನ್ನು ರೂಪಿಸಿಕೊಳ್ಳುವ ಬಗ್ಗೆ ವಿಚಾರ ಮಾಡಲು 'ನಿಖಿತಾ'ಳೇ ಪ್ರೇರಕ.

'ಧ್ಯೇಯ' ಓದಿದಾಗಿನಿಂದ ನನ್ನ ಒಳಗಿನ ಬದಲಾವಣೆ ನನಗೇ ಸ್ಪಷ್ಟವಾಗಿ ಗೋಚರಿಸುತ್ತಿದೆ. ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದೆ, ಮುಂದಿನ ಜೀವನದ ಬಗ್ಗೆ ಇನಿತೂ ತಲೆ ಕೆಡಿಸಿಕೊಳ್ಳದೆ ಆರಾಮವಾಗಿ ಕಾಲಹರಣ ಮಾಡುತ್ತಿದ್ದ ನಾನು ಇತ್ತೀಚೆಗೆ ಗಂಭೀರವಾಗುತ್ತಿದ್ದೇನೆ ಎನಿಸುತ್ತದೆ. ಒಂದು ಪುಸ್ತಕ ಇಷ್ಟೆಲ್ಲಾ ಪ್ರಭಾವ ಬೀರುವುದನ್ನು ನೋಡಿ ನನಗೇ ಸೋಜಿಗವೆನಿಸುತ್ತಿದೆ.

ಪ್ರಸಿದ್ಧ ಲೇಖಕರೊಬ್ಬರು "ಏನೂ ಓದದೆ ಇರುವುದು ಕೆಟ್ಟ ಸಾಹಿತ್ಯ ಓದುವುದಕ್ಕಿಂತ ಅಪಾಯಕಾರಿ" ಎನ್ನುತ್ತಾರೆ. ಸತ್ಯ ಈ ಮಾತು. ಪುಸ್ತಕವನ್ನು ಪ್ರೀತಿಸದವರು ಜೀವನವನ್ನೂ ಸಂಪೂರ್ಣವಾಗಿ ಪ್ರೀತಿಸಲಾರರು; ವಿಶಾಲ ದೃಷ್ಟಿಯಲ್ಲಿ ವಿಚಾರ ಮಾಡಲಾರರು ಎನ್ನುವುದು ಇಲ್ಲಿಯ ತನಕ ನನ್ನ ಅನುಭವಕ್ಕೆ ಬಂದದ್ದು.

ಸ್ವಲ್ಪ ತಿಳುವಳಿಕೆ ಮೂಡಿದ ಪ್ರಾರಂಭದಲ್ಲಿ ಕೆಟ್ಟ ಸಾಹಿತ್ಯದಿಂದಲೇ ನನ್ನ ಓದೂ ಪ್ರಾರಂಭವಾಗಿತ್ತು. ಆದರೆ 'ಸ್ಪೈ', 'ಕ್ರೈಮ್'ಗಳು ಓದುವ ದಾಹ ಹೆಚ್ಚಿಸಿದ್ದವು. ಒಮ್ಮೆಲೇ ಅತ್ಯುತ್ತಮ ಪುಸ್ತಕವೆಂದು 'ಭಾರತದ ಧಾರ್ಮಿಕ ಸ್ವರೂಪ' ಓದಲು ಪ್ರಾರಂಭಿಸಿದ್ದರೆ ಪುಸ್ತಕದ ಬಗ್ಗೆ ನಿರಾಸಕ್ತಿ ಮೂಡಿಬಿಡುತ್ತಿತ್ತೇನೋ!

ವಯಸ್ಸು, ಬುದ್ಧಿ ಬೆಳೆದಂತೆ ಪುಸ್ತಕಗಳ ಬಗ್ಗೆ ಅಭಿರುಚಿಯೂ ಬದಲಾಗುತ್ತದೆ. ಈಗ 'ಸ್ಪೈ, ಕ್ರೈಮ್'ಗಳಂತಹ ಪುಸ್ತಕಗಳು ನನ್ನಲ್ಲಿ ಯಾವ ಕುತೂಹಲವನ್ನೂ ಕೆರಳಿಸಲಾರದು. ಬದಲಾಗಿ ಕನಸು ಬಿತ್ತುವ ಕಾದಂಬರಿಗಳೇ ಬಹಳ ಪ್ರೀತಿ... ಏನೂ ಓದದೆ ಇರುವುದು

Saturday, March 15, 2008

ಪಿಯೂಸಿ ಎಂಬ ರೋಮಾಂಚನದ ಹೊಸ್ತಿಲಲ್ಲಿ ನಿಂತು...


ಪರೀಕ್ಷೆಗಳೆಲ್ಲ ಮುಗಿದಿದೆ. ಒಂದು ಕಡೆ ಸಂತೋಷವಾದರೆ ಇನ್ನೊಂದು ಕಡೆ ದುಃಖ; ಪ್ರೀತಿಯ ಶಾಲೆ ಬಿಟ್ಟುಹೋಗುವ ದುಃಖ... ನೆಲ್ಲಿಕಾಯಿಯಿಂದ ಹಿಡಿದು ಕಣ್ಣೀರತನಕ ಹಂಚಿಕೊಂಡ ಸ್ನೇಹಿತರನ್ನು ಬಿಟ್ಟುಹೋಗುವ ನೋವು.

ಸೊಕ್ಕಿನ ಸೋಡಾಬುಡ್ಡಿ ಸ್ಮಿತಾಳಿಂದ ಹಿಡಿದು 'ದೊಡ್ಡಪ್ಪ' ಸರ್ ತನಕ ಎಲ್ಲರ ಹತ್ತಿರವೂ ಆಟೋಗ್ರಾಫ್, ಸ್ಲ್ಯಾಮ್‌ಗಳನ್ನು ಹಾಕಿಸಿಕೊಂಡಾಗಿತ್ತು. ಸೆಂಡ್‌ ಆಫ್ ಕೂಡಾ ಮುಗಿದಿತ್ತು.

ಸೆಂಡ್‌ ಆಫ್ ದಿನ ಎಲ್ಲರ ಕಣ್ಣಲ್ಲೂ ನೀರು. ಮಾತು ಯಾರಿಗೂ ಬೇಡವಾಗಿತ್ತು. ಫೋಟೋ ಸೆಶನ್‌ನಲ್ಲಿ ಬಾರದಿದ್ದ ನಗು ತರಿಸಿಕೊಂಡು ಗ್ರೂಪ್ ಫೋಟೋ ತೆಗೆಸಿಕೊಂಡೂ ಆಗಿತ್ತು. ಎಲ್ಲರಿಗೂ ಮುಂದಿನ ಯೋಚನೆ...

ಮನೆ-ಶಾಲೆ ಎಂದು ಪುಟ್ಟ ಪ್ರಪಂಚದೊಳಗಿದ್ದ ನಾವೆಲ್ಲ ಕಾಲೇಜು ಎನ್ನುವ ಹೊರ ಜಗತ್ತಿಗೆ ಕಾಲಿಡಲಿದ್ದೇವೆ. ಏನೇನು ಅನುಭವಗಳು, ಸವಾಲು ಸಮಸ್ಯೆಗಳನ್ನು ಎದುರಿಸಲಿದ್ದೇವೋ ಏನೋ... ಪರಿಸ್ಥಿತಿಗಳು ನಮ್ಮನ್ನು ಹೇಗೇಗೆ ಬದಲಾಯಿಸುವುದೋ ಏನೋ... ಹತ್ತಿರದಲ್ಲೆಲ್ಲೂ ಕಾಲೇಜು ಇಲ್ಲದಿದ್ದುದರಿಂದ ಮನೆ ಬಿಟ್ಟು, ಅಪ್ಪ-ಅಮ್ಮನನ್ನು ಬಿಟ್ಟು ದೂರ ಇರುವುದು ಅನಿವಾರ್ಯ. ಹಗಲು-ರಾತ್ರಿ ಇದೇ ಚಿಂತೆ. ಮನೆ ಬಿಟ್ಟು ಹೇಗಿರಲಿ? ಕುಮ್ಮಿ, ಪಕ್ಕಿ, ಪಚ್ಚಿ, ಮಂಗಿ... ಇವರನ್ನೆಲ್ಲ ಬಿಟ್ಟು ಹೇಗಿರಲಿ? ಕಾಲೇಜು ಜೀವನದಲ್ಲಿ ಎಂತೆಂಥವರು ಸಿಗುತ್ತಾರೋ....


ಪ್ರತಿವಾರ ಅಮ್ಮನ ಕೈಯ ತಲೆಸ್ನಾನ, ಅಪ್ಪನ ಹೊಟ್ಟೆಯ ಮೇಲೆ ತಲೆಯಿರಿಸಿಕೊಂಡು ಟಿ.ವಿ ನೋಡುವ ಖುಷಿ- ಇವು ಯಾವುದೂ ಇರದು. ನನಗೆ ಗೊತ್ತು, ಇಷ್ಟು ದಿನ ಮನೆಯಲ್ಲಿ ಇದ್ದುದ್ದೇ ಬಂತು; ಇನ್ನು ಮುಂದೆ ವರ್ಷಾನುಗಟ್ಟಲೆ ನನ್ನ ಮನೆಯಲ್ಲಿ ಇರುವ ಅವಕಾಶ ಸಿಗದೆನೋ. ವಿದ್ಯಾಭ್ಯಾಸಕ್ಕೆಂದು ಮನೆ ಬಿಟ್ಟ ಹುಡುಗಿಗೆ; ಕಲಿತು ಮುಗಿದ ತಕ್ಷಣ ಮದುವೆ ಮಾಡಿ ಮತ್ತೊಂದು ಮನೆಗೆ ಕಳುಹಿಸಿಬಿಡುತ್ತಾರೆ.

ಬಹುಶಃ ಇನ್ನು ಕೆಲವೇ ದಿನಗಳು ಮಾತ್ರ ನಾನು ಈ ಮನೆಯಲ್ಲಿರುತ್ತೇನೆ. ಆಮೇಲೆ ಶಾಶ್ವತವಾಗಿ ಈ ಮನೆಗೆ ಕೇವಲ ಕೆಲ ದಿನಗಳ ಅತಿಥಿ ಮಾತ್ರ... ಈ ದುಃಖ ಒಂದು ಕಡೆಯಾದರೆ ಪಿಯೂಸಿನಲ್ಲಿ ಯಾವ ವಿಷಯ ತೆಗೆದುಕೊಳ್ಳಬೇಕು ಎಂಬ ಗೊಂದಲ ಮತ್ತೊಂದೆಡೆ.

ಒಬ್ಬೊಬ್ಬರದು ಒಂದೊಂದು ಸಲಹೆ. ಸಂಬಂಧಿಗಳು, ಸೀನಿಯರ್ಸ್. ಎಲ್ಲರೂ ತಮಗೆ ಸರಿ ಎನಿಸಿದ ವಿಷಯ ಸೂಚಿಸಿ ಅದನ್ನೇ ಆಯ್ಕೆ ಮಾಡಿಕೋ, ಮುಂದೆ ಒಳ್ಳೆಯ ಫ್ಯೂಚರ್ ನಿನ್ನದಾಗುತ್ತದೆ ಎನ್ನುವವರೆ. ಅದರಲ್ಲೂ ಮುಖ್ಯವಾಗಿ ಸೈನ್ಸ್ ತಗೋ ಎನ್ನುವ ಒತ್ತಡ. ಯಾರಾದರೂ ಪರಿಚಯಸ್ಥರು ಸಿಕ್ಕಾಗ 10th ಮುಗಿಯಿತು ಎಂದರೆ ಸಾಕು. ಸಲಹೆಗಳ ಕೊಳದಲ್ಲಿ ಅದ್ದಿ ಅದ್ದಿ ತೆಗೆಯುತ್ತಾರೆ. ಆದರೆ ಪುಣ್ಯಕ್ಕೆ ಬೇರೆಯವರಂತೆ ಅಪ್ಪ-ಅಮ್ಮ ನನ್ನ ಮೇಲೆ ಇದ್ಯಾವುದೇ ಒತ್ತಡ ಹೇರಿರಲಿಲ್ಲ.

ಲ್ಯಾಬ್ ಗಳಲ್ಲಿ ಕುಳಿತು ಆ ಎಕ್ವಿಪ್ ಮೆಂಟ್ ಗಳ ಮಧ್ಯೆ ನಾನೂ ಒಂದು ಎಕ್ವಿಪ್ ಮೆಂಟ್ ಆಗುವುದು ನನಗಿಷ್ಟವಿರಲಿಲ್ಲ. ಅಣ್ಣ ಸೈನ್ಸ್ ತೆಗೆದುಕೊಂಡು ಪೇಚಾಡುವುದನ್ನು ನೋಡೇ ಅದಕ್ಕೆ ಕೈಮುಗಿದಿದ್ದೆ. ತಲೆಗೆ ಹೋಗದ ಗಣಿತದಿಂದ ಕಾಮರ್ಸ್ ಕಷ್ಟವೆನಿಸುತ್ತದೆ. ನನ್ನಂತಹ ಭಾವುಕಜೀವಿಗಳಿಗೆ ಹೇಳಿ ಮಾಡಿಸಿದ್ದಂತಹದ್ದು 'ಆರ್ಟ್ಸ್'.

'ಆರ್ಟ್ಸ್' ಕಂಡರೆ ಬಹಳ ಜನ ಮೂಗು ಮುರಿಯುತ್ತಾರೆ. ಬಹುಶಃ 'ಆರ್ಟ್ಸ್ ನಿಂದ ಬರುವ ಸಂಪಾದನೆ ಕಡಿಮೆ' ಎನ್ನವುದೇ ಇದಕ್ಕೆ ಕಾರಣವಿರಬೇಕು. 'ಆರ್ಟ್ಸ್ ಬಹಳ ಸುಲಭ. ಕೆಲಸಕ್ಕೆ ಬಾರದವರು, ಏನೋ ಒಂದು ಡಿಗ್ರಿ ಪಡೆಯಬೇಕು ಎನ್ನುವವರು, ಸೋಮಾರಿಗಳು 'ಆರ್ಟ್ಸ್' ವಿಷಯ ತೆಗೆದುಕೊಳ್ಳುತ್ತಾರೆ ಎನ್ನುವ ಭಾವನೆ ಜನರ ಮನಸ್ಸಿನಲ್ಲಿ ಮನೆಮಾಡಿಬಿಟ್ಟಿದೆ.

ಓದುವ ಒತ್ತಡ ಕಡಿಮೆ, ಅಪರಿಚಿತವಲ್ಲದ ವಿಷಯಗಳಿರುವುದರಿಂದ ಏನಾದರೂ ನಾಲ್ಕು ಸಾಲು ಬರೆಯಬಹುದು ಎನ್ನುವ ಧೈರ್ಯದಿಂದ 'ಆರ್ಟ್ಸ್' ವಿದ್ಯಾರ್ಥಿಗಳು ಸೈನ್ಸ್ ವಿದ್ಯಾರ್ಥಿಗಳಿಗಿಂತ ಹಾಯಾಗಿ ಓಡಾಡಿಕೊಂಡಿರುತ್ತಾರೆ. ಇದಕ್ಕೆ ಅದು ಸೋಮಾರಿಗಳ ವಿಷಯ ಆಗಿಬಿಟ್ಟಿದೆಯೋ ಏನೋ...

ಯಾರು ಏನೇ ಹೇಳಲಿ; ನನಗಂತೂ 'ಆರ್ಟ್ಸ್' ಮೇಲೆ ಪ್ರೀತಿ. ಟ್ಯೂಷನ್ನು, ಕ್ಲಾಸು, ಅಸೈನ್ ಮೆಂಟು ಎಂದು ಹೈರಾಣಾಗುವ ಸೈನ್ಸ್ ವಿದ್ಯಾರ್ಥಿಗಳನ್ನು ಕಂಡರೆ ಮರುಕ ಹುಟ್ಟುತ್ತದೆ. ನಿಜ, 'ಆರ್ಟ್ಸ್' ವಿದ್ಯಾರ್ಥಿಗಳಿಗೆ ಅಭ್ಯಾಸದ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳವ ಅವಶ್ಯಕತೆ ಇಲ್ಲ. ಆದ್ದರಿಂದಲೇ ಅವರು ಇನ್ನಿತರ ಕಡೆ ಗಮನ ಹರಿಸಲು ಸಾಧ್ಯವಿದೆ. ಅಕಸ್ಮಾತ್ ಫೇಲಾದರೂ ಅಷ್ಟು ಫೀಲ್ ಆಗಲಾರರು.

ಅದೇ, ಎಕ್ಯುಪ್‌ಮೆಂಟ್, ಟ್ಯೂಷನ್, ಕ್ಲಾಸು, ಟೆಸ್ಟ್‌ಗಳು ಎಂದು ದಿನದ ಹದಿನಾಲ್ಕು-ಹದಿನೈದು ತಾಸು ಅಭ್ಯಾಸದಲ್ಲೇ ಮುಳುಗಿರುವ ವಿದ್ಯಾರ್ಥಿ ಫೇಲ್ ಆದರೆ, ಆ ಆಘಾತವನ್ನು 17-18ರ ಎಳೆಯ ಮನಸ್ಸು ಸಹಿಸಿಕೊಳ್ಳಲು ಸಾಧ್ಯವಿದೆಯೆ? 'ಆರ್ಟ್ಸ್' ತೆಗೆದುಕೊಂಡು ಡಾಕ್ಟರ್ ಆಗಲು ಸಾಧ್ಯವಿಲ್ಲದಿರಬಹುದು, ಆದರೆ ಅದಕ್ಕಾಗಿ ಇಷ್ಟೆಲ್ಲ ಬೆಲೆ ತೆರಲು ನಾನು ಸಿದ್ಧಳಿಲ್ಲ!

Tuesday, March 11, 2008

ಹೇಗೆ ಮರೆಯಲಿ ಗೆಳತಿ... ಆ ನಿನ್ನ ಬೆಚ್ಚಗಿನ ಪ್ರೀತಿ

ಕುಮ್ಮಿ-ನನ್ನ ನಡುವೆ ಹೊಟ್ಟೆಕಿಚ್ಚು, ಅಹಂ ಗಳಿಂದ ಬೇಕಾದಷ್ಟು ಸಾರೆ ಜಗಳವಾಗಿದೆ. ಆದರೆ 'ಗೆಳತಿ' ಎಂಬ ಬಾಂಧವ್ಯ ಆ ಸಂಬಂಧ ಕಡಿದು ಹೋಗದಂತೆ ಹಾಗೆ ಇಟ್ಟಿವೆ. ಈಗೆಲ್ಲ ಜಗಳವಾದರೆ ಯಾವ ಹೆದರಿಕೆಯೂ ಇಲ್ಲ. ಒಬ್ಬರಿಗೊಬ್ಬರು ಬಿಟ್ಟಿರುವುದು ಸಾಧ್ಯವಿಲ್ಲ ಎಂಬುದು ಇಬ್ಬರಿಗೂ ಚೆನ್ನಾಗಿ ಗೊತ್ತಿದೆ.
ಅದೊಂದು ಮಳೆಗಾಲದಲ್ಲಿ ಜ್ವರದಿಂದ ಶಾಲೆಗೆ ಹೋಗಲಾಗಲಿಲ್ಲ. 'ಸುಮಿ ನೋಟ್ಸ್' ಎನ್ನುತ್ತಾ ಆ ಜಡಿ ಮಳೆಯನ್ನು ಲೆಕ್ಕಿಸದೆ ಬಂದಿದ ಕುಮ್ಮಿ... ನನಗೆ ತಲೆಗೇ ಹತ್ತದ ಗಣಿತವನ್ನು ತಾಸುಗಟ್ಟಲೆ ಕುಳಿತು ಕಲಿಸಿದ ಕುಮ್ಮಿ... ಹಾಡಿನ ಕಾಂಪಿಟೇಷನ್ ನಲ್ಲಿ ನನಗೆ ಎರಡನೆ ಸ್ಥಾನ. ಕುಮ್ಮಿಗೆ ಮೊದಲ ಸ್ಥಾನ ಸಿಕ್ಕಾಗ "ಅಯ್ಯೋ, ನೀನೆ ಚೆನ್ನಾಗಿ ಹಾಡಿದ್ದೆ. ನನಗೆ ಯಾಕೆ ಕೊಟ್ಟರೋ" ಎಂದು ಪ್ರಾಮಾಣಿಕವಾಗಿ ಪರಿತಪಿಸಿದ ಕುಮ್ಮಿ...

ಕ್ಲಾಸಿನಲ್ಲಿ ತಿಂಗಳ ನೋವು ಶುರುವಾದಾಗ ನನ್ನನ್ನು ಮಗುವನ್ನು ಆರೈಕೆ ಮಾಡಿದ ಹಾಗೆ ಆರೈಕೆ ಮಾಡಿದ ಕುಮ್ಮಿ... ಹೇಗೆ ಮರೆಯಲು ಸಾಧ್ಯ ಅವಳನ್ನು? ಅವಳ ಆ ಪ್ರೀತಿಯನ್ನು? ಹುಡುಗಿ-ಹುಡುಗಿಯರ ನಡುವೆ ಸಾಮಾನ್ಯವಾಗಿರುವ ಹೊಟ್ಟೆಕಿಚ್ಚನ್ನು ಬದಿಗಿರಿಸಿ ಗೆಳೆತನ ಬೆಳೆಸಿದರೆ ಒಂದು ಸುಂದರವಾದ ಸಂಬಂಧ ಚಿಗುರುತ್ತದೆ.

'ಹೆಣ್ಣು ಮಕ್ಕಳಿಗೆ ಮದುವೆಯ ಮೊದಲು ಈ ಸ್ನೇಹ ಗೆಳೆತನ. ನಂತರ ಗಂಡನೆ ಎಲ್ಲಾ ಎಂದು ಕುಮ್ಮಿಯ ಅಜ್ಜಿ ನಾನು-ಕುಮ್ಮಿ ಕುಳಿತು ಮಾತಾಡುತ್ತಿದ್ದಾಗಲೆಲ್ಲ ಹೇಳುತ್ತಿರುತ್ತಾಳೆ. ಗಂಡ ಎಲ್ಲದೂ ಆಗಬಹುದು. ಆದರೆ ಗೆಳತಿ ಮಾತ್ರ ಆಗಲು ಅಸಾಧ್ಯ. ಗೆಳತಿಯೊಂದಿಗೆ ವಿಚಾರಗಳನ್ನೆಲ್ಲ ಅವನ ಜೊತೆಯೂ ಹಂಚಿಕೊಳ್ಳಲಾಗದಷ್ಟು ಸೂಕ್ಷ್ಮ ಎನ್ನುತ್ತಾಳೆ ಶೀಲಕ್ಕ. ಇರಬಹುದೇನೋ...

ಪುರುಷರು ಶ್ರೇಷ್ಠ ಎನ್ನುವ ನಮ್ಮ ಸಮಾಜದಲ್ಲಿ ಬೆಳೆದ ಹುಡುಗರು ಹುಡುಗಿಯರ ನೋವನ್ನು ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡಾರು? ಸಾಮಾನ್ಯವಾಗಿ ಹುಡುಗಿಯರದ್ದೆಲ್ಲ 'ನ್ಯಾರೋ ಮೈಂಡ್' ಎಂದು ತಲೆಯಲ್ಲಿ ತುಂಬಿಕೊಂಡಿರುವ ಕಾಸ್ಲಿನ 'ಸಂಪ್ರದಾಯವಾದಿ' ಹುಡುಗರೆಲ್ಲ ಮುಂದೆ ತಮ್ಮ ಹೆಂಡತಿಯರಿಗೆ ಎಷ್ಟು ಒಳ್ಳೆಯ ಗಂಡರಾದಾರು?

ಹುಡುಗರೂ ಒಳ್ಳೆಯ ಗೆಳೆಯರೇ, ಹುಡುಗಿಯರ ಸಂಕಟಗಳನ್ನು ಅರ್ಥ ಮಾಡಿಕೊಳ್ಳಬಲ್ಲವರೇ. ಆದರೆ ಒಬ್ಬ ಹುಡುಗಿ ಮತ್ತೊಬ್ಬ ಹುಡುಗಿಯನ್ನು ಅರ್ಥ ಮಾಡಿಕೊಂಡಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲವರಾರರು. ಹುಡುಗಿಯ ಸಂಕಟ ಅರ್ಥ ಮಾಡಿಕೊಳ್ಳಬಲ್ಲವರಾದರೂ ಅದಕ್ಕೆ ಸಂಪೂರ್ಣವಾಗಿ ಸ್ಪಂದಿಸಲಾರರು. ಕುಮ್ಮಿಗೆ ನನ್ನ ಒಂದು ಕಣ್ಣೋಟ ಅರ್ಥವಾಯಿತೆಂದು ಪಕ್ಕಿಗೆ ಅದು ಅರ್ಥವಾದೀತೆ?

ಇವತ್ತು ನನ್ನ ಅಚ್ಚುಮೆಚ್ಚಿನ ಲೇಖಕ ಹುಡುಗರ ನಡುವಿನ ಗೆಳೆತನದ ಬಗ್ಗೆ ಹೇಳುತ್ತ "ಹುಡುಗಿಯರ ನಡುವೆ ಹುಡುಗರಲ್ಲಿರುವಷ್ಟು ಗಾಢ ಗೆಳೆತನ ಬೆಳೆಯಲಾರದು. ಏಕೆಂದರೆ ಅವರಿಗೆ ಅವರದೇ ಆದ ಕಟ್ಟುಪಾಡುಗಳಿರುತ್ತವೆ. ಹುಡುಗರಿಗೆ ಇವುಗಳ ಬಂಧನವಿಲ್ಲ. ಕೆರೆ ಕಟ್ಟೆಗಳ ಮೇಲೆ ಕುಳಿತು ಮಾತನಾಡುತ್ತ ಬೆಳಗು ಹಾಯಿಸುತ್ತಾರೆ. ಗೆಳೆಯರೆಲ್ಲ ಸೇರಿ ಎಲ್ಲೋ ಒಂದು ಕಡೆ ಪಾರ್ಟಿ ಮಾಡುತ್ತಾರೆ. ಇವೆಲ್ಲ ಗೆಳೆಯರ ಸಂಬಂಧ ಗಾಢವನ್ನಾಗಿಸುತ್ತದೆ. ಆದರೆ ಹುಡುಗಿಯರಿಗೆ ಇಂತಹ ಅವಕಾಶಗಳೇ ಇಲ್ಲ ಎಂದು ಬರೆದಿದ್ದನ್ನು ಓದಿದೆ.

ಊಹುಂ. ನನ್ನ ಅಚ್ಚುಮೆಚ್ಚಿನ ಲೇಖಕ ಎಷ್ಟೆಂದರೂ ಲೇಖಕ; ಲೇಖಕಿಯಲ್ಲ. ಖಂಡಿತ ಅವನಿಗೆ ನಮ್ಮ ಹುಡುಗಿಯರಲ್ಲಿ ಎಂಥ ಗಾಢ ಗೆಳೆತನವಿರುತ್ತದೆ ಎನ್ನುವುದು ಅರ್ಥವಾಗಿರಲಾರದು. ಹೌದು. ನಮಗೆ ರಾತ್ರಿಯಿಡೀ ಕೆರೆ ಕುಂಟೆಯ ಮೇಲೆ ಕುಳಿತು ಬೆಳಗು ಹಾಯಿಸಲು ಅವಕಾಶವಿಲ್ಲದಿರಬಹುದು.

ಬಾರಿಗೆ ಗೆಳೆಯರ ಜೊತೆ ಹೋಗಿ ಹೊಟ್ಟೆ ತುಂಬ ಕುಡಿದು ಮಜ ಮಾಡಲು ಆಗದಿರಬಹುದು. ಆದರೆ ರಾತ್ರಿ ಅಕ್ಕಪಕ್ಕ ಹಾಸಿಗೆ ಹಾಸಿಕೊಂಡು ಪಿಸುಮಾತಿಗೆ ತೊಡಗಿದರೆ ಕಾಲದ ಮಿತಿ ನಮಗಿಲ್ಲ. ಸಂಜೆ ಸುಮ್ಮನೆ ನಾವು ಕೈಹಿಡಿದುಕೊಂಡು ಮನೆಯ ಹಿಂದಿನ ಬೆಟ್ಟ ಹತ್ತಿ ತುತ್ತತುದಿಯ ಕಲ್ಲುಬಂಡೆಯ ಮೇಲೆ ಕುಳಿತು ಮೌನವಾಗಿ ಸೂರ್ಯಾಸ್ತ ನೋಡುವ ನಮ್ಮ ಸುಖ ಯಾವ ಲೇಖಕನ ಪೆನ್ನಿಗೂ ನಿಲುಕಲಾರದು.

"ಅಯ್ಯೋ... ಹೀಗೇಕೆ ಆಗೋಯ್ತು" ಎಂದು ತಾನೂ ಕಣ್ಣೀರು ಸುರಿಸಿ, "ಆಗಿದ್ದು ಆಯ್ತು. ಹೀಗೆ ಮಾಡೋಣ" ಎನ್ನುತ್ತಾ ಗೆಳತಿಯ ಸಮಸ್ಯೆಯನ್ನು ಮತ್ತೊಬ್ಬ ಗೆಳತಿ ಹಗುರ ಮಾಡುವಂತೆ ಬಹುಶಃ ಮತ್ತ್ಯಾರೂ ಮಾಡಲಾರರು.ಮದುವೆಯಾದ ಹೆಂಗಸಿಗೆ ಗಂಡನ ಹತ್ತಿರ ಹೇಳಿದರೆ ಅವನಿಗೆ ಅನುಮಾನ, ತವರಿನಲ್ಲಿ ಹೇಳಿದರೆ ಅವಮಾನ. ಅನ್ಯರಲ್ಲಿ ಹೇಳಲು ಬಿಗುಮಾನ...ಹೀಗಿರುವಾಗ ಹಂಚಿಕೊಳ್ಳಲು ಹಳೆಯ ಸ್ನೇಹಿತೆಯಲ್ಲದೆ ಇನ್ಯಾರು ಬಂದಾರು?

ಯಾವುದ್ಯಾವುದೋ ಕಾರು ಬೈಕುಗಳ ಚರ್ಚೆ ನಾವು ಮಾಡದಿರಬಹುದು, ಆದರೆ ಅಮ್ಮ ನಿನ್ನೆ ಸಂಜೆ ಯಾಕೆ ಮೌನವಾಗಿದ್ದಳು ಎಂದು ಯೋಚಿಸುತ್ತೇವೆ. ಎಂತಹ ಕ್ರಿಕೆಟ್ ಟೀಮ್ ಕಟ್ಟಿದರೆ ಭಾರತ ಮುಂದಿನ ವರ್ಲ್ಡ್‌ಕಪ್ ಗೆಲ್ಲಬಹುದು ಎಂದು ವಾದಿಸುವಷ್ಟು ಜ್ಞಾನ ಇಲ್ಲದಿರಬಹುದು. ಆದರೆ ಮುಂದಿನ ವರ್ಷ ಕಾಲೇಜ್‌ನಲ್ಲಿ ಯಾವ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡರೆ ಉತ್ತಮ ಎನ್ನುವ ವಾದ ನಡೆದೇ ಇರುತ್ತದೆ.

ನಾಲ್ಕು ಜನ ಹುಡುಗಿಯರು ಸೇರಿದರೆ ಅಲ್ಲಿ ಇಲ್ಲದ ಐದನೆಯವಳ ಬಗ್ಗೆ ಹಗುರಾಗಿ ಮಾತನಾಡಿಕೊಳ್ಳಬಹುದು. ಆದರೆ ನಮ್ಮ ಗೆಳತಿಯೊಬ್ಬಳಿಗೆ ಕಾಟ ನೀಡು ಕಾಮಣ್ಣನಿಗೆ ಹೇಗೆ ಪಾಠ ಕಲಿಸಬಹುದು ಎಂದು ಒಗ್ಗಟ್ಟಾಗಿ ವಿಚಾರವನ್ನು ಕೂಡಾ ಮಾಡುತ್ತೇವೆ. ರವಿ ಕಾಣದ್ದನ್ನು ಕವಿ ಕಂಡನಂತೆ. ಆದರೆ ಕವಿಯೂ ಕಾಣದ್ದು ನಮ್ಮ ಗೆಳೆತನ; ಹುಡುಗಿಯರ ಸ್ನೇಹ

Tuesday, March 4, 2008

ಕೊನೆಯ ತನಕ ಈ ಸ್ನೇಹಿತರು ಇರುತ್ತಾರಾ?


ಹೆಣ್ಣಿಗಿರಲಿ ಗಂಡಿಗಿರಲಿ ಹೆಚ್ಚಾಗಿ ಒಂದು ಆರೋಗ್ಯಕರವಾದ ಸ್ನೇಹ ಮೊಳೆಯುವುದು ಹೈಸ್ಕೂಲ್ ಜೀವನದಲ್ಲೇ. ಏಕೆಂದರೆ ಆ ಮುಗ್ಧ ಮನಸ್ಸು ಸ್ನೇಹಕ್ಕೆ ಹೇಳಿ ಮಾಡಿಸಿದಂಥಾದ್ದು. ನಾನು ನೋಡಿದಂತೆ ಜನರು ತಮ್ಮ ಹೈಸ್ಕೂಲ್ ಜೀವನವನ್ನು ಮೆಲುಕು ಹಾಕಿಕೊಳ್ಳುವಷ್ಟು ಜೀವನದ ಇನ್ಯಾವ ಕ್ಷಣಗಳನ್ನೂ ಅಷ್ಟು ಪ್ರೀತಿಯಿಂದ ನೆನಪು ಮಾಡಿಕೊಳ್ಳಲಾರರು. ನನ್ನ ಅಮ್ಮ ಈಗಲೂ ಕೂಡಾ ಅವಳ ಹೈಸ್ಕೂಲ್ ಸಖಿ ರಾಧೆಯನ್ನು ನೆನಪಿಸಿಕೊಳ್ಳುತ್ತಿರುತ್ತಾಳೆ.

ಒಮ್ಮೊಮ್ಮೆ, ಆ ಸ್ನೇಹಿತೆ ಮತ್ತೆ ಸಿಗಬಾರದೆ ಎಂದು ಪರಿತಪಿಸುತ್ತಿರುತ್ತಾಳೆ. "ಅಮ್ಮಾ ಯಾಕೆ ಸುಮ್ನೆ ಬೇಜಾರು ಮಾಡ್ಕೋತಿಯಾ? ಈ ಸಾರಿ ಅಜ್ಜಿಮನೆಗೆ ಹೋದಾಗ ಅವಳನ್ನು ಭೇಟಿ ಮಾಡುಎಂದೆ. "ಅವಳ ಸಂಸಾರದ ಗೋಳೇ ಅವಳಿಗೆ ಹೆಚ್ಚಾಗಿರಬಹುದು. ಈಗ ನಾನು ಹೋಗಿ ಅವಳಿಗೆ ಇನ್ನೂ ತ್ರಾಸು ಕೊಡಲಾ? ಮದುವೆಯಾದ ಮೇಲೆ ಅಷ್ಟೆ; ಅವರವರ ಸಂಸಾರ ಅವರವರಿಗೆ ಎಂದು ನಿಟ್ಟುಸಿರು ಬಿಟ್ಟಳು.

ಮುಂದೊಂದು ದಿನ ನಾನೂ ಕೂಡಾ ನನ್ನ ಕುಮ್ಮಿ, ಮಂಗು, ಪಚ್ಚಿ, ಪಕ್ಕಿ ... ಅವರನ್ನೆಲ್ಲ ನೆನಸಿಕೊಂಡು ಹೀಗೆ ಬೇಜಾರು ಮಾಡ್ಕೋಬಹುದಾ? ಅವರೆಲ್ಲ ನನ್ನ ಡೈರಿಯಲ್ಲೋ, ಸ್ಲಾಮ್ ಬುಕ್ಕಿನ ಹಾಳೆಗಳ ನಡುವೆಯೋ ಹೀಗೆ ಕೇವಲ ನೆನಪಾಗಿ ಉಳಿದುಬಿಡುತ್ತಾರಾ ? ಇವರೆಲ್ಲ ನಾನು ಮುದುಕಿಯಾಗಿ ಸಾಯುವ ತನಕ ಜೊತೆಯಲ್ಲಿರೋದಿಲ್ವಾ...? ನೆನೆಸಿಕೊಂಡ್ರೇ ಅಳು ಬರುತ್ತೆ....

ಹೈಸ್ಕೂಲ್ ದಿನಗಳೇ ಹಾಗೆ... ಜೀವನದ ಅಮೂಲ್ಯ ಕ್ಷಣಗಳು...

ಕಾಲೇಜ್‌ಗಳಲ್ಲೂ ಸ್ವಚ್ಛ ಸ್ನೇಹವಿರಬಹುದು. ಆದರೆ ನನಗೆ ತಿಳಿದಂತೆ ಅದಾಗಲೇ ಪ್ರೌಢವಾದ ಮನಸ್ಸು ಹುಚ್ಚುಕೋಡಿಯಂತೆ ಹರಿಯಲಾರದು; ತೀರ ಭಾವುಕವಾಗಿ ಮತ್ತೊಂದು ಜೀವವನ್ನು ಹಚ್ಚಿಕೊಳ್ಳಲಾರದು. ಅದಾಗಲೇ ಆ ಮನಸ್ಸು ತನ್ನ ಸುತ್ತಮುತ್ತಲಿನ ಸ್ವಾರ್ಥ, ದುರಾಸೆ, ಮೋಸಗಳನ್ನು ನೋಡಿ ಎಚ್ಚರವಾಗಿಬಿಟ್ಟಿರುತ್ತದೆ. ಯಾರಾದರೂ ಪ್ರಾಮಾಣಿಕವಾಗಿ, ನಿರುದ್ದೇಶದಿಂದ ಸ್ನೇಹಹಸ್ತ ಚಾಚಿದರೂ ಮೊಸರಿನಲ್ಲಿ ಕಲ್ಲು ಹುಡುಕುವಂತೆ 'ಸುಮ್‌ಸುಮ್ನೆ ಅವಳು ಅಥವಾ ಅವನ್ಯಾಕೆ ಫ್ರೆಂಡ್‌ಶಿಪ್ ಬಯಸ್ತಾನೆ?' ನನ್ನಿಂದ ಏನೋ ಕೆಲಸ ಆಗಬೇಕು ಅನಿಸುತ್ತೆ ಎಂದು ಅಲ್ಲಿಂದಲೇ ಅನುಮಾನ ಶುರು...

'ಮಾತಿನ ಮಲ್ಲಿಯಾದ ನನಗೆ ("ಮಾತಿನಮಲ್ಲಿ" ಅಂದರೆ ಏನು ಹೊಗಳಿಕೆಯಲ್ಲ. ಪಚ್ಚಿಯ ಪ್ರಕಾರ 'ಮಲ್ಲ' ಅಥವಾ 'ಜಟ್ಟಿ' ಇದರ ಸ್ತ್ರೀಲಿಂಗ 'ಮಲ್ಲಿ'ಯಂತೆ!!) ಸ್ವಾಭಾವಿಕವಾಗಿಯೇ ಸ್ನೇಹಿತ- ಸ್ನೇಹಿತೆಯರು ಬಹಳ. ನಮ್ಮ ಪಕ್ಕಿಯ ಅಭಿಪ್ರಾಯ 'ಹುಡುಗಿ'ಯರ ನಡುವಿನ ಗೆಳೆತನ ಕ್ಷಣಿಕ. ಹುಡುಗರ ಗೆಳೆತನ, ಹುಡುಗ ಹುಡುಗಿಯ ಗೆಳೆತನ ಕೂಡಾ ಶಾಶ್ವತವಾಗಿರಬಹುದು. ಆದರೆ ಹುಡುಗಿಯರ ಗೆಳೆತನ ಮಾತ್ರ ಬೇಗನೇ ಮುರಿದು ಹೋಗುತ್ತದೆ'. ಅವನ ವಿಚಾರವನ್ನು ಪೂರ್ತಿ ಸುಳ್ಳು ಎನ್ನಲಾಗದು.ಏಕೆಂದರೆ ನಮ್ಮ ಕುಮ್ಮಿ-ಮಂಗಿ ಅದೆಷ್ಟು ಸಾರಿ ಮಾತು ಬಿಟ್ಟುಕೊಂಡು ಮತ್ತೆ ಸ್ನೇಹಿತರಾದರೋ ಅವರಿಗೇ ಲೆಕ್ಕವಿಲ್ಲ.

ಅದೇ ಪಚ್ಚಿ-ಪಕ್ಕಿಯ ಗೆಳೆತನ ಒಂದೇ ರೀತಿ ಸಾಗುತ್ತದೆ. ತಮ್ಮ ನಡುವೆ ಬಂದ ಮನಸ್ತಾಪಗಳನ್ನು ಅವರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಜಗಳ ಮಾಡಿಕೊಂಡ ಸ್ವಲ್ಪ ಹೊತ್ತಿಗೇ ಏನೂ ಆಗೇ ಇಲ್ಲ ಎನ್ನುವಂತೆ ಒಬ್ಬರ ಹೆಗಲ ಮೇಲೆ ಮತ್ತೊಬ್ಬರು ಕೈಹಾಕಿಕೊಂಡು ಕಾರಿಡಾರ್ ಸುತ್ತುತ್ತಿರುತ್ತಾರೆ. ಅದೇ ಕುಮ್ಮಿ, ಮಂಗಿ, ನಾನು ಎಲ್ಲ ಜಗಳ ಮಾಡಿಕೊಂಡರೆ ವಾರ-ತಿಂಗಳುಗಟ್ಟಲೆ ನಮ್ಮ ನಡುವೆ ಮೌನ ಸಮರ! ಹೀಗಿದ್ದರೂ ಯಾವುದೋ ಒಂದು ನೋಟ, ಬಾಯಿತಪ್ಪಿ ಬಂದ ಮಾತು... ಇಷ್ಟು ಸಾಕು ಸ್ನೇಹ ಮರುಜೀವ ಪಡೆಯಲು.

ನನಗೆ ವಿಚಿತ್ರ ಎನಿಸುವುದೆಂದರೆ ನಾನು ಓದಿದ, ನೋಡಿದ ಸಾಹಿತ್ಯ-ಸಿನಿಮಾಗಳಲ್ಲೆಲ್ಲ ಎಲ್ಲ ರೀತಿಯ ಸ್ನೇಹದ ಬಗ್ಗೆ ಹೇಳುತ್ತಾರೆ. ಆದರೆ ಎರಡು ಹುಡುಗಿಯರ ನಡುವೆ ಇರುವ ಸ್ನೇಹ ಸಂಬಂಧಗಳ ಕುರಿತು ಸಾಹಿತ್ಯದಲ್ಲಾಗಲಿ, ಸಿನಿಮಾಗಳಲ್ಲಾಗಲಿ ಕಂಡಿದ್ದು ವಿರಳ. ಎಂಟನೆಯ ಕ್ಲಾಸಿನ ಮುದ್ದು ಹುಡುಗಿ ಕಾವೇರಿ. ಒಂಬತ್ತನೆಯ ಕ್ಲಾಸಿನ ಸೋಡಾಬುಡ್ಡಿ ವಸು, ನಮ್ಮ ಕ್ಲಾಸಿನ ಉಷಾ, ಚೈತ್ರಾ, ಶಾರದಾ... ಹೀಗೆ

ಅನೇಕ ಸ್ನೇಹಿತೆಯರಿದ್ದರೂ ಕುಮ್ಮಿ-ಮಂಗಿ ಅದರಲ್ಲೂ ಕುಮ್ಮಿಯ ಕಂಡರೆ ನನಗೆ ವಿಶೇಷ ಒಲವು. ಅವಳಿಗೂ ಅಷ್ಟೆ. ಅವಳು ನನ್ನ ಮೇಲಿಟ್ಟಿರುವ ಪ್ರೀತಿಯ ಎದುರು ನನ್ನ ಸ್ನೇಹ ಏನೂ ಅಲ್ಲ. ಅವಳು ಏನಾದರೂ ನೆಲ್ಲಿಕಾಯಿ ತಂದರೆ ನನಗೇ ಅಗ್ರ ಪಾಲು. ಅಮ್ಮ ಏನಾದರೂ ಸಿಹಿ ತಿಂಡಿ ಮಾಡಿದರೆ ಕುಮ್ಮಿಗೆ ಒಂದು ಪಾಲು. ಸ್ಟಾಫ್‌ರೂಮ್‌ಗೆ ಹೋಗುವುದರಿಂದ ಹಿಡಿದು ಶಾಲೆಯ ಯಾವುದೇ ಜವಾಬ್ದಾರಿ ವಹಿಸಿಕೊಳ್ಳುವ ತನಕವೂ ಇಬ್ಬರೂ ಜೋಡಿಯಾಗಿಯೇ. ಈ ಸ್ನೇಹಕ್ಕೂ ಕಾರಣವಿಲ್ಲದಿಲ್ಲ.

Friday, February 29, 2008

ಮಗಳಿಗೆ ಯೌವನದ ಸೊಕ್ಕು...ಅಮ್ಮನಿಗೆ ವೃದ್ಧಾಪ್ಯದ ಸುಕ್ಕು...


ನಮ್ಮ ಕ್ಲಾಸ್‌ನ ಉಷಾ ಒಂಥರಾ... ನಾವೆಲ್ಲ ಅಮ್ಮ ಅಂತಾ ಸಿಕ್ಕಾಪಟ್ಟೆ ಹಚ್ಚಿಕೊಂಡುಬಿಟ್ಟಿದ್ದರೆ, ಉಷಾಳಿಗೆ ಅವಳಮ್ಮನ ಮುಖ ಕಂಡರೆ ಆಗುತ್ತಿರಲಿಲ್ಲ. ಯಾವಾಗಲೂ ಅವಳಮ್ಮನಿಗೆ ಬಯ್ಯುತ್ತಿದ್ದಳು. ನಮ್ಮಗಳ ಜೊತೆ ಹರಟೆ ಹೊಡೆಯಲು ಕುಳಿತರೆ ಒಮ್ಮೆಯಾದರೂ ಅವಳ ಅಮ್ಮನಿಗೆ ಬಯ್ಯದೆ ಹೋಗುತ್ತಿರಲಿಲ್ಲ.

"ಅಯ್ಯೊ, ನನ್ನ ಅಮ್ಮ! ಅವಳೊಬ್ಬಳು. ನನ್ನ ಮೇಲೆ ಸದಾ ಅನುಮಾನ. ನಾನು ಇಲ್ಲದ ಹೊತ್ತಿನಲ್ಲಿ ನನ್ನ ಸ್ಕೂಲ್ ಬ್ಯಾಗ್, ನೋಟ್ಸ್ ಗಳನ್ನು ಶೋಧಿಸುವುದು, ಸೂಲ್ಕಿನಿಂದ ಬರುವುದು 5 ನಿಮಿಷ ತಡವಾದರೂ ಪ್ರಶ್ನೆಗಳ ಮೇಲೆ ಪ್ರಶ್ನೆಗಳು. ನಾನು ಕುಳಿತಿದ್ದು ತಪ್ಪು, ನಿಂತಿದ್ದು ತಪ್ಪು. ಯಾವುದಾದರೂ ಹುಡುಗನ ಜೊತೆ ಮಾತನಾಡಿದ್ದು ಕಂಡರಂತೂ ರಣ ರಾದ್ಧಾಂತ" ಎಂದು ಉಷಾ ಯಾವಾಗಲೂ ಹೇಳುತ್ತಿದ್ದಳು.

ಹಾಗೆಂದು ಅವಳಮ್ಮ ಅವಳಿಗೆ ಸ್ವಂತತಾಯಿಯೇ. ನಮ್ಮೆಲ್ಲರ ಅಮ್ಮನಂತೆ ಸಾಮಾನ್ಯ ಅಮ್ಮ. ಆದರೂ ಉಷಾ ಏಕೆ ಅವರ ಮೇಲೆ ಹರಿಹಾಯುತ್ತಾಳೆ. ಎನ್ನುವುದು ಒಗಟಾಯಿತು. ಅಲ್ಲದೆ ಒಮ್ಮೊಮ್ಮೆ ಉಷಾ 'ಸರಿ' ಎನಿಸುತ್ತಿದ್ದಳು.

ಒಂದು ಭಾನುವಾರ ಶೀಲಕ್ಕನ ಜೊತೆ ಮಾತನಾಡುತ್ತ ಕುಳಿತಾಗ ಉಷಾಳ ವಿಷಯ ಎತ್ತಿದೆ. ಅವಳ 'ವಿಚಿತ್ರ' ವರ್ತನೆಯ ಬಗ್ಗೆಯೂ ಹೇಳಿದೆ. ಶೀಲಕ್ಕ ಒಮ್ಮೆ ನಕ್ಕು 'ಅವಳ ವರ್ತನೆ 'ವಿಚಿತ್ರ' ಅಲ್ಲ; ಅದು ಅವಳ ವಯಸ್ಸು. ಅಂದರೆ ಅದನ್ನು 'ಅಮ್ಮ ಮಗಳ ಕಾಂಟ್ರೋವರ್ಶಿಯಲ್ ಪಿರಿಯಡ್' ಎನ್ನಬಹುದು.

ಮಗಳು ಸುಮಾರು 14 ವರ್ಷ ತಲುಪುವುದರಲ್ಲಿ ತಾಯಿ ಸಾಮಾನ್ಯವಾಗಿ ೪೦ರ ಹೊಸ್ತಿಲನ್ನು ದಾಟಿರುತ್ತಾಳೆ. ಮಗಳು ಯೌವನದ ರೆಕ್ಕೆ ಕಟ್ಟಿಕೊಂಡು ಹಾರಲು ಸಿದ್ಧವಾದರೆ ಅಮ್ಮನ ಮೇಲೆ ವೃದ್ಧಾಪ್ಯದ ನೆರಳು ಚಾಚಲಾರಂಭಿಸುತ್ತದೆ. ಈ ಅವಧಿಯನ್ನೇ ತಾಯಿಗೂ ಮಗಳಿಗೂ ಒಂಥರಾ 'ಕಾಂಟ್ರೋವರ್ಷಿಯಲ್ ಪಿರಿಯಡ್' ಎನ್ನಬಹುದು.

ಹೆಣ್ಣು-ಗಂಡು ಎನ್ನುವ ಭೇದಭಾವವಿಲ್ಲದೆ ಎಲ್ಲರೊಡಗೂಡಿ ಆಟ ಆಡಿಕೊಂಡು ಬೆಳೆಯುತ್ತಿರುವ ಮಗಳು 13-14 ವರ್ಷ ಸಮೀಪಿಸಿದಳು ಎಂದಕೂಡಲೇ ತಾಯಿಯ ಆತಂಕದ ದೃಷ್ಟಿ ಮಗಳ ಮೇಲೆ ಹರಿದಿರುತ್ತದೆ. ಅವಳ 'ತಾಯಿ ಹೃದಯ' ಮಗಳ ರಕ್ಷಣೆಯ ಬಗ್ಗೆ ಚಿಂತಿಸುತ್ತಿರುತ್ತದೆ. ಮಗಳ ಸ್ನೇಹಿತರು, ಅವಳ ಜೊತೆ ಒಡನಾಡುವ 'ಗಂಡು'ಗಳ ಬಗ್ಗೆ ತಾಯಿ ಎಚ್ಚರಿಕೆಯಿಂದಿರುತ್ತಾಳೆ. ಯಾವನೋ ಒಬ್ಬನ ಜೊತೆ ಮಗಳು ಸ್ವಲ್ಪ ಹೆಚ್ಚು ಮಾತನಾಡುತ್ತಿದ್ದಾಳೆ ಎಂದರೆ ಮುಗಿಯಿತು; ತಾಯಿಯ ನೆಮ್ಮದಿ ಹಾರಿಹೋಗಿರುತ್ತದೆ.

'ಹೆಣ್ಣು ಮಕ್ಕಳ ಜವಾಬ್ದಾರಿ ಎಂದರೆ ಸೆರಗಲ್ಲಿ ಕೆಂಡ ಕಟ್ಟಿಕೊಂಡಂತೆ' ಎನ್ನುವ ಮಾತಿನ ಅನುಭವ ತಾಯಿಗೆ ಆಗತೊಡಗುತ್ತದೆ. ಇದರ ಪರಿಣಾಮವೇ ಮಗಳ ಆಟ. ತಿರುಗಾಟದ ಮೇಲೆ ಕಡಿವಾಣ, ನಡತೆಯ ಬಗ್ಗೆ ಎಚ್ಚರಿಕೆಯ ಮಾತುಗಳು ಮತ್ತು ಮೇಲಿನಿಂದ ಮೇಲೆ ಬೈಗುಳಗಳು. ಮಗಳೇ ಎಂದು ಮುದ್ದಿಸುತ್ತ, ಪ್ರಪಂಚದಲ್ಲಿ ಅತ್ಯಂತ ಹೆಚ್ಚು ನಂಬಿಕೆಯ ಅಮ್ಮನ ಕಣ್ಗಾವಲಿನ ಕಟ್ಟೆಚ್ಚರ ಕಣ್ಣಿಗೆ ಹರೆಯದ ಕಾಡಿಗೆ ಹಚ್ಚಿಕೊಳ್ಳುತ್ತಿರುವ ಮಗಳಿಗೆ ಒಗಟಾಗಿಬಿಡುತ್ತದೆ.

ಮೊದಲು ಯಾವುದಕ್ಕೂ ಬೇಡ ಅನ್ನದ ಅಮ್ಮ, ಈಗ ಯಾವ ಡ್ರೆಸ್ ಹಾಕಿಕೊಳ್ಳಬೇಕು ಎನ್ನುವುದರಿಂದ ಹಿಡಿದು; ಫ್ರೆಂಡ್ಸ್ ಜೊತೆ ಪಿಕ್ನಿಕ್ ಹೋಗುವ ತನಕ ತನ್ನ ಎಲ್ಲ ನಿರ್ಧಾರಗಳಲ್ಲೂ ಅಮ್ಮ ಮೂಗು ತೂರಿಸತೊಡಗಿರುವುದು ಮಗಳಿಗೆ ಸಹ್ಯವಾಗುವುದಿಲ್ಲ. ಸ್ವಾತಂತ್ರ್ಯದ ರುಚಿಯನ್ನು ಸ್ವಲ್ಪ-ಸ್ವಲ್ಪವೇ ನೋಡುತ್ತಿರುವ ಮಗಳು ಅಮ್ಮನ ಮುನ್ನೆಚ್ಚರಿಕೆಯನ್ನು ತನ್ನ 'ಸ್ವಾತಂತ್ರ್ಯದ ಅಪಹರಣ' ಎಂದೇ ಬಗೆಯುತ್ತಾಳೆ.

ಹರೆಯದ ಮುಖ್ಯ ಲಕ್ಷಣಗಳಲ್ಲೊಂದಾದ 'ವಿರೋಧ'ವನ್ನು ವ್ಯಕ್ತಪಡಿಸುತ್ತಾಳೆ. ತಾಯಿ ಯಾವುದನ್ನು ಮಾಡು ಎನ್ನುತ್ತಾಳೋ ಅದನ್ನು ಮಾಡದಿರುವುದು, ಯಾವುದನ್ನು ಮಾಡಬೇಡ ಎನ್ನುತ್ತಾಳೋ ಅದನ್ನೇ ಮಾಡುವುದು. ಅಮ್ಮನ ಪ್ರತಿ ಮಾತಿಗೂ ರೇಗುವುದು ಅಥವಾ ಅಮ್ಮನ ಮಾತಿಗೆ ಪ್ರತಿಕ್ರಿಯೆಯನ್ನೇ ತೋರಿಸದಿರುವುದು... ಹೀಗೆ ವಿವಿಧ ರೂಪದಲ್ಲಿ ತನ್ನ ವಿರೋಧ ತೋರಿಸುತ್ತ ತಾಯಿಗೆ ಒಂದು ತಲೆನೋವಾಗಿ ಪರಿಣಮಿಸಿಬಿಡುತ್ತಾಳೆ.

ಹರೆಯದ ನೂರಾರು ಗೊಂದಲಎದುರಿಸುತ್ತಿರುವ ಮಗಳು ಒಂದೆಡೆಯಾದರೆ, ಏರುತ್ತಿರುವ ವಯಸ್ಸು, ಆವರಿಸುತ್ತಿರುವ ಮುಪ್ಪಿನ ಭಯ, ಕಡಿಮೆಯಾಗುತ್ತಿರುವ ಗಂಡನ ಗಮನ, ಯಾರೂ ತನ್ನ ಬಗ್ಗೆ ಲಕ್ಷ್ಯವಹಿಸುತ್ತಿಲ್ಲ ಎನ್ನುವ ಕೊರಗು ಹೀಗೆ ಮುಂತಾದ ಕಾಂಪ್ಲೆಕ್ಸ್‌ಗಳಿಂದ ಅಮ್ಮ ಚಿಂತೆಯ ಗೂಡಾಗಿರುತ್ತಾಳೆ. ಈ ಅಸಮಾಧಾನಗಳನ್ನು ಮನೆಯವರ ಮೇಲೆ ಅಮ್ಮ ತೀರಿಸಿಕೊಳ್ಳುತ್ತಿರುತ್ತಾಳೆ.

ಈ ಜಗಳ ಶಾಶ್ವತವೇನೂ ಅಲ್ಲ. ಮಗಳಿಗೆ ವಯಸು-ಮನಸು ಬಲಿತಂತೆ ಜೀವನದ ನೈಜ ಸ್ಥಿತಿ, ತಾಯಿ ಕೂಡ ಕೂಡಾ ಮುಂಬರಲಿರುವ ಮುಪ್ಪಿಗೆ ಮಾನಸಿಕವಾಗಿ ಅಣಿಯಾಗಿರುತ್ತಾಳೆ. ತನ್ನ ಅಶಕ್ತತೆಯ ಜೀವನಕ್ಕೆ ಹೊಂದಿಕೊಂಡಿರುತ್ತಾಳೆ. ಅಲ್ಲದೆ ಬೇರೆ ಮನೆಗೆ ಶಾಶ್ವತವಾಗಿ ಹೋಗಲಿರುವ ಮಗಳ ಬಗ್ಗೆ ವಿಶೇಷ ಪ್ರೀತಿ ಬೆಳೆದಿರುತ್ತದೆ.

ಅಲ್ಲಿಗೆ ಈ 'ಕಾಂಟ್ರೋವರ್ಷಿಯಲ್ ಪಿರಿಯಡ್' ಮುಗಿದಿರುತ್ತದೆ. ಎಲ್ಲ ಅಮ್ಮ-ಮಗಳಲ್ಲೂ ಇದು ಸಾಮಾನ್ಯ. ಆದರೆ ಕೆಲವರಲ್ಲಿ ಹೆಚ್ಚು, ಕೆಲವರಲ್ಲಿ ಕಡಿಮೆ ಅಷ್ಟೆ. ಆದರೆ ಕೆಲವೊಮ್ಮೆ ಮಗಳಾದವಳು ಅವು ಸ್ಥಿತಿಯನ್ನು ಅರಿಯಲು ವಿಫಲವಾದರೆ ಈ ಜಗಳ ಮುಂದುವರಿಯಲೂಬಹುದು" ಎಂದು ಶೀಲಕ್ಕ ತನ್ನ ಮಾತನ್ನು ಮುಗಿಸಿದ್ದಳು.

ನನಗೂ ಅರ್ಥವಾಗಿತ್ತು... ಅಮ್ಮನೊಂದಿಗೆ ನಾನು ನಡೆದುಕೊಂಡಿದ್ದ್ದನ್ನೆಲ್ಲ ನೆನೆದೆ...ಮನಸ್ಸಿನಲ್ಲೇ ಹೇಳಿಕೊಂಡೆ... "ಅಮ್ಮ, ಇನ್ನೆಂದೂ ನಿನ್ನ ನೋಯಿಸಲಾರೆನು. ಸಾರಿ ಅಮ್ಮ.... "

Monday, February 18, 2008

ಪಿಲ್ಟ್ರಿಯ ಪ್ರೇಮದ ಹುಚ್ಚೆಲ್ಲ ಇಳಿದುಹೋಗಿತ್ತು!


ಇತ್ತೀಚೆಗೆ ಯಾಕೋ ಆ ಮೂಲೆಯಲ್ಲಿ ಕೂರುವ ಪಿಲ್ಟ್ರಿ ರಾಜು ಮೊಳಕಾಲಿನ ತನಕ ನಗ್ನವಾಗಿರುವ ನನ್ನ ಕಾಲುಗಳನ್ನೇ ನೋಡುತ್ತಾನೆ ಎನ್ನುವ ಅನುಮಾನ ಶುರುವಾಗಿತ್ತು. (ರಾಜುವಿಗೆ 'ಪಿಲ್ಟ್ರಿ' ಅನ್ನೊ ಅಡ್ಡಹೆಸರು ಬಂದಿರುವುದಕ್ಕೆ ಒಂದು ತಮಾಷೆಯ ಕಾರಣವಿದೆ. ರಾಜು ವಾಟರ್ ಫಿಲ್ಟರ್ ನ ಕುಳ್ಳನಾಗಿ ರೌಂಡ್ ಇದ್ದ. ಆ 'ಫಿಲ್ಟರ್' ಅನ್ನೋ ಹೆಸರು ಅಪಭ್ರಂಶವಾಗಿ ನಮ್ಮ ಭಾಷೆಯಲ್ಲಿ 'ಪಿಲ್ಟ್ರಿ' ಆಗಿತ್ತು) ನಾನೋ ಕ್ಲಾಸುಗಳಲ್ಲಿ ನನ್ನದೇ ಆದ ಲೋಕದಲ್ಲಿರುತ್ತಿದ್ದೆ. ಟಕ್ಲು ತಿಮ್ಮಪ್ಪ ಕಲಿಸ್ತಾ ಇದ್ರೂ ನನ್ನಷ್ಟಕ್ಕೆ ನಾನು ಬರೆಯದ ಪೆನ್ನು ರಿಪೇರಿ ಮಾಡುವುದೋ, ಹಿಂದಿನ ಬೆಂಚ್ ಹುಡುಗಿಯ ಹತ್ತಿರ ನೆಲ್ಲಿಕಾಯಿಯನ್ನೋ ಇನ್ನೆನನ್ನೋ ವಸೂಲು ಮಾಡುತ್ತ, ಅಥವಾ ನಿನ್ನೆ ನೋಡಿದ ಶಾರೂಖ್‌ನ ಸಿನಿಮಾದ ಚರ್ಚೆಮಾಡುತ್ತಲೋ ಇರುತ್ತಿದ್ದೆ.

ಆದರೆ ರಾಜು ಮೇಲೆ ಅನುಮಾನ ಪ್ರಾರಂಭವಾದಾಗಿನಿಂದ ಸ್ವಲ್ವ ಸೀರಿಯಸ್ ಆಗಿದ್ದೆ. ಅವನು ನನ್ನನ್ನು ನೋಡುತ್ತಾನೋ ಇಲ್ಲವೋ ಎಂದು ಗಮ ನಿಸುವುದರಲ್ಲೇ ಮುಗಿದು ಹೋಗುತ್ತಿತ್ತು. ನಮ್ಮ ಹೈಸ್ಕೂಲ್ ಇನ್ನೊಂದು (ಪ್ರೀತಿಸುವುದಿಲ್ಲ ಬರೀ ನೋಡುವುದು!) ಎನ್ನುವುದು ನೋಡುವವರು ಅಥವಾ ನೋಡಿಸಿಕೊಳ್ಳುವವರಿಗಿಂತ ಉಳಿದವವರಿಗಿಂತ ಉಳಿದವರಿಗೇ ಮೊದಲು ತಿಳಿದುಹೋಗುತ್ತಿತ್ತು! ಆದರೆ ಆ ರೀತಿಯ ಸುದ್ದಿಯೂ ಇರಲಿಲ್ಲ.

ನಮ್ಮ ಕ್ಲಾಸ್ ಹುಡುಗರಲ್ಲಿ ಎರಡು ಗುಂಪು.ಒಂದು ನಮ್ಮನ್ನು ತಮ್ಮ ತಂಡದವರೇ ಎಂದು ಬಗೆದು ಫ್ರೆಂಡ್ ಶಿಪ್ ಮಾಡಿಕೊಂಡು, ಇನ್ನೊಂದು ಪಕ್ಕಾ ಸಂಪ್ರದಾಯಸ್ಥರಂತೆ ನನಗೆ ನನ್ನ ಗ್ಯಾಂಗ್ ಗೆ 'ಗಂಡುಬೀರಿಗಳು' ಎಂದು ಹೆಸರಿಟ್ಟು ಗುರ್....ಎನ್ನುತ್ತಾ ತಿರುಗುವವರು.

ಈ 'ಸಂಪ್ರದಾಯಸ್ಥ'ರು ನಮಗೇನೂ ತೊಂದರೆ ಮಾಡುತ್ತಿರಲಿಲ್ಲ. ನಮ್ಮನ್ನು ಕಂಡರೆ ಇಷ್ಟವಿರಲಿಲ್ಲ ಅಷ್ಟೆ. ಆದರೆ ಈ ಪಿಲ್ಟ್ರಿ ರಾಜು 'ಸಂಪ್ರದಾಯಸ್ಥ'ನಾಗಿ ನನ್ನ ನೋಡುತ್ತಿದ್ದಾನೆ ಎನ್ನುವುದನ್ನು ನನಗೆ ನಂಬಲು ಕಷ್ಟವಾಗಿತ್ತು.

ಇದೆಲ್ಲ ಗೊತ್ತಿದ್ದರೂ ಪಿಲ್ಟ್ರಿಯನ್ನು ಆಲಕ್ಷಿಸಿದೆ. ಅವನನ್ನು ಕಂಡರೆ ಪ್ರೀತಿಗಿಂತ ನಗು ಉಕ್ಕುತ್ತಿತ್ತು. ಕಾರಣವಿಷ್ಟೆ. ಬಾಯಿಯಲ್ಲಿ ಒಂದು, ಮಾಡುವುದು ಇನ್ನೊಂದು. ಹುಡ್ಗೀರು ತಲೆ ಬಗ್ಗಿಕೊಂಡು. ಗಟ್ಟಿಯಾಗಿ ನಗದೆ, ಹುಡುಗರ ಜೊತೆ ಬೇಕಾದಷ್ಟೇ ಮಾತನಾಡಬೇಕು ಎಂದು ಭಾಷಣ ಹೊಡೆಯುತ್ತ ತಿರುಗುವ ಪಿಲ್ಟ್ರಿಗೆ ಅವನ ವಿಚಾರಕ್ಕೆಲ್ಲ ತದ್ವಿರುದ್ಧವಾಗಿದ್ದ ನನ್ನ ಕಂಡತೆ ಅವನಿಗೇಕೆ ಇಷ್ಟ ಎನ್ನುವುದು ಬಗೆಹರಿಯದ ಪ್ರಶ್ನೆಯಾಗಿತ್ತು ನನಗೆ.

ನಮ್ಮ ಸೈನ್ಸ್ ಮೇಷ್ಟ್ರು 'ದೊಡ್ಡಪ್ಪ'. (ನಮ್ಮ ಕ್ಲಾಸ್ ಮೇಟ್ ಗೊಬ್ಬಳಿಗೆ ಸೈನ್ಸ್ ಮೇಷ್ಟ್ರು ಸಂಬಂಧದಲ್ಲಿ 'ದೊಡ್ಡಪ್ಪ' ಆಗಬೇಕಿತ್ತು. ಹಾಗಾಗಿ ನಮಗೆಲ್ಲ 'ದೊಡ್ಡಪ್ಪ' ಆಗಿದ್ದರು ಅವರು) ಅವರಿಗೆ ಯಾವ ದೇವರು ದುರ್ಬುದ್ಧಿ ಕೊಟ್ಟನೋ ಏನೋ! ಎಲ್ಲರೂ ಸೈನ್ಸ್ ನೋಟ್ಸ್ ನ್ನು ತನಗೊಪ್ಪಿಸಬೇಕೆಂದು ಕಟ್ಟುನಿಟ್ಟಾದ ಅಜ್ಞೆಯನ್ನು ಹೊರಡಿಸಿದರು. ಮಧ್ಯೆ ಪೇಜುಗಳನ್ನು ಎಲ್ಲಾ ಹಾರಿಸಿ 'ಕಟಕಟೆ ದೇವರಿಗೆ ಮರದ ಜಾಗಟೆ' ಎಂಬಂತೆ ನೋಟ್ಸ್ ಗಳನ್ನು ತಯಾರಿಸಿ. ಮೇಷ್ಟ್ರ ತಲೆಗೆ ಎಣ್ಣೆ ಸವರಿ ಆರಾಮವಾಗಿ ದಿನಕಳೆಯುತ್ತಿದ್ದ ನಮಗೆ ಈ ಸಲ ತಪ್ಪಿಸಿಕೊಳ್ಳಲು ಯಾವ ಐಡಿಯಾವೂ ಇರಲಿಲ್ಲ.

ಅವರು ವಿಧಿಸಿದ್ದ ಕೊನೆಯ ದಿನದ ಒಳಗೇ ಅಂತೂ-ಇಂತೂ ನನ್ನ ನೋಟ್ಸ್ ಪೂರ್ಣವಾಗಿತ್ತು. ಆದರೆ ಏನೋ ಪಾಪ ಪಿಲ್ಟ್ರಿ ಸ್ವಲ್ಪ ಡಲ್ ಆಗಿಬಿಟ್ಟಿದ್ದ. ಬಹುಶಃ ನೋಟ್ಸ್ ಇನ್ನು ಬರೆದು ಆಗಿರಲಿಕ್ಕಿಲ್ಲ. ಪಕ್ಕಿ (ಪ್ರಕಾಶ), ಪಚ್ಚಿ (ಪ್ರಶಾಂತ), ಕುಮ್ಮಿ (ಕುಮುದಾ), ಮಂಗಿ (ಮಂಗಳಾ)...ಹೀಗೆ ನನ್ನ ಗ್ಯಾಂಗಿನವರೆಲ್ಲ ನೋಟ್ಸ್ ಕಂಪ್ಲೀಟ್ ಮಾಡುವಲ್ಲಿ ವಿಫಲರಾಗಿದ್ದರು. ಹಾಗಾಗಿ ನಮ್ಮ ಗ್ಯಾಂಗ್‌ನಲ್ಲಿ ನೋಟ್ಸ್ ಸಂಪೂರ್ಣವಾಗಿ ಬರೆದು ಮುಗಿಸಿದ ಕೀರ್ತಿ ನನಗೊಬ್ಬಳಿಗೆ ಸಲ್ಲುತ್ತಿತ್ತು.

ಅದೊಂದು ದಿನ ಶಾಲೆ ಬಿಟ್ಟ ನಂತರ ಪಿಲ್ಟ್ರಿನ ನನ್ನೆದುರು ನಿಂತು, "ನನಗೆ ನೋಟ್ಸ್ ಇನ್ನು ಬರೆದು ಆಗಲಿಲ್ಲ. ಪ್ಲೀಸ್ ಕೊಡ್ತೀಯಾ?" ಅಯ್ಯೋ ಪಾಪ ಎನಿಸುವಂತೆ ಕೇಳಿದ್ದ. ನಾನು ವಾರೆ ನಗೆ ನಕ್ಕು ಸೈನ್ಸ್ ನೋಟ್ಸ್ ಅವನ ಕೈಗಿಕ್ಕಿದ್ದೆ.

ಮರುದಿನವೇ ನೋಟ್ಸ್ ಹಿಂದಿರುಗಿಸಿ ತಿರುಗಿ ನೋಡದೆಯೂ ಓಡಿಹೋಗಿದ್ದ. ಅವನ ಈ ವರ್ತನೆ ವಿಚಿತ್ರವಾಗಿ ತೋರಿದರೂ ನಾನು ತಲೆಕೆಡಿಸಿಕೊಳ್ಳಲು ಹೋಗಲಿಲ್ಲ.

ಅಂತೂ ಕೊನೆಗೆ ನಾವೆಲ್ಲರೂ ಭಯದಿಂದ ಎದುರು ನೋಡುತ್ತಿದ್ದ ನೋಟ್ಸ್ ಸಬ್‌ಮಿಟ್ ಮಾಡುವ ದಿನ ಬಂತು. ಪಕ್ಕಿ, ಪಚ್ಚಿ 'ಮೇಷ್ಟ್ರು ಏನಾದರೂ ಮಾಡಿಕೊಂಡು ಹೋಗಲಿ ಎನ್ನುವ ಮಾಡಿಕೊಂಡು ಹೋಗಲಿ' ಎನ್ನುವ ಮೊಂಡು ಧೈರ್ಯದಲ್ಲಿದ್ದರೆ ಕುಮ್ಮಿ. ಮಂಗಿ' ಯಾವ ನೆಪ ಹೇಳಿದರೆ ದೊಡ್ಡಪ್ಪ ಮೇಷ್ಟ್ರು ಕರಗಿಯಾರು' ಎಂದು ಲೆಕ್ಕಾಚಾರ ಹಾಕುತ್ತಿದ್ದರು.

ಎಲ್ಲರೂ ಒಬ್ಬೊಬ್ಬರಾಗಿ ನೋಟ್ಸ್ ನ್ನು ಮೇಷ್ಟ್ರ ಕೈಗೆ ಇತ್ತು ಬಂದರು. ತಮ್ಮ ದಪ್ಪನೆಯ ಹುಬ್ಬು ಮತ್ತು ಕನ್ನಡಕದ ನಡುವಿನ ಕಿರಿದಾದ ಜಾಗದಿಂದ ಪ್ರತಿಯೊಬ್ಬರನ್ನು ಗಮನಿಸುತ್ತಿದ್ದ 'ದೊಡ್ಡಪ್ಪ'ನನ್ನು ನೋಡಿದರೆ ಪ್ರಾಮಾಣಿಕರಿಗೂ ನಡುಕ ಬರುತ್ತಿತ್ತು.

ಆ ಒಂದು ಪೀರಿಯಡ್ ನೋಟ್ಸ್ ಚೆಕ್ ಮುಗಿಸಿ ಹೊರನಡೆಯುತ್ತಿದ್ದ 'ದೊಡ್ಡಪ್ಪ' ಪಿಲ್ಟ್ರಿಯನ್ನು ಕರೆದರು. ಅಲ್ಲಿ ಏನು ನಡೆಯಿತೋ ಗೊತ್ತಿಲ್ಲ. ಮರುದಿನವೇ ಪಿಲ್ಟ್ರಿಯ ಪ್ರೇಮದ ಹುಚ್ಚೆಲ್ಲ ಇಳಿದುಹೋಗಿತ್ತು. ಕಾರಣವಿಷ್ಟೇ; 'ದೊಡ್ಡಪ್ಪ'ನಿಗೆ ನನ್ನ ನೋಟ್ಸ್ ನಲ್ಲಿ ಪಿಲ್ಟ್ರಿಯ ಪ್ರೇಮದೋಲೆ ಸಿಕ್ಕಿತ್ತು!!

Tuesday, February 12, 2008

ಮುರುಕು ಕ್ಲಾಸಿನೊಳಗೆ ಅರಳುವ ಸುಂದರ ಪ್ರೇಮ....


ಅಮ್ಮನಿಗೆ ಏನೋ ಕೆಲಸ ಮಾಡಿಕೊಟ್ಟ ಶಾಸ್ತ್ರ ಮಾಡಿ ಶೀಲಕ್ಕನ ಮನೆಗೆ ಹಾರಿ ಹೋಗಿದ್ದೆ. ಆಗಷ್ಟೇ ತಲೆ ಸ್ನಾನ ಮಾಡಿ ಬಿಸಿಲಲ್ಲಿ ತನ್ನ ನೀಳ ಕೇಶರಾಶಿಯನ್ನು ಹರಡಿ ಕೂತಿದ್ದಳು ಶೀಲಕ್ಕ. ಅವಳ ಹತ್ತಿರ ಏನೋ ಹೇಳಿಕೊಳ್ಳಬೇಕು ಎನ್ನುವ ಭಾವ ಅವತ್ತು ಶೀಲಕ್ಕಳನ್ನು ಮತ್ತಷ್ಟು ಆಪ್ತೆಯನ್ನಾಗಿಸಿದ್ದವು. ಅದನ್ನು ಅರಿತವಳಂತೆ ನನ್ನ ಭಾವನೆಯ ತೀವ್ರತೆಗೆ ಸಮಾನವಾಗಿ ಸ್ಪಂದಿಸುತ್ತಾ ಕೇಳಿದಳು ಏನಾಯಿತೆಂದು. ಅವಳ ಜೊತೆ ಅಷ್ಟು ಸಲಿಗೆಯಿಂದಿದ್ದರೂ 'ಏನು ಅಂದುಕೊಳ್ಳುತ್ತಾಳೊ' ಎನ್ನುವ ಭಾವ ನನ್ನನ್ನು ತಡೆಯಿತಾದರೂ ಅವಳ ತಣ್ಣನೆಯ ನೋಟ ನನಗೆ ಹೇಳಿಕೊಳ್ಳಲು ಅನುವು ನೀಡಿತು.

"ಶೀಲಕ್ಕ ಇವತ್ತು ಬೆಳಗ್ಗೆನೇ ಅಮ್ಮನ ಜೊತೆ ಜಗಳ. ಹೆಣ್ಣುಮಕ್ಕಳು ಲೇಟ್ ಆಗಿ ಏಳಬಾರದು ಅಂತ ಅವಳ ವಾದ. ಅಣ್ಣ ಮಾತ್ರ ೮ ಗಂಟೆಗೆ ಎದ್ರೂ ಪರ್ವಾಗಿಲ್ಲ. ಬೆಳಿಗ್ಗೆ ಏಳು, ಒಳ್ಳೆದು ಅಂದ್ರೆ ಅದು ಬೇರೆ ಮಾತು ಆದ್ರೆ ಹೆಣ್ಮಕ್ಕಳು ಮಾತ್ರ ಬೇಗ ಏಳಬೇಕು ಅನ್ನೋದು ತಪ್ಪು. ನಂಗೂ ಬೆಳಗ್ಗೆ ಚಾದರದೊಳಗಿನ ಬೆಚ್ಚಗಿನತನವನ್ನು ಅನುಭವಿಸಬೇಕು ಅಂತಾ ಇರೋಲ್ವಾ? ಒಮ್ಮೊಮ್ಮೆ ನಂಗೂ ಬೇಗ ಏಳ ಬೇಕು ಅಂತೆನೋ ಅನ್ನಿಸುತ್ತೆ...ಆದ್ರೆ ಅಮ್ಮ ಆರಕ್ಕೇ ಎಬ್ಬಿಸಿದಕೂಡಲೇ ಸಿಟ್ಟು ಬರುತ್ತೆ. ಅವಳು ಹೇಳಿದ ಹಾಗೆ ಕೇಳಬೇಕು ಅನ್ನಿಸೋದೇ ಇಲ್ಲ. ಇದು ಬರೀ ಬೇಗ ಏಳೋ ವಿಷಯಕ್ಕಷ್ಟೆ ಸಂಬಂಧಿಸಿಲ್ಲ.

ಎಲ್ಲದಕ್ಕೂ, ಕುಳಿತಿದ್ದಕ್ಕೆ ನಿಂತಿದ್ದಕ್ಕೆ 'ದೊಡ್ಡವಳಾಗಿದೀಯಾ, ಇನ್ನಾದ್ರೂ ಸುಧಾರಿಸು'ಅಂತಾಳೆ. ಸಾಲ್ದೂ ಅಂತಾ ಅಪ್ಪನೂ ಕೆಲವೊಮ್ಮೆ ಅಮ್ಮನ ಮಾತಿಗೆ ತಲೆಯಾಡಿಸ್ತಾರೆ. ನನಗೆ ಬೇಕಾದ ಹಾಗೆ ಇರೋಕೆ ಬಿಡಲ್ಲ. ಜೀವನದ ಮೇಲೆ ಜಿಗುಪ್ಸೆ ಹುಟ್ಟಿಸಿ ಬಿಡ್ತಾರೆ ಇವರೆಲ್ಲ ಸೇರಿ. ಇವ್ರೆಲ್ಲ ನನ್ನ ಅರ್ಥನೇ ಮಾಡ್ಕೊಳಲ್ಲ' ನನ್ನ ಅಮ್ಮನ ಮೇಲೆ ಆಪಾದನೆಯ ಪಟ್ಟಿ ಬೆಳೆಯುತ್ತಲೇ ಇತ್ತು.

ಶೀಲಕ್ಕನಿಗೆ ಏನೆನ್ನಿಸಿತೋ ಏನೋ ಒಮ್ಮೆಲೆ 'ಕೂಸೆ, ನಿನಗೆ ಏನೆನ್ನಿಸುತ್ತೋ ಅದನ್ನೆಲ್ಲ ಬರಿ. ನೀನು ಡೈರಿ ಬರೆಯೋಕೆ ಸ್ಟಾರ್ಟ್ ಮಾಡು' ಎಂದಳು. ಇವಳೂ ನನ್ನ ಜೊತೆ ಸೇರಿ ಅಮ್ಮಂದಿರಿಗೆಲ್ಲ ಬಯ್ತಾಳೆ ಅಂದ್ಕೊಂಡ್ರೆ ಇದೆನೋ ಡೈರಿ ಬರಿ ಅಂತಾಳಲ್ಲ?! ನನ್ನ ಟೆನ್ಷನ್‌ಗೂ ಡೈರಿಗೂ ಏನು ಸಂಬಂಧ? ಶೀಲಕ್ಕನನ್ನು ಕೇಳಿಯೇ ಬಿಟ್ಟೆ 'ನಾನೇನೋ ಅಂದ್ರೆ...ಡೈರಿ ಬರಿ ಅಂತಿಯಲ್ಲ? ಡೈರಿ ಬರೆದ್ರೆ ಏನು ಉಪಯೋಗ? ಬರೆಯುವುದು ಹೇಗೆ ಅಂತಾನೂ ಗೊತ್ತಿಲ್ಲ, ಸಿನೆಮಾದಲ್ಲಿ ಹೀರೋಯಿನ್ ಬರಿತಾಳೆ ಅಂತ ಅಷ್ಟೆ ನಂಗೆ ಗೊತ್ತಿರೋದು' ಅಂತ ಚಿಕ್ಕ ಮುಖ ಮಾಡಿದೆ.

'ಹಾಂಗಲ್ಲ ಕೂಸೇ..ನಾನೂ ಮೊದಲು ಅಮ್ಮನ ಹತ್ತಿರ ಜಗಳ ಮಾಡ್ತಿದ್ದೆ. ಚಿಕ್ಕ ವಿಷ್ಯಕ್ಕೂ ಸಿಟ್ಟು, ಯಾವತ್ತೂ ನನ್ನ ತಪ್ಪೇ ಇರೊಲ್ಲ ಅಂತ ವಾದ. ನನ್ನ ಒಬ್ಬ ಗೆಳತಿಯ ಒತ್ತಾಯಕ್ಕೆ ನಾನೂ ಡೈರಿ ಬರೆಯಲು ಪ್ರಾರಂಭಿಸಿದೆ ನೋಡು..ಒಂದೆಂದೇ ಅರ್ಥವಾಗತೊಡಗಿತು; ಜೀವನವನ್ನು ಸೂಕ್ಷ್ಮವಾಗಿ ಗಮನಿಸುವ ಸಾಮರ್ಥ್ಯ, ನನ್ನ ತಪ್ಪುಗಳು, ಆ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬಗೆ..ಸಂಬಂಧಗಳನ್ನು handle ಮಾಡೋದು..ಹೀಗೆ.

ಹಾಂ! ಮತ್ತೊಂದು ವಿಷಯ, ಬರೀ ಡೈರಿ ಬರೆದಷ್ಟಕ್ಕೆ ಯಾರೂ ಉದ್ಧಾರ ಆಗಲ್ಲ. ಸರಿ ಎಂದು ಕಂಡುಬಂದ ವಿಷಯಗಳನ್ನು ಅಳವಡಿಸಿಕೊಳ್ಳುವುದು, ಹಳೆ ಪುಟಗಳನ್ನು ತಿರುವಿಹಾಕೋದು ಎಲ್ಲಾ ಮಾಡ್ತಾ ಇದ್ರೆ ನಿಜವಾಗ್ಲೂ ಡೈರಿ ಖುಷಿ ನೀಡುತ್ತದೆ'
ಶೀಲಕ್ಕ ನನ್ನಲ್ಲಿ ಹೊಸ ವಿಚಾರ ಬಿತ್ತಿದ್ದಳು. ಶೀಲಕ್ಕನ ಹತ್ತಿರ ಅದು-ಇದು ಅಂತ ಸ್ವಲ್ಪ ಹರಟೆ ಕೊಚ್ಚಿ ಮನೆಗೆ ಮರಳಿದ್ದೆ.

ಅವತ್ತು ರಾತ್ರಿ ಮಲಗುವ ಮುನ್ನ ಅಪ್ಪ ಕೊಟ್ಟ LIC ಡೈರಿಯ ಕಪ್ಪು ಮೈಯನ್ನು ಪ್ರೀತಿಯಿಂದ ಸವರಿ ಬರೆಯಲು ಅಣಿಯಾದೆ. ಆ ಕಡೆ ಹಳ್ಳಿಯೂ ಅಲ್ಲದ, ಪಟ್ಟಣವೂ ಅಲ್ಲದ, ಮುರುಕು ಚಾ ಅಂಗಡಿ, ಭಟ್ಟರ ಪೆಪ್ಪರ್‌ಮೆಂಟ್ ಅಂಗಡಿ ಮಾತ್ರ ಇರುವ ಮಲೆನಾಡಿನ ಪುಟ್ಟ ಊರಲ್ಲಿ ನನ್ನ ಹೈಸ್ಕೂಲ್ ಇದೆ. ಅಲ್ಲಿ ನಾನು ಹತ್ತನೇ ತರಗತಿ. ಪ್ರತಿ ಸಾರಿ ಮೊದಲನೇ ರ್ರ್ಯಾಂಕ್ ಗಳಿಸುವಷ್ಟು ಬುದ್ಧಿವಂತಳಲ್ಲ, ಆದರೆ ಫಸ್ಟ್ ಕ್ಲಾಸ್‌ಗೆ ತೊಂದರೆ ಇರಲಿಲ್ಲ. ಆಟದಲ್ಲೂ ಏನು ಛಾಂಪಿಯನ್ ಅಲ್ಲ, ಆದರೆ ವಾಲಿಬಾಲ್, ಚೆಸ್ ಇಷ್ಟ.

ನನ್ನಂತದೇ ನಾಲ್ಕೈದು ತುಂಟ ಹುಡುಗಿಯರನ್ನು ಕಟ್ಟಿಕೊಂಡು ತರಲೆ ಮಾಡಿಕೊಂಡು ತಿರುಗುತ್ತಿದ್ದೆ. ಎಲ್ಲ ಶಿಕ್ಷಕರು, ಸ್ವಲ್ಪ ಹಾರಾಡುವ ಹುಡುಗರಿಗೆಲ್ಲ ಅಡ್ಡಹೆಸರುಗಳನ್ನು ದಯಪಾಲಿಸಿ ಮರೆಯಲ್ಲಿ ಆಡಿಕೊಂಡು ನಗುತ್ತಿದ್ದೆವು. ಬೇಸಿಗೆಯಲ್ಲಿ ಉಪ್ಪು ಮಾವಿನಕಾಯಿ, ಚಳಿಗಾಲ ಬಂತೆಂದರೆ ಹುಣಸೆಕಾಯಿ, ನೆಲ್ಲಿಕಾಯಿ..ಹೀಗೆ ಆಯಾ ಕಾಲಕ್ಕೆ ಏನು ಹಣ್ಣು-ಕಾಯಿಗಳು ಬೆಳೆಯುತ್ತವೋ ಅವೆಲ್ಲ ಎಲ್ಲರ ಬ್ಯಾಗ್‌ಗಳಲ್ಲಿ ಹೇರಳವಾಗಿ ಸಿಗುತ್ತಿದ್ದವು. ಅದನ್ನೆಲ್ಲ ತಿನ್ನುತ್ತಾ ಯಾವಾಗಲೂ ನಗುತ್ತ, ನಗಿಸುತ್ತ ಕ್ಲಾಸ್ ತುಂಬಾ ಓಡಾಡಿಕೊಂಡಿರುತ್ತಿದ್ದೆ.

ಆದರೆ ನನ್ನದು ಡಬ್ಬಾ ಸರ್ಕಾರಿ ಹೈಸ್ಕೂಲು! ಮಳೆಗಾಲದಲ್ಲಿ ಸೋರುವ, ಅಂಗವಿಕಲ ಡೆಸ್ಕ್-ಬೆಂಚ್‌ಗಳ ಈ ಸ್ಕೂಲು ನೋಡಲು ಕುರೂಪಿ. ಆದರೆ ಸುತ್ತಮುತ್ತಲ ಪರಿಸರ; ಆ ಬೆಟ್ಟ, ಬಯಲು ಬಲು ಸುಂದರ. ಆ ಹಸುರಿನನಡುವೆ ಅರಳುವ ಮುಗ್ಧ ಮನಸ್ಸಿನ ಚಂದವೇ ಮತ್ತೊಂದು ರೀತಿಯದು...

ಮುಂದಿನ ಭಾಗಕ್ಕೆ ಕಾಯಿರಿ...

Tuesday, February 5, 2008

ಡೈರಿಗೆ ಮುನ್ನುಡಿ


ಯಾಕೋ ಕನ್ನಡಿ ಬಹಳ ಪ್ರಿಯ ಎನಿಸುತ್ತದೆ. ದಾರಿಯಲ್ಲಿ ನಡೆದು ಹೋಗುತ್ತಿದ್ದರೆ ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಎನ್ನುವ ಭಾವ ಕಚಕುಳಿ ಇಡುತ್ತದೆ. ಕ್ಲಾಸಿನಲ್ಲಿ ಹುಡುಗ ಕದ್ದು ನೋಡಿದಾಗ ಆಗುವ ನಾಚಿಕೆ, ರಸ್ತೆಯಲ್ಲಿ ಅಪರಿಚಿತ ಹಸಿದ ಕಣ್ಣುಗಳ ಭೀತಿ...ಎಲ್ಲಾ ಭಾವನೆಯನ್ನು ಹೇಳಿಕೊಳ್ಳುವ ಆಸೆ, ಆದರೆ ಹೇಳಲಾಗದ ಸಂಕಟ. ಯಾರಿಗೆ ಹೇಳಲಿ? ಯಾಕೆ ಹೇಳಲಿ? ಹೇಳಿದರೆ ಅರ್ಥವಾಗುತ್ತದಾ ಬೇರೆಯವರಿಗೆ? ಏನೋ ಗೊತ್ತಿಲ್ಲ.

ಆದರೆ ನನ್ನ ಡೈರಿಗೆ ಮಾತ್ರ ಅದು ಪೂರ್ತಿ ಅರ್ಥವಾಗುತ್ತದೆ. ಡೈರಿ ಅಂತಾ ನಾನು ದಿನಾ ಬರೆಯುವ ರೂಢಿ ಇರಿಸಿಕೊಂಡಿಲ್ಲ. ಒಂದೊಂದು ದಿನ ಮನಸಿಗೆ ಒಂಥರ ಕಿರಿಕಿರಿ, ಒತ್ತಿಕೊಂಡು ಬರುವ ಏನೋ ತಳಮಳ ತಡೆಯಲು ಆಗದೇ ಇದ್ದಾಗ ಡೈರಿ ಬರವಣಿಗೆ ನನಗೆ ಹೃದಯದ ಬವಣೆ ಬರೆದು ಹಗುರಾಗಲು ದಾರಿಯಾಗುತ್ತದೆ.ನನಗೆ ವಿಶೇಷ ಎನಿಸಿದ ಏನೇ ಇರಲಿ; ಯಾರದೋ ಕಥೆ, ಎಲ್ಲೋ ಓದಿದ ಕವನ, ಯಾವತ್ತೋ ಆದ ಅನುಭವ, ಹೀಗೆ...ಎಲ್ಲಾ ಡೈರಿಯಲ್ಲಿ ತುಂಬಿಡುತ್ತೇನೆ. ನನಗಿಷ್ಟವಾದ ಇದರ ಕೆಲವು ಪುಟಗಳನ್ನೇ ನಿಮ್ಮೆದುರು ಇಡುತ್ತಿದ್ದೇನೆ.

ಎಲ್ಲದಕ್ಕಿಂದ ಮೊದಲು ನನ್ನ ಡೈರಿ ಬರವಣಿಗೆ ಹೇಗೆ ಪ್ರಾರಂಭವಾಯಿತು ಎಂದು ಹೇಳುತ್ತೇನೆ...ಮಲೆನಾಡಿನ ನನ್ನ ಪುಟ್ಟ ಹಳ್ಳಿಯಲ್ಲಿ ನೇರಲೆ, ಪೇರಲೆ, ನೆಲ್ಲಿಕಾಯಿ ಅಂತ ಹಕ್ಕಿಯ ಹಾಗೆ ಬೆಟ್ಟಗುಡ್ಡ ಅಲೆಯುತ್ತ,ಮನೆಯಲ್ಲಿ ಅಮ್ಮ ಮಾಡಿದ ರುಚಿ ಅಡಿಗೆ ಸವಿಯುತ್ತ ಆರಾಮವಾಗಿ ಇದ್ದವಳು ನಾನು. ಮೇಷ್ಟ್ರು ಕೊಟ್ಟ ಹೋಂ ವರ್ಕ್‌ಗಳನ್ನೆಲ್ಲ ಅಚ್ಚುಕಟ್ಟಾಗಿ ಮುಗಿಸುವುದೊಂದೇ ಅಂದಿನ ನನ್ನ ಜೀವನದ ದೊಡ್ಡ ಸವಾಲು. 16 ವರ್ಷವಾದರೂ ನನಗೆ ಡೈರಿ ಬರೆಯುವುದು ಅಂದರೇನು ಗೊತ್ತಿರಲಿಲ್ಲ. ಎಲ್ಲ ಶೀಲಕ್ಕ ಹೇಳಿಕೊಟ್ಟದ್ದು. ನನ್ನ ತಳಮಳ ತಣಿಯಲು `ಡೈರಿ' ಬರೆಯುವ ದಾರಿ ಹೇಳಿದವಳು. ಆದ್ದರಿಂದ ನನ್ನ 'ಶೋಡಷ ವಯಸ್ಸಿನ ಆದರ್ಶ'ಶೀಲಕ್ಕಳ ಬಗ್ಗೆ ನಿಮಗಿಷ್ಟು ಹೇಳುವುದು ಒಳಿತು.

ಪಕ್ಕದ ಮನೆ ಶೀಲಕ್ಕ, ನನಗಿಂತ ಐದು ವರ್ಷ ದೊಡ್ಡವಳು. ಸುಂದರಿ ಎನ್ನಬಹುದಾದ ಚಹರೆ.ಬಹುತೇಕ ನನ್ನ ಕನಸುಗಳ ಅಡಿಪಾಯ ಇವಳೇ.ದೊಡ್ಡ ಕಾಲೇಜಿಗೆ ಹೋಗುವವಳು,ಬಣ್ಣ-ಬಣ್ಣದ ಬಟ್ಟೆ ತೊಡುವವಳು. ನಮ್ಮ ಹಾಗೆ ಯುನಿಫಾರ್ಮಿನ ಬಂಧನವಿಲ್ಲ, ಹೇರ್‌ಪಿನ್ ತರಲೂ ಅಪ್ಪನನ್ನು ಅವಲಂಬಿಸುವ ಅವಶ್ಯಕತೆ ಇಲ್ಲ. ನಮ್ಮ ಶಾಲೆ ಬಿಟ್ಟು ಅವಳು ಕಾಲೇಜು ಸೇರಿ ವರ್ಷಗಳೇ ಕಳೆದರೂ ಅವಳ ಬಗ್ಗೆ ಮಾತುಗಳು ನಮ್ಮ ಶಾಲೆಯ ಹರಟೆಯಲ್ಲಿಬಂದು ಹೋಗುತ್ತಿರುತ್ತವೆ. ಎಲ್ಲರೂ ಅವಳನ್ನು`ಜೋರು ಹುಡುಗಿ' ಎಂದು ಮೂಗು ಮುರಿದರೂ, ಏನೋ ನಂಗೆ ಅವಳ ಮೇಲೆ ಒಂಥರಾ ಪ್ರೀತಿ, ನಂಬಿಕೆ.

ಕಾಲೇಜಿಗೆ ಹೋಗಲು ಪಟ್ಟಣದಲ್ಲಿ ರೂಮು ಮಾಡಿಕೊಂಡಿದ್ದರಿಂದ ವಾರಕ್ಕೆ ಒಂದು ಸಾರಿ ಬಂದು ಹೋಗುತ್ತಾಳೆ. ಆಗ ನನಗೆ ಅವಳ ಸಾಮಿಪ್ಯ ಲಭ್ಯ. ಮಧ್ಯಾಹ್ನ ಅಮ್ಮನ ಕಣ್ಣು ತಪ್ಪಿಸಿ ಅವಳೊಡನೆ ಹೋದರೆ ಬರುವುದು ಸಂಜೆಯೇ. ಆಹಾ! ಎಷ್ಟು ವಿಷಯ ಹೇಳುತ್ತಾಳೆ. ಅವಳ ಕಾಲೇಜು, ಮೂರ್ಖ ಪ್ರೊಫೆಸರುಗಳು, ಅವರಿವರ ಪ್ರಣಯದ ಸುದ್ದಿ, ಅವಳ ರೂಮ್‌ಮೇಟುಗಳು ಇವುಗಳ ನಡುವೆಯೇ ತನ್ನ ಮನದ ಭಾವನೆಗಳು ಹೀಗೆ ಒಂದು ಕೂತೂಹಲ, ಸ್ವಾರಸ್ಯದ ಪ್ರಪಂಚವನ್ನೇ ನನ್ನ ಮುಂದೆ ತೆರೆದಿಟ್ಟು ಬಿಡುತ್ತಾಳೆ. 'ಕೂಸೇ,ಎಷ್ಟು ಮಜಾ ಆಗ್ತು ಗೊತ್ತಿದ್ದ' ಅಂತ ಅವಳು ಕಣ್ಣು ಮಿಟುಕಿಸಿ ನಗುತ್ತಿದ್ದರೆ ಇದೊಂದು ವರ್ಷ ಹೇಗೆ ಕಳೆಯುತ್ತದೆಯೋ, ಯಾವಾಗ ನಾನು ಕಾಲೇಜಿಗೆ ಹೋದೇನೋ ಎನಿಸುತ್ತದೆ.

ಅವಳಿಗೂ ನನಗೂ ಯಾವತ್ತೂ communication gap ಆದದ್ದೇ ಇಲ್ಲ. ನಾನು ಹೇಳುವ ಮೊದಲೇ 'ಏನೇ ಕೂಸೆ, ಎಂತಾ ಆತೆ?' ಅಂತ ಆತ್ಮೀಯತೆಯಿಂದ ಕೇಳುವಳು. ಆ ಕ್ಷಣ ನನಗೆ ಅನಿಸಿದ್ದನ್ನು ಪಟಪಟ ಹೇಳಿಬಿಡುತ್ತೇನೆ. ಅವಳು ಸರಿಯಾಗಿ ನನ್ನ ತುಮುಲ ಗ್ರಹಿಸಿರುತ್ತಾಳೆ ಮತ್ತು ಅದಕ್ಕೆ ಸೂಕ್ತ ಸಲಹೆ ನೀಡುತ್ತಾಳೆ. ಇದರಿಂದಲೇ ನನಗೆ ಅವಳು ಮತ್ತೂ ಇಷ್ಟವಾಗಿಬಿಡುತ್ತಾಳೆ.
- ಷೋಡಶಿ, ೨೭ ಏಪ್ರಿಲ್ ೨೦೦೭