Saturday, April 16, 2011

ಅಬ್ಬೆ! ಅದೊಂದು ಮುಂಡೇದು!!

ವಿಧವೆ ಎಂದರೆ ಹೀಗಿರಬೇಕು, ಸುಮಂಗಲಿ ಎಂದರೆ ಹೀಗಿರಬೇಕು. ಹೆಣ್ಣು ಅಂದರೆ ಹೀಗಿರಬೇಕು, ಗಂಡು ಎಂದರೆ ಹೀಗಿರಬೇಕು-ಹೀಗೆ ಎಲ್ಲ ಶಬ್ದಗಳಿಗೂ ಸಮಾಜ ಒಂದು ಕಲ್ಪನೆಯನ್ನು ಬೆಳೆಸಿಕೊಂಡಿದೆ. ಅದಕ್ಕೆ ಸ್ವಲ್ಪ ಧಕ್ಕೆ ಬಂದರೂ ಸಮಾಜದ ಚುಚ್ಚು ನೋಟ, ಮಾತು ಎದುರಿಸಲೇಬೇಕು. ಸುತ್ತಲಿನ ಸಮಾಜ ನೀಡುವ ಹಿಂಸೆಗಿಂತ ಮನಸಿನ ವಿರುದ್ಧ ನಡೆವ ನೋವೇ ಲೇಸು ಎಂದು ಎಷ್ಟೋ ಬದುಕುತ್ತಾರೆ. ಇದಕ್ಕೆ ಅಬ್ಬೆಯ ಜೀವನ ಒಂದು ಉದಾಹರಣೆಯಷ್ಟೆ.

ಅಪ್ಪ, ಅಜ್ಜ ಎಲ್ಲರೂ ಅವರಿಗೆ ತಿಳಿದಷ್ಟು ಹೇಳಿದರೂ ಅಬ್ಬೆಯ ಬಗ್ಗೆ ಇನ್ನೂ ತಿಳಿದುಕೊಳ್ಳುವ ಬಯಕೆಯನ್ನು ನನ್ನ ಕೈಲಿ ಹತ್ತಿಕ್ಕಿಕೊಳ್ಳಲಾಗಲಿಲ್ಲ.

ಅಬ್ಬೆಯ ಬಗ್ಗೆ ಇವರೆಲ್ಲರಿಗಿಂತ ಬಲ್ಲವಳು ಅಜ್ಜಿ. ಆದರೆ ಅಜ್ಜಿಯ ಹತ್ತಿರ ಅಬ್ಬೆಯ ಬಗ್ಗೆ ಕೇಳಲು ಭಯ. ಅಜ್ಜಿಗೆ ಮುಂಚಿನಿಂದಲೂ ಏನೋ ಅಸಮಾಧಾನ. ಅವಳೆದುರು ಅಬ್ಬೆಯ ಸುದ್ದಿ ಎತ್ತಿದರೆ ಸಾಕು 'ಅದೊಂದು ಮುಂಡೇದು' ಅಂತಲೇ ಶಪಿಸುತ್ತಿದ್ದಳು. ಆದರೆ ಇವತ್ತು ಅಜ್ಜಿ ಏನೇ ಹೇಳಿದರೂ ಸರಿ, ಅಬ್ಬೆಯ ಬಗ್ಗೆ ಕೇಳಲೇಬೇಕು ಎಂದು ನಿರ್ಧರಿಸಿದ್ದೆ. ಅಜ್ಜಿಯನ್ನು ದಿನವಿಡೀ ಬಿಟ್ಟುಬಿಡದೆ ಕಾಡಿದೆ.

ಅಜ್ಜಿ ಅಬ್ಬೆಗೆ ಬೈಯುವ ಎಂದಿನ ಶೈಲಿಯಲ್ಲಿ 'ಅದೊಂದು ಮುದುಕಿ (ಅಜ್ಜಿಗೆ ತಾನೂ ಮುದುಕಿ ಎನ್ನುವುದು ಮರೆತುಹೋಗಿರಬೇಕು!) ಎಂದೇ ಪ್ರಾರಂಭಿಸಿದಳು. ಅಜ್ಜಿ ಅಬ್ಬೆ ಸರಿಸುಮಾರು ಸಮಾನ ವಯಸ್ಕರು. ಅಬ್ಬೆಯ ಗಂಡ ಸಾಯುವ ಹೊತ್ತಿಗೆ ಆಗಷ್ಟೇ ಅಜ್ಜಿ ಅಜ್ಜನ ಮದುವೆಯಾಗಿ ಬಂದಿದ್ದಳಂತೆ.

ಗಂಡ ಸತ್ತಾಗ ಅಬ್ಬೆಗೆ ಏಳೋ ಎಂಟೋ ವಯಸ್ಸು. ಅಬ್ಬೆಯ ಅಳು ನೋಡಿದರೆ ಎಂಥವರಿಗಾದರೂ ಪಾಪ ಅನ್ನಿಸುತ್ತಿತ್ತಂತೆ. ಜೋರಾಗಿ ಅಳುತ್ತಿದ್ದಳಂತೆ. ಅವಳಿಗೆ ಗಂಡ ಸತ್ತ ಎನ್ನುವ ದುಃಖಕ್ಕಿಂತ ತನ್ನ ಬಳೆ, ಒಡವೆಗಳನ್ನು ತೆಗೆದು, ತಲೆ ಬೋಳಿಸಿ, ಕೆಂಪು ಸೀರೆ ಉಡಿಸುತ್ತಾರೆ ಎನ್ನುವುದೇ ಅವಳ ಅಳುವಿಗೆ ಕಾರಣವಾಗಿತ್ತಂತೆ. ಗಂಡನ ಶವ ಸಂಸ್ಕಾರಕ್ಕೆ ಅಬ್ಬೆಯನ್ನು ಹಿಡಿದು ಎಳೆದುಕೊಂಡು ಬರಲು ನಾಲ್ಕೈದು ಜನ ಬೇಕಾಯಿತಂತೆ.

'ಅಯ್ಯೋ! ನನ್ನ ಕೂದಲು ತೆಗೆಯಬೇಡಿ, ನನ್ನ ಕಾಲುಂಗುರ... ನನ್ನ ಬಳೆ...' ಎಂದು ಕೂಗುತ್ತಿದ್ದಳಂತೆ. ಯಾರು ಏನೇ ಹೇಳಿದರೂ ಮಾಡಿದರೂ ತನ್ನ ಮಾಂಗಲ್ಯ ಸರಕ್ಕೆ ಇರುವ ತಾಳಿಯನ್ನು ತೆಗೆದುಕೊಡಲಿಲ್ಲವಂತೆ. ಅದನ್ನು ಅಬ್ಬೆ ಒಂದು ದಾರಕ್ಕೆ ಪೋಣಿಸಿ ಇಂದೂ ಧರಿಸುತ್ತಾಳಂತೆ.

ಅಬ್ಬೆಗೆ ಸುಮಾರು 15-16 ಆಗುವವರೆಗೂ ಅಬ್ಬೆ-ಅಜ್ಜಿ ಒಳ್ಳೆಯ ಸ್ನೇಹದಿಂದಲೇ ಇದ್ದರಂತೆ.. ಸಂಜೆ ತಿರುಗಾಡಲು ಅಂತ ಹೋದರೆ ಅಬ್ಬೆ ಅಜ್ಜಿಯ ಹತ್ತಿರ ಏನೇನೋ ಹೇಳುತ್ತಿದ್ದಳಂತೆ. 'ನನಗೆ ಹಾಗೆ ಆಸೆಯಾಗುತ್ತದೆ, ಹೀಗೆ ಆಸೆಯಾಗುತ್ತದೆ ಎನ್ನುತ್ತಿದ್ದಳಂತೆ. 'ಛೀ, ಅಸಹ್ಯ. ಎಲ್ಲ ಬಿಟ್ಟವಳು ಅವಳು' ಎಂದು ಅಜ್ಜಿ ಮುಖ ಸಿಂಡರಿಸಿಕೊಂಡಳು.

ಅಂದಿನಿಂದ ಅಜ್ಜಿ ಅಬ್ಬೆಯೊಂದಿಗೆ ಮಾತು ಬಿಟ್ಟಳಂತೆ. ಇದಿಷ್ಟು ಅಜ್ಜಿಯಿಂದ ತಿಳಿದು ಬಂದಿದ್ದು . ಅಜ್ಜಿ ತನ್ನದೇ ಅದ ದೃಷ್ಟಿಕೋನದಲ್ಲಿ ಅಬ್ಬೆಯ ಬಗ್ಗೆ ಹೇಳಿದ್ದಳು. ಆದರೆ ಅಬ್ಬೆಯಲ್ಲಿ ನನಗಾವ ದೋಷವೂ ಕಾಣಿಸುತ್ತಿಲ್ಲ...ಯಾಕೆಂದರೆ... ಅಬ್ಬೆ! ಅದೊಂದು ಮುಂಡೇದು!!

Saturday, April 9, 2011

ಸ್ವಂತಿಕೆಯೂ, ಡಿಪೆಂಡೆನ್ಸಿಯೂ..

ಸಂಬಂಧಗಳು ಅಂದರೆ ಹೀಗೆ... ಒಂದು ರೀತಿಯಲ್ಲಿ ಬಗೆಹರಿಯದ ಗೊಂದಲಗಳು. ಯಾವ ಸಂಬಂಧಗಳನ್ನು ಹೇಗೆ ನೋಡಬೇಕೋ, ಯಾರ ಜೊತೆ ಹೇಗೆ ಇರಬೇಕೋ, ಅದನ್ನು ಹೇಗೆ ನಿಭಾಯಿಸಬೇಕೋ... ಎಲ್ಲ ಬರಿ ಗೋಜಲು...ಗೋಜಲು.

ಭಾರತೀಯ ಗೆಳೆತನದ ನಂತರ ಮಾನವ ಸಂಬಂಧಗಳು, ಅದರೊಳಗೆ ಆಧಾರಪಡುವುದು, ಪ್ರೀತಿ, ಅಗತ್ಯ... ಹೀಗೆ ಮೊದಲಾದವುಗಳ ಬಗ್ಗೆ ವಿಪರೀತ ಸೀರಿಯಸ್ಸಾಗಿ ವಿಚಾರ ಮಾಡಲೇಬೇಕಾಗಿ ಬಂದಿದೆ.

ಯಾರಾದರೂ ನನ್ನ ಮೇಲೆ ಮಾನಸಿಕವಾಗಿ ಡಿಪೆಂಡ್ ಆದರೆ ಭಾರವೆನಿಸುತ್ತದೆ. ಅದೇ ರೀತಿ ನಾನೂ ಕೂಡಾ ಯಾರಿಗಾದರೂ ಭಾರ ಎನಿಸಿರಬಹುದಲ್ಲ! ನಾನೂ ಸಂಪೂರ್ಣವಾಗಿ ಭಾವನಾತ್ಮಕವಾಗಿ ಸ್ವತಂತ್ರಳಾದರೆ? ಯಾವುದಕ್ಕೂ

ಯಾರನ್ನೂ ಅವಲಂಬಿಸದಿದ್ದರೆ...? ಹೀಗೆ ಬಹಳ ದಿನಗಳಿಂದ ಅಂದುಕೊಂಡಿದ್ದೆ. ಆದರೆ ಇದು ತಪ್ಪು ಎಂದು ಬೇಗನೇ ತಿಳಿಯಿತು.

ನನಗೆ ತಿಳುವಳಿಕೆ ಬಂದಾಗಿನಿಂದಲೂ ಅಮ್ಮನೇ ತಲೆ ಸ್ನಾನ ಮಾಡಿಸುತ್ತಿದ್ದಿದ್ದು, ದಿನಾ ಕೂದಲು ಬಾಚುವುದೂ ಅವಳದೇ ಕೆಲಸ. ಇವರೆಡು ಕೆಲಸಗಳನ್ನು ಅವಳೇ ಮಾಡಿಕೊಡಬೇಕಿತ್ತು. ಇನ್ಯಾರು ಮಾಡಿದ್ರೂ ಸರಿಯೇ ಆಗುತ್ತಿರಲಿಲ್ಲ. ಇದೇ

ಕಾರಣದಿಂದ ಅಮ್ಮನ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಯಾವ ಸಂಬಂಧಿಕರ ಮನೆಯಲ್ಲೂ ಉಳಿಯುತ್ತಿರಲಿಲ್ಲ. ಉಳಿದರೂ 2 ದಿನಗಳಲ್ಲೇ ವಾಪಸ್.

ನನ್ನ ಈ ಸ್ವಭಾವದಿಂದ ಅಮ್ಮನೋ ಬೇಸತ್ತು ಹೋಗಿದ್ದಳು. "ನೀನಂತೂ ಯಾವಾಗ ನಿನ್ನ ಕೆಲಸಗಳನ್ನು ಮಾಡಿಕೊಳ್ಳಲು ಕಲಿಯುತ್ತಿಯೋ... ಮದುವೆಯಾಗಿ ಗಂಡನ ಮನೆ ಸೇರಬೇಕಾದವಳು. ಅಲ್ಲಿ ಹೇಗೆ ನಿಭಾಯಿಸುತ್ತಿಯೋ... ನಿನ್ನ

ಅಮ್ಮ ನಿನಗೆ ಕಲಿಸಿದ್ದೇ ಇದನ್ನ ಎಂದು ಕೇಳುವ ಹಾಗೆ ಮಾಡುತ್ತಿಯೋ ಏನೋ ಅಂತ ಗೊಣಗುತ್ತಲೇ ತಲೆ ಸ್ನಾನ ಮಾಡಿಸುತ್ತಿದ್ದಳು. ಇದು ಪ್ರತಿ ವಾರದ ಗೊಣಗಾಟವಾದ್ದರಿಂದ ಆ ಬಗ್ಗೆ ಬಹಳ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಆಗೆಲ್ಲ

ಇನ್ನು ಮುಂದೆ ನಾನೇ ತಲೆಸ್ನಾನ ಮಾಡಿಕೊಳ್ಳಬೇಕು. ಅಮ್ಮನ ಮೇಲೆ ಡಿಪೆಂಡ್ ಆಗಲೇಬಾರದು ಎನಿಸುತ್ತಿತ್ತು. ಆದರೆ ಅಮ್ಮನ ಕೈಯಿಂದ ಸ್ನಾನ ಮಾಡಿಸಿಕೊಳ್ಳುವ ಆನಂದ ಕಳೆದುಕೊಳ್ಳಲು ಸಿದ್ಧಳಿರಲಿಲ್ಲ.

ಈಗ ಕಾಲೇಜಿಗೆ ಸೇರಿದ ಮೇಲೆ ಆ ಅವಕಾಶ ತಪ್ಪಿ ಹೋಗಿತ್ತು. ಹಾಸ್ಟೆಲಿನಲ್ಲಿ ನಾನೇ ತಲೆಸ್ನಾನ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಇವತ್ತು ಮನೆಗೆ ಬಂದಾಗ ಇನ್ನು ಅಮ್ಮನಿಂದ ಬೈಸಿಕೊಳ್ಳುವುದೇಕೆಂದು ನಾನೇ ತಲೆಸ್ನಾನ

ಮಾಡಿಕೊಂಡೆ. ಬಾತ್ ರೂಮಿನ ಬಾಗಿಲು ತೆರೆದಾಗ ಎದುರಿಗೆ ಅಮ್ಮ ನಿಂತಿದ್ದಳು. ಅವಳ ಕಣ್ಣತುಂಬ ನೀರಿತ್ತು!!

ಒಂದು ತರಹದ ಅಸಮಾಧಾನದಲ್ಲಿ "ನೀನೆ ಸ್ನಾನ ಮಾಡಿಕೊಂಡ್ಯಾ ಅಂತ ಕೇಳಿದಳು. ನನಗೆ ಒಂದು ಸಲ ಗಲಿಬಿಲಿ. ನಾನು ಏನು ಮಾಡಿದೆ ಎಂದು ಅಮ್ಮ ಈ ಪ್ರಶ್ನೆ ಕೇಳುತ್ತಿದ್ದಾಳೆ? ಕಣ್ಣೀರು ಹಾಕುವಂತಹದ್ದು ಆಗಿದ್ದಾದರೂ ಏನು?

"ಮೊದಲೆಲ್ಲ ನಾನು ಇಲ್ಲದೆ ತಲೆ ಸ್ನಾನ ಮಾಡಿದವಳೇ ಅಲ್ಲ. ನಾನು ಬರುವವರೆಗೂ ಅಮ್ಮ ಬಾರೆ, ಸ್ನಾನ ಮಾಡಿಸೆ ಎಂದು ಕರೆಯುತ್ತಿದ್ದೆ. ಈಗ ಎಲ್ಲ ದೊಡ್ಡವರಾಗಿಬಿಟ್ಟೀದ್ದೀರಲ್ಲ. ರೆಕ್ಕೆ ಬಲಿತಿದೆ. ಹಾರಿಹೋಗಲು ಇನ್ನೇನು? ಇನ್ನು ಮುಂದೆ

ಅಮ್ಮನೂ ಬೇಡ. ಅಪ್ಪನೂ ಬೇಡ. ಎಲ್ಲ ನೀವೇ ಮಾಡಿಕೊಳ್ಳಿ ಎನ್ನುತ್ತಾ ಕಣ್ಣೀರಾದಳು.

ಅಮ್ಮನ ದುಃಖಕ್ಕೆ ಅರ್ಥ ಕಂಡಿತ್ತು. ಮಾನವ ಸಂಬಂಧಗಳಲ್ಲಿ ಕನಿಷ್ಠ ಮಟ್ಟದ ಡಿಪೆಂಡೆನ್ಸಿ ಬೇಕೇಬೇಕು. ಇಲ್ಲವೆಂದರೆ ನಮ್ಮನ್ನು ಪ್ರೀತಿಸುವಾರಿಗೆ ಇನ್ ಸೆಕ್ಯುರಿಟಿ ಕಾಡುವಂತೆ ಮಾಡಿಬಿಡುತ್ತೇವೆ.-ಸುಮಿ