Saturday, June 26, 2010

ಆಗ ಅರ್ಥವಾಗುತ್ತದೆ ನಾನೆಷ್ಟು ಸರಿ ಎಂದು...


'ಪ್ಯಾಂಟ್ ಹಾಕೊಂಡವರೆಲ್ಲ 'ಫಾಸ್ಟ್'.. ಸೀರೆ ಉಟ್ಟವರೆಲ್ಲ ಸಾಫ್ಟ್. ಜೋರಾಗಿ ನಕ್ಕರೆ ಜಾರಿಣಿ. ತಲೆ ಎತ್ತಿ ನಡೆದರೆ bold, ತಲೆತಗ್ಗಿಸಿ ನಡೆದರೆ Traditional' ಹೀಗೆ ಬ್ರ್ಯಾಂಡ್ ಮಾಡಿಬಿಡುತ್ತಾರೆ. ಜನರು ಯಾಕೆ ಹೀಗೆ? ನನಗಂತೂ ಅರ್ಥವೇ ಆಗುತ್ತಿಲ್ಲ
ಮುಂದೆ...


ಕಾರಣವಿಲ್ಲದೆ ಕೆಲವರು ಇಷ್ಟ ಆಗಿಬಿಡ್ತಾರೆ... ಇನ್ನು ಕೆಲವರನ್ನ ವಿನಾಕಾರಣ ದ್ವೇಷ ಮಾಡ್ತೀವಿ... ಮನಸಿನ ವೈಚಿತ್ರ್ಯವೇ ಹೀಗೆ, ಬುದ್ಧಿ ಕಾರಣನೇ ಇನ್ನು ಹೇಳಿರಲ್ಲ, ಅಷ್ಟರೊಳಗೇ ಮನಸಿಗೆ ನಿರ್ಧಾರ ಮಾಡಿಬಿಟ್ಟಾಗಿರುತ್ತದೆ! ಒಬ್ಬ ವ್ಯಕ್ತಿ ಎದುರಿಗೆ ಬಂದಾಗ ಬಾಯ್ಬಿಡದಿದ್ದರೂ ಅವನ ಬಗೆಗೆ ಏನೋ ಒಂದು ಮನಸಿಗೆ Feel ಆಗಿರುತ್ತದೆ.

ಅವಳ ಹೆಸರು ಈ ಡೈರಿಯೊಳಗೆ ನಾನು ಬರೆದುಕೊಳ್ಳಬಹುದು ಎಂದು ಅವಳನ್ನು ನೋಡಿದಾಗ ಅಂದುಕೊಂಡಿರಲಿಲ್ಲ. ಆದರೆ ಈಗ ನೋಡಿದರೆ ಅವಳ ಬಗ್ಗೆ ಬರೆಯ ಹೊರಟರೆ ಈ ಡೈರಿಯ ಪುಟಗಳು ಸಾಲುವುದಿಲ್ಲ.
ನನಗಿಂತ ಒಂದು ವರ್ಷ. ದೊಡ್ಡವಳು ಅಷ್ಟೇ. ಹಾಸ್ಟೆಲ್‌ನಲ್ಲಿ ನನ್ನ ರೂಮ್ ಪಾರ್ಟ್‌ನರ್. ಸೀದಾ ಸಾದಾ ಹುಡುಗಿ. ಹಾಸ್ಟೆಲ್‌ಗೆ ಕಾಲಿರಿಸಿದಾಕ್ಷಣ ನನ್ನನ್ನು ಬರಮಾಡಿಕೊಂಡವಳೇ ಅವಳು. ನೋಡಿದಾಕ್ಷಣ ಬಹಳ ಇಷ್ಟವಾಗಿಬಿಟ್ಟಳು. ಇಷ್ಟವಾದವರೆಲ್ಲ ಹತ್ತಿರವಾಗುತ್ತಾರೆಂದೇನೂ ಇಲ್ಲ. ಆದರೆ ನಾನು ಅವಳನ್ನು ಇಷ್ಟು ಹಚ್ಚಿಕೊಳ್ಳುತ್ತೇನೆ ಎಂದು ಕೂಡಾ ಊಹಿಸಿರಲಿಲ್ಲ.

ಹಾಸ್ಟೆಲ್‌ಗೆ ಸೇರಿದ ಕೆಲವೇ ದಿನಗಳಲ್ಲಿ ತೀರ ಅಕ್ಕನ ತರಹ ಎನಿಸಿಬಿಟ್ಟಳು. ಬಹುಶಃ ನನ್ನನ್ನು ಒಂಥರಾ ಪುಟ್ಟ ಮಗುವಿನಂತೆ ನೋಡಿಕೊಳ್ಳುವುದು, ನನ್ನ ತಪ್ಪನ್ನು ಪ್ರೀತಿಯಿಂದ ತಿದ್ದುವುದು ಹೀಗೆನಿಸಲು ಕಾರಣವಿರಬೇಕು. ಎಷ್ಟು ವಿಚಿತ್ರವೆನಿಸುತ್ತದೆ... ಅವಳ್ಯಾರೋ, ನಾನ್ಯಾರೋ...

ಆದರೆ ಒಡಹುಟ್ಟಿದ ಅಕ್ಕ-ತಂಗಿಯರಂತೆ ನಮ್ಮ ಒಡನಾಟ... ಬೆಚ್ಚನೆಯ ಮನೆಯಿಂದ ದೂರವಿರುವುದರಿಂದ ಇಂತಹ ಸಂಬಂಧಗಳೇ ನಮಗೆ ಆಸರೆ ಎನಿಸುತ್ತವೆ. ನಮ್ಮ ನಡುವೆ ಗಾಢ ಆತ್ಮೀಯತೆ ಬೆಳೆಯಲು ಕಾರಣವಾಗುತ್ತವೆ. ಮೊದಲಾದರೋ, ಸ್ವಲ್ಪ ನೆಗಡಿಯಾದರೂ ತನ್ನ ಕೆಲಸಗಳನ್ನೆಲ್ಲ ಬದಿಗೊತ್ತಿ ಔಷಧೋಪಚಾರ ಮಾಡುವ ಅಮ್ಮನಿದ್ದಳು. ಆದರೆ ಇಲ್ಲಿ? ಎಲ್ಲರಿಗೂ ಅವರದೇ ಕೆಲಸ.
ಹಾಸ್ಟೆಲ್ ಸೇರಿದ ಹೊಸದರಲ್ಲಿ ಒಮ್ಮೊಮ್ಮೆ ಈ ಕಾಲೇಜು- ಗೀಲೇಜು ಏನೂ ಬೇಡ. ಎಲ್ಲ ಬಿಟ್ಟು ಮನೆಗೆ ವಾಪಾಸ್ ಹೋಗಿಬಿಡಲೆ ಎನಿಸುತ್ತಿತ್ತು.

ಆದರೆ ಅಕ್ಕ ಸಿಕ್ಕ ಮೇಲೆ ಮನೆಯನ್ನು ಮೊದಲಿನಷ್ಟು miss ಮಾಡಿಕೊಳ್ಳುತ್ತಿಲ್ಲ. ಬಹಳ ಚೆನ್ನಾಗಿದೆ ಈ ಹಾಸ್ಟೆಲ್ ಜೀವನ... ಆದರೆ ನನಗೆ ಒಂದೇ ಒಂದು ಪ್ರಾಬ್ಲಂ ಎಂದರೆ ನನ್ನ ಹಠ. ನನ್ನ ಆಸೆ, ಇಷ್ಟಕ್ಕೆ ಅಪ್ಪ-ಅಮ್ಮ ನೀರೆರಚಿದವರಲ್ಲ. ಆದರೆ ಇಲ್ಲಿ ನನ್ನ ಮಾತನ್ನು ಕೇಳುವವರೇ ಇಲ್ಲ! ನನ್ನ ಮನೆಯಲ್ಲಿ 'ಮನಮಾನಿ' ನಡೆಸಿದಂತೆ ಇಲ್ಲೂ ನಡೆಸುವುದು ಕಷ್ಟವಾಗಿದೆ. ನಾನು ಮೊದಲು ಸ್ನಾನ ಮಾಡುತ್ತೇನೆ ಎಂದರೆ ನಾನೇ ಮಾಡಬೇಕು. ಬೇರೆ ಯಾರಾದರೂ ಹೋದರೆ ಕೋಪ ನೆತ್ತಿಗೇರಿಬಿಡುತ್ತಿತ್ತು.

ಇದರಿಂದ ಹಾಸ್ಟೆಲ್‌ನಲ್ಲಿ 'ಜಗಳಗಂಟಿ' ಎಂದೂ ಹೇಳಿಸಿಕೊಂಡಾಗಿತ್ತು. ಆದರೆ ಅಕ್ಕ ಸರಿಯಾಗಿ ಬುದ್ಧಿ ಮಾತು ಹೇಳಿದಳು. ಇಲ್ಲದಿದ್ದರೆ ಇನ್ನೂ ಏನೇನು ಹಣೆಪಟ್ಟಿ ಪಡೆದುಕೊಳ್ಳುತ್ತಿದ್ದೆನೊ... ಅಪ್ಪ-ಅಮ್ಮ ನಾಲ್ಕು ಜನರೊಂದಿಗೆ ಹೇಗೆ ಹೊಂದಿಕೊಂಡು ಹೋಗಬೇಕು ಎನ್ನುವುದನ್ನು ಕಲಿಸುತ್ತಾರೆ. ಆದರೆ 'ಒಬ್ಬಳೇ ಮಗಳು' ಎಂದು ಹೇಳಿದಂತೆ ಕುಣಿಯುವುದು ನಮಗೆ ದೊಡ್ಡವರಾದ ಮೇಲೆ ಕಷ್ಟ ನೀಡುತ್ತದೆ. ಮನೆಯಿಂದ ಹೊರಗೆ ಬಂದ ಮೇಲೆಯೇ ಗೊತ್ತಾಗುತ್ತಿರುವುದು ನಾನು ಎಷ್ಟು wrong ಎಂದು.

ಮನೆಯಲ್ಲಿ ನಾನು ಮಾಡಿದ್ದಕ್ಕೆ ಎದುರಾಡುವವರಿಲ್ಲವಾದ್ದರಿಂದ ನಾನು ಮಾಡಿದ್ದೆಲ್ಲ ನನ್ನ ದೃಷ್ಟಿಯಲ್ಲಿ ಸರಿಯಾಗಿಯೇ ಇತ್ತು. ಆದರೆ ಹಾಸ್ಟೆಲ್‌ನಲ್ಲಿ ನಮ್ಮ ವಯಸ್ಸಿನ ನಾಲ್ಕು ಹುಡುಗಿಯರೊಂದಿಗೆ ಬೆರೆಯುತ್ತೇವೆ. ಸ್ವಾಭಾವಿಕವಾಗಿಯೇ ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳುತ್ತೇವೆ. ಆಗ ಅರ್ಥವಾಗುತ್ತದೆ ನಾನೆ? ಸರಿ ಎಂದು... - ಸುಮಿ

Saturday, June 19, 2010

ಜನರು ಯಾಕೆ ಹೀಗೆ? ನನಗಂತೂ ಅರ್ಥವೇ ಆಗುತ್ತಿಲ್ಲ

ಅಜ್ಜ ತನ್ನ ನೀಳ ಬೆರಳೆತ್ತಿ ಅಮ್ಮನೆಡೆಗೆ ತೋರಿದರೆ ಸಾಕು; ಅಮ್ಮ ಸುಮ್ಮನೆ ಒಳಹೋಗುತ್ತಿದ್ದರು. ಹಾಗಾಗಿ ಅಜ್ಜ ನನಗೊಬ್ಬ ಆಪದ್ಭಾಂದವನಾಗಿದ್ದ. ನನ್ನ ಮೊಮ್ಮಗಳನ್ನು ದೊಡ್ಡ ಆಫೀಸರ್ ಮಾಡುತ್ತೇನೆ ಎಂದು ಬಂದವರೆದುರು ಹೊಗಳಿ ನನ್ನ ಅಟ್ಟಕೇರಿಸುತ್ತಿದ್ದ ನನ್ನಜ್ಜ... ಸುಳ್ಳೆ ಸುಳ್ಳೆ ಕಥೆ ಹೇಳಿ ತಾನೂ ನಕ್ಕು ನನ್ನನ್ನು ನಗಿಸುತ್ತಿದ್ದ ಅಜ್ಜ, ನನ್ನನ್ನು ನಾನು 'ರಾಜಕುಮಾರಿ' ಎಂದೇ ಭಾವಿಸುವಂತೆ ಮಾಡಿದ ನನ್ನಜ್ಜ....
ಮುಂದೆ...

ಕೆಲವೊಮ್ಮೆ ನನಗನಿಸುತ್ತದೆ, ಕೆಲವು ಜನರು ಎಷ್ಟೇ ಬುದ್ಧಿವಂತರಿರಲಿ, ಎಷ್ಟೇ ಉತ್ಕೃಷ್ಟ ಶಿಕ್ಷಣ ಪಡೆದಿರಲಿ ಕೀಳು ಪ್ರವೃತ್ತಿಯನ್ನು ಬಿಡಲಾರರು. ಉನ್ನತವಾಗಿ ವಿಚಾರ ಮಾಡಲಾರರು. ಸಂಕುಚಿತ ಮನೋಭಾವದವರಾಗಿ, ಆಚೀಚಿನವರ ಬಗ್ಗೆ ಕೆಳಮಟ್ಟದಲ್ಲಿ ವಿಚಾರ ಮಾಡುತ್ತ ತಾವೂ ನೆಮ್ಮದಿಯಾಗಿರದೇ ಉಳಿವರನ್ನೂ ನೆಮ್ಮದಿಯಾಗಿ ಇರಲು ಬಿಡುವುದಿಲ್ಲ.

ಬಹುಶಃ ಎಲ್ಲರಿಗೂ ಇಂಥವರು ಕಾಡುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ ವಯಸ್ಸಿಗೆ ಬಂದ ಹುಡುಗಿಯರನೇಕರು ಇಂಥ ಕಟುಕಿ ಮಾತನಾಡುವ ಕಟುಕರಿಂದ ಕುಟುಕಿಸಿಕೊಳ್ಳುತ್ತಾರೆ. ಒಮ್ಮೊಮ್ಮೆ ಈ ಕೊಂಕು ನುಡಿಯುವವರ ಕಾಟ ಎಲ್ಲಿಯವರೆಗಿರುತ್ತದೆ ಎಂದರೆ, ಆ ಹುಡುಗಿಯರು ಆತ್ಮಹತ್ಯೆಯ ತನಕ ಯೋಚಿಸಬೇಕು!

ನನ್ನ ಹಿಂದಿನ ಡೆಸ್ಕ್‌ನಲ್ಲಿ ಕುಳಿತುಕೊಳ್ಳುತ್ತಿದ್ದ ವೀಣಾ...ಏನು ತಪ್ಪು ಮಾಡಿದ್ದಳು ಅವಳು!? ತಾನು ಮಾಡದ ತಪ್ಪಿಗಾಗಿ ಅವಳಿಗೇಕೆ ಶಿಕ್ಷೆ?! ಸರಳವಾಗಿ ನಗುತ್ತ, ಎಲ್ಲರ ಜೊತೆಯೂ ಬೆರೆತರೆ ತಪ್ಪೆ? ಅಥವಾ ನಾಲ್ಕು ಜನರ ನಡುವೆ ಎದ್ದು ಕಾಣುವಂತೆ ಸುಮ್ದರವಾಗಿರುವುದು ತಪ್ಪೇ? ಅಥವಾ ಪ್ಯಾಂಟ್-ಶರ್ಟ್ ಹಾಕಿಕೊಂಡು ಬಂದಿದ್ದೇ ತಪ್ಪಾ? ಅಶ್ಲೀಲವಾಗಿ ಅವಳೆನೂ ಡ್ರೆಸ್ ಮಾಡ್ಕೋತಿರಲಿಲ್ಲ. ಆದರೂ ಅವಳು ಹುಡುಗಿಯರಾದಿಯಾಗಿ ಎಲ್ಲರ ಹರಿತ ದೃಷ್ಟಿಗೆ ಗ್ರಾಸವಾಗಿದ್ದಳು.

ಕಾಲೇಜಿಗೆ ಬಂದ ಕೆಲವೇ ದಿನಗಳಲ್ಲಿ ಅವಳ ಬಗ್ಗೆ ಅಪಪ್ರಚಾರ ಪ್ರಾರಂಭವಾಗಿತ್ತು. "ನಿನಗೆ ಗೊತ್ತಾ, ಅವಳ ಅಪ್ಪ-ಅಮ್ಮ ಎಷ್ಟು ಒಳ್ಳೆಯವರಂತೆ ಗೊತ್ತಾ? ಆದರೂ ಇವಳನ್ನು ನೋಡು ಹೇಗೆ ಆಡ್ತಾಳೆ ಅಂತ! ಅಂತ ಗೆಳತಿ ಅನ್ನಿಸಿಕೊಂಡವರೇ ಅವಳ ಬೆನ್ನ ಹಿಂದೆ ಮಾತನಾಡಿಕೊಳ್ಳುತ್ತಿದ್ದರು. ಈ ಹುಡುಗಿಯರು ಅವಳ ಬಗ್ಗೆ ಆಡಿಕೊಂಡಷ್ಟು ಕೆಟ್ಟದಾಗಿ ಹುಡುಗರೂ ಹೇಳುತ್ತಿರಲಿಲ್ಲ!

ಯಾರೋ ಅವಳು 'ಫಾಸ್ಟ್' ಎಂದು ಹಬ್ಬಿಸಿದ ಸುದ್ದಿ ಕಾಲೇಜ್ ಕ್ಯಾಂಪಸ್ ದಾಟಿ ಸುತ್ತಮುತ್ತಲೂ ಹರಡಿತ್ತು. ರಸ್ತೆಯಲ್ಲಿ ಜನರು ಅವಳನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಹೋಯಿತು. ಅವಳು ಕಾಲೇಜಿಗೆ ಬರುವಾಗ ತಲೆತಗ್ಗಿಸಿಕೊಂಡು ಬರುತ್ತಿದ್ದಳು. ಮೊದಲೆಲ್ಲ ಚೆನ್ನಾಗಿಯೇ ಮಾತನಾಡುತ್ತಿದ್ದವಳು ಈಗ ಯಾರ ಜೊತೆಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಆದರೂ ಸುದ್ದಿ ಹರಡಿಸುವವರ ದಾಹವಿನ್ನೂ ತೀರಿರಲಿಲ್ಲ.

ಆ ಚಿಕ್ಕ ಊರಿನಲ್ಲಿ ಸುದ್ದಿಯೊಂದು ಹರಡಿದರೆ ಸುಮಾರು ಒಂದು ತಿಂಗಳು ಚಾಲ್ತಿಯಲ್ಲಿರುತ್ತದೆ. ಇನ್ನು ಇಂಥ ಸುದ್ದಿ ಸಿಕ್ಕರಂತೂ ಕೇಳುವುದೇ ಬೇಡ. ಅವಳಿಗೆ ಈ ಹಿಂಸೆ ಎಷ್ಟು ಹೆಚ್ಚಾಯಿತೆಂದರೆ ಒಂದು ದಿನ ಕಾಲೇಜನ್ನೇ ಬಿಟ್ಟು ಹೋದಳು. ಎಲ್ಲಿ ಹೋದಳು ಎಂದು ಯಾರಿಗೂ ಗೊತ್ತಿಲ್ಲ. ಆಡಿಕೊಳ್ಳುವವರು ಮಾತ್ರ "ಯಾವನೋ ಒಬ್ಬನ ಜೊತೆ ಇರುವುದನ್ನು ಪ್ರಿನ್ಸಿಪಾಲರೇ ಸ್ವತಃ ನೋಡಿದರಂತೆ. ಆದ್ದರಿಂದ ಡಿಬಾರ್ ಮಾಡಿದರಂತೆ..." ಹೀಗೆ ಒಬ್ಬೊಬ್ಬರಿಗೆ ತೋಚಿದಂತೆ ಒಂದೊಂದು ಸುದ್ದಿಗಳು...

ಆದರೆ ನೈಜ ಸತ್ಯ ಯಾರಿಗೂ ಗೊತ್ತಿಲ್ಲ; ಅವರಿಗೆ ಅದು ಬೇಡ ಕೂಡ. ರೋಚಕವಾದ ಸುಳ್ಳು ಸುದ್ದಿ ಇರುವಾಗ ಸಪ್ಪೆ ಸತ್ಯ ಯಾರಿಗೆ ಬೇಕು? ಅಷ್ಟಕ್ಕೂ ಸತ್ಯ ವಿಷಯದ ಅಗತ್ಯ ಯಾರಿಗೆ ಇದೆ. ಅವರಿಗೆ ಬಾಯಿಯಲ್ಲಿ ಹಾಕಿಕೊಂಡು ಅಗೆಯಲು ಒಂದು ಸುದ್ದಿ ಬೇಕು ಅಷ್ಟೇ?. ನನಗೇನೂ ಅವಳು ಅಂತರಂಗ ಹಂಚಿಕೊಳ್ಳುವಷ್ಟು ಹತ್ತಿರದ ಗೆಳತಿಯಲ್ಲ. ಆದರೆ ಅವಳನ್ನು ನೋಡಿದರೆ ನಿಜಕ್ಕೂ ಕನಿಕರವಾಗುತ್ತದೆ.

'ಪ್ಯಾಂಟ್ ಹಾಕೊಂಡವರೆಲ್ಲ 'ಫಾಸ್ಟ್'.. ಸೀರೆ ಉಟ್ಟವರೆಲ್ಲ ಸಾಫ್ಟ್. ಜೋರಾಗಿ ನಕ್ಕರೆ ಜಾರಿಣಿ. ತಲೆ ಎತ್ತಿ ನಡೆದರೆ bold, ತಲೆತಗ್ಗಿಸಿ ನಡೆದರೆ Traditional'ಹೀಗೆ ಬ್ರ್ಯಾಂಡ್ ಮಾಡಿಬಿಡುತ್ತಾರೆ. ಜನರು ಯಾಕೆ ಹೀಗೆ? ನನಗಂತೂ ಅರ್ಥವೇ ಆಗುತ್ತಿಲ್ಲ...- ಸುಮಿ

Saturday, June 12, 2010

ಅಜ್ಜ... ನನಗೆ ನೀನು ಬೇಕಜ್ಜ...


ನನಗನ್ನಿಸಿದಂತೆ ಒಬ್ಬಳು ಹುಡುಗಿ ಒಬ್ಬ ಹುಡುಗನೊಂದಿಗೆಎಕೆ? ಆಳವಾದ ಪ್ರೀತಿಯಲ್ಲಿರಲಿ; ಬೇರೆ ಹುಡುಗರನ್ನು ಇಷ್ಟ ಪಡದೇ ಹೋಗಲಾರಳು. ಅವಳು ಹೇಳಿಕೊಳ್ಳುವುದಿಲ್ಲ;

ಅಷ್ಟೇ.. ಹೇಳಿಕೊಂಡರೆ ಆಗಲಿರುವ ಅನಾಹುತದ ಬಗ್ಗೆ ಅವಳು ಯೋಚಿಸಿಯೇ ಸುಮ್ಮನಾಗಿಬಿಡುತ್ತಾಳೆ. ಮುಚ್ಚಿಟ್ಟರೆ ಯಾರಿಗೂ ಗೊತ್ತಾಗುವುದಿಲ್ಲ
ಸರಿ; ಆದರೆ ವಿಷಯ ಮಾತ್ರ ಸತ್ಯ ಆಗಿರುವುದಿಲ್ಲವೆ? ನನಗೆ ಗೊತ್ತು, ಇದನ್ನು ಡೈರಿಯಲ್ಲಲ್ಲದೆ ಇನ್ನೆಲ್ಲೂ ಹೇಳಲಾರೆ. ಹೇಳಿದರೆ ನನಗೂ 'ಫ್ಲರ್ಟ್ ಎನಿಸಿಕೊಳ್ಳುವ ಭಯ!

ಮುಂದಕ್ಕೆ...

ಅಪ್ಪನ ಮುಖ ದುಃಖದಿಂದ ಕಪ್ಪಿಟ್ಟಿತ್ತು... ನಾನೆಂದೂ ಈ ಸ್ಥಿತಿಯಲ್ಲಿ ಅಪ್ಪನನ್ನು ನೋಡಿಯೇ ಇರಲಿಲ್ಲ. ನನ್ನನ್ನು ಆದಷ್ಟು ಬೇಗನೆ ಕರೆದುಕೊಂಡು ಹೋಗಲು ಓಡಿ ಬಂದಿದ್ದರು. ಕಾಲೇಜಿನ ಹತ್ತಿರ."ಪುಟ್ಟಿ ಅಜ್ಜನಿಗೆ ಸಿರಿಯಸ್ಸು... ಬಾ ಮನೆಗೆ" ಅಷ್ಟೇ ನನ್ನೊಡನೆ ಅವರಾಡಿದ್ದ ಮಾತು. ಸರ್ ಹತ್ತಿರ ಅಪ್ಪ ಅದಾಗಲೇ ಮಾತನಾಡಿದ್ದಂತಿತ್ತು. ಬ್ಯಾಗ್ ಕೈಗೆತ್ತಿಕೊಂಡವಳೇ ಅಪ್ಪನ ಬೈಕ್ ಏರಿದ್ದೆ.

ನನಗೇನೂ ವಿಚಾರ ಮಾಡಲು ತೋಚುತ್ತಿರಲಿಲ್ಲ..."ಅಜ್ಜನಿಗೆಸೀರಿಯಸ್" ಎನ್ನುವ ಅಪ್ಪನ ಧ್ವನಿಯೇ ಕಿವಿಯಲ್ಲಿ ಗುಂಯ್‌ಗುಡುತ್ತಿತ್ತು. ವಯಸ್ಸಾದ ಕಾರಣದಿಂದ ಮತ್ತು ಸತತವಾಗಿ ಸೇದುತ್ತಿದ್ದ ಬೀಡಿಯಿಂದಾಗಿ ಕೆಮ್ಮು-ದಮ್ಮು ಸ್ವಲ್ಪ ಇದ್ದರೂ "ಸೀರಿಯಸ್" ಆಗುವಂತಹ ಯಾವುದೇ ಖಾಯಿಲೆ ಇರಲಿಲ್ಲ ನನ್ನಜ್ಜನಿಗೆ. ಆದರೆ ಅದ್ಹೇಗೆ ಒಂದೇ ಸಲಕ್ಕೆ ಅಜ್ಜನಿಗೆ ಈ ರೀತಿಯಾಯಿತೋ...

ನಾನು ಮನೆ ತಲುಪುವಷ್ಟವರಲ್ಲಿ ಅತ್ತೆ-ಮಾವಂದಿರು ಎಲ್ಲ ಅಜ್ಜನ ಸುತ್ತ ಕುಳಿತಿದ್ದರು.. ಅತ್ತೆಯಂದಿರು ಸೆರಗನ್ನು ಬಾಯಿಗಡ್ಡ ಹಿಡಿದು ಮುಸಿ- ಮುಸಿ ಅಳುತ್ತಿದ್ದರು. ಆರಡಿ ಎತ್ತರದ ನನ್ನಜ್ಜ ನಿಸ್ತೇಜನವಾಗಿ ಹಾಸಿಗೆ ಮೇಲೆ ಮಲಗಿದ್ದ. ಗೌರವ ವರ್ಣದ ಸುಂದರ ನನ್ನಜ್ಜನ ಮುಖ ಬಾಡಿಹೋಗಿತ್ತು. ಏನು ಹೇಳಲು ಪ್ರಯತ್ನಿಸುತ್ತಿದ್ದನೋ ಅಥವಾ ಹಾರಿ ಹೋಗಲಿರುವ ಉಸಿರನ್ನು ಹಿಡಿದಿಡುವ ಪ್ರಯತ್ನವೋ, ಆಗಾಗ ಬಾಯಿ ತೆರೆಯುತ್ತಿದ್ದ... ನನಗೆ ದುಃಖಕ್ಕಿಂತ ಹೆಚ್ಚು ಭಯವಾಗುತ್ತಿತ್ತು. ಅಪ್ಪ ನಿಧಾನವಾಗಿ ನನ್ನ ಕೈಹಿಡಿದುಕೊಂಡು ಅಜ್ಜನ ಹತ್ತಿರ ಕರೆದುಕೊಂಡು ಹೋದರು.

"ಅಪ್ಪಯ್ಯ, ನೋಡು ನಿನ್ನ ಮೊಮ್ಮಗಳು ಸುಮಿ ಬಂದಿದ್ದಾಳೆ ಎಂದು ಜೋರಾಗಿಯೇ ಹೇಳಿದರು. ಅರೆಕ್ಷಣ ಕತ್ತನ್ನು ಹೊರಳಿಸಿ ನೋಡಿದ್ದ ಅಜ್ಜ. ..ಅಪ್ಪ ಹೇಳಿದ್ದು ಕೇಳಿಸಿತೋ ಇಲ್ಲವೋ, ಅವನಿಗೆ ನನ್ನ ಗುರುತು ಸಿಕ್ಕಿತೋ ಇಲ್ಲವೋ ನನಗಂತೂ ಅರ್ಥವಾಗಲಿಲ್ಲ. ಅಜ್ಜನದು ಅದೇ ಕೊನೆಯ ನೋಟ... ಅಜ್ಜನ ತಲೆಯ ಪಕ್ಕ ಕುಳಿತು ಬಾಯಿಗೆ ನೀರುಹಾಕುತ್ತಲೇ ಇದ್ದ ಮಾವ ಅಜ್ಜನ ತುಟಿಯನ್ನು ಮೀರಿ ಹರಿಯುತ್ತಿದ್ದ ನೀರನ್ನು ನೋಡಿ ಅಜ್ಜ ಇನ್ನಿಲ್ಲವೆಂದ!

ಅಯ್ಯೋ! ಅಜ್ಜ... ನನ್ನಜ್ಜ.... ನನ್ನನ್ನು ಭುಜದ ಮೇಲೆ ಕುಳಿಸಿಕೊಂಡು ಊರೆಲ್ಲ ಮೆರೆಸಿದ ಅಜ್ಜ.. ಭಾವನೆಗಳ, ವಾಸ್ತವತೆಯ, ದುಃಖದ ಒತ್ತಡ ತಾಳಲಾಗದೆ ಕಂಪಿಸುತ್ತಿದ್ದೆ. ಅಪ್ಪನಿಗೆ ನನ್ನ ಸ್ಥಿತಿ ಕಂಡು ಕನಿಕರಕ್ಕಿಂತ ಹೆಚ್ಚು ಭಯವಾಗಿರಬೇಕು, ಓಡಿ ಬಂದು ನನ್ನನ್ನು ತಬ್ಬಿಕೊಂಡರು. 'ಅಜ್ಜ' ಎಂದು ಚೀರಿ ಅಪ್ಪನನ್ನು ಹಿಡಿದುಕೊಂಡು ಹಿಸ್ಟೀರಿಯ ಬಂದವಳಂತೆ ಅತ್ತೆ... ಅಪ್ಪ ಏನೇನೋ ಸಮಾಧಾನ ಮಾಡುತ್ತಿದ್ದರು. ಒಂದೂ ನನ್ನ ಕಿವಿ ಮುಟ್ಟುತ್ತಿರಲಿಲ್ಲ. ಮೈಯಲ್ಲ ಹೊತ್ತಿ ಉರಿದ ಭಾವನೆ...

ನಾನು ಅಜ್ಜನ ಜೊತೆ ಕಳೆದ ಕ್ಷಣಗಳೆಲ್ಲವೂ ಆ ಕ್ಷಣಾರ್ಧದಲ್ಲಿ ನನ್ನ ಮೇಲೆ ಧಾಳಿಯಿಟ್ಟಿದ್ದವು... ಒಂದೊಂದಾಗಿ ನೆನಪು ಮಿದುಳಿನಲ್ಲಿ ಹಾದು ಹೋದರೆ ಏನೂ ಅನ್ನಿಸದು. ಆದರೆ ಆ ನೆನಪುಗಳೆಲ್ಲ ಒಮ್ಮೆಲೇ ನುಗ್ಗಿಬಿಟ್ಟರೆ ನಿಭಾಯಿಸಿಕೊಳ್ಳುವುದು ಅಸಾಧ್ಯ. ನನ್ನ ಅಜ್ಜನ ಬಾಂಧವ್ಯವೇ ಹಾಗಿತ್ತು....

ಅಜ್ಜನಿಗೆ ನಾವು ಐದು ಜನ ಮೊಮ್ಮಕ್ಕಳಿದ್ದರೂ ನನ್ನನ್ನು ಕಂಡರೆ ಹೆಚ್ಚು ಪ್ರೀತಿ. ಯಾಕೆಂದರೆ ಚಿಕ್ಕವಳಿರುವಾಗ ಎಲ್ಲರಿಗಿಂತ ಹೆಚ್ಚು ಸಮಯವನ್ನು ಕಳೆಯುವುದೇ ಅಜ್ಜನೊಂದಿಗಾಗಿತ್ತು. ಅವನ ಬೀಡಿ ಮತ್ತು ಮೈನೋವಿಗಾಗಿ ಸವರಿಕೊಳ್ಳುತ್ತಿದ್ದ ಅಯೋಡೆಕ್ಸ್ ನ ವಾಸನೆ ಸೇರಿ ವಿಚಿತ್ರ ಪರಿಮಳ, ಉದ್ದನೆಯ ನಿಲುವಂಗಿ. ಫಳಫಳ ಹೊಳೆಯುವ ತಲೆ... ಎಲ್ಲ ನನಗಿಷ್ಟವಾಗಿತ್ತು.

ಅಜ್ಜನಿಗೆ ಸ್ವಲ್ಪ ಕಾಲುನೋವು ಆದರೂ ಸಾಕು "ಮಗ ಸ್ವಲ್ಪ ಕಾಲು ತಿಕ್ಕಿಕೊಡೆ ಎನ್ನುತ್ತಿದ್ದ. ಎಲ್ಲರೆದುರೂ "ನನ್ನ ಮೊಮ್ಮಗಳ ಕೈಗುಣ ಬಹಳ ಚೆನ್ನಾಗಿದೆ. ನಿನ್ನೆ ನನ್ನ ಕಾಲು ತಿಕ್ಕಿಕೊಟ್ಟಳು, ಕ್ಷಣಾರ್ಧದಲ್ಲಿ ನನ್ನ ನೋವು ಮಾಯ ಎಂದು ಹೊಗಳುತ್ತಿದ್ದ. ಅಜ್ಜನಿಗೆ ಬೆನ್ನುನೋವಾದಾಗ ಬ್ಯಾಲೆನ್ಸ್ ಮಾಡುತ್ತ ಅವನ ಬೆನ್ನ ಮೇಲೆ ಓಡಾಡುವುದೇ ಒಂದು ಮೋಜಾಗಿತ್ತು ನನಗೆ. ಅಮ್ಮ ನನಗೆ ಸ್ವಲ್ಪ ಬೈಯಲು ಬಂದರೂ ಸಾಕು ಓಡಿಹೋಗಿ ಅಜ್ಜನ ಬೆನ್ನಹಿಂದೆ ಸೇರುತ್ತಿದ್ದೆ. ಅಜ್ಜ ತನ್ನ ನೀಳ ಬೆರಳೆತ್ತಿ ಅಮ್ಮನೆಡೆಗೆ ತೋರಿದರೆ ಸಾಕು; ಅಮ್ಮ ಸುಮ್ಮನೆ ಒಳಹೋಗುತ್ತಿದ್ದರು.

ಹಾಗಾಗಿ ಅಜ್ಜ ನನಗೊಬ್ಬ ಆಪದ್ಭಾಂದವನಾಗಿದ್ದ. ನನ್ನ ಮೊಮ್ಮಗಳನ್ನು ದೊಡ್ಡ ಆಫೀಸರ್ ಮಾಡುತ್ತೇನೆ ಎಂದು ಬಂದವರೆದುರು ಹೊಗಳಿ ನನ್ನ ಅಟ್ಟಕೇರಿಸುತ್ತಿದ್ದ ನನ್ನಜ್ಜ... ಸುಳ್ಳೆ ಸುಳ್ಳೆ ಕಥೆ ಹೇಳಿ ತಾನೂ ನಕ್ಕು ನನ್ನನ್ನು ನಗಿಸುತ್ತಿದ್ದ ಅಜ್ಜ, ನನ್ನನ್ನು ನಾನು 'ರಾಜಕುಮಾರಿ ಎಂದೇ ಭಾವಿಸುವಂತೆ ಮಾಡಿದ ನನ್ನಜ್ಜ....

ಎಲ್ಲಿ ಹೋದೆ ಅಜ್ಜ... ಬಾ ಅಜ್ಜ.... ಅಮ್ಮ ಹೊಡೆಯಲು ಬಂದರೆ ಎಲ್ಲಿ ಬಚ್ಚಿಟ್ಟುಕೊಳ್ಳಲಿ...