Saturday, March 15, 2008

ಪಿಯೂಸಿ ಎಂಬ ರೋಮಾಂಚನದ ಹೊಸ್ತಿಲಲ್ಲಿ ನಿಂತು...


ಪರೀಕ್ಷೆಗಳೆಲ್ಲ ಮುಗಿದಿದೆ. ಒಂದು ಕಡೆ ಸಂತೋಷವಾದರೆ ಇನ್ನೊಂದು ಕಡೆ ದುಃಖ; ಪ್ರೀತಿಯ ಶಾಲೆ ಬಿಟ್ಟುಹೋಗುವ ದುಃಖ... ನೆಲ್ಲಿಕಾಯಿಯಿಂದ ಹಿಡಿದು ಕಣ್ಣೀರತನಕ ಹಂಚಿಕೊಂಡ ಸ್ನೇಹಿತರನ್ನು ಬಿಟ್ಟುಹೋಗುವ ನೋವು.

ಸೊಕ್ಕಿನ ಸೋಡಾಬುಡ್ಡಿ ಸ್ಮಿತಾಳಿಂದ ಹಿಡಿದು 'ದೊಡ್ಡಪ್ಪ' ಸರ್ ತನಕ ಎಲ್ಲರ ಹತ್ತಿರವೂ ಆಟೋಗ್ರಾಫ್, ಸ್ಲ್ಯಾಮ್‌ಗಳನ್ನು ಹಾಕಿಸಿಕೊಂಡಾಗಿತ್ತು. ಸೆಂಡ್‌ ಆಫ್ ಕೂಡಾ ಮುಗಿದಿತ್ತು.

ಸೆಂಡ್‌ ಆಫ್ ದಿನ ಎಲ್ಲರ ಕಣ್ಣಲ್ಲೂ ನೀರು. ಮಾತು ಯಾರಿಗೂ ಬೇಡವಾಗಿತ್ತು. ಫೋಟೋ ಸೆಶನ್‌ನಲ್ಲಿ ಬಾರದಿದ್ದ ನಗು ತರಿಸಿಕೊಂಡು ಗ್ರೂಪ್ ಫೋಟೋ ತೆಗೆಸಿಕೊಂಡೂ ಆಗಿತ್ತು. ಎಲ್ಲರಿಗೂ ಮುಂದಿನ ಯೋಚನೆ...

ಮನೆ-ಶಾಲೆ ಎಂದು ಪುಟ್ಟ ಪ್ರಪಂಚದೊಳಗಿದ್ದ ನಾವೆಲ್ಲ ಕಾಲೇಜು ಎನ್ನುವ ಹೊರ ಜಗತ್ತಿಗೆ ಕಾಲಿಡಲಿದ್ದೇವೆ. ಏನೇನು ಅನುಭವಗಳು, ಸವಾಲು ಸಮಸ್ಯೆಗಳನ್ನು ಎದುರಿಸಲಿದ್ದೇವೋ ಏನೋ... ಪರಿಸ್ಥಿತಿಗಳು ನಮ್ಮನ್ನು ಹೇಗೇಗೆ ಬದಲಾಯಿಸುವುದೋ ಏನೋ... ಹತ್ತಿರದಲ್ಲೆಲ್ಲೂ ಕಾಲೇಜು ಇಲ್ಲದಿದ್ದುದರಿಂದ ಮನೆ ಬಿಟ್ಟು, ಅಪ್ಪ-ಅಮ್ಮನನ್ನು ಬಿಟ್ಟು ದೂರ ಇರುವುದು ಅನಿವಾರ್ಯ. ಹಗಲು-ರಾತ್ರಿ ಇದೇ ಚಿಂತೆ. ಮನೆ ಬಿಟ್ಟು ಹೇಗಿರಲಿ? ಕುಮ್ಮಿ, ಪಕ್ಕಿ, ಪಚ್ಚಿ, ಮಂಗಿ... ಇವರನ್ನೆಲ್ಲ ಬಿಟ್ಟು ಹೇಗಿರಲಿ? ಕಾಲೇಜು ಜೀವನದಲ್ಲಿ ಎಂತೆಂಥವರು ಸಿಗುತ್ತಾರೋ....


ಪ್ರತಿವಾರ ಅಮ್ಮನ ಕೈಯ ತಲೆಸ್ನಾನ, ಅಪ್ಪನ ಹೊಟ್ಟೆಯ ಮೇಲೆ ತಲೆಯಿರಿಸಿಕೊಂಡು ಟಿ.ವಿ ನೋಡುವ ಖುಷಿ- ಇವು ಯಾವುದೂ ಇರದು. ನನಗೆ ಗೊತ್ತು, ಇಷ್ಟು ದಿನ ಮನೆಯಲ್ಲಿ ಇದ್ದುದ್ದೇ ಬಂತು; ಇನ್ನು ಮುಂದೆ ವರ್ಷಾನುಗಟ್ಟಲೆ ನನ್ನ ಮನೆಯಲ್ಲಿ ಇರುವ ಅವಕಾಶ ಸಿಗದೆನೋ. ವಿದ್ಯಾಭ್ಯಾಸಕ್ಕೆಂದು ಮನೆ ಬಿಟ್ಟ ಹುಡುಗಿಗೆ; ಕಲಿತು ಮುಗಿದ ತಕ್ಷಣ ಮದುವೆ ಮಾಡಿ ಮತ್ತೊಂದು ಮನೆಗೆ ಕಳುಹಿಸಿಬಿಡುತ್ತಾರೆ.

ಬಹುಶಃ ಇನ್ನು ಕೆಲವೇ ದಿನಗಳು ಮಾತ್ರ ನಾನು ಈ ಮನೆಯಲ್ಲಿರುತ್ತೇನೆ. ಆಮೇಲೆ ಶಾಶ್ವತವಾಗಿ ಈ ಮನೆಗೆ ಕೇವಲ ಕೆಲ ದಿನಗಳ ಅತಿಥಿ ಮಾತ್ರ... ಈ ದುಃಖ ಒಂದು ಕಡೆಯಾದರೆ ಪಿಯೂಸಿನಲ್ಲಿ ಯಾವ ವಿಷಯ ತೆಗೆದುಕೊಳ್ಳಬೇಕು ಎಂಬ ಗೊಂದಲ ಮತ್ತೊಂದೆಡೆ.

ಒಬ್ಬೊಬ್ಬರದು ಒಂದೊಂದು ಸಲಹೆ. ಸಂಬಂಧಿಗಳು, ಸೀನಿಯರ್ಸ್. ಎಲ್ಲರೂ ತಮಗೆ ಸರಿ ಎನಿಸಿದ ವಿಷಯ ಸೂಚಿಸಿ ಅದನ್ನೇ ಆಯ್ಕೆ ಮಾಡಿಕೋ, ಮುಂದೆ ಒಳ್ಳೆಯ ಫ್ಯೂಚರ್ ನಿನ್ನದಾಗುತ್ತದೆ ಎನ್ನುವವರೆ. ಅದರಲ್ಲೂ ಮುಖ್ಯವಾಗಿ ಸೈನ್ಸ್ ತಗೋ ಎನ್ನುವ ಒತ್ತಡ. ಯಾರಾದರೂ ಪರಿಚಯಸ್ಥರು ಸಿಕ್ಕಾಗ 10th ಮುಗಿಯಿತು ಎಂದರೆ ಸಾಕು. ಸಲಹೆಗಳ ಕೊಳದಲ್ಲಿ ಅದ್ದಿ ಅದ್ದಿ ತೆಗೆಯುತ್ತಾರೆ. ಆದರೆ ಪುಣ್ಯಕ್ಕೆ ಬೇರೆಯವರಂತೆ ಅಪ್ಪ-ಅಮ್ಮ ನನ್ನ ಮೇಲೆ ಇದ್ಯಾವುದೇ ಒತ್ತಡ ಹೇರಿರಲಿಲ್ಲ.

ಲ್ಯಾಬ್ ಗಳಲ್ಲಿ ಕುಳಿತು ಆ ಎಕ್ವಿಪ್ ಮೆಂಟ್ ಗಳ ಮಧ್ಯೆ ನಾನೂ ಒಂದು ಎಕ್ವಿಪ್ ಮೆಂಟ್ ಆಗುವುದು ನನಗಿಷ್ಟವಿರಲಿಲ್ಲ. ಅಣ್ಣ ಸೈನ್ಸ್ ತೆಗೆದುಕೊಂಡು ಪೇಚಾಡುವುದನ್ನು ನೋಡೇ ಅದಕ್ಕೆ ಕೈಮುಗಿದಿದ್ದೆ. ತಲೆಗೆ ಹೋಗದ ಗಣಿತದಿಂದ ಕಾಮರ್ಸ್ ಕಷ್ಟವೆನಿಸುತ್ತದೆ. ನನ್ನಂತಹ ಭಾವುಕಜೀವಿಗಳಿಗೆ ಹೇಳಿ ಮಾಡಿಸಿದ್ದಂತಹದ್ದು 'ಆರ್ಟ್ಸ್'.

'ಆರ್ಟ್ಸ್' ಕಂಡರೆ ಬಹಳ ಜನ ಮೂಗು ಮುರಿಯುತ್ತಾರೆ. ಬಹುಶಃ 'ಆರ್ಟ್ಸ್ ನಿಂದ ಬರುವ ಸಂಪಾದನೆ ಕಡಿಮೆ' ಎನ್ನವುದೇ ಇದಕ್ಕೆ ಕಾರಣವಿರಬೇಕು. 'ಆರ್ಟ್ಸ್ ಬಹಳ ಸುಲಭ. ಕೆಲಸಕ್ಕೆ ಬಾರದವರು, ಏನೋ ಒಂದು ಡಿಗ್ರಿ ಪಡೆಯಬೇಕು ಎನ್ನುವವರು, ಸೋಮಾರಿಗಳು 'ಆರ್ಟ್ಸ್' ವಿಷಯ ತೆಗೆದುಕೊಳ್ಳುತ್ತಾರೆ ಎನ್ನುವ ಭಾವನೆ ಜನರ ಮನಸ್ಸಿನಲ್ಲಿ ಮನೆಮಾಡಿಬಿಟ್ಟಿದೆ.

ಓದುವ ಒತ್ತಡ ಕಡಿಮೆ, ಅಪರಿಚಿತವಲ್ಲದ ವಿಷಯಗಳಿರುವುದರಿಂದ ಏನಾದರೂ ನಾಲ್ಕು ಸಾಲು ಬರೆಯಬಹುದು ಎನ್ನುವ ಧೈರ್ಯದಿಂದ 'ಆರ್ಟ್ಸ್' ವಿದ್ಯಾರ್ಥಿಗಳು ಸೈನ್ಸ್ ವಿದ್ಯಾರ್ಥಿಗಳಿಗಿಂತ ಹಾಯಾಗಿ ಓಡಾಡಿಕೊಂಡಿರುತ್ತಾರೆ. ಇದಕ್ಕೆ ಅದು ಸೋಮಾರಿಗಳ ವಿಷಯ ಆಗಿಬಿಟ್ಟಿದೆಯೋ ಏನೋ...

ಯಾರು ಏನೇ ಹೇಳಲಿ; ನನಗಂತೂ 'ಆರ್ಟ್ಸ್' ಮೇಲೆ ಪ್ರೀತಿ. ಟ್ಯೂಷನ್ನು, ಕ್ಲಾಸು, ಅಸೈನ್ ಮೆಂಟು ಎಂದು ಹೈರಾಣಾಗುವ ಸೈನ್ಸ್ ವಿದ್ಯಾರ್ಥಿಗಳನ್ನು ಕಂಡರೆ ಮರುಕ ಹುಟ್ಟುತ್ತದೆ. ನಿಜ, 'ಆರ್ಟ್ಸ್' ವಿದ್ಯಾರ್ಥಿಗಳಿಗೆ ಅಭ್ಯಾಸದ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳವ ಅವಶ್ಯಕತೆ ಇಲ್ಲ. ಆದ್ದರಿಂದಲೇ ಅವರು ಇನ್ನಿತರ ಕಡೆ ಗಮನ ಹರಿಸಲು ಸಾಧ್ಯವಿದೆ. ಅಕಸ್ಮಾತ್ ಫೇಲಾದರೂ ಅಷ್ಟು ಫೀಲ್ ಆಗಲಾರರು.

ಅದೇ, ಎಕ್ಯುಪ್‌ಮೆಂಟ್, ಟ್ಯೂಷನ್, ಕ್ಲಾಸು, ಟೆಸ್ಟ್‌ಗಳು ಎಂದು ದಿನದ ಹದಿನಾಲ್ಕು-ಹದಿನೈದು ತಾಸು ಅಭ್ಯಾಸದಲ್ಲೇ ಮುಳುಗಿರುವ ವಿದ್ಯಾರ್ಥಿ ಫೇಲ್ ಆದರೆ, ಆ ಆಘಾತವನ್ನು 17-18ರ ಎಳೆಯ ಮನಸ್ಸು ಸಹಿಸಿಕೊಳ್ಳಲು ಸಾಧ್ಯವಿದೆಯೆ? 'ಆರ್ಟ್ಸ್' ತೆಗೆದುಕೊಂಡು ಡಾಕ್ಟರ್ ಆಗಲು ಸಾಧ್ಯವಿಲ್ಲದಿರಬಹುದು, ಆದರೆ ಅದಕ್ಕಾಗಿ ಇಷ್ಟೆಲ್ಲ ಬೆಲೆ ತೆರಲು ನಾನು ಸಿದ್ಧಳಿಲ್ಲ!

Tuesday, March 11, 2008

ಹೇಗೆ ಮರೆಯಲಿ ಗೆಳತಿ... ಆ ನಿನ್ನ ಬೆಚ್ಚಗಿನ ಪ್ರೀತಿ

ಕುಮ್ಮಿ-ನನ್ನ ನಡುವೆ ಹೊಟ್ಟೆಕಿಚ್ಚು, ಅಹಂ ಗಳಿಂದ ಬೇಕಾದಷ್ಟು ಸಾರೆ ಜಗಳವಾಗಿದೆ. ಆದರೆ 'ಗೆಳತಿ' ಎಂಬ ಬಾಂಧವ್ಯ ಆ ಸಂಬಂಧ ಕಡಿದು ಹೋಗದಂತೆ ಹಾಗೆ ಇಟ್ಟಿವೆ. ಈಗೆಲ್ಲ ಜಗಳವಾದರೆ ಯಾವ ಹೆದರಿಕೆಯೂ ಇಲ್ಲ. ಒಬ್ಬರಿಗೊಬ್ಬರು ಬಿಟ್ಟಿರುವುದು ಸಾಧ್ಯವಿಲ್ಲ ಎಂಬುದು ಇಬ್ಬರಿಗೂ ಚೆನ್ನಾಗಿ ಗೊತ್ತಿದೆ.
ಅದೊಂದು ಮಳೆಗಾಲದಲ್ಲಿ ಜ್ವರದಿಂದ ಶಾಲೆಗೆ ಹೋಗಲಾಗಲಿಲ್ಲ. 'ಸುಮಿ ನೋಟ್ಸ್' ಎನ್ನುತ್ತಾ ಆ ಜಡಿ ಮಳೆಯನ್ನು ಲೆಕ್ಕಿಸದೆ ಬಂದಿದ ಕುಮ್ಮಿ... ನನಗೆ ತಲೆಗೇ ಹತ್ತದ ಗಣಿತವನ್ನು ತಾಸುಗಟ್ಟಲೆ ಕುಳಿತು ಕಲಿಸಿದ ಕುಮ್ಮಿ... ಹಾಡಿನ ಕಾಂಪಿಟೇಷನ್ ನಲ್ಲಿ ನನಗೆ ಎರಡನೆ ಸ್ಥಾನ. ಕುಮ್ಮಿಗೆ ಮೊದಲ ಸ್ಥಾನ ಸಿಕ್ಕಾಗ "ಅಯ್ಯೋ, ನೀನೆ ಚೆನ್ನಾಗಿ ಹಾಡಿದ್ದೆ. ನನಗೆ ಯಾಕೆ ಕೊಟ್ಟರೋ" ಎಂದು ಪ್ರಾಮಾಣಿಕವಾಗಿ ಪರಿತಪಿಸಿದ ಕುಮ್ಮಿ...

ಕ್ಲಾಸಿನಲ್ಲಿ ತಿಂಗಳ ನೋವು ಶುರುವಾದಾಗ ನನ್ನನ್ನು ಮಗುವನ್ನು ಆರೈಕೆ ಮಾಡಿದ ಹಾಗೆ ಆರೈಕೆ ಮಾಡಿದ ಕುಮ್ಮಿ... ಹೇಗೆ ಮರೆಯಲು ಸಾಧ್ಯ ಅವಳನ್ನು? ಅವಳ ಆ ಪ್ರೀತಿಯನ್ನು? ಹುಡುಗಿ-ಹುಡುಗಿಯರ ನಡುವೆ ಸಾಮಾನ್ಯವಾಗಿರುವ ಹೊಟ್ಟೆಕಿಚ್ಚನ್ನು ಬದಿಗಿರಿಸಿ ಗೆಳೆತನ ಬೆಳೆಸಿದರೆ ಒಂದು ಸುಂದರವಾದ ಸಂಬಂಧ ಚಿಗುರುತ್ತದೆ.

'ಹೆಣ್ಣು ಮಕ್ಕಳಿಗೆ ಮದುವೆಯ ಮೊದಲು ಈ ಸ್ನೇಹ ಗೆಳೆತನ. ನಂತರ ಗಂಡನೆ ಎಲ್ಲಾ ಎಂದು ಕುಮ್ಮಿಯ ಅಜ್ಜಿ ನಾನು-ಕುಮ್ಮಿ ಕುಳಿತು ಮಾತಾಡುತ್ತಿದ್ದಾಗಲೆಲ್ಲ ಹೇಳುತ್ತಿರುತ್ತಾಳೆ. ಗಂಡ ಎಲ್ಲದೂ ಆಗಬಹುದು. ಆದರೆ ಗೆಳತಿ ಮಾತ್ರ ಆಗಲು ಅಸಾಧ್ಯ. ಗೆಳತಿಯೊಂದಿಗೆ ವಿಚಾರಗಳನ್ನೆಲ್ಲ ಅವನ ಜೊತೆಯೂ ಹಂಚಿಕೊಳ್ಳಲಾಗದಷ್ಟು ಸೂಕ್ಷ್ಮ ಎನ್ನುತ್ತಾಳೆ ಶೀಲಕ್ಕ. ಇರಬಹುದೇನೋ...

ಪುರುಷರು ಶ್ರೇಷ್ಠ ಎನ್ನುವ ನಮ್ಮ ಸಮಾಜದಲ್ಲಿ ಬೆಳೆದ ಹುಡುಗರು ಹುಡುಗಿಯರ ನೋವನ್ನು ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡಾರು? ಸಾಮಾನ್ಯವಾಗಿ ಹುಡುಗಿಯರದ್ದೆಲ್ಲ 'ನ್ಯಾರೋ ಮೈಂಡ್' ಎಂದು ತಲೆಯಲ್ಲಿ ತುಂಬಿಕೊಂಡಿರುವ ಕಾಸ್ಲಿನ 'ಸಂಪ್ರದಾಯವಾದಿ' ಹುಡುಗರೆಲ್ಲ ಮುಂದೆ ತಮ್ಮ ಹೆಂಡತಿಯರಿಗೆ ಎಷ್ಟು ಒಳ್ಳೆಯ ಗಂಡರಾದಾರು?

ಹುಡುಗರೂ ಒಳ್ಳೆಯ ಗೆಳೆಯರೇ, ಹುಡುಗಿಯರ ಸಂಕಟಗಳನ್ನು ಅರ್ಥ ಮಾಡಿಕೊಳ್ಳಬಲ್ಲವರೇ. ಆದರೆ ಒಬ್ಬ ಹುಡುಗಿ ಮತ್ತೊಬ್ಬ ಹುಡುಗಿಯನ್ನು ಅರ್ಥ ಮಾಡಿಕೊಂಡಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲವರಾರರು. ಹುಡುಗಿಯ ಸಂಕಟ ಅರ್ಥ ಮಾಡಿಕೊಳ್ಳಬಲ್ಲವರಾದರೂ ಅದಕ್ಕೆ ಸಂಪೂರ್ಣವಾಗಿ ಸ್ಪಂದಿಸಲಾರರು. ಕುಮ್ಮಿಗೆ ನನ್ನ ಒಂದು ಕಣ್ಣೋಟ ಅರ್ಥವಾಯಿತೆಂದು ಪಕ್ಕಿಗೆ ಅದು ಅರ್ಥವಾದೀತೆ?

ಇವತ್ತು ನನ್ನ ಅಚ್ಚುಮೆಚ್ಚಿನ ಲೇಖಕ ಹುಡುಗರ ನಡುವಿನ ಗೆಳೆತನದ ಬಗ್ಗೆ ಹೇಳುತ್ತ "ಹುಡುಗಿಯರ ನಡುವೆ ಹುಡುಗರಲ್ಲಿರುವಷ್ಟು ಗಾಢ ಗೆಳೆತನ ಬೆಳೆಯಲಾರದು. ಏಕೆಂದರೆ ಅವರಿಗೆ ಅವರದೇ ಆದ ಕಟ್ಟುಪಾಡುಗಳಿರುತ್ತವೆ. ಹುಡುಗರಿಗೆ ಇವುಗಳ ಬಂಧನವಿಲ್ಲ. ಕೆರೆ ಕಟ್ಟೆಗಳ ಮೇಲೆ ಕುಳಿತು ಮಾತನಾಡುತ್ತ ಬೆಳಗು ಹಾಯಿಸುತ್ತಾರೆ. ಗೆಳೆಯರೆಲ್ಲ ಸೇರಿ ಎಲ್ಲೋ ಒಂದು ಕಡೆ ಪಾರ್ಟಿ ಮಾಡುತ್ತಾರೆ. ಇವೆಲ್ಲ ಗೆಳೆಯರ ಸಂಬಂಧ ಗಾಢವನ್ನಾಗಿಸುತ್ತದೆ. ಆದರೆ ಹುಡುಗಿಯರಿಗೆ ಇಂತಹ ಅವಕಾಶಗಳೇ ಇಲ್ಲ ಎಂದು ಬರೆದಿದ್ದನ್ನು ಓದಿದೆ.

ಊಹುಂ. ನನ್ನ ಅಚ್ಚುಮೆಚ್ಚಿನ ಲೇಖಕ ಎಷ್ಟೆಂದರೂ ಲೇಖಕ; ಲೇಖಕಿಯಲ್ಲ. ಖಂಡಿತ ಅವನಿಗೆ ನಮ್ಮ ಹುಡುಗಿಯರಲ್ಲಿ ಎಂಥ ಗಾಢ ಗೆಳೆತನವಿರುತ್ತದೆ ಎನ್ನುವುದು ಅರ್ಥವಾಗಿರಲಾರದು. ಹೌದು. ನಮಗೆ ರಾತ್ರಿಯಿಡೀ ಕೆರೆ ಕುಂಟೆಯ ಮೇಲೆ ಕುಳಿತು ಬೆಳಗು ಹಾಯಿಸಲು ಅವಕಾಶವಿಲ್ಲದಿರಬಹುದು.

ಬಾರಿಗೆ ಗೆಳೆಯರ ಜೊತೆ ಹೋಗಿ ಹೊಟ್ಟೆ ತುಂಬ ಕುಡಿದು ಮಜ ಮಾಡಲು ಆಗದಿರಬಹುದು. ಆದರೆ ರಾತ್ರಿ ಅಕ್ಕಪಕ್ಕ ಹಾಸಿಗೆ ಹಾಸಿಕೊಂಡು ಪಿಸುಮಾತಿಗೆ ತೊಡಗಿದರೆ ಕಾಲದ ಮಿತಿ ನಮಗಿಲ್ಲ. ಸಂಜೆ ಸುಮ್ಮನೆ ನಾವು ಕೈಹಿಡಿದುಕೊಂಡು ಮನೆಯ ಹಿಂದಿನ ಬೆಟ್ಟ ಹತ್ತಿ ತುತ್ತತುದಿಯ ಕಲ್ಲುಬಂಡೆಯ ಮೇಲೆ ಕುಳಿತು ಮೌನವಾಗಿ ಸೂರ್ಯಾಸ್ತ ನೋಡುವ ನಮ್ಮ ಸುಖ ಯಾವ ಲೇಖಕನ ಪೆನ್ನಿಗೂ ನಿಲುಕಲಾರದು.

"ಅಯ್ಯೋ... ಹೀಗೇಕೆ ಆಗೋಯ್ತು" ಎಂದು ತಾನೂ ಕಣ್ಣೀರು ಸುರಿಸಿ, "ಆಗಿದ್ದು ಆಯ್ತು. ಹೀಗೆ ಮಾಡೋಣ" ಎನ್ನುತ್ತಾ ಗೆಳತಿಯ ಸಮಸ್ಯೆಯನ್ನು ಮತ್ತೊಬ್ಬ ಗೆಳತಿ ಹಗುರ ಮಾಡುವಂತೆ ಬಹುಶಃ ಮತ್ತ್ಯಾರೂ ಮಾಡಲಾರರು.ಮದುವೆಯಾದ ಹೆಂಗಸಿಗೆ ಗಂಡನ ಹತ್ತಿರ ಹೇಳಿದರೆ ಅವನಿಗೆ ಅನುಮಾನ, ತವರಿನಲ್ಲಿ ಹೇಳಿದರೆ ಅವಮಾನ. ಅನ್ಯರಲ್ಲಿ ಹೇಳಲು ಬಿಗುಮಾನ...ಹೀಗಿರುವಾಗ ಹಂಚಿಕೊಳ್ಳಲು ಹಳೆಯ ಸ್ನೇಹಿತೆಯಲ್ಲದೆ ಇನ್ಯಾರು ಬಂದಾರು?

ಯಾವುದ್ಯಾವುದೋ ಕಾರು ಬೈಕುಗಳ ಚರ್ಚೆ ನಾವು ಮಾಡದಿರಬಹುದು, ಆದರೆ ಅಮ್ಮ ನಿನ್ನೆ ಸಂಜೆ ಯಾಕೆ ಮೌನವಾಗಿದ್ದಳು ಎಂದು ಯೋಚಿಸುತ್ತೇವೆ. ಎಂತಹ ಕ್ರಿಕೆಟ್ ಟೀಮ್ ಕಟ್ಟಿದರೆ ಭಾರತ ಮುಂದಿನ ವರ್ಲ್ಡ್‌ಕಪ್ ಗೆಲ್ಲಬಹುದು ಎಂದು ವಾದಿಸುವಷ್ಟು ಜ್ಞಾನ ಇಲ್ಲದಿರಬಹುದು. ಆದರೆ ಮುಂದಿನ ವರ್ಷ ಕಾಲೇಜ್‌ನಲ್ಲಿ ಯಾವ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡರೆ ಉತ್ತಮ ಎನ್ನುವ ವಾದ ನಡೆದೇ ಇರುತ್ತದೆ.

ನಾಲ್ಕು ಜನ ಹುಡುಗಿಯರು ಸೇರಿದರೆ ಅಲ್ಲಿ ಇಲ್ಲದ ಐದನೆಯವಳ ಬಗ್ಗೆ ಹಗುರಾಗಿ ಮಾತನಾಡಿಕೊಳ್ಳಬಹುದು. ಆದರೆ ನಮ್ಮ ಗೆಳತಿಯೊಬ್ಬಳಿಗೆ ಕಾಟ ನೀಡು ಕಾಮಣ್ಣನಿಗೆ ಹೇಗೆ ಪಾಠ ಕಲಿಸಬಹುದು ಎಂದು ಒಗ್ಗಟ್ಟಾಗಿ ವಿಚಾರವನ್ನು ಕೂಡಾ ಮಾಡುತ್ತೇವೆ. ರವಿ ಕಾಣದ್ದನ್ನು ಕವಿ ಕಂಡನಂತೆ. ಆದರೆ ಕವಿಯೂ ಕಾಣದ್ದು ನಮ್ಮ ಗೆಳೆತನ; ಹುಡುಗಿಯರ ಸ್ನೇಹ

Tuesday, March 4, 2008

ಕೊನೆಯ ತನಕ ಈ ಸ್ನೇಹಿತರು ಇರುತ್ತಾರಾ?


ಹೆಣ್ಣಿಗಿರಲಿ ಗಂಡಿಗಿರಲಿ ಹೆಚ್ಚಾಗಿ ಒಂದು ಆರೋಗ್ಯಕರವಾದ ಸ್ನೇಹ ಮೊಳೆಯುವುದು ಹೈಸ್ಕೂಲ್ ಜೀವನದಲ್ಲೇ. ಏಕೆಂದರೆ ಆ ಮುಗ್ಧ ಮನಸ್ಸು ಸ್ನೇಹಕ್ಕೆ ಹೇಳಿ ಮಾಡಿಸಿದಂಥಾದ್ದು. ನಾನು ನೋಡಿದಂತೆ ಜನರು ತಮ್ಮ ಹೈಸ್ಕೂಲ್ ಜೀವನವನ್ನು ಮೆಲುಕು ಹಾಕಿಕೊಳ್ಳುವಷ್ಟು ಜೀವನದ ಇನ್ಯಾವ ಕ್ಷಣಗಳನ್ನೂ ಅಷ್ಟು ಪ್ರೀತಿಯಿಂದ ನೆನಪು ಮಾಡಿಕೊಳ್ಳಲಾರರು. ನನ್ನ ಅಮ್ಮ ಈಗಲೂ ಕೂಡಾ ಅವಳ ಹೈಸ್ಕೂಲ್ ಸಖಿ ರಾಧೆಯನ್ನು ನೆನಪಿಸಿಕೊಳ್ಳುತ್ತಿರುತ್ತಾಳೆ.

ಒಮ್ಮೊಮ್ಮೆ, ಆ ಸ್ನೇಹಿತೆ ಮತ್ತೆ ಸಿಗಬಾರದೆ ಎಂದು ಪರಿತಪಿಸುತ್ತಿರುತ್ತಾಳೆ. "ಅಮ್ಮಾ ಯಾಕೆ ಸುಮ್ನೆ ಬೇಜಾರು ಮಾಡ್ಕೋತಿಯಾ? ಈ ಸಾರಿ ಅಜ್ಜಿಮನೆಗೆ ಹೋದಾಗ ಅವಳನ್ನು ಭೇಟಿ ಮಾಡುಎಂದೆ. "ಅವಳ ಸಂಸಾರದ ಗೋಳೇ ಅವಳಿಗೆ ಹೆಚ್ಚಾಗಿರಬಹುದು. ಈಗ ನಾನು ಹೋಗಿ ಅವಳಿಗೆ ಇನ್ನೂ ತ್ರಾಸು ಕೊಡಲಾ? ಮದುವೆಯಾದ ಮೇಲೆ ಅಷ್ಟೆ; ಅವರವರ ಸಂಸಾರ ಅವರವರಿಗೆ ಎಂದು ನಿಟ್ಟುಸಿರು ಬಿಟ್ಟಳು.

ಮುಂದೊಂದು ದಿನ ನಾನೂ ಕೂಡಾ ನನ್ನ ಕುಮ್ಮಿ, ಮಂಗು, ಪಚ್ಚಿ, ಪಕ್ಕಿ ... ಅವರನ್ನೆಲ್ಲ ನೆನಸಿಕೊಂಡು ಹೀಗೆ ಬೇಜಾರು ಮಾಡ್ಕೋಬಹುದಾ? ಅವರೆಲ್ಲ ನನ್ನ ಡೈರಿಯಲ್ಲೋ, ಸ್ಲಾಮ್ ಬುಕ್ಕಿನ ಹಾಳೆಗಳ ನಡುವೆಯೋ ಹೀಗೆ ಕೇವಲ ನೆನಪಾಗಿ ಉಳಿದುಬಿಡುತ್ತಾರಾ ? ಇವರೆಲ್ಲ ನಾನು ಮುದುಕಿಯಾಗಿ ಸಾಯುವ ತನಕ ಜೊತೆಯಲ್ಲಿರೋದಿಲ್ವಾ...? ನೆನೆಸಿಕೊಂಡ್ರೇ ಅಳು ಬರುತ್ತೆ....

ಹೈಸ್ಕೂಲ್ ದಿನಗಳೇ ಹಾಗೆ... ಜೀವನದ ಅಮೂಲ್ಯ ಕ್ಷಣಗಳು...

ಕಾಲೇಜ್‌ಗಳಲ್ಲೂ ಸ್ವಚ್ಛ ಸ್ನೇಹವಿರಬಹುದು. ಆದರೆ ನನಗೆ ತಿಳಿದಂತೆ ಅದಾಗಲೇ ಪ್ರೌಢವಾದ ಮನಸ್ಸು ಹುಚ್ಚುಕೋಡಿಯಂತೆ ಹರಿಯಲಾರದು; ತೀರ ಭಾವುಕವಾಗಿ ಮತ್ತೊಂದು ಜೀವವನ್ನು ಹಚ್ಚಿಕೊಳ್ಳಲಾರದು. ಅದಾಗಲೇ ಆ ಮನಸ್ಸು ತನ್ನ ಸುತ್ತಮುತ್ತಲಿನ ಸ್ವಾರ್ಥ, ದುರಾಸೆ, ಮೋಸಗಳನ್ನು ನೋಡಿ ಎಚ್ಚರವಾಗಿಬಿಟ್ಟಿರುತ್ತದೆ. ಯಾರಾದರೂ ಪ್ರಾಮಾಣಿಕವಾಗಿ, ನಿರುದ್ದೇಶದಿಂದ ಸ್ನೇಹಹಸ್ತ ಚಾಚಿದರೂ ಮೊಸರಿನಲ್ಲಿ ಕಲ್ಲು ಹುಡುಕುವಂತೆ 'ಸುಮ್‌ಸುಮ್ನೆ ಅವಳು ಅಥವಾ ಅವನ್ಯಾಕೆ ಫ್ರೆಂಡ್‌ಶಿಪ್ ಬಯಸ್ತಾನೆ?' ನನ್ನಿಂದ ಏನೋ ಕೆಲಸ ಆಗಬೇಕು ಅನಿಸುತ್ತೆ ಎಂದು ಅಲ್ಲಿಂದಲೇ ಅನುಮಾನ ಶುರು...

'ಮಾತಿನ ಮಲ್ಲಿಯಾದ ನನಗೆ ("ಮಾತಿನಮಲ್ಲಿ" ಅಂದರೆ ಏನು ಹೊಗಳಿಕೆಯಲ್ಲ. ಪಚ್ಚಿಯ ಪ್ರಕಾರ 'ಮಲ್ಲ' ಅಥವಾ 'ಜಟ್ಟಿ' ಇದರ ಸ್ತ್ರೀಲಿಂಗ 'ಮಲ್ಲಿ'ಯಂತೆ!!) ಸ್ವಾಭಾವಿಕವಾಗಿಯೇ ಸ್ನೇಹಿತ- ಸ್ನೇಹಿತೆಯರು ಬಹಳ. ನಮ್ಮ ಪಕ್ಕಿಯ ಅಭಿಪ್ರಾಯ 'ಹುಡುಗಿ'ಯರ ನಡುವಿನ ಗೆಳೆತನ ಕ್ಷಣಿಕ. ಹುಡುಗರ ಗೆಳೆತನ, ಹುಡುಗ ಹುಡುಗಿಯ ಗೆಳೆತನ ಕೂಡಾ ಶಾಶ್ವತವಾಗಿರಬಹುದು. ಆದರೆ ಹುಡುಗಿಯರ ಗೆಳೆತನ ಮಾತ್ರ ಬೇಗನೇ ಮುರಿದು ಹೋಗುತ್ತದೆ'. ಅವನ ವಿಚಾರವನ್ನು ಪೂರ್ತಿ ಸುಳ್ಳು ಎನ್ನಲಾಗದು.ಏಕೆಂದರೆ ನಮ್ಮ ಕುಮ್ಮಿ-ಮಂಗಿ ಅದೆಷ್ಟು ಸಾರಿ ಮಾತು ಬಿಟ್ಟುಕೊಂಡು ಮತ್ತೆ ಸ್ನೇಹಿತರಾದರೋ ಅವರಿಗೇ ಲೆಕ್ಕವಿಲ್ಲ.

ಅದೇ ಪಚ್ಚಿ-ಪಕ್ಕಿಯ ಗೆಳೆತನ ಒಂದೇ ರೀತಿ ಸಾಗುತ್ತದೆ. ತಮ್ಮ ನಡುವೆ ಬಂದ ಮನಸ್ತಾಪಗಳನ್ನು ಅವರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಜಗಳ ಮಾಡಿಕೊಂಡ ಸ್ವಲ್ಪ ಹೊತ್ತಿಗೇ ಏನೂ ಆಗೇ ಇಲ್ಲ ಎನ್ನುವಂತೆ ಒಬ್ಬರ ಹೆಗಲ ಮೇಲೆ ಮತ್ತೊಬ್ಬರು ಕೈಹಾಕಿಕೊಂಡು ಕಾರಿಡಾರ್ ಸುತ್ತುತ್ತಿರುತ್ತಾರೆ. ಅದೇ ಕುಮ್ಮಿ, ಮಂಗಿ, ನಾನು ಎಲ್ಲ ಜಗಳ ಮಾಡಿಕೊಂಡರೆ ವಾರ-ತಿಂಗಳುಗಟ್ಟಲೆ ನಮ್ಮ ನಡುವೆ ಮೌನ ಸಮರ! ಹೀಗಿದ್ದರೂ ಯಾವುದೋ ಒಂದು ನೋಟ, ಬಾಯಿತಪ್ಪಿ ಬಂದ ಮಾತು... ಇಷ್ಟು ಸಾಕು ಸ್ನೇಹ ಮರುಜೀವ ಪಡೆಯಲು.

ನನಗೆ ವಿಚಿತ್ರ ಎನಿಸುವುದೆಂದರೆ ನಾನು ಓದಿದ, ನೋಡಿದ ಸಾಹಿತ್ಯ-ಸಿನಿಮಾಗಳಲ್ಲೆಲ್ಲ ಎಲ್ಲ ರೀತಿಯ ಸ್ನೇಹದ ಬಗ್ಗೆ ಹೇಳುತ್ತಾರೆ. ಆದರೆ ಎರಡು ಹುಡುಗಿಯರ ನಡುವೆ ಇರುವ ಸ್ನೇಹ ಸಂಬಂಧಗಳ ಕುರಿತು ಸಾಹಿತ್ಯದಲ್ಲಾಗಲಿ, ಸಿನಿಮಾಗಳಲ್ಲಾಗಲಿ ಕಂಡಿದ್ದು ವಿರಳ. ಎಂಟನೆಯ ಕ್ಲಾಸಿನ ಮುದ್ದು ಹುಡುಗಿ ಕಾವೇರಿ. ಒಂಬತ್ತನೆಯ ಕ್ಲಾಸಿನ ಸೋಡಾಬುಡ್ಡಿ ವಸು, ನಮ್ಮ ಕ್ಲಾಸಿನ ಉಷಾ, ಚೈತ್ರಾ, ಶಾರದಾ... ಹೀಗೆ

ಅನೇಕ ಸ್ನೇಹಿತೆಯರಿದ್ದರೂ ಕುಮ್ಮಿ-ಮಂಗಿ ಅದರಲ್ಲೂ ಕುಮ್ಮಿಯ ಕಂಡರೆ ನನಗೆ ವಿಶೇಷ ಒಲವು. ಅವಳಿಗೂ ಅಷ್ಟೆ. ಅವಳು ನನ್ನ ಮೇಲಿಟ್ಟಿರುವ ಪ್ರೀತಿಯ ಎದುರು ನನ್ನ ಸ್ನೇಹ ಏನೂ ಅಲ್ಲ. ಅವಳು ಏನಾದರೂ ನೆಲ್ಲಿಕಾಯಿ ತಂದರೆ ನನಗೇ ಅಗ್ರ ಪಾಲು. ಅಮ್ಮ ಏನಾದರೂ ಸಿಹಿ ತಿಂಡಿ ಮಾಡಿದರೆ ಕುಮ್ಮಿಗೆ ಒಂದು ಪಾಲು. ಸ್ಟಾಫ್‌ರೂಮ್‌ಗೆ ಹೋಗುವುದರಿಂದ ಹಿಡಿದು ಶಾಲೆಯ ಯಾವುದೇ ಜವಾಬ್ದಾರಿ ವಹಿಸಿಕೊಳ್ಳುವ ತನಕವೂ ಇಬ್ಬರೂ ಜೋಡಿಯಾಗಿಯೇ. ಈ ಸ್ನೇಹಕ್ಕೂ ಕಾರಣವಿಲ್ಲದಿಲ್ಲ.