Saturday, July 9, 2011

ಶೋಷಣೆಯ ಸ್ವರೂಪವೊಂದು ಬದಲಾಗಿದೆಯ?...


ಅಜ್ಜಿ ಏನೇ ಹೇಳಲಿ, ಅವಳ ಅಭಿಪ್ರಾಯ ಏನೇ ಇರಲಿ ನನಗಂತೂ ಅಬ್ಬೆಯ ಮೇಲಿನ ಅಭಿಪ್ರಾಯ ಬದಲಾಗುವುದಿಲ್ಲ. ಅಬ್ಬೆಯನ್ನು ನೋಡಿದಾಗಲೆಲ್ಲ ಸ್ತ್ರೀ ಶೋಷಣೆಯ ಒಂದು ನಮೂನೆಯಾಗಿಯೇ ಕಾಣುತ್ತಾಳೆ.

ಗಂಡ ಸತ್ತಾಗ ಕತ್ತಿನಲ್ಲಿದ್ದ ತಾಳಿಯನ್ನು ತೆಗೆಯಲ್ಲಿಲ್ಲ ಎನ್ನುವ ಚಿಕ್ಕ ಕಾರಣಕ್ಕೇ ಅಷ್ಟೆಲ್ಲ ಅವಮಾನಕ್ಕೆ ಒಳಗಾದವಳು... ಸ್ವಾಭಾವಿಕ ಆಸೆಗಳನ್ನು ಆಪ್ತ ಗೆಳತಿ ಎಂದುಕೊಂಡವಳ ಹತ್ತಿರ ಹಂಚಿಕೊಂಡಿದ್ದಕ್ಕೇ ಆ ಆಪ್ತಗೆಳತಿಯ ನಿಷ್ಠೂರಕ್ಕೆ ಒಳಗಾದವಳು... ಸಾಯುವತನಕ ಪ್ರೀತಿಯನ್ನು ಕಾಣದೆ ಬದುಕುವ ಅನಿವಾರ್ಯತೆಗೆ ಒಳಗಾದವಳು... ಅಂಥವಳ ಮೇಲೆ ದ್ವೇಷವಾದರೂ ಹೇಗೆ ಹುಟ್ಟೀತು?

ಈ ವೈಧವ್ಯದ ಹೆಸರಿನಲ್ಲಿ ಸ್ತ್ರೀಯರು ಅನುಭವಿಸುವ ಹಿಂಸೆಗಿಂತ 'ಸಹಗಮನವೇ ಉತ್ತಮವಾದುದೇನೋ... ಆದರೆ ಅಮಾನುಷ ಎಂದು ಆ ಪದ್ಧತಿಯನ್ನು ಕೈಬಿಡಲಾಯಿತಂತೆ! ಹೆಣ್ಣು ತನ್ನ ಪ್ರಮುಖ ಹಕ್ಕೆಂದು ತಿಳಿಯುವ ಸೌಂದರ್ಯವನ್ನು ತನ್ನ ಸಮಾಧಾನಕ್ಕೆಂದು ವೈಧವ್ಯದ ಹೆಸರಿನಲ್ಲಿ ಹಾಳುಗೆಡವುದು ಅಮಾನುಷವಲ್ಲವೇ?! 'ಜೀವನ ಪೂರ್ತಿ ಸಂತೋಷ, ಪ್ರೀತಿ ಏನೂ ಇಲ್ಲದೆ ಒಂದು ವಸ್ತುವಿನಂತೆ ಬಾಳು' ಹೇರುವುದು ಅಮಾನುಷವಲ್ಲವೇ?

ಇದನ್ನೆಲ್ಲ ಅಜ್ಜಿಯನ್ನು ಕೇಳಬೇಕು ಎಂದುಕೊಳ್ಳುತ್ತೇನೆ. ಆದರೆ "ಹೌದು, ಎರಡಕ್ಷರ ಕಲಿತದ್ದಕೆ ಬುದ್ಧಿವಂತೆ ಅಂದುಕೊಂಡುಬಿಟ್ಟೆಯಾ? ಬೇರೆ ಏನಾದರೂ ಕೆಲಸ ಇದ್ದರೆ ನೋಡು ನಡೆ" ಎನ್ನುವ ಬೈಗುಳವಲ್ಲದೆ ಮತ್ತೇನೂ ಅಜ್ಜಿಯಿಂದ ನಿರೀಕ್ಷಿಸುವಂತಿಲ್ಲ.

ಹೌದು... ಈಗ ನಮ್ಮ ತಲೆಮಾರಿನಲ್ಲಿ ವೈಧವ್ಯದ ಹೆಸರಿನ ಶೋಷಣೆ ಇಲ್ಲ. ಮರುಮದುವೆ ಸ್ವಲ್ಪ ಕಷ್ಟ ಎನಿಸಿದರೂ ಒಪ್ಪಿಕೊಳ್ಳುತ್ತಾರೆ. ಆದರೆ... ಆದರೆ ಶೋಷಣೆ ಎನ್ನುವುದು ಸಂಪೂರ್ಣವಾಗಿ ಮಾಯವೇನೂ ಆಗಿಲ್ಲ. ಸ್ವರೂಪ ಬದಲಾಗಿದೆ ಅಷ್ಟೇ!

ಇಷ್ಟೆಲ್ಲ ಮಾಡಿದರೂ ಚಕಾರವೆತ್ತದ ಅಬ್ಬೆ... ಕೆಲವೊಮ್ಮೆ ಅಪ್ಪನ ತಪ್ಪಿದ್ದರೂ ಸಹಿಸಿಕೊಂಡು ಸುಮ್ಮನಿರುವ ಅಮ್ಮ... ಬಸವ ಕುಡಿದುಬಂದು ಹೊಡೆದರೂ ವರ್ಷಕ್ಕೊಂದು ಅವನಿಗೊಂದು ಮಗು ಹೆತ್ತುಕೊಡುವ ಕೆಲಸದ ಮಾದಿ...ಒಂದು ರೀತಿ ಇವರೆಲ್ಲ ಶೋಷಣೆಗೆ ಒಳಗಾಗುತ್ತಿರುವವರೇ ಅಲ್ಲವೆ?

ಕಾಲೇಜಿನಿಂದ ಹೊರಬಿದ್ದರೆ ಎಷ್ಟು ಹೊತ್ತಿಗೆ ಮನೆ ಸೇರಿಕೊಳ್ಳುತ್ತೀನೋ ಎನಿಸುತ್ತದೆ. ಒಂದು ಹೆಣ್ಣು ಮನೆಯಿಂದ ಹೊರಬಿದ್ದಳು ಎಂದರೆ ಕಣ್ಣಲ್ಲೇ ಮೈಸವರುವ ನೂರಾರು ಕಣ್ಣುಗಳು... ರಾತ್ರಿ ಸ್ವಲ್ಪ ತಡವಾದರೂ ಶೀಲವನ್ನೇ ಶಂಕಿಸುವ ನಾಲಗೆಗಳು... ಬಸ್ಸು, ಜನನಿಬಿಡ ಪ್ರದೇಶಗಳಲ್ಲಂತೂ ಸ್ತ್ರೀಯರ ಸ್ಥಿತಿ ದೇವರಿಗೇ ಪ್ರೀತಿ... ಸಿಕ್ಕಿದ್ದೇ ಛಾನ್ಸು ಎಂದು ಕಂಡಕಂಡ ಕಡೆಯಲೆಲ್ಲ ಮುಟ್ಟುವ ಪೋಲಿ ಕೈಗಳನ್ನು ಮುರಿದು ಹಾಕಿಬಿಡುವ ಕೋಪ ಬರುತ್ತದೆ...ಆದರೆ ಆ ಧೈರ್ಯವೂ ಇಲ್ಲ. ಅಷ್ಟು ಶಕ್ತಿಯೂ ಇಲ್ಲ.

ಹುಡುಗಿಯರನ್ನು ಕಂಡರೆ ಓವರ್ ಆಕ್ಟಿಂಗ್ ಮಾಡುವ ಹಿಸ್ಟರಿ ಲೆಕ್ಚರರ್ ನ್ನಂತೂ ಚಚ್ಚಿಹಾಕಿಬಿಡುವಷ್ಟು ಕೋಪ ಬರುತ್ತದೆ. ಆದರೆ ಮಾರ್ಕ್ಸ್, ನೋಟ್ಸ್ ಎಂದು ಅವನ ಮುಂದೆ ಹಲ್ಲು ಕಿರಿಯುವ ಅನಿವಾರ್ಯತೆ...

ಹೀಗೆ ವಿಚಾರ ಮಾಡುತ್ತ ಕುಳಿತರೆ ಹೆಣ್ಣು ಜನ್ಮವೇ ಒಂದು ಕರ್ಮ ಎಂದು ಅನಿಸಲಿಕ್ಕೆ ಪ್ರಾರಂಭವಾಗುತ್ತದೆ...

ಛೇ... ನಾಳೆ ಹಿಸ್ಟರಿ ನೋಟ್ಸ್ ಸಬ್‌ಮಿಟ್ ಮಾಡಬೇಕು... ಇನ್ನೆಲ್ಲಿ ತಪ್ಪು ಕಂಡುಹಿಡಿದು ಕಾಟ ಕೊಡುತ್ತಾನೋ ಪುಣ್ಯಾತ್ಮ...