ಕ್ಲಾಸುಗಳು ಇನ್ನೂ ಸರಿಯಾಗಿ ಪ್ರಾರಂಭವಾಗಿಲ್ಲ. ಹೊಸ- ಹೊಸ ಪರಿಚಯ. ಹೈಸ್ಕೂಲಿನಲ್ಲಾದರೆ ಅಲ್ಲಿನ ಸುತ್ತಮುತ್ತಲವರೇ ಆಗಿದ್ದರು. ಆದರೆ ಇಲ್ಲಿ ಬಹಳ ದೂರ-ದೂರದಿಂದ ಬಂದವರು...ಯಾವ ಯಾವ ತರಹದವರು ಇರುತ್ತಾರೋ.. ಇನ್ನು ಯಾರೂ ಸರಿಯಾಗಿ ಪರಿಚಯ ಆಗಿಲ್ಲ. ಮೊದಲು ಈ ನೆಂಟರಮನೆಯನ್ನು ಬಿಟ್ಟು ಬೇರೆ ಎಲ್ಲಾದರೂ ಸೇರಿಕೊಳ್ಳಬೇಕು; ನನ್ನ ಪ್ರೀತಿಸುವ ಜಾಗದಲ್ಲಿ. ಹಿಂದೆ... ಮುಂದಕ್ಕೆ...
ಮಳೆಗಾಲ, ಅದರಲ್ಲೂ ಮಲೆನಾಡಿನ ಮಳೆಗಾಲವೆಂದರೆ ಅದರದ್ದೇ ಒಂದು ವೈಶಿಷ್ಯ. ವರ್ಷದ ಆರು ತಿಂಗಳು ಮಳೆಗಾಲವೇ. ಎಡೆಬಿಡದೇ ಹೊಯ್ಯುವ ಮಳೆ. ಎಲ್ಲೆಲ್ಲೂ ಕೆಂಪು-ಹಸಿರು ಸಂಯೋಗದ ದೃಶ್ಯ. ಇನಿಯನ ಪ್ರೀತಿಯಂತೆ ಒಮ್ಮೆ ರಭಸದಿಂದ ಮತ್ತೊಮ್ಮೆ ಮೃದುವಾಗಿ ಹೊಯ್ಯುವ ಮಳೆ...
ಪ್ರತಿ ಜೂನ್ನಲ್ಲಿ ಕಾಲೇಜಿಗೆ ಯೌವನ ಮರುಕಳಿಸುತ್ತದೆ. ಎಲ್ಲೆಲ್ಲೂ ಹೊಸದಾಗಿ ಕಾಲೇಜ್ ಗೆ ಬಂದಿರುವವರ ಕಲರವ..ಎರಡನೆ ಪಿಯೂಸಿಯವರು ಮಾತ್ರ ಗಂಭೀರ. ಈಗತಾನೆ ಹೈಸ್ಕೂಲ್ ಮುಗಿಸಿ ಬಂದಿರುವುದರಿಂದ, ಅದೇ ಮುಗ್ಧತೆ..ಚಿಕ್ಕಮಕ್ಕಳ ಹಾಗೆ ಗಲಾಟೆ ಮಾಡುತ್ತ ನಮ್ಮದೇ ಲೋಕದಲ್ಲಿ ಕ್ಲಾಸಿನಲ್ಲಿ ಕುಳಿತುಕೊಂಡಿದ್ದೆವು.
ಎಲ್ಲ ಬೇರೆ ಬೇರೆ ಹೈಸ್ಕೂಲುಗಳಿಂದ ಬಂದವರು. ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳುವ ತವಕ. ಜೊತೆಯಲ್ಲಿ ಕುಮ್ಮಿ ಕೂಡಾ ಇದ್ದುದರಿಂದ ಕ್ಲಾಸಿನಲ್ಲಿ ನನಗೆ ಅಂತಹ ಒಂಟಿತನವೇನೂ ಕಾಡಲಿಲ್ಲ. ನಾನು ಕುಮ್ಮಿ ಒಂದು ಮೂಲೆಯ ಬೇಂಚಿನ ಮೇಲೆ ಕುಳಿತು ಒಬ್ಬಬ್ಬರನ್ನೇ ಆರಿಸಿಕೊಂಡು ವಿಮರ್ಶೆ ಮಾಡುತ್ತಿದ್ದೆವು. "ಅವಳು ಬಹಳ ಸ್ಟೈಲ್ ಹೊಡೆಯುತ್ತಾಳೆ. ಇವಳು ಬಹಳ ಬುದ್ಧಿವಂತೆ ಅನಿಸುತ್ತಾಳೆ... ಓ! ಅವನನ್ನು ನೋಡು ತನ್ನನ್ನ ತಾನು ಹೃತಿಕ್ ರೋಷನ್ ಎಂದುಕೊಂಡುಬಿಟ್ಟಿದ್ದಾನೆ"... ಹೀಗೆ ಕಾಮೆಂಟ್ಗಳು..
ಸುಮ್ಮನೆ ಕೂತು ಅವರನ್ನೆಲ್ಲ ಗಮನಿಸುತ್ತಿದ್ದೆ... ಈ ಹುಡುಗಿಯರೆಲ್ಲ ಟೆಂತ್ ಲ್ಲಿ ಎಷ್ಟು ಮಾರ್ಕ್ಸ್ ತೆಗೆದೆ, ಯಾವೂರು, ಯಾರ ಜಡೆ ಉದ್ದ ಇದೆ... ಹೀಗೆ ಒಂದಕ್ಕೊಂದು ಸಂಬಂಧವಿಲ್ಲದಂತೆ, ಇವತ್ತೇ ಕಾಲೇಜಿನ ಕಡೆಯ ದಿನ ಎಂಬಂತೆ ಹೊಸ ಸ್ನೇಹಿತೆಯರಲ್ಲಿ ಮಾತಾಡುತ್ತ ಕುಳಿತಿದ್ದರು. ಹುಡುಗರೆಲ್ಲ ಹುಡುಗಿಯರ ಸಾಲಿನ ಕಡೆ ತಿರುಗಿ ತಮ್ಮ ಕ್ಲಾಸಿನ 'ಬ್ಯೂಟಿಕ್ವೀನ್' ಯಾರಾಗಬಹುದೆಂದು ಚರ್ಚೆಯಲ್ಲಿ ತೊಡಗಿದ್ದರು. ಮತ್ತೆ ಕೆಲವರು ಹುಡುಗಿಯರೆಲ್ಲ ತಮ್ಮನ್ನೇ ನೋಡುತ್ತಾರೆ ಎಂಬಂತೆ ಎದೆಯುಬ್ಬಿಸಿ ಅತ್ತಿತ್ತ ತಿರುಗುತ್ತಿದ್ದರು.
ಇನ್ನು ಗಟ್ಟಿಯಾಗಿ ಮೂಡದ ಮೀಸೆ, ಹುಡುಗಿಯರ ಮೇಲೆ ಆಸೆಯಿದ್ದರೂ ಕಾಮದ ಸೋಂಕಿಲ್ಲದ ನೋಟ.. ಹೈಸ್ಕೂಲ್ ಮಕ್ಕಳ ತುಂಟಾಟ.. 16 ವರ್ಷದ ನಂತರ ಸ್ವಾತಂತ್ಯ್ರ ಸಿಕ್ಕಹಾಗೆ ಸಂಭ್ರಮಿಸುವ ರೀತಿ.. ಇಂಥ ಹುಡುಗರನ್ನು ನೋಡಲು ಖುಷಿ..
ಪಕ್ಕದಲ್ಲಿ ಕುಮ್ಮಿಗೆ ಹೀಗೆ ನನಗನ್ನಿಸಿದ್ದನ್ನು ಹೇಳಬೇಕೆಂದು ಕೊಂಡರೂ ಏನೋ ಮುಜುಗರ. 'ಅಯ್ಯೋ! ಹುಡುಗರ ಸುಮಿ ಹೀಗೆಲ್ಲ ಅಂದುಕೊಳ್ಲುತ್ತಾರಲ್ಲ' ಎಂದು ಅವಳು ತಿಳಿದುಕೊಂಡು. ಅವಳ ದೃಷ್ಟಿಯಲ್ಲಿ ಹಗುರಾಗಿ ಬಿಡುವ ಆತಂಕದಿಂದ ಸುಮ್ಮನಿದ್ದೆ.
ಹೀಗೆ ಎದುರಾಎದುರು ಹುಡುಗರ ಬಗ್ಗೆ ಆಪ್ತ ಸ್ನೇಹಿತೆಯ ಹತ್ತಿರವೂ ಚರ್ಚಿಸುವಹಾಗಿಲ್ಲ. ಏಕೆಂದರೆ ಹೀಗೆ ಮಾತನಾಡುವವಳನ್ನು ಹುಡುಗರಾದಿಯಾಗಿ ಎಲ್ಲರೂ 'ಚಾಲೂ' ಎಂದೇ ಗುರುತಿಸುತ್ತಾರೆ. ಆದ್ರೂ ಸಾಮಾನ್ಯವಾಗಿ ಎಲ್ಲ ಹುಡುಗಿಯರೂ ನನ್ನ ತರಹವೇ ಹುಡುಗರ ಬಗ್ಗೆ ವಿಚಾರ ಮಾಡುತ್ತಾರಲ್ಲ. ಅದನ್ನು ಹೇಳಿಬಿಟ್ಟರೆ 'ಚಾಲು' ಏಕೆ ಆಗುತ್ತಾರೆ?
ಕುಮ್ಮಿಯ ಪ್ರಕಾರ ಒಂದುವೇಳೆ ಇಷ್ಟಪಡುವುದಾದರೆ ಒಬ್ಬನನ್ನೇ ಇಷ್ಟಪಡಬೇಕು ಮತ್ತು 'ಲವ್' ಮಾಡಬೇಕಂತೆ.. ಅಂದರೆ ಎಲ್ಲವೂ 'ಅವನಿಗೇ ಸಮರ್ಪಣೆ' ಅಂತ. ಇದರ ವಿರುದ್ಧ ಹೋದರೆ ಗ್ಯಾರಂಟಿ ಅವಳಿಗೆ 'ಫ್ಲರ್ಟ್' ಪಟ್ಟ ಕಟ್ಟಿಟ್ಟ ಬುತ್ತಿ.
ನನಗೇಕೋ ಕುಮ್ಮಿಯ ಈ ಮಾತು ಸರಿ ಎನಿಸುತ್ತಿಲ್ಲ. ಇಷ್ಟವೇ ಬೇರೆ; ಇಷ್ಟಪಡಬಹುದು. ಆದರೆ ಒಬ್ಬನ ಪ್ರೀ ತಿ ಮಾಡಬೇಕು. ಆದರೆ ಒಬ್ಬನನ್ನು ಪ್ರೀತಿ ಮಾಡುತ್ತಿದ್ದಾಳೆಂದು ಮತ್ತೊಬ್ಬನನ್ನು ಇಷ್ಟಪಡಬಾರದು ಎನ್ನುವುದು ಯಾವ ನ್ಯಾಯ?
ನನಗನ್ನಿಸಿದಂತೆ ಒಬ್ಬಳು ಹುಡುಗಿ ಒಬ್ಬ ಹುಡುಗನೊಂದಿಗೆ ಎಷ್ಟೇ ಆಳವಾದ ಪ್ರೀತಿಯಲ್ಲಿರಲಿ; ಬೇರೆ ಹುಡುಗರನ್ನು ಇಷ್ಟಪಡದೇ ಹೋಗಲಾರಳು. ಅವಳು ಹೇಳಿಕೊಳ್ಳುವುದಿಲ್ಲ; ಅಷ್ಟೇ. ಹೇಳಿಕೊಂಡರೆ ಆಗಲಿರುವ ಅನಾಹುತದ ಬಗ್ಗೆ ಅವಳು ಯೋಚಿಸಿಯೇ ಸುಮ್ಮನಾಗಿಬಿಡುತ್ತಾಳೆ. ಮುಚ್ಚಿಟ್ಟರೆ ಯಾರಿಗೂ ಗೊತ್ತಾಗುವುದಿಲ್ಲ ಸರಿ; ಆದರೆ ವಿಷಯ ಮಾತ್ರ ಸತ್ಯ ಆಗಿರುವುದಿಲ್ಲವೆ?
ನನಗೆ ಗೊತ್ತು, ಇದನ್ನು ಡೈರಿಯಲ್ಲಲ್ಲದೆ ಇನ್ನೆಲ್ಲೂ ಹೇಳಲಾರೆ. ಹೇಳಿದರೆ ನನಗೂ 'ಫ್ಲರ್ಟ್' ಎನಿಸಿಕೊಳ್ಳುವ ಭಯ!