Friday, December 24, 2010

ಮಾನಸಿಕ ಅವಲಂಬನೆ

ಭಾರತಿ... ನಿಜಕ್ಕೂ ಅವಳು ಅವಳ ರೂಪದಂತೆ ಸುಂದರ ಮನಸಿನ ಹುಡುಗಿ. ಪ್ರಭಾವಿ ಶ್ರೀಮಂತರ ಮನೆಯ ಒಬ್ಬಳೇ ಮಗಳು. ಸ್ವಲ್ಪವೂ ಸೊಕ್ಕಿಲ್ಲ. ಶಾಂತ ಸ್ವಭಾವ. ಅನವಶ್ಯಕವಾಗಿ ಯಾರನ್ನೂ ಜರೆದವಳಲ್ಲ. ಆದರೆ ಒದಿಬ್ಬರನ್ನು ಬಿಟ್ಟರೆ ಮತ್ತ್ಯಾರ ಜೊತೆಗೂ ಬೆರೆಯುವುದಿಲ್ಲ. ಉಳಿದ ಹುಡುಗಿಯರು ಅವಳನ್ನು ಒಬ್ಬ ವಿಐಪಿ ಎಂದು ಪರಿಗಣಿಸಿ ದೂರವೆ ಇರಿಸಿಬಿಟ್ಟಿದ್ದರು. ಮಾತಾನಾಡುವಾಗಲೂ ಅಷ್ಟೆ, ಅಳೆದು ತೂಗಿ ಮಿತಿ ಮೀರದ ಮಾತುಗಳು. ಅಭ್ಯಾಸದಲ್ಲೂ
ಮುಂದು.

ನಾನು ಕಾಲೇಜಿಗೆ ಸೇರಿದ ಹೊಸದರಲ್ಲಿ ಅವಳಿಗೆ ನಾನು ಜೋರಾಗಿ ನಗುವುದು, ಗೆಳತಿಯರೊಂದಿಗೆ ಸೇರಿ ಕ್ಲಾಸಿನಲ್ಲಿ ಗಲಾಟೆ ಮಾಡುವುದು ಎಲ್ಲ ಸಹ್ಯವಾಗುತ್ತಿರಲಿಲ್ಲ. ಆದರೆ ಸುಮಾರು ಮೂರು ತಿಂಗಳ ಹಿಂದೆ, ಮಧ್ಯಾಹ್ನದ ಬ್ರೇಕ್ ಟೈಮಿನಲ್ಲಿ ಭಾರತಿ ಬಹಳ ಸಪ್ಪೆ ಮೋರೆ ಮಾಡಿಕೊಂಡು ಅವಳಷ್ಟಕ್ಕೆ ಅವಳು ಮೂಲೆ ಬೆಂಚು ಏರಿ ಕುಳಿತಿದ್ದಳು. ಭಾರತಿಗೆ ಮನೆಯಲ್ಲಿ ಅಪ್ಪ ಅಮ್ಮನ ಜೊತೆ ಅಷ್ಟು ಸಲುಗೆಯಿರಲಿಲ್ಲ. ಒಡನಾಡಲು ಜೊತೆಗೆ ಹುಟ್ಟಿದವರಾರೂ ಇಲ್ಲ. ಹೇಳಿಕೊಳ್ಳುವಂತಹ ಆಪ್ತ ಸ್ನೇಹಿತರೂ ಇಲ್ಲ. ಯಾಕೋ.. ನನಗೆ ಅವಳನ್ನು ನೋಡಿ ಪಾಪ ಎನ್ನಿಸಿತು. "ಏನಾಯ್ತೆ ಭಾರತಿ ಎಂದು ಆಪ್ತತೆಯಿಂದ ಕೇಳುತ್ತ ಪಕ್ಕದಲ್ಲಿ ಹೋಗಿ ಕುಳಿತೆ.

ನಮಗೆ ಅಂತಹ ಬಾಂಧವ್ಯವೇನೂ ಇರಲಿಲ್ಲ. ಆದರೆ ಅವಳಿಗೆ ಆ ಸಮಯಕ್ಕೆ ಹೇಳಿಕೊಳ್ಳಲು ಯಾರಾದರೂ ಬೇಕಾಗಿತ್ತೇನೋ.. ಅಳುತ್ತ ಅವಳ ಮನೆ ಬಗ್ಗೆ, ತನ್ನ ಒಂಟಿತನದ ಬಗ್ಗೆ ಹೇಳಿಕೊಂಡಳು, " ನೋಡು ಭಾರತಿ, ಅಪ್ಪ-ಅಮ್ಮನಿಗೆ ನಿನ್ನ ಜೊತೆ ಕಳೆಯಲು ಟೈಮೇ ಇಲ್ಲ ಎಂದು ಕೊರಗುತ್ತೀಯಾ. ಆದರೆ ನೋಡು, ನಮ್ಮ ಕ್ಲಾಸಿನ ಶ್ವೇತಾಗೆ ಅಪ್ಪ ಅಮ್ಮನೇ ಇಲ್ಲ ಹೀಗೆ ನನಗೆ ತೋಚಿದಂತೆ ಸಮಾಧಾನ ಮಾಡಿದೆ.

ಈ ಘಟನೆ ನಡೆದ ಮೇಲೆ ತೀರ ಎನ್ನುವಷ್ಟು ನನ್ನನ್ನು ಹಚ್ಚಿಕೊಂಡಳು. ಎಲ್ಲದಕ್ಕೂ ನನ್ನ ಸಲಹೆ ಕೇಳುತ್ತಾಳೆ. ಸ್ವಲ್ಪ ಬ್ರೇಕ್ ಸಿಕ್ಕರೂ ಸಾಕು. ಪಕ್ಕದಲ್ಲಿ ಬಂದು ಕುಳಿತುಬಿಡುತ್ತಾಳೆ.

ಬಹಳ ಆಶ್ಚರ್ಯವಾಗುತ್ತದೆ. ಒಂದು ಚಿಕ್ಕ ಸಮಾಧಾನ ಇಷ್ಟೆಲ್ಲ ಮಾಡುತ್ತದೆಯಾ?! ಇದೇನೆ ಇದ್ದರೂ ಭಾರತಿಯ ಅತಿಯಾದ ಅವಲಂಬನೆ ನನಗೆ ಒಂಥರಾ ಉಸಿರು ಕಟ್ಟಿಸುತ್ತದೆ. ಚಿಕ್ಕಪುಟ್ಟ, ಅತೀ ಪರ್ಸನಲ್ ವಿಷ್ಯಗಳಿಗೆ ನನ್ನ ಸಲಹೆ ಬೇಕು ಎನ್ನುವ ಅವಳ ರೀತಿ ಮುಜುಗರ ಉಂಟುಮಾಡುತ್ತದೆ. ಯಾವುದೇ ಕಾರಣಕ್ಕೂ ಅವಳು ನನ್ನನ್ನು ವಿಮರ್ಶೆ ಮಾಡುವುದೇ ಇಲ್ಲ. ನಾನು ಹೇಳಿದ್ದೆಲ್ಲ ವೇದವಾಕ್ಯಎಂಬಂತೆ ಆಡುತ್ತಾಳೆ. ಇದೆಲ್ಲ ನನಗೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ.

ಇದನ್ನೆ ನೇರವಾಗಿ ಹೇಳಿದರೆ "ನೀನು ನನ್ನ ಬಿಟ್ಟು ಹೋಗುತ್ತೀಯಾ" ಅಂತ ಅಳುತ್ತಾಳೆ. ಈಗೀಗಂತೂ ಅವಳು ಬಂದಳು ಎಂದರೆ ಎಲ್ಲಾದರೂ ಹೋಗಿ ಅಡಗಿಕೊಳ್ಳಬೇಕು ಎನಿಸುತ್ತದೆ. ಉದ್ದೇಶಪೂರ್ವಕವಾಗಿ ಅವಳಕಣ್ಣುತಪ್ಪಿಸಿದರೆ "ನನ್ನನ್ನು ಅವಾಯ್ಡ್ ಮಾಡುತ್ತೀಯಾ" ಎಂದು ಬೇಸರಿಸಿಕೊಳ್ಳುತ್ತಾಳೆ.

ಖಂಡಿತವಾಗಿಯೂ ಅವಳಿಗೆ ಬೇಜಾರು ಮಾಡಲು ನನಗೆ ಇಷ್ಟವಿಲ್ಲ. ಆದರೆ ಅವಳನ್ನು ಸಹಿಸಿಕೊಳ್ಳುವುದೂ ಕಷ್ಟ. ಹಾಗಾದರೆ ಅವಳ ಈ ಡಿಪೆಂಡೆನ್ಸಿ ತಪ್ಪಾ? ಅಥವಾ ಅವಳನ್ನು ಸಹಿಸಿಕೊಳ್ಳಲಾಗದಿರುವುದು ನನ್ನದೇ ತಪ್ಪಾ?

ಕುಮ್ಮಿ ನಾನು ಒಳ್ಳೆಯ ಗೆಳತಿಯರು. ಪರ್ಸನಲ್ ವಿಷ್ಯಗಳನ್ನು ಹಂಚಿಕೊಳ್ಳುತ್ತೇವೆ. ಆದರೆ ಯಾವತ್ತೂ ನನಗೆ ಅವಳು 'ಭಾರ' ಅನ್ನಿಸಿದ್ದೇ ಇಲ್ಲ. ಆದರೆ ಭಾರತಿ ವಿಷಯದಲ್ಲಿ ಮಾತ್ರ ಯಾಕೆ ಹೀಗನಿಸುತ್ತದೆ?

ಕುಮ್ಮಿ ಕೆಲವೊಮ್ಮೆ ಕೇಳುತ್ತಾಳೆ, "ಯಾಕೆ ಅವಳಿಗೆ ಆ ತರ ಮಾಡುತ್ತೀಯಾ? ಪಾಪ." ಎಂದು ನನಗೇ ಬೈಯುತ್ತಾಳೆ. ನನಗೂ ಇದೆಲ್ಲ ಹೊಸದು...