Monday, July 26, 2010

ಇದೇನಾ ಪ್ರೀತಿಗೆ ಒಂದು ಸುಂದರ ಪ್ರತಿಕ್ರಿಯೆ

ಇದೇನಾ ಪ್ರೇಮ ಲೇಖನಕ್ಕೆ ಅಭಯ ಸಿಂಹ ಅವರು ನೀಡಿದ ಪ್ರತಿಕ್ರಿಯೆಯನ್ನು ಹಾಗೆ ಪ್ರಕಟಿಸಲು ಸಂತೋಷವಾಗುತ್ತಿದೆ. ನನ್ನ ಲೇಖನಿಗೆ ಇನ್ನಷ್ಟು ಸ್ಫೂರ್ತಿಯ ಇಂಕು ತುಂಬಿದ್ದಂತ್ತಾಗಿದೆ.  ಅಭಯ್ ಅವರ ಲೇಖನ ಓದಿ-ಸುಮಿ

ಹಿಂದೆ...

ಆಕೆ ರೂಪ. ನನಗೆ ಆಕೆಯ ಹೆಸರು ಗೊತ್ತು. ಆದರೆ ಆಕೆಗೆ ನನ್ನ ಹೆಸರೂ ಗೊತ್ತಿಲ್ಲ ಎನ್ನುವುದೂ ನನಗೆ ಚೆನ್ನಾಗೇ ಗೊತ್ತು. ಬಸ್ಸು ಹಾಳಾದಾಗ ನನ್ನಲ್ಲಿ ಸಹಾಯ ಕೇಳಲು ನಾಚುವಷ್ಟು ಅಪರಿಚಿತ ನಾನು ಆಕೆಗೆ. ಹೋಗಲಿ ನಾನೇ ಮಾತನಾಡಿಸುವೆ ಆಕೆಯನ್ನು ಎನ್ನುತ್ತಿರುವಾಗಲೇ, ನೀನೇ ನನ್ನ ಮಾತನಾಡಿಸಬಾರದೇ ಎನ್ನುವಂಥಾ ಕಡೆಕಣ್ಣ ನೋಟ ಬೀರಿದಳು ಆಕೆ ನನ್ನೆಡೆಗೆ. ನಾನು ಯಾಂತ್ರಿಕವಾಗಿ ಕೇಳಿದೆ, "ಈಗೇನು ಮಾಡುತ್ತೀರಿ?"
ಮುಂದಕ್ಕೆ...

ಆಕೆಯ ಕೆನ್ನೆಯ ಮೇಲೆ ಇನ್ನೇನು ನೀರಹನಿಗಳು ಉರುಳಲಿದ್ದವು. ಆದರೆ ಹುಡುಗಿಯರು ಹೀಗೆ ಇನ್ನೇನು ಅಳುವಂಥಾ ಅಸಹಾಯಕರಾಗಿರುವಾಗ ಎಷ್ಟು ಸುಂದರವಾಗಿ ಕಾಣಿಸುತ್ತಾರೆ ಎಂದು ಆಕೆಗೇನು ಗೊತ್ತು? ಆದರೆ ನಾನು ಸಾವರಿಸಿಕೊಂಡೆ. ಅಷ್ಟರಲ್ಲಿ ಆಕೆ "ಮನೆಯೂ ದೂರ... ಇಲ್ಲೆಲ್ಲೂ ಫೋನೂ ಇಲ್ಲ" ಎಂದಳು. ಹಾ! ದೂರದಲ್ಲೆಲ್ಲೂ ಹಾದು ಹೋಗುತ್ತಿದ್ದ ಕಾರೊಂದರ ಬೆಳಕಿನಿಂದ ಆಕೆಯ ಮುಂಗುರುಳು ಚಿನ್ನದ ಬಣ್ಣಕ್ಕೆ ತಿರುಗಿದ್ದವು. ಕಣ್ಣಾಲಿಗಳಲ್ಲಿ ತುಂಬಿದ್ದ ನೀರು ಕಣ್ಣಿಗೊಂದು ಹೊಸ ಹೊಳಪನ್ನೇ ನೀಡಿತ್ತು. ಆ ಒಂದು ಕ್ಷಣ ಆಕೆಗೆ ಸಹಾಯ ಮಾಡದೇ ಇನ್ನೇನೂ ದಾರಿಯೇ ಕಾಣಲಿಲ್ಲ ನನಗೆ. ನನಗೇ ಅರಿವಿಲ್ಲದಂತೆ ನನ್ನ ಬಾಯಿ ಉಲಿದಿತ್ತು, "ನಾನು ಬಿಟ್ಟು ಬಿಡಲಾ?"

ಒಂಟಿ ಹುಡುಗಿಯ ಮುಂದೆ ಹೀರೋ ಆಗುತ್ತಿದ್ದೇನೆಂದೇನಾದರೂ ಆಕೆ ಅಂದುಕೊಳ್ಳಬಹುದೇ? ಹೀಗೆ ಯೋಚನೆಯೊಂದು ಸುಳಿದು ಹೋಯಿತು ನನ್ನ ಮನಸಲ್ಲಿ. ಆದರೆ ಕೆಲವೊಮ್ಮೆ ಪರಿಸ್ಥಿತಿ ಹೇಗೆ ವಿಚಿತ್ರವಾಗಿರುತ್ತೆ ಅಂದ್ರೆ, ಕೆಟ್ಟ ಸಿನೆಮಾದಲ್ಲಿ ನೂರು ಬಾರಿ ನೋಡಿ ಹಳಸಿದ ದೃಶ್ಯವೂ ನಮ್ಮ ಜೀವನದಲ್ಲಿ ಅಷ್ಟೇ ಸ್ವಾಭಾವಿಕವಾಗಿ ಎದುರಾದರೂ ಅಸ್ವಾಭಾವಿಕವಾಗದಿರುವ ಹೋರಾಟ ನಡೆಸಿ ನಾವು ಪರಿಸ್ಥಿತಿಯನ್ನು ಚೋದ್ಯವನ್ನಾಗಿಸುತ್ತೇವಲ್ಲಾ! ಹಾ! ಎಂಥಾ ವೈಚಿತ್ರ್ಯ ಇದು! ನಮ್ಮಲ್ಲಿ ಇದ್ದಿದ್ದು ಒಂದೇ ಕೊಡೆ. ನನ್ನ ಕೈ ಆಕೆಯ ಕೈ ಮತ್ತೆ ಮತ್ತೆ ನನ್ನ ಕೈಗೆ ತಾಗುತ್ತಿತ್ತು. ನಾನೆಷ್ಟು ತಪ್ಪಿಸಿದರೂ ಮತ್ತೆ ಕೈ ತಾಗುತ್ತಿತ್ತು. ಒಂದು ಕ್ಷಣ, ಪರಿಸ್ಥಿತಿಯ ಉಪಯೋಗವನ್ನು ಪಡೆಯುತ್ತಿದ್ದಾಳೇಯೇ ಆಕೆ ಎಂದು ನನಗೇ ಅನುಮಾನವಾಯಿತು. "ನನ್ನಿಂದ ನಿಮಗೂ ತೊಂದರೆ..." ಎಂದಳು ಆಕೆ.

ನಾನು ಕೊಂಚ ನೇರವಾಗಿ "ಹೂಂ. ತೊಂದ್ರೆನೇ..ಆದ್ರೆ ನನ್ನ ತೊಂದ್ರೆಗಿಂತ ನಿಮ್ಮ ಫಜೀತಿ ಕಂಡು ಮರುಕ ಹುಟ್ಟಿತು. ಅದಕ್ಕಾಗಿ ಬಂದೆ. ಅಲ್ಲದೆ, ಇಂಥ ರಾತ್ರಿಯಲ್ಲಿ ಒಬ್ಬಳೇ ಹುಡುಗಿ ಹೋಗುವುದು ಸರಿ ಕಾಣಲಿಲ್ಲ" ಎಂದೆ. ನನ್ನ ಉದ್ದೇಶ ನೇರ ಎಂದು ತಿಳಿಸುವುದು ಅಗತ್ಯ ಎನಿಸಿತ್ತು ನನಗೆ. ಮಾತು ಹೊರಟ ನಂತರ, ಅಯ್ಯೋ! ಪಾಪ ತುಂಬಾ ತೀಕ್ಷ್ಣವಾಯಿತೇನೋ ನನ್ನ ಮಾತು ಎನಿಸಿ ತುಸು ಬೇಸರವಾಯಿತು. ಸುಮಾರು 5 ಕಿ.ಮೀ ದೂರ ಮೌನದ ಪಯಣ. ಆಕೆಯ ಮನೆಯ ದೀಪ ಕಾಣಿಸುತ್ತಿತ್ತು. ಅಪ್ಪ ಹೊರಗೇ ಕೂತು ಕಾಯುತ್ತಿದ್ದ. ಮುಖದಲ್ಲಿ ಆತಂಕದ ಕೋಪ. ಇನ್ನೇನು ಬೈಯಬೇಕು, ಅಷ್ಟರಲ್ಲಿ ನನ್ನನ್ನು ನೋಡಿ ಸುಮ್ಮನಾದರು.

"ಇವರ್ಯಾರು" ಕೇಳಿದರು ಅವರು. ಹ! ಆಕೆಗೆ ನನ್ನ ಹೆಸರೇ ಗೊತ್ತಿಲ್ಲವಲ್ಲಾ? ನಾನೇ ಹೇಳಿದೆ "ನಾನು... ವಿವೇಕ್" ಆಕೆ ನಡೆದದ್ದನ್ನೆಲ್ಲಾ ತನ್ನ ತಂದೆಗೆ ವಿವರಿಸಿದಳು. ನನಗೇನೂ ಕೇಳಿಸಲಿಲ್ಲ. ಆಕೆ ಕೈ ಆಡಿಸುತ್ತಾ, ದೊಡ್ಡದಾಗಿ ಕಣ್ಣು ಬಿಡುತ್ತಾ ಆಗಿದ್ದಕ್ಕೆ ಒಂದಿಷ್ಟು ರಂಗು ಸೇರಿಸುತ್ತಾ ಮಾತನಾಡುತ್ತಿದ್ದಾಗ ನಾವು ನಡೆದ ಐದು ಕಿಲೋಮೀಟರ್ ಒಂದು ರಾತ್ರಿಯಿಡೀ ನಡೆದ ಕಥೆಯಾಕಾಗಿರಬಾರದು ಎನಿಸಿತು ನನಗೆ. ಆದರೆ ಮರುಕ್ಷಣಕ್ಕೆ ಸ್ವಲ್ಪ ಸಿಲ್ಲಿ ಅನಿಸಿ ಅಲ್ಲಿಂದ ಹೊರಟೆ ನಾನು. ಅವರಲ್ಲೇ ರಾತ್ರಿ ಕಳೆಯುವಂತೆ ಅವರೆಲ್ಲರೂ ಒತ್ತಾಯ ಮಾಡಿದರೂ, ಪರಿಸ್ಥಿತಿಗೆ ನಾನು ತಲೆಕೊಟ್ಟರೆ ನದಿಯೊಂದರ ಸುಳಿಗೆ ಸಿಕ್ಕಿ ಚೂರಾಗುವ ಕುಂಬಾದ ಮರದ ಕೊಂಬೆಯಂತೆ ನಾನಾಗುವುದರಲ್ಲಿ ಸಂಷಯವೇ ಇರಲಿಲ್ಲ. ಹಾಗೇ ನಡೆದೆ, ಕೊಡೆ ಮಡಿಸಿ ಮಳೆಗೆ ತಲೆಕೊಟ್ಟು ನಡೆದೆ.

***

ಈ ಘಟನೆಯ ನಂತರ ಆಕೆ ನನಗೆ ಕಾಲೇಜಲ್ಲಿ ಸಿಕ್ಕಿದಾಗ ನಾನು ಆಕೆಯನ್ನು ಹೇಗೆ ಎದುರಿಸುವುದು ಎಂದು ಗೊತ್ತಾಗದೆ ತಬ್ಬಿಬ್ಬಾಗಿ ಮುಗುಳ್ನಕ್ಕೆ. ಆಕೆ ನರುನಕ್ಕಳು. ನಡೆದ ಆಘಟನೆ ಆಕೆಗೆ ನನ್ನ ಪರಿಚಯವನ್ನು ಮಾಡಿಸಿತ್ತು ಎನ್ನುವುದನ್ನು ಬಿಟ್ಟರೆ ಬೇರೇನೂ ಪ್ರಭಾವ ಆದಂತಿರಲಿಲ್ಲ ಆಕೆಯಲ್ಲಿ. ನನಗೆ ಆಕೆಯ ಇದೇ ಗುಣ ಇಷ್ಟವಾಗಿತ್ತು. ಹುಡುಗರಾಗಲಿ, ಹುಡುಗಿಯರಾಗಲಿ ಎಲ್ಲರನ್ನೂ ಚೆನ್ನಾಗಿ ನೋಡುವ, ಗೌರವಿಸುವ ಈ ಹುಡುಗಿ ನನಗಿಷ್ಟವಾಗಿದ್ದಳು. ಆದರೆ ಅದೇ ಕಾರಣಕ್ಕೆ ಆಕೆ ನನ್ನನ್ನು ವಿಶೇಷವಾಗಿ ಗುರುತಿಸಿ ಮಾತನಾಡಿಸುತ್ತಿರಲಿಲ್ಲ. ಆದರೆ ನನಗೆ ಮಾತ್ರ ದಿನದಿಂದ ದಿನಕ್ಕೆ ಅವನನ್ನು ಮಾತನಾಡಿಸುವ ಕಾತರ ಹೆಚ್ಚುತ್ತಿದೆ.

ಆದರೆ ವಿನಾಕಾರಣ ಹೇಗೆ ಮಾತನಾಡಿಸುವುದು? ನಾನೇ ಮೇಲೆ ಬಿದ್ದು ಮಾತನಾಡಿಸುವುದು ನನ್ನಿಂದಾಗದು. ಇಷ್ಟಕ್ಕೂ ನನಗೇಕೆ ಅವಳನ್ನು ಮಾತನಾಡಿಸಬೇಕು ಅನ್ನಿಸುತ್ತದೆ? ನಾನೇನಾದರೂ ಆಕೆಯನ್ನು ಪ್ರೀತಿಸುತ್ತಿದ್ದೇನಾ?! ಹಾಗಾದರೆ ಪ್ರೀತಿ ಅಂದರೆ ಹೀಗೆ ಇರುತ್ತಾ? ಇದ್ಯಾವುದಕ್ಕೂ ನನ್ನಲ್ಲಿ ಉತ್ತರವಿಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳುವುದಾದರೂ ಹೇಗೆ?... ಇದೇನಾ ಪ್ರೇಮ...?

Thursday, July 22, 2010

ಇದೇನಾ ಪ್ರೇಮ?

ಹಿಂದೆ....
ಹೆಸರೇ ಸರಿಯಾಗಿ ಗೊತ್ತಿಲ್ಲದವನ ಬಳಿ ಏನು ಸಹಾಯ ಯಾಚಿಸುವುದು?! "ಈಗ ಏನು ಮಾಡುತ್ತೀರಿ?" ಎಂದು ಅವನಾಗಿಯೇ ಕೇಳಿದ.
ಮುಂದಕ್ಕೆ...

ನನಗೆ ಸಹಾಯ ಬೇಕಿತ್ತು. ಆದರೆ ಅವನನ್ನು ಕೇಳಲು ಮುಜುಗರ. ಕೆನ್ನೆಯ ಮೇಲೆ ಉರುಳಲು ಸಿದ್ಧವಾಗಿದ್ದ ಕಣ್ಣೀರನ್ನು ಕಷ್ಟಪಟ್ಟು ತಡೆಯುತ್ತ "ಮನೆಯೂ ದೂರ. ಇಲ್ಲೆಲ್ಲೂ ಫೋನೂ ಇಲ್ಲ...

ಏನು ಮಾಡಬೇಕೋ ತಿಳಿಯುತ್ತಿಲ್ಲ" ಎಂದೆ. ನನ್ನ ಮೇಲೆ ಅವನಿಗೆ ಅನುಕಂಪ ಮೂಡಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. "ನಾನು ಬಿಟ್ಟುಕೊಡಲಾ?" ಪ್ರಾಮಾಣಿಕವಾಗಿ ಕೇಳಿದ್ದ.

ಒಂಟಿ ಹುಡುಗಿಯ ಮುಂದೆ ಹೀರೋ ಆಗಬೇಕು ಎನ್ನುವ ಲಕ್ಷಣ ಯಾವುದೂ ಕಾಣಿಸಲಿಲ್ಲ. ನನಗೂ ಗತ್ಯಂತರವಿರಲಿಲ್ಲ. ನಾನೊಬ್ಬ ವಯಸ್ಸಿಗೆ ಬಂದ ಹುಡುಗಿ, ಈ ಅಪರಾತ್ರಿಯಲ್ಲಿ ಹೆಸರು ಕೂಡ ಸರಿಯಾಗಿ ಗೊತ್ತಿಲ್ಲದ ಯುವಕನ ಜೊತೆ ಹೋಗುತ್ತಿದ್ದೇನೆ. ಅಕ್ಕಪಕ್ಕದ ಮನೆಯವರು ಏನೆಂದುಕೊಂಡಾರು.. ಊಹುಂ.. ಇದ್ಯಾವುದೂ ನನ್ನ ಗಮನಕ್ಕೇ ಬರಲಿಲ್ಲ. ಯಾವುದೋ ಮೋಡಿಗೆ ಒಳಗಾದವಳಂತೆ ಅವನ ಜೊತೆನಡೆದೆ.

ಇದ್ದಿದ್ದು ಒಂದೇ ಛತ್ರಿ. ಎಷ್ಟು ಬೇಡವೆಂದರೂ ಅವನ ಮೊಣಕೈ ನನ್ನ ಕೈಗೆ ತಗಲುತ್ತಿತ್ತು. ಸುಮಾರು ದೂರ ಒಬ್ಬರಿಗೊಬ್ಬರು ಏನೂ ಮಾತನಾಡಿಕೊಳ್ಳಲಿಲ್ಲ. ಮಾತನಾಡುವುದಾದರೂ ಏನನ್ನು? ಬಹುಶಃ ಏನಾದರೂ ಮಾತನಾಡಿದರೆ ತನ್ನನ್ನು ಇವಳು ತಪ್ಪು ತಿಳಿದುಕೊಂಡಾಳು ಎನ್ನುವ ಭಾವನೆ ಬಂದಿರಬೇಕು ಅವನಿಗೆ. ನನಗೂ ಈ ಮೌನ ಅಸಹನೀಯ ಅನ್ನಿಸುತ್ತಿತ್ತು. ಔಪಚಾರಿಕವಾಗಿ "ನನ್ನಿಂದ ನಿಮಗೂ ತೊಂದರೆ..." ಎಂದೆ. 'ಹೇ, ಪರ್‍ವಾಗಿಲ್ಲ ಬಿಡಿ' ಎನ್ನುತ್ತಾನೆ ಅಂದುಕೊಂಡೆ.

ಆದ್ರೆ, "ಹೂಂ. ತೊಂದ್ರೆನೇ..ಆದ್ರೆ ನನ್ನ ತೊಂದ್ರೆಗಿಂತ ನಿಮ್ಮ ಫಜೀತಿ ಕಂಡು ಮರುಕ ಹುಟ್ಟಿತು. ಅದಕ್ಕಾಗಿ ಬಂದೆ. ಅಲ್ಲದೆ, ಇಂಥ ರಾತ್ರಿಯಲ್ಲಿ ಒಬ್ಬಳೇ ಹುಡುಗಿ ಹೋಗುವುದು ಸರಿ ಕಾಣಲಿಲ್ಲ... ಮತ್ತೇನೂ ಮಾತಿಲ್ಲ. ಸುಮಾರು 5 ಕಿ.ಮೀ ದೂರ ಮೌನದ ಪಯಣ. ನನ್ನ ಮನೆಯ ದೀಪ ಕಾಣಿಸುತ್ತಿತ್ತು.

ಅಂತೂ ಮನೆ ಸೇರಿದೆನಲ್ಲ ಅನ್ನೋ ಸಮಾಧಾನ. ಆದ್ರೆ ಇವನ ಜೊತೆ ಬಂದಿದ್ದಕ್ಕೆ ಮನೆಯಲ್ಲಿ ಏನು ಹೇಳುತ್ತಾರೋ ಎಂಬ ಭಯ. ಅಪ್ಪ ಹೊರಗೇ ಕೂತು ಕಾಯುತ್ತಿದ್ದ. ಮುಖದಲ್ಲಿ ಆತಂಕದ ಕೋಪ. ಇನ್ನೇನು ಬೈಯಬೇಕು, ಅಷ್ಟರಲ್ಲಿ ಅವನು ನನ್ನ ಹಿಂದೆ ಇದ್ದದ್ದನ್ನು ನೋಡಿದರು.

"ಇವರ್‍ಯಾರು?" ಅಪ್ಪ ಗೊಂದಲದಲ್ಲಿ ಕೇಳಿದ. "ಅಪ್ಪ ಇವರು ನನ್ನ ಕ್ಲಾಸ್‌ಮೇಟ್... ಆಗ ನೆನಪಾಯಿತು! ನನಗಿನ್ನೂ ಆತನ ಹೆಸರೇ ಗೊತ್ತಿಲ್ಲ! ಅವನೇ ಹೇಳಿಕೊಂಡ 'ವಿವೇಕ್' ಅಂತ. ನಂತರ ಮುಂದಿನ ಕತೆಯೆಲ್ಲ ವಿವರವಾಗಿ ಹೇಳಿದೆ. ಅಪ್ಪ-ಅಮ್ಮನಿಗೆ ಅಷ್ಟೇ ಅಲ್ಲ, ನನಗೂ ಕೂಡ ವಿವೇಕನ ಬಗ್ಗೆ ಒಳ್ಳೆಯ ಭಾವನೆ, ಕೃತಜ್ಞತೆ ಮೂಡಿಬಿಟ್ಟಿತ್ತು. ಆ ರಾತ್ರಿ ಇಲ್ಲೇ ಇರು ಎಂದು ಎಷ್ಟು ಹೇಳಿದರೂ ಕೇಳದೆ ಬಸ್ ಕೆಟ್ಟು ನಿಂತಿದ್ದ ಕಡೆಯೇ ಹೊರಟು ನಡೆದಿದ್ದ.

***
ಈ ಘಟನೆಯ ನಂತರ ಕಾಲೇಜ್‌ನಲ್ಲಿ ಎದುರು ಸಿಕ್ಕಾಗ ವಿವೇಕನದು ಒಂದು ಮುಗುಳ್ನಗೆ ಅಷ್ಟೇ.. ಅವತ್ತು ಇವಳಿಗೆ ತಾನೊಂದು ಸಹಾಯ ಮಾಡಿದ್ದೇನೆ ಎನ್ನುವುದೇ ಮರೆತು ಹೋದವನಂತೆ ಇದ್ದ. ಇದಕ್ಕೇ ವಿವೇಕ್ ಇಷ್ಟವಾಗುತ್ತಾನೆ. ಅವನು ಹುಡುಗಿಯಾಗಲಿ ಹುಡುಗನಾಗಲಿ ಒಂದೇ ಥರ ಟ್ರೀಟ್ ಮಾಡುತ್ತಾನೆ. ಹುಡುಗಿ ಎನ್ನುವ ಕಾರಣದಿಂದ ಸ್ಪೆಷಲ್ ಆಗಿ ಏನೂ ನೋಡುತ್ತಿರಲಿಲ್ಲ. ಆದರೆ ನನಗೆ ಮಾತ್ರ ದಿನದಿಂದ ದಿನಕ್ಕೆ ಅವನನ್ನು ಮಾತನಾಡಿಸುವ ಕಾತರ ಹೆಚ್ಚುತ್ತಿದೆ.

ಆದರೆ ವಿನಾಕಾರಣ ಹೇಗೆ ಮಾತನಾಡಿಸುವುದು? ನಾನೇ ಮೇಲೆ ಬಿದ್ದು ಮಾತನಾಡಿಸುವುದು ನನ್ನಿಂದಾಗದು. ಇಷ್ಟಕ್ಕೂ ನನಗೇಕೆ ಅವನನ್ನು ಮಾತನಾಡಿಸಬೇಕು ಅನ್ನಿಸುತ್ತದೆ? ನಾನೇನಾದರೂ ಅವನನ್ನುಪ್ರೀತಿಸುತ್ತಿದ್ದೇನಾ?! ಹಾಗಾದರೆ ಪ್ರೀತಿ ಅಂದರೆ ಹೀಗೆ ಇರುತ್ತಾ? ಇದ್ಯಾವುದಕ್ಕೂ ನನ್ನಲ್ಲಿ ಉತ್ತರವಿಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳುವುದಾದರೂ ಹೇಗೆ?... ಇದೇನಾ ಪ್ರೇಮ...?

Saturday, July 10, 2010

ಮೊದಲ ಪ್ರೀತಿ?!

ಹಿಂದೆ. . .ಪ್ಲೀಸ್ ಇದೊಂದು ಸಾರಿ ನನ್ನ ನಂಬು... ಫ್ರೆಂಡ್‌ಶಿಪ್ ಅಂದ್ರೆ ಹೇಗಿರತ್ತೆ ಅಂತ ಜನ ನಮ್ಮ ನೋಡಿ ಕಲೀಬೇಕು ಹಾಗೆ ನಿಭಾಯಿಸ್ತೀನಿ... ಯಾವತ್ತೂ ಈ ಬಾಯಿ ಇನ್ನು ಗುಟ್ಟು ಬಿಟ್ಟುಕೊಡಲ್ಲ.... ಮುಂದೆ. . .

ಆಷಾಢದ ಮಳೆಗಾಲ. ಸೂರ್ಯನನ್ನೂ ತನ್ನ ತೆಕ್ಕೆಗೆ ಎಳೆದು ಕೊಂಡಿತ್ತು ಕಪ್ಪು ಮೋಡ. ಮಳೆಯ ಮುನ್ಸೂಚನೆ ಸ್ಪಷ್ಟವಿತ್ತು. ಆದರೂ ವಾರಕ್ಕೆ ಒಂದು ಸಲ ಮಾತ್ರ ಮನೆಗೆ ಹೋಗುವ ಅವಕಾಶ. ಅದನ್ನು ತಪ್ಪಿಸಿಕೊಳ್ಳುವ ಛಾನ್ಸೇ ಇರಲಿಲ್ಲ.

ಎಲ್ಲ ತಯಾರಿ ಮಾಡಿಕೊಂಡು ಹಾಸ್ಟೆಲ್ ಬಿಡುವ ತನಕ ಸಂಜೆ ನಾಲ್ಕು ಗಂಟೆ. ಕುಮ್ಮಿ ಕಾಲೇಜಿಂದ ನೇರವಾಗಿ ಹೊರಟು ಹೋಗಿದ್ದಳು. ನಾನೊಬ್ಬಳೇ ಬಸ್ ಹಿಡಿದು ಮನೆ ಸೇರಿಕೊಳ್ಳಬೇಕಿತ್ತು.

ತಣ್ಣನೆ ಗಾಳಿಯ ಸುಖ ಅನುಭವಿಸುತ್ತ ಬಸ್ಟಾಪಿನತ್ತ ಹೆಜ್ಜೆ ಹಾಕಿದೆ. ಅಲ್ಲಿ ನನ್ನದೇ ಕ್ಲಾಸಿನ ಹುಡುಗನ ಹೊರತು ಮತ್ತೊಂದು ನರಪಿಳ್ಳೆಯೂ ಇರಲಿಲ್ಲ.

ಅವನೊಂದಿಗೆ ಮುಖತಃ ಪರಿಚಯ ಅಷ್ಟೇ. ಕ್ಲಾಸಿನಲ್ಲಿ ತಾನಾಯಿತು, ತನ್ನ ಕೆಲಸವಾಯಿತು ಎಂದುಕೊಂಡು ಸೈಲೆಂಟಾಗಿರುತ್ತಿದ್ದ. ಮೊದಲ ನೋಟಕ್ಕೇ ಬಹಳ ಚಂದ ಎನಿಸದಿದ್ದರೂ, ಕಾಲೇಜಿನಲ್ಲಿ ಆತ ಕಂಡಾಗಲೆಲ್ಲ ಎಷ್ಟು ಸುಂದರ ಅವನ ಕಣ್ಣುಗಳು ಎಂದುಕೊಳ್ಳುತ್ತಿದ್ದೆ.

ಪ್ರಪಂಚವನ್ನೇ ಗೆದ್ದು ಬಿಡುತ್ತೇನೆ ಎನ್ನುವ ಆ ಕಣ್ಣುಗಳಲ್ಲಿನ ಹುಮ್ಮಸ್ಸು ನನ್ನನ್ನು ಸೆಳೆದಿತ್ತು. ಆತನೆಡೆಗೆ ಒಂದು ಪರಿಚಯದ ನಗೆ ಬೀರಿ ಆ ಕಡೆ ಈ ಕಡೆ ನೋಡುತ್ತ ನಿಂತೆ. ಬಸ್ ಬರುವ ಮುನ್ಸೂಚನೆಯೂ ಕಾಣಿಸಲಿಲ್ಲ.

ಆಗಲೇ 5 ಗಂಟೆಯ ಮೇಲಾಗಿತ್ತು. ಇನ್ನು 10 ಕಿ.ಮೀ. ಮುಖ್ಯ ಬಸ್ಟ್ಯಾಂಡಿಗೆ. ಅಲ್ಲಿ ಮತ್ತೆ ಬಸ್ ಬದಲಿಸಿ ಮನೆಗೆ ಹೋಗಬೇಕು. ಒಟ್ಟೂ 20 ಕಿ.ಮೀ. ದೂರದಲ್ಲಿರುವ ಮನೆ ಎಷ್ಟು ಹೊತ್ತಿಗೆ ಸೇರಿಕೊಂಡೇನು ಎನ್ನುವ ಆತಂಕ ಕಾಡತೊಡಗಿತು.

ಕಾದು ಕಾದು 6.45 ಆಗುತ್ತಾ ಬಂತು. ತಿರುಗಿ ಹಾಸ್ಟೇಲ್‌ಗೆ ಹೋಗೋಣವೆಂದುಕೊಂಡೆ. ಆದರೂ ಮನೆಗೆ ಹೋಗುವ ಆಸೆ ಕೈಹಿಡಿದು ಎಳೆಯುತ್ತಿತ್ತು. ನನ್ನ ಕ್ಲಾಸಿನವನೇ ಒಬ್ಬನಿದ್ದಾನಲ್ಲ ಎನ್ನುವ ಅಲ್ಪದ ಧೈರ್ಯ. ಅಂತೂ 7.15 ಕ್ಕೆ ಓಲಾಡುತ್ತ ಹಳೆ ಮುದುಕಿಯಂತೆ ಬಸ್ ಒಂದು ಬಂತು.

ಏರಿ ಕುಳಿತವಳಿಗೆ ಒಮ್ಮೆಲೇ ನಿದ್ರೆ. ಎಚ್ಚರಾಗುವ ಹೊತ್ತಿಗೆ 8 ಗಂಟೆ! ಕಂಡಕ್ಟರ್ "ರೀ ಏಳ್ರಿ" ಎಂದು ನನ್ನ ನೋಡಿ ಕಿರುಚುತ್ತಿದ್ದ. ಬಸ್ ಹಾಳಾಗಿ ನಿಂತಿತ್ತು. ಈ ಬಸ್ ಇನ್ನು ಮುಂದೆ ಹೋಗುವುದಿಲ್ಲ ಎನ್ನುತ್ತ ಎಲ್ಲರನ್ನೂ ಕೆಳಗಿಳಿಸುತ್ತಿದ್ದ. ಬಸ್ ಈಗ ಯಾವ ಜಾಗದಲ್ಲಿದೆ ಎಂದು ಗೊತ್ತಾಗದಷ್ಟು ಕರಿಗತ್ತಲು. ಆ ಕಡೆ ಹಾಸ್ಟೆಲೂ ಇಲ್ಲ,

ಈ ಕಡೆ ಮನೆಯೂ ಇಲ್ಲ ಎಂಬಂತಹ ಅಯೋಮಯ ಪರಿಸ್ಥಿತಿ. ಏನು ಮಾಡಲೂ ತೋಚಲಿಲ್ಲ. ನನ್ನ ಪುಣ್ಯಕ್ಕೆ ಸುತ್ತಮುತ್ತ ಒಂದು ಟೆಲಿಫೋನ್ ಬೂತ್ ಇರಲಿ, ತುಣುಕು ಬೆಳಕೂ ಇರಲಿಲ್ಲ. ಈಗೇನು ಮಾಡುವುದು? ಎಲ್ಲಿಗೆ ಹೋಗುವುದು? ಅಪ್ಪನನ್ನು ಇಲ್ಲಿಗೆ ಕರೆಸುವುದಾದರೂ ಹೇಗೆ? ಇಷ್ಟು ರಾತ್ರಿಯ ಮೇಲೆ ಆ ದಾರಿಯಲ್ಲಿ ಬೇರೆ ಬಸ್ಸುಗಳೂ ಬರುವುದಿಲ್ಲ.

ಒಮ್ಮೆಲೇ ಅಣ್ಣನ ಮೇಲೆ ಕೋಪ ಉಕ್ಕಿ ಬಂತು. ಅಪ್ಪನನ್ನು ಒಂದು ಮೊಬೈಲ್ ಕೊಡಿಸು ಎಂದು ಕೇಳಿದ್ದೆ. "ಅವಳಿಗೆ ಇಷ್ಟು ಬೇಗನೆ ಮೊಬೈಲ್ ಬೇಡ. ಮೊಬೈಲ್ ಇದ್ದರೆ ಹುಡುಗಿಯರು ಬೇಗನೆ ಹಾಳಾಗುತ್ತಾರೆ" ಎಂದೆಲ್ಲ ಅಪ್ಪನಿಗೆ ಹೇಳಿ ನನ್ನ ಬೇಡಿಕೆಯ ಮೇಲೆ ಕಲ್ಲು ಹಾಕಿದ್ದ.

ಈಗ ಅನುಭವಿಸುತ್ತಿರುವವಳು ನಾನು. ಉಳಿದ ಪ್ರಯಾಣಿಕರೆಲ್ಲ ಸರಕಾರಿ ಬಸ್ಸಿಗೆ ಹಿಡಿ ಶಾಪ ಹಾಕುತ್ತ, ಈ ರಾತ್ರಿ ಎಲ್ಲಿ ಸುರಕ್ಷಿತ ತಾಣ ಸಿಕ್ಕೀತು ಎನ್ನುವ ಬಗ್ಗೆ ಚರ್ಚೆ ಮಾಡುತ್ತಿದ್ದರು. ನಾನು ಮಾತ್ರ ಒಂಟಿಯಾಗಿ ಕಣ್ಣು ಕಣ್ಣು ಬಿಡುತ್ತ ನಿಂತಿದ್ದೆ.

ಅಲ್ಲಿ ಅಲ್ಪಸ್ವಲ್ಪ ಪರಿಚಯ ಇದ್ದವನು ಅಂದರೆ ಆ ನನ್ನ ಕ್ಲಾಸ್‌ಮೇಟ್ ಮಾತ್ರ. ಏನಾದರೂ ಸಹಾಯ ಕೇಳಬೇಕು ಅಂದರೆ ಅವನನ್ನೇ ಕೇಳಬೇಕು. ಸುಮ್ಮನೆ ಅವನನ್ನೇ ನೋಡಿದೆ. ಅರ್ಥ ಮಾಡಿಕೊಂಡವನಂತೆ ತಕ್ಷಣ ನನ್ನ ಕಡೆ ನಡೆದು ಬರತೊಡಗಿದ. ಒಮ್ಮೆ ಏನು ಕೇಳಬೇಕೆಂದು ತೋಚಲಿಲ್ಲ.

ಹೆಸರೇ ಸರಿಯಾಗಿ ಗೊತ್ತಿಲ್ಲದವನ ಬಳಿ ಏನು ಸಹಾಯ ಯಾಚಿಸುವುದು?! "ಈಗ ಏನು ಮಾಡುತ್ತೀರಿ?" ಎಂದು ಅವನಾಗಿಯೇ ಕೇಳಿದ.

Saturday, July 3, 2010

ಅವರೂ ಒಂಥರಾ ಪರ್ಸನಲ್ ಡೈರಿ


ಸ್ವಲ್ಪವೂ ಮಾನವೀಯತೆ ಕಲಿಯದೆ ಎಂ.ಎ.,ಪಿಎಚ್ ಡಿ ಮಾಡಿ ಏನು ಬಂತು? ಧಿಕ್ಕಾರ ನಮ್ಮ ಈ ತರಹದ ಯುವಜನಾಂಗಕ್ಕೆ!!!
ಮುಂದಕ್ಕೆ. ..

ಛೇ.... ಹೇಗೆ ಕಳೆದುಬಿಟ್ಟೆ ಇಷ್ಟು ದಿನ. ಯಾರ್‍ಯಾರಿಗೆ ಏನು ಅಂದಿದ್ದೆನೋ... ಅವರು ಎಷ್ಟು ನೊಂದುಕೊಂಡಿದ್ದರೋ.. ಎಲ್ಲಿ ಹೋಗಿತ್ತು ನನ್ನ ಬುದ್ಧಿ ಎಲ್ಲಾ? ಇಷ್ಟೆಲ್ಲ ಓದಿದ್ದು ದಂಡ.. 16 ವರ್ಷ ತುಂಬುತ್ತೆ ನಾಡಿದ್ದು ಆಗಸ್ಟ್‌ಗೆ... ಇನ್ನೂ ಅವಿವೇಕಿಯಂತೆ ವರ್ತಿಸುತ್ತಿದ್ದೇನೆ..

ನಾನು ಯಾಕೆ ಹಾಗೆ ಮಾಡಿದೆ? ನನಗೆ ಗೊತ್ತಿರಲಿಲ್ವಾ, ಅಂಥ ವಿಷಯಗಳನ್ನ ಎಲ್ಲರ ಎದುರು ಹೇಳಿದರೆ ಕುಮ್ಮಿ ಏನು ಅಂದುಕೊಳ್ಳಬಹುದು ಅಂತ. ಅದು ಕುಮ್ಮಿಯ ವೈಯಕ್ತಿಕ ವಿಷಯ. ಗೆಳತಿ ಎನ್ನುವ ನಂಬಿಕೆಯಿಂದ ನನ್ನೊಂದಿಗೆ ಹಂಚಿಕೊಂಡ ವಿಷಯ... ಆದರೂ ಬಾಯಿ ಜಾರಿಬಿಟ್ಟೆ.. ಆ ಬೊಂಬಾಯಿ ಬಜಾರಿ ಜಯ ಹತ್ತಿರ ಹೇಳಿಬಿಟ್ಟೆ! ಈಗ ಪಶ್ಚಾತ್ತಾಪ. ಏನು ಮಾಡಬೇಕು ಅಂತಾನೇ ಗೊತಾಗ್ತಿಲ್ಲ...

ಎಷ್ಟು ಫ್ರೆಂಡ್ಸ್ ಇದ್ರೂ ಫ್ರೆಂಡ್‌ಶಿಪ್‌ನಲ್ಲಿ ಮಾತ್ರ ಸೀರಿಯಸ್ ಆಗೇ ಇರಲಿಲ್ಲ ನಾನು. ಇಷ್ಟು ಆದ್ರೂ ಅಂದ್ರೆ ಸಕತ್ ಮಾತಾಡೋದು, ಇಲ್ಲ ಅಂದ್ರೆ ಬಿಟ್ಟು ನಡೆಯೋದು. ಮತ್ತೊಬ್ಬರ ಬಗ್ಗೆ ಸ್ವಲ್ಪವೂ ಚಿಂತಿಸುತ್ತಿರಲಿಲ್ಲ. ಫ್ರೆಂಡ್‌ಶಿಪ್ಪು, ಅದನ್ನು ನಿಭಾಯಿಸೋದು... ಅದೆಲ್ಲ ನನಗೆ ಗೊತ್ತಿರಲಿಲ್ಲ; ಈ ಘಟನೆ ನಡೆಯುವವರೆಗೂ.

ಕುಮ್ಮಿ ಯಾವಾಗಲೂ ಹೇಳ್ತಾ ಇದ್ಲು, 'ಮೂಲೆಯಲ್ಲಿ ಕೂರೋ ಮಂಜ ಯಾವಾಗ್ಲೂ ನನ್ನ ನೋಡ್ತಾನೆ ಅಂತ. ನಾನೂ ಎರಡು ದಿನ ಗಮನಿಸಿದೆ. ಹೌದು! ಮಂಜನ ಕಣ್ಣಲ್ಲಿ ಕುಮ್ಮಿಯಡೆಗೆ ಅದೇನೋ ಪ್ರೀತಿ ಇತ್ತು, ಸೆಳೆತವಿತ್ತು. ಕುಮ್ಮಿಗೆ ಇದೆಲ್ಲ ಇಷ್ಟವಿರಲಿಲ್ಲ. ಅವಳಿಗೆ ತಾನಾಯಿತು ಫ್ರೆಂಡ್ಸ್....

ತನ್ನ ಓದಾಯಿತು. ಆದರೆ ಕುಮ್ಮಿ ಕಡೆಗೆ ಮಂಜ ನೋಡುವುದನ್ನು ಅವರಿಬ್ಬರಿಗೂ ಗೊತ್ತಾಗದಂತೆ ನೋಡುತ್ತಿದ್ದೆ. ನನಗೆ ಈ ವಿಷಯ ಬಹಳ ಆಸಕ್ತಿಕರವಾಗಿತ್ತು. ಬಹಳ ಮೋಜೆನಿಸುತ್ತಿತ್ತು. ಆದರೆ ಕುಮ್ಮಿಗೆ ಇದರಿಂದ ಎಷ್ಟು tension ಆಗಿತ್ತು ಅಂತ ನನ್ನ ತಲೆಗೆ ಹೊಳೆಯಲೇ ಇಲ್ಲ! ಅವಳ ನೋವನ್ನು, ಮುಜುಗರವನ್ನು ಅರ್ಥಮಾಡಿಕೊಳ್ಳಲೇ ಇಲ್ಲ.ಪಾಪ ಎಷ್ಟು ಬೇಜಾರು ಮಾಡ್ಕೊಂಡ್ಲೋ...

ಇವತ್ತು ಸಂಜೆ ಕುಮ್ಮಿ ನಾನು ವಾಕಿಂಗ್ ಹೋಗಿದ್ವಿ. ಏನೋ ಹೇಳಬೇಕೆಂದು ಪ್ರಯತ್ನಿಸುತ್ತಿದ್ದಳು. ಆದರೆ ನನ್ನ ವಟಗುಟ್ಟುವಿಕೆಯ ನಡುವೆ ಅವಳಿಗೆ ಆ ಗಂಭೀರ ವಿಷಯ ತೆಗೆಯಲು ಆಗಲಿಲ್ಲವೆನಿಸುತ್ತದೆ. ನನ್ನ ಯಾವುದೋ ವಿಷಯ ತುಂಡರಿಸಿ ಒಮ್ಮೆಲೆ 'ಸುಮಿ ಯಾಕೆ ಹೀಗೆ ಮಾಡಿದೆ ಎಂದಳು. ಅವಳ ಮಾತಲ್ಲಿ ಸಿಟ್ಟಿಗಿಂತ ನೋವೇ ತುಂಬಿತ್ತು, ಅಲ್ಲಿಯವರೆಗೆ ಅವಳು ಕಷ್ಟಪಟ್ಟು ಹಿಡಿದುಕೊಂಡಿದ್ದ ಕಣ್ಣೀರು ಒಮ್ಮೆಲೇ ಭೋರ್ಗರೆದಿತ್ತು, ನನಗೆ ಎಲ್ಲ ಅಯೋಮಯ. ಏನೂ ಮಾತನಾಡಲು ತೋಚಲಿಲ್ಲ.

"ಯಾಕೆ ಆ ಜಯನಿಗೆ ಮಂಜನ ಸುದ್ದಿ ಹೇಳಿದೆ? ಕಾಲೇಜ್ ತುಂಬ ಸುದ್ದಿ ಮಾಡಿದಾಳೆ ಗೊತ್ತಾ. ನನಗೆ ಎಷ್ಟು ಹಿಂಸೆ ಆಗ್ತಿದೆ... ನನಗೆ ಕಿವಿ ಎಲ್ಲ ಬಿಸಿಯಾದ ಅನುಭವ.. ಎಂಥ ತಪ್ಪು ಮಾಡಿದೆ! ಗೆಳತಿಯ ಗುಟ್ಟೊಂದನ್ನು ಬಯಲು ಮಾಡಿ ಅವಳಿಗೆ ಅವಮಾನವಾಗುವಂತೆ ನಡೆದುಕೊಂಡಿದ್ದೆ..

ಒಂದೂ ಮಾತನಾಡಲಿಲ್ಲ ನಾನು.. ಏನು ಉಳಿದಿತ್ತು ಮಾತನಾಡಲು ನನ್ನ ಹತ್ತಿರ? ತಪ್ಪಾಯಿತು ಎನ್ನಲಾ? ಅವಳಿಗೆ ಆದ ಅವಮಾನ, ಆ ಯಾತನೆಯ ಎದುರು ಅದು ತೀರಾ ಸಣ್ಣ ಶಬ್ದ. ಈಗ ಜನರ ಬಾಯಿ ಮುಚ್ಚಿಸಲು ಸಾಧ್ಯನಾ? ಅದೂ ನನ್ನ ಕೈಮೀರಿ ಹೋಗಿತ್ತು. ಸುಮ್ಮನೆ ವಾಪಸ್ ಬಂದಿದ್ದೆ.

ತಪ್ಪಾಯಿತು ಕುಮ್ಮಿ. ಇನ್ನೆಂದೂ ನಿನ್ನ ಬಿಟ್ಟುಕೊಡಲ್ಲ ಕಣೆ. ಇವತ್ತು ನಿನ್ನಿಂದ ದೊಡ್ಡ ಪಾಠ ಕಲಿತೆ... ಯಾವತ್ತಿಗೂ ಮರೆಯಲಾಗದ ಪಾಠ. ಈ ಡೈರಿಯಂತೆ ಗೆಳೆತನವೂ ಕೂಡಾ.. ಮನಸಿನ ಪಿಸುಮಾತುಗಳನ್ನು ಹೇಳಿಕೊಳ್ಳುವ ಅತೀ ಆಪ್ತ, ರಹಸ್ಯವಾದ ಪುಟ್ಟ ಜಾಗ...

ಪ್ಲೀಸ್ ಇದೊಂದು ಸಾರಿ ನನ್ನ ನಂಬು... ಫ್ರೆಂಡ್‌ಶಿಪ್ ಅಂದ್ರೆ ಹೇಗಿರತ್ತೆ ಅಂತ ಜನ ನಮ್ಮ ನೋಡಿ ಕಲೀಬೇಕು ಹಾಗೆ ನಿಭಾಯಿಸ್ತೀನಿ... ಯಾವತ್ತೂ ಈ ಬಾಯಿ ಇನ್ನು ಗುಟ್ಟು ಬಿಟ್ಟುಕೊಡಲ್ಲ....