Friday, February 29, 2008

ಮಗಳಿಗೆ ಯೌವನದ ಸೊಕ್ಕು...ಅಮ್ಮನಿಗೆ ವೃದ್ಧಾಪ್ಯದ ಸುಕ್ಕು...


ನಮ್ಮ ಕ್ಲಾಸ್‌ನ ಉಷಾ ಒಂಥರಾ... ನಾವೆಲ್ಲ ಅಮ್ಮ ಅಂತಾ ಸಿಕ್ಕಾಪಟ್ಟೆ ಹಚ್ಚಿಕೊಂಡುಬಿಟ್ಟಿದ್ದರೆ, ಉಷಾಳಿಗೆ ಅವಳಮ್ಮನ ಮುಖ ಕಂಡರೆ ಆಗುತ್ತಿರಲಿಲ್ಲ. ಯಾವಾಗಲೂ ಅವಳಮ್ಮನಿಗೆ ಬಯ್ಯುತ್ತಿದ್ದಳು. ನಮ್ಮಗಳ ಜೊತೆ ಹರಟೆ ಹೊಡೆಯಲು ಕುಳಿತರೆ ಒಮ್ಮೆಯಾದರೂ ಅವಳ ಅಮ್ಮನಿಗೆ ಬಯ್ಯದೆ ಹೋಗುತ್ತಿರಲಿಲ್ಲ.

"ಅಯ್ಯೊ, ನನ್ನ ಅಮ್ಮ! ಅವಳೊಬ್ಬಳು. ನನ್ನ ಮೇಲೆ ಸದಾ ಅನುಮಾನ. ನಾನು ಇಲ್ಲದ ಹೊತ್ತಿನಲ್ಲಿ ನನ್ನ ಸ್ಕೂಲ್ ಬ್ಯಾಗ್, ನೋಟ್ಸ್ ಗಳನ್ನು ಶೋಧಿಸುವುದು, ಸೂಲ್ಕಿನಿಂದ ಬರುವುದು 5 ನಿಮಿಷ ತಡವಾದರೂ ಪ್ರಶ್ನೆಗಳ ಮೇಲೆ ಪ್ರಶ್ನೆಗಳು. ನಾನು ಕುಳಿತಿದ್ದು ತಪ್ಪು, ನಿಂತಿದ್ದು ತಪ್ಪು. ಯಾವುದಾದರೂ ಹುಡುಗನ ಜೊತೆ ಮಾತನಾಡಿದ್ದು ಕಂಡರಂತೂ ರಣ ರಾದ್ಧಾಂತ" ಎಂದು ಉಷಾ ಯಾವಾಗಲೂ ಹೇಳುತ್ತಿದ್ದಳು.

ಹಾಗೆಂದು ಅವಳಮ್ಮ ಅವಳಿಗೆ ಸ್ವಂತತಾಯಿಯೇ. ನಮ್ಮೆಲ್ಲರ ಅಮ್ಮನಂತೆ ಸಾಮಾನ್ಯ ಅಮ್ಮ. ಆದರೂ ಉಷಾ ಏಕೆ ಅವರ ಮೇಲೆ ಹರಿಹಾಯುತ್ತಾಳೆ. ಎನ್ನುವುದು ಒಗಟಾಯಿತು. ಅಲ್ಲದೆ ಒಮ್ಮೊಮ್ಮೆ ಉಷಾ 'ಸರಿ' ಎನಿಸುತ್ತಿದ್ದಳು.

ಒಂದು ಭಾನುವಾರ ಶೀಲಕ್ಕನ ಜೊತೆ ಮಾತನಾಡುತ್ತ ಕುಳಿತಾಗ ಉಷಾಳ ವಿಷಯ ಎತ್ತಿದೆ. ಅವಳ 'ವಿಚಿತ್ರ' ವರ್ತನೆಯ ಬಗ್ಗೆಯೂ ಹೇಳಿದೆ. ಶೀಲಕ್ಕ ಒಮ್ಮೆ ನಕ್ಕು 'ಅವಳ ವರ್ತನೆ 'ವಿಚಿತ್ರ' ಅಲ್ಲ; ಅದು ಅವಳ ವಯಸ್ಸು. ಅಂದರೆ ಅದನ್ನು 'ಅಮ್ಮ ಮಗಳ ಕಾಂಟ್ರೋವರ್ಶಿಯಲ್ ಪಿರಿಯಡ್' ಎನ್ನಬಹುದು.

ಮಗಳು ಸುಮಾರು 14 ವರ್ಷ ತಲುಪುವುದರಲ್ಲಿ ತಾಯಿ ಸಾಮಾನ್ಯವಾಗಿ ೪೦ರ ಹೊಸ್ತಿಲನ್ನು ದಾಟಿರುತ್ತಾಳೆ. ಮಗಳು ಯೌವನದ ರೆಕ್ಕೆ ಕಟ್ಟಿಕೊಂಡು ಹಾರಲು ಸಿದ್ಧವಾದರೆ ಅಮ್ಮನ ಮೇಲೆ ವೃದ್ಧಾಪ್ಯದ ನೆರಳು ಚಾಚಲಾರಂಭಿಸುತ್ತದೆ. ಈ ಅವಧಿಯನ್ನೇ ತಾಯಿಗೂ ಮಗಳಿಗೂ ಒಂಥರಾ 'ಕಾಂಟ್ರೋವರ್ಷಿಯಲ್ ಪಿರಿಯಡ್' ಎನ್ನಬಹುದು.

ಹೆಣ್ಣು-ಗಂಡು ಎನ್ನುವ ಭೇದಭಾವವಿಲ್ಲದೆ ಎಲ್ಲರೊಡಗೂಡಿ ಆಟ ಆಡಿಕೊಂಡು ಬೆಳೆಯುತ್ತಿರುವ ಮಗಳು 13-14 ವರ್ಷ ಸಮೀಪಿಸಿದಳು ಎಂದಕೂಡಲೇ ತಾಯಿಯ ಆತಂಕದ ದೃಷ್ಟಿ ಮಗಳ ಮೇಲೆ ಹರಿದಿರುತ್ತದೆ. ಅವಳ 'ತಾಯಿ ಹೃದಯ' ಮಗಳ ರಕ್ಷಣೆಯ ಬಗ್ಗೆ ಚಿಂತಿಸುತ್ತಿರುತ್ತದೆ. ಮಗಳ ಸ್ನೇಹಿತರು, ಅವಳ ಜೊತೆ ಒಡನಾಡುವ 'ಗಂಡು'ಗಳ ಬಗ್ಗೆ ತಾಯಿ ಎಚ್ಚರಿಕೆಯಿಂದಿರುತ್ತಾಳೆ. ಯಾವನೋ ಒಬ್ಬನ ಜೊತೆ ಮಗಳು ಸ್ವಲ್ಪ ಹೆಚ್ಚು ಮಾತನಾಡುತ್ತಿದ್ದಾಳೆ ಎಂದರೆ ಮುಗಿಯಿತು; ತಾಯಿಯ ನೆಮ್ಮದಿ ಹಾರಿಹೋಗಿರುತ್ತದೆ.

'ಹೆಣ್ಣು ಮಕ್ಕಳ ಜವಾಬ್ದಾರಿ ಎಂದರೆ ಸೆರಗಲ್ಲಿ ಕೆಂಡ ಕಟ್ಟಿಕೊಂಡಂತೆ' ಎನ್ನುವ ಮಾತಿನ ಅನುಭವ ತಾಯಿಗೆ ಆಗತೊಡಗುತ್ತದೆ. ಇದರ ಪರಿಣಾಮವೇ ಮಗಳ ಆಟ. ತಿರುಗಾಟದ ಮೇಲೆ ಕಡಿವಾಣ, ನಡತೆಯ ಬಗ್ಗೆ ಎಚ್ಚರಿಕೆಯ ಮಾತುಗಳು ಮತ್ತು ಮೇಲಿನಿಂದ ಮೇಲೆ ಬೈಗುಳಗಳು. ಮಗಳೇ ಎಂದು ಮುದ್ದಿಸುತ್ತ, ಪ್ರಪಂಚದಲ್ಲಿ ಅತ್ಯಂತ ಹೆಚ್ಚು ನಂಬಿಕೆಯ ಅಮ್ಮನ ಕಣ್ಗಾವಲಿನ ಕಟ್ಟೆಚ್ಚರ ಕಣ್ಣಿಗೆ ಹರೆಯದ ಕಾಡಿಗೆ ಹಚ್ಚಿಕೊಳ್ಳುತ್ತಿರುವ ಮಗಳಿಗೆ ಒಗಟಾಗಿಬಿಡುತ್ತದೆ.

ಮೊದಲು ಯಾವುದಕ್ಕೂ ಬೇಡ ಅನ್ನದ ಅಮ್ಮ, ಈಗ ಯಾವ ಡ್ರೆಸ್ ಹಾಕಿಕೊಳ್ಳಬೇಕು ಎನ್ನುವುದರಿಂದ ಹಿಡಿದು; ಫ್ರೆಂಡ್ಸ್ ಜೊತೆ ಪಿಕ್ನಿಕ್ ಹೋಗುವ ತನಕ ತನ್ನ ಎಲ್ಲ ನಿರ್ಧಾರಗಳಲ್ಲೂ ಅಮ್ಮ ಮೂಗು ತೂರಿಸತೊಡಗಿರುವುದು ಮಗಳಿಗೆ ಸಹ್ಯವಾಗುವುದಿಲ್ಲ. ಸ್ವಾತಂತ್ರ್ಯದ ರುಚಿಯನ್ನು ಸ್ವಲ್ಪ-ಸ್ವಲ್ಪವೇ ನೋಡುತ್ತಿರುವ ಮಗಳು ಅಮ್ಮನ ಮುನ್ನೆಚ್ಚರಿಕೆಯನ್ನು ತನ್ನ 'ಸ್ವಾತಂತ್ರ್ಯದ ಅಪಹರಣ' ಎಂದೇ ಬಗೆಯುತ್ತಾಳೆ.

ಹರೆಯದ ಮುಖ್ಯ ಲಕ್ಷಣಗಳಲ್ಲೊಂದಾದ 'ವಿರೋಧ'ವನ್ನು ವ್ಯಕ್ತಪಡಿಸುತ್ತಾಳೆ. ತಾಯಿ ಯಾವುದನ್ನು ಮಾಡು ಎನ್ನುತ್ತಾಳೋ ಅದನ್ನು ಮಾಡದಿರುವುದು, ಯಾವುದನ್ನು ಮಾಡಬೇಡ ಎನ್ನುತ್ತಾಳೋ ಅದನ್ನೇ ಮಾಡುವುದು. ಅಮ್ಮನ ಪ್ರತಿ ಮಾತಿಗೂ ರೇಗುವುದು ಅಥವಾ ಅಮ್ಮನ ಮಾತಿಗೆ ಪ್ರತಿಕ್ರಿಯೆಯನ್ನೇ ತೋರಿಸದಿರುವುದು... ಹೀಗೆ ವಿವಿಧ ರೂಪದಲ್ಲಿ ತನ್ನ ವಿರೋಧ ತೋರಿಸುತ್ತ ತಾಯಿಗೆ ಒಂದು ತಲೆನೋವಾಗಿ ಪರಿಣಮಿಸಿಬಿಡುತ್ತಾಳೆ.

ಹರೆಯದ ನೂರಾರು ಗೊಂದಲಎದುರಿಸುತ್ತಿರುವ ಮಗಳು ಒಂದೆಡೆಯಾದರೆ, ಏರುತ್ತಿರುವ ವಯಸ್ಸು, ಆವರಿಸುತ್ತಿರುವ ಮುಪ್ಪಿನ ಭಯ, ಕಡಿಮೆಯಾಗುತ್ತಿರುವ ಗಂಡನ ಗಮನ, ಯಾರೂ ತನ್ನ ಬಗ್ಗೆ ಲಕ್ಷ್ಯವಹಿಸುತ್ತಿಲ್ಲ ಎನ್ನುವ ಕೊರಗು ಹೀಗೆ ಮುಂತಾದ ಕಾಂಪ್ಲೆಕ್ಸ್‌ಗಳಿಂದ ಅಮ್ಮ ಚಿಂತೆಯ ಗೂಡಾಗಿರುತ್ತಾಳೆ. ಈ ಅಸಮಾಧಾನಗಳನ್ನು ಮನೆಯವರ ಮೇಲೆ ಅಮ್ಮ ತೀರಿಸಿಕೊಳ್ಳುತ್ತಿರುತ್ತಾಳೆ.

ಈ ಜಗಳ ಶಾಶ್ವತವೇನೂ ಅಲ್ಲ. ಮಗಳಿಗೆ ವಯಸು-ಮನಸು ಬಲಿತಂತೆ ಜೀವನದ ನೈಜ ಸ್ಥಿತಿ, ತಾಯಿ ಕೂಡ ಕೂಡಾ ಮುಂಬರಲಿರುವ ಮುಪ್ಪಿಗೆ ಮಾನಸಿಕವಾಗಿ ಅಣಿಯಾಗಿರುತ್ತಾಳೆ. ತನ್ನ ಅಶಕ್ತತೆಯ ಜೀವನಕ್ಕೆ ಹೊಂದಿಕೊಂಡಿರುತ್ತಾಳೆ. ಅಲ್ಲದೆ ಬೇರೆ ಮನೆಗೆ ಶಾಶ್ವತವಾಗಿ ಹೋಗಲಿರುವ ಮಗಳ ಬಗ್ಗೆ ವಿಶೇಷ ಪ್ರೀತಿ ಬೆಳೆದಿರುತ್ತದೆ.

ಅಲ್ಲಿಗೆ ಈ 'ಕಾಂಟ್ರೋವರ್ಷಿಯಲ್ ಪಿರಿಯಡ್' ಮುಗಿದಿರುತ್ತದೆ. ಎಲ್ಲ ಅಮ್ಮ-ಮಗಳಲ್ಲೂ ಇದು ಸಾಮಾನ್ಯ. ಆದರೆ ಕೆಲವರಲ್ಲಿ ಹೆಚ್ಚು, ಕೆಲವರಲ್ಲಿ ಕಡಿಮೆ ಅಷ್ಟೆ. ಆದರೆ ಕೆಲವೊಮ್ಮೆ ಮಗಳಾದವಳು ಅವು ಸ್ಥಿತಿಯನ್ನು ಅರಿಯಲು ವಿಫಲವಾದರೆ ಈ ಜಗಳ ಮುಂದುವರಿಯಲೂಬಹುದು" ಎಂದು ಶೀಲಕ್ಕ ತನ್ನ ಮಾತನ್ನು ಮುಗಿಸಿದ್ದಳು.

ನನಗೂ ಅರ್ಥವಾಗಿತ್ತು... ಅಮ್ಮನೊಂದಿಗೆ ನಾನು ನಡೆದುಕೊಂಡಿದ್ದ್ದನ್ನೆಲ್ಲ ನೆನೆದೆ...ಮನಸ್ಸಿನಲ್ಲೇ ಹೇಳಿಕೊಂಡೆ... "ಅಮ್ಮ, ಇನ್ನೆಂದೂ ನಿನ್ನ ನೋಯಿಸಲಾರೆನು. ಸಾರಿ ಅಮ್ಮ.... "

Monday, February 18, 2008

ಪಿಲ್ಟ್ರಿಯ ಪ್ರೇಮದ ಹುಚ್ಚೆಲ್ಲ ಇಳಿದುಹೋಗಿತ್ತು!


ಇತ್ತೀಚೆಗೆ ಯಾಕೋ ಆ ಮೂಲೆಯಲ್ಲಿ ಕೂರುವ ಪಿಲ್ಟ್ರಿ ರಾಜು ಮೊಳಕಾಲಿನ ತನಕ ನಗ್ನವಾಗಿರುವ ನನ್ನ ಕಾಲುಗಳನ್ನೇ ನೋಡುತ್ತಾನೆ ಎನ್ನುವ ಅನುಮಾನ ಶುರುವಾಗಿತ್ತು. (ರಾಜುವಿಗೆ 'ಪಿಲ್ಟ್ರಿ' ಅನ್ನೊ ಅಡ್ಡಹೆಸರು ಬಂದಿರುವುದಕ್ಕೆ ಒಂದು ತಮಾಷೆಯ ಕಾರಣವಿದೆ. ರಾಜು ವಾಟರ್ ಫಿಲ್ಟರ್ ನ ಕುಳ್ಳನಾಗಿ ರೌಂಡ್ ಇದ್ದ. ಆ 'ಫಿಲ್ಟರ್' ಅನ್ನೋ ಹೆಸರು ಅಪಭ್ರಂಶವಾಗಿ ನಮ್ಮ ಭಾಷೆಯಲ್ಲಿ 'ಪಿಲ್ಟ್ರಿ' ಆಗಿತ್ತು) ನಾನೋ ಕ್ಲಾಸುಗಳಲ್ಲಿ ನನ್ನದೇ ಆದ ಲೋಕದಲ್ಲಿರುತ್ತಿದ್ದೆ. ಟಕ್ಲು ತಿಮ್ಮಪ್ಪ ಕಲಿಸ್ತಾ ಇದ್ರೂ ನನ್ನಷ್ಟಕ್ಕೆ ನಾನು ಬರೆಯದ ಪೆನ್ನು ರಿಪೇರಿ ಮಾಡುವುದೋ, ಹಿಂದಿನ ಬೆಂಚ್ ಹುಡುಗಿಯ ಹತ್ತಿರ ನೆಲ್ಲಿಕಾಯಿಯನ್ನೋ ಇನ್ನೆನನ್ನೋ ವಸೂಲು ಮಾಡುತ್ತ, ಅಥವಾ ನಿನ್ನೆ ನೋಡಿದ ಶಾರೂಖ್‌ನ ಸಿನಿಮಾದ ಚರ್ಚೆಮಾಡುತ್ತಲೋ ಇರುತ್ತಿದ್ದೆ.

ಆದರೆ ರಾಜು ಮೇಲೆ ಅನುಮಾನ ಪ್ರಾರಂಭವಾದಾಗಿನಿಂದ ಸ್ವಲ್ವ ಸೀರಿಯಸ್ ಆಗಿದ್ದೆ. ಅವನು ನನ್ನನ್ನು ನೋಡುತ್ತಾನೋ ಇಲ್ಲವೋ ಎಂದು ಗಮ ನಿಸುವುದರಲ್ಲೇ ಮುಗಿದು ಹೋಗುತ್ತಿತ್ತು. ನಮ್ಮ ಹೈಸ್ಕೂಲ್ ಇನ್ನೊಂದು (ಪ್ರೀತಿಸುವುದಿಲ್ಲ ಬರೀ ನೋಡುವುದು!) ಎನ್ನುವುದು ನೋಡುವವರು ಅಥವಾ ನೋಡಿಸಿಕೊಳ್ಳುವವರಿಗಿಂತ ಉಳಿದವವರಿಗಿಂತ ಉಳಿದವರಿಗೇ ಮೊದಲು ತಿಳಿದುಹೋಗುತ್ತಿತ್ತು! ಆದರೆ ಆ ರೀತಿಯ ಸುದ್ದಿಯೂ ಇರಲಿಲ್ಲ.

ನಮ್ಮ ಕ್ಲಾಸ್ ಹುಡುಗರಲ್ಲಿ ಎರಡು ಗುಂಪು.ಒಂದು ನಮ್ಮನ್ನು ತಮ್ಮ ತಂಡದವರೇ ಎಂದು ಬಗೆದು ಫ್ರೆಂಡ್ ಶಿಪ್ ಮಾಡಿಕೊಂಡು, ಇನ್ನೊಂದು ಪಕ್ಕಾ ಸಂಪ್ರದಾಯಸ್ಥರಂತೆ ನನಗೆ ನನ್ನ ಗ್ಯಾಂಗ್ ಗೆ 'ಗಂಡುಬೀರಿಗಳು' ಎಂದು ಹೆಸರಿಟ್ಟು ಗುರ್....ಎನ್ನುತ್ತಾ ತಿರುಗುವವರು.

ಈ 'ಸಂಪ್ರದಾಯಸ್ಥ'ರು ನಮಗೇನೂ ತೊಂದರೆ ಮಾಡುತ್ತಿರಲಿಲ್ಲ. ನಮ್ಮನ್ನು ಕಂಡರೆ ಇಷ್ಟವಿರಲಿಲ್ಲ ಅಷ್ಟೆ. ಆದರೆ ಈ ಪಿಲ್ಟ್ರಿ ರಾಜು 'ಸಂಪ್ರದಾಯಸ್ಥ'ನಾಗಿ ನನ್ನ ನೋಡುತ್ತಿದ್ದಾನೆ ಎನ್ನುವುದನ್ನು ನನಗೆ ನಂಬಲು ಕಷ್ಟವಾಗಿತ್ತು.

ಇದೆಲ್ಲ ಗೊತ್ತಿದ್ದರೂ ಪಿಲ್ಟ್ರಿಯನ್ನು ಆಲಕ್ಷಿಸಿದೆ. ಅವನನ್ನು ಕಂಡರೆ ಪ್ರೀತಿಗಿಂತ ನಗು ಉಕ್ಕುತ್ತಿತ್ತು. ಕಾರಣವಿಷ್ಟೆ. ಬಾಯಿಯಲ್ಲಿ ಒಂದು, ಮಾಡುವುದು ಇನ್ನೊಂದು. ಹುಡ್ಗೀರು ತಲೆ ಬಗ್ಗಿಕೊಂಡು. ಗಟ್ಟಿಯಾಗಿ ನಗದೆ, ಹುಡುಗರ ಜೊತೆ ಬೇಕಾದಷ್ಟೇ ಮಾತನಾಡಬೇಕು ಎಂದು ಭಾಷಣ ಹೊಡೆಯುತ್ತ ತಿರುಗುವ ಪಿಲ್ಟ್ರಿಗೆ ಅವನ ವಿಚಾರಕ್ಕೆಲ್ಲ ತದ್ವಿರುದ್ಧವಾಗಿದ್ದ ನನ್ನ ಕಂಡತೆ ಅವನಿಗೇಕೆ ಇಷ್ಟ ಎನ್ನುವುದು ಬಗೆಹರಿಯದ ಪ್ರಶ್ನೆಯಾಗಿತ್ತು ನನಗೆ.

ನಮ್ಮ ಸೈನ್ಸ್ ಮೇಷ್ಟ್ರು 'ದೊಡ್ಡಪ್ಪ'. (ನಮ್ಮ ಕ್ಲಾಸ್ ಮೇಟ್ ಗೊಬ್ಬಳಿಗೆ ಸೈನ್ಸ್ ಮೇಷ್ಟ್ರು ಸಂಬಂಧದಲ್ಲಿ 'ದೊಡ್ಡಪ್ಪ' ಆಗಬೇಕಿತ್ತು. ಹಾಗಾಗಿ ನಮಗೆಲ್ಲ 'ದೊಡ್ಡಪ್ಪ' ಆಗಿದ್ದರು ಅವರು) ಅವರಿಗೆ ಯಾವ ದೇವರು ದುರ್ಬುದ್ಧಿ ಕೊಟ್ಟನೋ ಏನೋ! ಎಲ್ಲರೂ ಸೈನ್ಸ್ ನೋಟ್ಸ್ ನ್ನು ತನಗೊಪ್ಪಿಸಬೇಕೆಂದು ಕಟ್ಟುನಿಟ್ಟಾದ ಅಜ್ಞೆಯನ್ನು ಹೊರಡಿಸಿದರು. ಮಧ್ಯೆ ಪೇಜುಗಳನ್ನು ಎಲ್ಲಾ ಹಾರಿಸಿ 'ಕಟಕಟೆ ದೇವರಿಗೆ ಮರದ ಜಾಗಟೆ' ಎಂಬಂತೆ ನೋಟ್ಸ್ ಗಳನ್ನು ತಯಾರಿಸಿ. ಮೇಷ್ಟ್ರ ತಲೆಗೆ ಎಣ್ಣೆ ಸವರಿ ಆರಾಮವಾಗಿ ದಿನಕಳೆಯುತ್ತಿದ್ದ ನಮಗೆ ಈ ಸಲ ತಪ್ಪಿಸಿಕೊಳ್ಳಲು ಯಾವ ಐಡಿಯಾವೂ ಇರಲಿಲ್ಲ.

ಅವರು ವಿಧಿಸಿದ್ದ ಕೊನೆಯ ದಿನದ ಒಳಗೇ ಅಂತೂ-ಇಂತೂ ನನ್ನ ನೋಟ್ಸ್ ಪೂರ್ಣವಾಗಿತ್ತು. ಆದರೆ ಏನೋ ಪಾಪ ಪಿಲ್ಟ್ರಿ ಸ್ವಲ್ಪ ಡಲ್ ಆಗಿಬಿಟ್ಟಿದ್ದ. ಬಹುಶಃ ನೋಟ್ಸ್ ಇನ್ನು ಬರೆದು ಆಗಿರಲಿಕ್ಕಿಲ್ಲ. ಪಕ್ಕಿ (ಪ್ರಕಾಶ), ಪಚ್ಚಿ (ಪ್ರಶಾಂತ), ಕುಮ್ಮಿ (ಕುಮುದಾ), ಮಂಗಿ (ಮಂಗಳಾ)...ಹೀಗೆ ನನ್ನ ಗ್ಯಾಂಗಿನವರೆಲ್ಲ ನೋಟ್ಸ್ ಕಂಪ್ಲೀಟ್ ಮಾಡುವಲ್ಲಿ ವಿಫಲರಾಗಿದ್ದರು. ಹಾಗಾಗಿ ನಮ್ಮ ಗ್ಯಾಂಗ್‌ನಲ್ಲಿ ನೋಟ್ಸ್ ಸಂಪೂರ್ಣವಾಗಿ ಬರೆದು ಮುಗಿಸಿದ ಕೀರ್ತಿ ನನಗೊಬ್ಬಳಿಗೆ ಸಲ್ಲುತ್ತಿತ್ತು.

ಅದೊಂದು ದಿನ ಶಾಲೆ ಬಿಟ್ಟ ನಂತರ ಪಿಲ್ಟ್ರಿನ ನನ್ನೆದುರು ನಿಂತು, "ನನಗೆ ನೋಟ್ಸ್ ಇನ್ನು ಬರೆದು ಆಗಲಿಲ್ಲ. ಪ್ಲೀಸ್ ಕೊಡ್ತೀಯಾ?" ಅಯ್ಯೋ ಪಾಪ ಎನಿಸುವಂತೆ ಕೇಳಿದ್ದ. ನಾನು ವಾರೆ ನಗೆ ನಕ್ಕು ಸೈನ್ಸ್ ನೋಟ್ಸ್ ಅವನ ಕೈಗಿಕ್ಕಿದ್ದೆ.

ಮರುದಿನವೇ ನೋಟ್ಸ್ ಹಿಂದಿರುಗಿಸಿ ತಿರುಗಿ ನೋಡದೆಯೂ ಓಡಿಹೋಗಿದ್ದ. ಅವನ ಈ ವರ್ತನೆ ವಿಚಿತ್ರವಾಗಿ ತೋರಿದರೂ ನಾನು ತಲೆಕೆಡಿಸಿಕೊಳ್ಳಲು ಹೋಗಲಿಲ್ಲ.

ಅಂತೂ ಕೊನೆಗೆ ನಾವೆಲ್ಲರೂ ಭಯದಿಂದ ಎದುರು ನೋಡುತ್ತಿದ್ದ ನೋಟ್ಸ್ ಸಬ್‌ಮಿಟ್ ಮಾಡುವ ದಿನ ಬಂತು. ಪಕ್ಕಿ, ಪಚ್ಚಿ 'ಮೇಷ್ಟ್ರು ಏನಾದರೂ ಮಾಡಿಕೊಂಡು ಹೋಗಲಿ ಎನ್ನುವ ಮಾಡಿಕೊಂಡು ಹೋಗಲಿ' ಎನ್ನುವ ಮೊಂಡು ಧೈರ್ಯದಲ್ಲಿದ್ದರೆ ಕುಮ್ಮಿ. ಮಂಗಿ' ಯಾವ ನೆಪ ಹೇಳಿದರೆ ದೊಡ್ಡಪ್ಪ ಮೇಷ್ಟ್ರು ಕರಗಿಯಾರು' ಎಂದು ಲೆಕ್ಕಾಚಾರ ಹಾಕುತ್ತಿದ್ದರು.

ಎಲ್ಲರೂ ಒಬ್ಬೊಬ್ಬರಾಗಿ ನೋಟ್ಸ್ ನ್ನು ಮೇಷ್ಟ್ರ ಕೈಗೆ ಇತ್ತು ಬಂದರು. ತಮ್ಮ ದಪ್ಪನೆಯ ಹುಬ್ಬು ಮತ್ತು ಕನ್ನಡಕದ ನಡುವಿನ ಕಿರಿದಾದ ಜಾಗದಿಂದ ಪ್ರತಿಯೊಬ್ಬರನ್ನು ಗಮನಿಸುತ್ತಿದ್ದ 'ದೊಡ್ಡಪ್ಪ'ನನ್ನು ನೋಡಿದರೆ ಪ್ರಾಮಾಣಿಕರಿಗೂ ನಡುಕ ಬರುತ್ತಿತ್ತು.

ಆ ಒಂದು ಪೀರಿಯಡ್ ನೋಟ್ಸ್ ಚೆಕ್ ಮುಗಿಸಿ ಹೊರನಡೆಯುತ್ತಿದ್ದ 'ದೊಡ್ಡಪ್ಪ' ಪಿಲ್ಟ್ರಿಯನ್ನು ಕರೆದರು. ಅಲ್ಲಿ ಏನು ನಡೆಯಿತೋ ಗೊತ್ತಿಲ್ಲ. ಮರುದಿನವೇ ಪಿಲ್ಟ್ರಿಯ ಪ್ರೇಮದ ಹುಚ್ಚೆಲ್ಲ ಇಳಿದುಹೋಗಿತ್ತು. ಕಾರಣವಿಷ್ಟೇ; 'ದೊಡ್ಡಪ್ಪ'ನಿಗೆ ನನ್ನ ನೋಟ್ಸ್ ನಲ್ಲಿ ಪಿಲ್ಟ್ರಿಯ ಪ್ರೇಮದೋಲೆ ಸಿಕ್ಕಿತ್ತು!!

Tuesday, February 12, 2008

ಮುರುಕು ಕ್ಲಾಸಿನೊಳಗೆ ಅರಳುವ ಸುಂದರ ಪ್ರೇಮ....


ಅಮ್ಮನಿಗೆ ಏನೋ ಕೆಲಸ ಮಾಡಿಕೊಟ್ಟ ಶಾಸ್ತ್ರ ಮಾಡಿ ಶೀಲಕ್ಕನ ಮನೆಗೆ ಹಾರಿ ಹೋಗಿದ್ದೆ. ಆಗಷ್ಟೇ ತಲೆ ಸ್ನಾನ ಮಾಡಿ ಬಿಸಿಲಲ್ಲಿ ತನ್ನ ನೀಳ ಕೇಶರಾಶಿಯನ್ನು ಹರಡಿ ಕೂತಿದ್ದಳು ಶೀಲಕ್ಕ. ಅವಳ ಹತ್ತಿರ ಏನೋ ಹೇಳಿಕೊಳ್ಳಬೇಕು ಎನ್ನುವ ಭಾವ ಅವತ್ತು ಶೀಲಕ್ಕಳನ್ನು ಮತ್ತಷ್ಟು ಆಪ್ತೆಯನ್ನಾಗಿಸಿದ್ದವು. ಅದನ್ನು ಅರಿತವಳಂತೆ ನನ್ನ ಭಾವನೆಯ ತೀವ್ರತೆಗೆ ಸಮಾನವಾಗಿ ಸ್ಪಂದಿಸುತ್ತಾ ಕೇಳಿದಳು ಏನಾಯಿತೆಂದು. ಅವಳ ಜೊತೆ ಅಷ್ಟು ಸಲಿಗೆಯಿಂದಿದ್ದರೂ 'ಏನು ಅಂದುಕೊಳ್ಳುತ್ತಾಳೊ' ಎನ್ನುವ ಭಾವ ನನ್ನನ್ನು ತಡೆಯಿತಾದರೂ ಅವಳ ತಣ್ಣನೆಯ ನೋಟ ನನಗೆ ಹೇಳಿಕೊಳ್ಳಲು ಅನುವು ನೀಡಿತು.

"ಶೀಲಕ್ಕ ಇವತ್ತು ಬೆಳಗ್ಗೆನೇ ಅಮ್ಮನ ಜೊತೆ ಜಗಳ. ಹೆಣ್ಣುಮಕ್ಕಳು ಲೇಟ್ ಆಗಿ ಏಳಬಾರದು ಅಂತ ಅವಳ ವಾದ. ಅಣ್ಣ ಮಾತ್ರ ೮ ಗಂಟೆಗೆ ಎದ್ರೂ ಪರ್ವಾಗಿಲ್ಲ. ಬೆಳಿಗ್ಗೆ ಏಳು, ಒಳ್ಳೆದು ಅಂದ್ರೆ ಅದು ಬೇರೆ ಮಾತು ಆದ್ರೆ ಹೆಣ್ಮಕ್ಕಳು ಮಾತ್ರ ಬೇಗ ಏಳಬೇಕು ಅನ್ನೋದು ತಪ್ಪು. ನಂಗೂ ಬೆಳಗ್ಗೆ ಚಾದರದೊಳಗಿನ ಬೆಚ್ಚಗಿನತನವನ್ನು ಅನುಭವಿಸಬೇಕು ಅಂತಾ ಇರೋಲ್ವಾ? ಒಮ್ಮೊಮ್ಮೆ ನಂಗೂ ಬೇಗ ಏಳ ಬೇಕು ಅಂತೆನೋ ಅನ್ನಿಸುತ್ತೆ...ಆದ್ರೆ ಅಮ್ಮ ಆರಕ್ಕೇ ಎಬ್ಬಿಸಿದಕೂಡಲೇ ಸಿಟ್ಟು ಬರುತ್ತೆ. ಅವಳು ಹೇಳಿದ ಹಾಗೆ ಕೇಳಬೇಕು ಅನ್ನಿಸೋದೇ ಇಲ್ಲ. ಇದು ಬರೀ ಬೇಗ ಏಳೋ ವಿಷಯಕ್ಕಷ್ಟೆ ಸಂಬಂಧಿಸಿಲ್ಲ.

ಎಲ್ಲದಕ್ಕೂ, ಕುಳಿತಿದ್ದಕ್ಕೆ ನಿಂತಿದ್ದಕ್ಕೆ 'ದೊಡ್ಡವಳಾಗಿದೀಯಾ, ಇನ್ನಾದ್ರೂ ಸುಧಾರಿಸು'ಅಂತಾಳೆ. ಸಾಲ್ದೂ ಅಂತಾ ಅಪ್ಪನೂ ಕೆಲವೊಮ್ಮೆ ಅಮ್ಮನ ಮಾತಿಗೆ ತಲೆಯಾಡಿಸ್ತಾರೆ. ನನಗೆ ಬೇಕಾದ ಹಾಗೆ ಇರೋಕೆ ಬಿಡಲ್ಲ. ಜೀವನದ ಮೇಲೆ ಜಿಗುಪ್ಸೆ ಹುಟ್ಟಿಸಿ ಬಿಡ್ತಾರೆ ಇವರೆಲ್ಲ ಸೇರಿ. ಇವ್ರೆಲ್ಲ ನನ್ನ ಅರ್ಥನೇ ಮಾಡ್ಕೊಳಲ್ಲ' ನನ್ನ ಅಮ್ಮನ ಮೇಲೆ ಆಪಾದನೆಯ ಪಟ್ಟಿ ಬೆಳೆಯುತ್ತಲೇ ಇತ್ತು.

ಶೀಲಕ್ಕನಿಗೆ ಏನೆನ್ನಿಸಿತೋ ಏನೋ ಒಮ್ಮೆಲೆ 'ಕೂಸೆ, ನಿನಗೆ ಏನೆನ್ನಿಸುತ್ತೋ ಅದನ್ನೆಲ್ಲ ಬರಿ. ನೀನು ಡೈರಿ ಬರೆಯೋಕೆ ಸ್ಟಾರ್ಟ್ ಮಾಡು' ಎಂದಳು. ಇವಳೂ ನನ್ನ ಜೊತೆ ಸೇರಿ ಅಮ್ಮಂದಿರಿಗೆಲ್ಲ ಬಯ್ತಾಳೆ ಅಂದ್ಕೊಂಡ್ರೆ ಇದೆನೋ ಡೈರಿ ಬರಿ ಅಂತಾಳಲ್ಲ?! ನನ್ನ ಟೆನ್ಷನ್‌ಗೂ ಡೈರಿಗೂ ಏನು ಸಂಬಂಧ? ಶೀಲಕ್ಕನನ್ನು ಕೇಳಿಯೇ ಬಿಟ್ಟೆ 'ನಾನೇನೋ ಅಂದ್ರೆ...ಡೈರಿ ಬರಿ ಅಂತಿಯಲ್ಲ? ಡೈರಿ ಬರೆದ್ರೆ ಏನು ಉಪಯೋಗ? ಬರೆಯುವುದು ಹೇಗೆ ಅಂತಾನೂ ಗೊತ್ತಿಲ್ಲ, ಸಿನೆಮಾದಲ್ಲಿ ಹೀರೋಯಿನ್ ಬರಿತಾಳೆ ಅಂತ ಅಷ್ಟೆ ನಂಗೆ ಗೊತ್ತಿರೋದು' ಅಂತ ಚಿಕ್ಕ ಮುಖ ಮಾಡಿದೆ.

'ಹಾಂಗಲ್ಲ ಕೂಸೇ..ನಾನೂ ಮೊದಲು ಅಮ್ಮನ ಹತ್ತಿರ ಜಗಳ ಮಾಡ್ತಿದ್ದೆ. ಚಿಕ್ಕ ವಿಷ್ಯಕ್ಕೂ ಸಿಟ್ಟು, ಯಾವತ್ತೂ ನನ್ನ ತಪ್ಪೇ ಇರೊಲ್ಲ ಅಂತ ವಾದ. ನನ್ನ ಒಬ್ಬ ಗೆಳತಿಯ ಒತ್ತಾಯಕ್ಕೆ ನಾನೂ ಡೈರಿ ಬರೆಯಲು ಪ್ರಾರಂಭಿಸಿದೆ ನೋಡು..ಒಂದೆಂದೇ ಅರ್ಥವಾಗತೊಡಗಿತು; ಜೀವನವನ್ನು ಸೂಕ್ಷ್ಮವಾಗಿ ಗಮನಿಸುವ ಸಾಮರ್ಥ್ಯ, ನನ್ನ ತಪ್ಪುಗಳು, ಆ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬಗೆ..ಸಂಬಂಧಗಳನ್ನು handle ಮಾಡೋದು..ಹೀಗೆ.

ಹಾಂ! ಮತ್ತೊಂದು ವಿಷಯ, ಬರೀ ಡೈರಿ ಬರೆದಷ್ಟಕ್ಕೆ ಯಾರೂ ಉದ್ಧಾರ ಆಗಲ್ಲ. ಸರಿ ಎಂದು ಕಂಡುಬಂದ ವಿಷಯಗಳನ್ನು ಅಳವಡಿಸಿಕೊಳ್ಳುವುದು, ಹಳೆ ಪುಟಗಳನ್ನು ತಿರುವಿಹಾಕೋದು ಎಲ್ಲಾ ಮಾಡ್ತಾ ಇದ್ರೆ ನಿಜವಾಗ್ಲೂ ಡೈರಿ ಖುಷಿ ನೀಡುತ್ತದೆ'
ಶೀಲಕ್ಕ ನನ್ನಲ್ಲಿ ಹೊಸ ವಿಚಾರ ಬಿತ್ತಿದ್ದಳು. ಶೀಲಕ್ಕನ ಹತ್ತಿರ ಅದು-ಇದು ಅಂತ ಸ್ವಲ್ಪ ಹರಟೆ ಕೊಚ್ಚಿ ಮನೆಗೆ ಮರಳಿದ್ದೆ.

ಅವತ್ತು ರಾತ್ರಿ ಮಲಗುವ ಮುನ್ನ ಅಪ್ಪ ಕೊಟ್ಟ LIC ಡೈರಿಯ ಕಪ್ಪು ಮೈಯನ್ನು ಪ್ರೀತಿಯಿಂದ ಸವರಿ ಬರೆಯಲು ಅಣಿಯಾದೆ. ಆ ಕಡೆ ಹಳ್ಳಿಯೂ ಅಲ್ಲದ, ಪಟ್ಟಣವೂ ಅಲ್ಲದ, ಮುರುಕು ಚಾ ಅಂಗಡಿ, ಭಟ್ಟರ ಪೆಪ್ಪರ್‌ಮೆಂಟ್ ಅಂಗಡಿ ಮಾತ್ರ ಇರುವ ಮಲೆನಾಡಿನ ಪುಟ್ಟ ಊರಲ್ಲಿ ನನ್ನ ಹೈಸ್ಕೂಲ್ ಇದೆ. ಅಲ್ಲಿ ನಾನು ಹತ್ತನೇ ತರಗತಿ. ಪ್ರತಿ ಸಾರಿ ಮೊದಲನೇ ರ್ರ್ಯಾಂಕ್ ಗಳಿಸುವಷ್ಟು ಬುದ್ಧಿವಂತಳಲ್ಲ, ಆದರೆ ಫಸ್ಟ್ ಕ್ಲಾಸ್‌ಗೆ ತೊಂದರೆ ಇರಲಿಲ್ಲ. ಆಟದಲ್ಲೂ ಏನು ಛಾಂಪಿಯನ್ ಅಲ್ಲ, ಆದರೆ ವಾಲಿಬಾಲ್, ಚೆಸ್ ಇಷ್ಟ.

ನನ್ನಂತದೇ ನಾಲ್ಕೈದು ತುಂಟ ಹುಡುಗಿಯರನ್ನು ಕಟ್ಟಿಕೊಂಡು ತರಲೆ ಮಾಡಿಕೊಂಡು ತಿರುಗುತ್ತಿದ್ದೆ. ಎಲ್ಲ ಶಿಕ್ಷಕರು, ಸ್ವಲ್ಪ ಹಾರಾಡುವ ಹುಡುಗರಿಗೆಲ್ಲ ಅಡ್ಡಹೆಸರುಗಳನ್ನು ದಯಪಾಲಿಸಿ ಮರೆಯಲ್ಲಿ ಆಡಿಕೊಂಡು ನಗುತ್ತಿದ್ದೆವು. ಬೇಸಿಗೆಯಲ್ಲಿ ಉಪ್ಪು ಮಾವಿನಕಾಯಿ, ಚಳಿಗಾಲ ಬಂತೆಂದರೆ ಹುಣಸೆಕಾಯಿ, ನೆಲ್ಲಿಕಾಯಿ..ಹೀಗೆ ಆಯಾ ಕಾಲಕ್ಕೆ ಏನು ಹಣ್ಣು-ಕಾಯಿಗಳು ಬೆಳೆಯುತ್ತವೋ ಅವೆಲ್ಲ ಎಲ್ಲರ ಬ್ಯಾಗ್‌ಗಳಲ್ಲಿ ಹೇರಳವಾಗಿ ಸಿಗುತ್ತಿದ್ದವು. ಅದನ್ನೆಲ್ಲ ತಿನ್ನುತ್ತಾ ಯಾವಾಗಲೂ ನಗುತ್ತ, ನಗಿಸುತ್ತ ಕ್ಲಾಸ್ ತುಂಬಾ ಓಡಾಡಿಕೊಂಡಿರುತ್ತಿದ್ದೆ.

ಆದರೆ ನನ್ನದು ಡಬ್ಬಾ ಸರ್ಕಾರಿ ಹೈಸ್ಕೂಲು! ಮಳೆಗಾಲದಲ್ಲಿ ಸೋರುವ, ಅಂಗವಿಕಲ ಡೆಸ್ಕ್-ಬೆಂಚ್‌ಗಳ ಈ ಸ್ಕೂಲು ನೋಡಲು ಕುರೂಪಿ. ಆದರೆ ಸುತ್ತಮುತ್ತಲ ಪರಿಸರ; ಆ ಬೆಟ್ಟ, ಬಯಲು ಬಲು ಸುಂದರ. ಆ ಹಸುರಿನನಡುವೆ ಅರಳುವ ಮುಗ್ಧ ಮನಸ್ಸಿನ ಚಂದವೇ ಮತ್ತೊಂದು ರೀತಿಯದು...

ಮುಂದಿನ ಭಾಗಕ್ಕೆ ಕಾಯಿರಿ...

Tuesday, February 5, 2008

ಡೈರಿಗೆ ಮುನ್ನುಡಿ


ಯಾಕೋ ಕನ್ನಡಿ ಬಹಳ ಪ್ರಿಯ ಎನಿಸುತ್ತದೆ. ದಾರಿಯಲ್ಲಿ ನಡೆದು ಹೋಗುತ್ತಿದ್ದರೆ ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಎನ್ನುವ ಭಾವ ಕಚಕುಳಿ ಇಡುತ್ತದೆ. ಕ್ಲಾಸಿನಲ್ಲಿ ಹುಡುಗ ಕದ್ದು ನೋಡಿದಾಗ ಆಗುವ ನಾಚಿಕೆ, ರಸ್ತೆಯಲ್ಲಿ ಅಪರಿಚಿತ ಹಸಿದ ಕಣ್ಣುಗಳ ಭೀತಿ...ಎಲ್ಲಾ ಭಾವನೆಯನ್ನು ಹೇಳಿಕೊಳ್ಳುವ ಆಸೆ, ಆದರೆ ಹೇಳಲಾಗದ ಸಂಕಟ. ಯಾರಿಗೆ ಹೇಳಲಿ? ಯಾಕೆ ಹೇಳಲಿ? ಹೇಳಿದರೆ ಅರ್ಥವಾಗುತ್ತದಾ ಬೇರೆಯವರಿಗೆ? ಏನೋ ಗೊತ್ತಿಲ್ಲ.

ಆದರೆ ನನ್ನ ಡೈರಿಗೆ ಮಾತ್ರ ಅದು ಪೂರ್ತಿ ಅರ್ಥವಾಗುತ್ತದೆ. ಡೈರಿ ಅಂತಾ ನಾನು ದಿನಾ ಬರೆಯುವ ರೂಢಿ ಇರಿಸಿಕೊಂಡಿಲ್ಲ. ಒಂದೊಂದು ದಿನ ಮನಸಿಗೆ ಒಂಥರ ಕಿರಿಕಿರಿ, ಒತ್ತಿಕೊಂಡು ಬರುವ ಏನೋ ತಳಮಳ ತಡೆಯಲು ಆಗದೇ ಇದ್ದಾಗ ಡೈರಿ ಬರವಣಿಗೆ ನನಗೆ ಹೃದಯದ ಬವಣೆ ಬರೆದು ಹಗುರಾಗಲು ದಾರಿಯಾಗುತ್ತದೆ.ನನಗೆ ವಿಶೇಷ ಎನಿಸಿದ ಏನೇ ಇರಲಿ; ಯಾರದೋ ಕಥೆ, ಎಲ್ಲೋ ಓದಿದ ಕವನ, ಯಾವತ್ತೋ ಆದ ಅನುಭವ, ಹೀಗೆ...ಎಲ್ಲಾ ಡೈರಿಯಲ್ಲಿ ತುಂಬಿಡುತ್ತೇನೆ. ನನಗಿಷ್ಟವಾದ ಇದರ ಕೆಲವು ಪುಟಗಳನ್ನೇ ನಿಮ್ಮೆದುರು ಇಡುತ್ತಿದ್ದೇನೆ.

ಎಲ್ಲದಕ್ಕಿಂದ ಮೊದಲು ನನ್ನ ಡೈರಿ ಬರವಣಿಗೆ ಹೇಗೆ ಪ್ರಾರಂಭವಾಯಿತು ಎಂದು ಹೇಳುತ್ತೇನೆ...ಮಲೆನಾಡಿನ ನನ್ನ ಪುಟ್ಟ ಹಳ್ಳಿಯಲ್ಲಿ ನೇರಲೆ, ಪೇರಲೆ, ನೆಲ್ಲಿಕಾಯಿ ಅಂತ ಹಕ್ಕಿಯ ಹಾಗೆ ಬೆಟ್ಟಗುಡ್ಡ ಅಲೆಯುತ್ತ,ಮನೆಯಲ್ಲಿ ಅಮ್ಮ ಮಾಡಿದ ರುಚಿ ಅಡಿಗೆ ಸವಿಯುತ್ತ ಆರಾಮವಾಗಿ ಇದ್ದವಳು ನಾನು. ಮೇಷ್ಟ್ರು ಕೊಟ್ಟ ಹೋಂ ವರ್ಕ್‌ಗಳನ್ನೆಲ್ಲ ಅಚ್ಚುಕಟ್ಟಾಗಿ ಮುಗಿಸುವುದೊಂದೇ ಅಂದಿನ ನನ್ನ ಜೀವನದ ದೊಡ್ಡ ಸವಾಲು. 16 ವರ್ಷವಾದರೂ ನನಗೆ ಡೈರಿ ಬರೆಯುವುದು ಅಂದರೇನು ಗೊತ್ತಿರಲಿಲ್ಲ. ಎಲ್ಲ ಶೀಲಕ್ಕ ಹೇಳಿಕೊಟ್ಟದ್ದು. ನನ್ನ ತಳಮಳ ತಣಿಯಲು `ಡೈರಿ' ಬರೆಯುವ ದಾರಿ ಹೇಳಿದವಳು. ಆದ್ದರಿಂದ ನನ್ನ 'ಶೋಡಷ ವಯಸ್ಸಿನ ಆದರ್ಶ'ಶೀಲಕ್ಕಳ ಬಗ್ಗೆ ನಿಮಗಿಷ್ಟು ಹೇಳುವುದು ಒಳಿತು.

ಪಕ್ಕದ ಮನೆ ಶೀಲಕ್ಕ, ನನಗಿಂತ ಐದು ವರ್ಷ ದೊಡ್ಡವಳು. ಸುಂದರಿ ಎನ್ನಬಹುದಾದ ಚಹರೆ.ಬಹುತೇಕ ನನ್ನ ಕನಸುಗಳ ಅಡಿಪಾಯ ಇವಳೇ.ದೊಡ್ಡ ಕಾಲೇಜಿಗೆ ಹೋಗುವವಳು,ಬಣ್ಣ-ಬಣ್ಣದ ಬಟ್ಟೆ ತೊಡುವವಳು. ನಮ್ಮ ಹಾಗೆ ಯುನಿಫಾರ್ಮಿನ ಬಂಧನವಿಲ್ಲ, ಹೇರ್‌ಪಿನ್ ತರಲೂ ಅಪ್ಪನನ್ನು ಅವಲಂಬಿಸುವ ಅವಶ್ಯಕತೆ ಇಲ್ಲ. ನಮ್ಮ ಶಾಲೆ ಬಿಟ್ಟು ಅವಳು ಕಾಲೇಜು ಸೇರಿ ವರ್ಷಗಳೇ ಕಳೆದರೂ ಅವಳ ಬಗ್ಗೆ ಮಾತುಗಳು ನಮ್ಮ ಶಾಲೆಯ ಹರಟೆಯಲ್ಲಿಬಂದು ಹೋಗುತ್ತಿರುತ್ತವೆ. ಎಲ್ಲರೂ ಅವಳನ್ನು`ಜೋರು ಹುಡುಗಿ' ಎಂದು ಮೂಗು ಮುರಿದರೂ, ಏನೋ ನಂಗೆ ಅವಳ ಮೇಲೆ ಒಂಥರಾ ಪ್ರೀತಿ, ನಂಬಿಕೆ.

ಕಾಲೇಜಿಗೆ ಹೋಗಲು ಪಟ್ಟಣದಲ್ಲಿ ರೂಮು ಮಾಡಿಕೊಂಡಿದ್ದರಿಂದ ವಾರಕ್ಕೆ ಒಂದು ಸಾರಿ ಬಂದು ಹೋಗುತ್ತಾಳೆ. ಆಗ ನನಗೆ ಅವಳ ಸಾಮಿಪ್ಯ ಲಭ್ಯ. ಮಧ್ಯಾಹ್ನ ಅಮ್ಮನ ಕಣ್ಣು ತಪ್ಪಿಸಿ ಅವಳೊಡನೆ ಹೋದರೆ ಬರುವುದು ಸಂಜೆಯೇ. ಆಹಾ! ಎಷ್ಟು ವಿಷಯ ಹೇಳುತ್ತಾಳೆ. ಅವಳ ಕಾಲೇಜು, ಮೂರ್ಖ ಪ್ರೊಫೆಸರುಗಳು, ಅವರಿವರ ಪ್ರಣಯದ ಸುದ್ದಿ, ಅವಳ ರೂಮ್‌ಮೇಟುಗಳು ಇವುಗಳ ನಡುವೆಯೇ ತನ್ನ ಮನದ ಭಾವನೆಗಳು ಹೀಗೆ ಒಂದು ಕೂತೂಹಲ, ಸ್ವಾರಸ್ಯದ ಪ್ರಪಂಚವನ್ನೇ ನನ್ನ ಮುಂದೆ ತೆರೆದಿಟ್ಟು ಬಿಡುತ್ತಾಳೆ. 'ಕೂಸೇ,ಎಷ್ಟು ಮಜಾ ಆಗ್ತು ಗೊತ್ತಿದ್ದ' ಅಂತ ಅವಳು ಕಣ್ಣು ಮಿಟುಕಿಸಿ ನಗುತ್ತಿದ್ದರೆ ಇದೊಂದು ವರ್ಷ ಹೇಗೆ ಕಳೆಯುತ್ತದೆಯೋ, ಯಾವಾಗ ನಾನು ಕಾಲೇಜಿಗೆ ಹೋದೇನೋ ಎನಿಸುತ್ತದೆ.

ಅವಳಿಗೂ ನನಗೂ ಯಾವತ್ತೂ communication gap ಆದದ್ದೇ ಇಲ್ಲ. ನಾನು ಹೇಳುವ ಮೊದಲೇ 'ಏನೇ ಕೂಸೆ, ಎಂತಾ ಆತೆ?' ಅಂತ ಆತ್ಮೀಯತೆಯಿಂದ ಕೇಳುವಳು. ಆ ಕ್ಷಣ ನನಗೆ ಅನಿಸಿದ್ದನ್ನು ಪಟಪಟ ಹೇಳಿಬಿಡುತ್ತೇನೆ. ಅವಳು ಸರಿಯಾಗಿ ನನ್ನ ತುಮುಲ ಗ್ರಹಿಸಿರುತ್ತಾಳೆ ಮತ್ತು ಅದಕ್ಕೆ ಸೂಕ್ತ ಸಲಹೆ ನೀಡುತ್ತಾಳೆ. ಇದರಿಂದಲೇ ನನಗೆ ಅವಳು ಮತ್ತೂ ಇಷ್ಟವಾಗಿಬಿಡುತ್ತಾಳೆ.
- ಷೋಡಶಿ, ೨೭ ಏಪ್ರಿಲ್ ೨೦೦೭