Monday, August 30, 2010

ಎಲ್ಲಿ ಹೋಯಿತು ಆ ಸಂಭ್ರಮಾಚರಣೆ?

ಪುಟ್ಟ ಮಕ್ಕಳಿರುವಾಗ ಅಗಸ್ಟ್ ೧೫, ಜನವರಿ ೨೬, ಗಾಂಧಿ ಜಯಂತಿ, ಮಕ್ಕಳ ದಿನಾಚರಣೆ ಯಾವುದೇ ವಿಶೇಷ ದಿನ ಇರಲಿ, ಎಷ್ಟು ಸಂಭ್ರಮವಿತ್ತು.. ಎರಡು ದಿನ ಮೊದಲಿನಿಂದಲೇ ತಯಾರಿ ಶುರುವಾಗುತ್ತಿತ್ತು.

ಬೆಳ್ಳನೆಯ ಹೊಚ್ಚ ಹೊಸ ಬ್ಲೌಸು, ನೀಲಿ ಲಂಗ.. ಮನ ತುಂಬಾ ಉತ್ಸಾಹ. "ಪೂಜೆ ಮಾಡಲಾದರೂ ಸ್ವಲ್ಪ ಹೂ ಇಡೆ" ಎಂಬ ಅಜ್ಜಿಯ ಕೂಗನ್ನೂ ಕಿವಿ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಮನೆಯ ದೇವರ ಪಾಲಿನ ಹೂವೆಲ್ಲ ಶಾಲೆಗೆ ಸೇರುತ್ತಿದ್ದವು. ಯಾರು ಹೆಚ್ಚಿಗೆ ಹೂವನ್ನು ತರುತ್ತಾರೆ ಎಂದು ನಮ್ಮ ನಮ್ಮಲ್ಲೇ ಕಾಂಪಿಟೇಶನ್.

ಈ ದಿನಾಚರಣೆಗಳು ಬಂದರೆ ಮನೆಯ ಹಿರಿಯರಿಗೆಲ್ಲ ತಲೆನೋವು. ಭಾಷಣ ಬರೆದುಕೊಡು ಎಂದು ಎಲ್ಲರಿಗೂ ದುಂಬಾಲು ಬೀಳುತ್ತಿದ್ದೆವು. 'ಮಾನ್ಯ ಅಧ್ಯಕ್ಷರೇ, ಪೂಜ್ಯ ಗುರುಗಳೇ..'ಎಂದು ಒಂಚೂರೂ ತಪ್ಪದಂತೆ ಕಷ್ಟಪಟ್ಟು ಉರುಹೊಡೆದು ಶಿಕ್ಷಕರಿಗೆ ಒಪ್ಪಿಸುವುದೇ ಒಂದು ಪ್ರಿಯ ಸಾಹಸವಾಗಿತ್ತು.

ಊರ ಹಿರಿಯರೊಬ್ಬರಿಗೇ ಅಧ್ಯಕ್ಷರ ಸ್ಥಾನ ಮೀಸಲಾಗಿರುತ್ತಿತ್ತು. ಪ್ರತಿ ವರ್ಷ ಅದೇ ಅಧ್ಯಕ್ಷರು, ಅದೇ ಭಾಷಣ ವರ್ಷವೊಂದು ಬದಲಾಗಿರುತ್ತಿತ್ತು ಅಷ್ಟೇ. ಉತ್ಸಾಹ ಮಾತ್ರ ಸ್ವಲ್ಪವೂ ಕಡಿಮೆಯಾಗುತ್ತಿರಲಿಲ್ಲ.

ಈ ದಿನಾಚರಣೆಗಳ ಉತ್ಸಾಹ ಒಂದು ರೀತಿಯದ್ದಾದರೆ ಚೌತಿ, ದೀಪಾವಳಿ, ಯುಗಾದಿ ಹಬ್ಬಗಳದ್ದೇ ಇನ್ನೊಂದು ರೀತಿ. ಹಬ್ಬ ಅಮ್ಮನ ಸುತ್ತಮುತ್ತ ತಿರುಗುತ್ತ, ಎಷ್ಟು ಹೊತ್ತಿಗೆ ಆ ಕಜ್ಜಾಯಗಳೆಲ್ಲ ನಮ್ಮ ಕೈಸೇರುತ್ತವೆಯೋ ಎಂಬ ತವಕ. ಜೀವ ಹೋಗುತ್ತದೆ ಎಂಬಷ್ಟು ಹೆದರಿಕೆಯಾದರೂ ಪಟಾಕಿ ಹೊಡೆಯುವ ಕಾತರ. ಹಬ್ಬದ ಮರುದಿನ ಮನೆ ತುಂಬ ಸೇರುವ ನೆಂಟರು. ಮಾತು ಬಿಟ್ಟು ಅದೆಷ್ಟು ದಿನಗಳಾಗಿವೆಯೋ ಎಂಬಂತೆ ಮಾತು.. ಮಾತು.. ಮಾತು.

ಉದ್ದದ ಊಟದ ಪಂಕ್ತಿ. ಒಂದು ಕಡೆ ಸೇರುವ ಮಕ್ಕಳ ಕೂಟ. ಆಹಾ ಎಷ್ಟು ಸುಂದರ ದಿನಗಳು.. ಆ ಎಳೇ ವಯಸ್ಸಿನಲ್ಲಿ ಹಬ್ಬಗಳ ಆಕರ್ಷಣೆಯೇ ಹಾಗಿರುತ್ತಿತ್ತು.

ಆದರೆ ಕೆಲವೇ ವರ್ಷಗಳಲ್ಲಿ ಅದೆಂತಹ ಬದಲಾವಣೆ! ಒಂದರೆಡು ದಿನ ನೆಂಟರಿಷ್ಟರೊಂದಿಗೆ ಸೇರಿ ಕಾಲ ಕಳೆಯಲು ಯಾರಿಗೂ ಟೈಮಿಲ್ಲ. ಮನೆ ಬಿಟ್ಟು ಬಹಳ ದಿನ ಇರುವಂತಿಲ್ಲ. ಏಕೆಂದರೆ ಇದು ವಿಭಕ್ತ ಕುಟುಂಬದ ಅನಿವಾರ್ಯತೆ. ಅಷ್ಟು ಒತ್ತಾಯ ಮಾಡಿ ಕರೆದರೆ ಊಟದ ಹೊತ್ತಿಗೆ ಬಂದು ಊಟ ಮುಗಿಸಿ ತಕ್ಷಣ ತಿರುಗಿ ಮನೆಗೆ. ಹರಕೆ ತೀರಿಸಲು ಬಂದವರಂತೆ ಭೇಟಿ. ತಮ್ಮವರ ಜೊತೆಗೆ ಮನ ಬಿಚ್ಚಿ ಮಾತನಾಡುವುದಿರಲಿ, ನಗಲೂ ಸಲುಗೆ ಇಲ್ಲ! ಇನ್ನು ಬಂದ ಮಕ್ಕಳಿಗೋ, ತಮಗೆ ಇವರೆಲ್ಲ ಏನು ಆಗಬೇಕೆಂದು ತಿಳಿಯದಷ್ಟು ಗೊಂದಲ.

ಇನ್ನು ರಾಷ್ಟೀಯ ದಿನಾಚರಣೆಗಳೋ... ಅವು ಕೇವಲ ಈಗ ರಜಾ ದಿನಗಳು ಅಷ್ಟೇ! ಅವತ್ತು ಫುಲ್ ರಿಲೀಫ್. ಹೈಸ್ಕೂಲ್ ತನಕ ಶಿಕ್ಷಕರ ಹೆದರಿಕೆಯಿಂದಲಾದರೂ ಹೋಗುತ್ತಿದ್ದೆವು. ಈಗ ಕಾಲೇಜಿಗೆ ಬಂದಮೇಲೆ ಅದೆಲ್ಲ ಸಿಲ್ಲಿ.. ಪ್ರಿನ್ಸಿ, ಕೆಲವು ಲೆಕ್ಚರರ್‌ಗಳು, ಅಟೆಂಡರುಗಳು ಕಾಟಾಚಾರಕ್ಕೆ ಎಂಬಂತೆ ಧ್ವಜ ಹಾರಿಸುತ್ತಾರೆ.

ಮನುಷ್ಯ ಬೆಳೆದಂತೆ ಯಾಕೆ ಈ ಎಲ್ಲ ಬದಲಾವಣೆ? ಈ ಆಚರಣೆಗಳು, ಸಂಭ್ರಮ ಕೇವಲ ಮಕ್ಕಳಿಗೆ ಮಾತ್ರವೇ ಸೀಮಿತವೆ?!

Tuesday, August 24, 2010

ಇತ್ತೀಚೆಗೆ ನನ್ನ ಡೈರಿಯ ತುಂಬ ಅವನೆ...

ವಿವೇಕ್.. ವಿವೇಕ್ ಇದೇ ಹೆಸರು ಅದೆಷ್ಟು ಸಾರಿ ಬರೆದುಕೊಂಡಿದ್ದೆನೋ...ಯಾಕೆ ಕಾಡ್ತಾನೆ ಅವನು ನನ್ನನ್ನು ಈ ರೀತಿ? ನಿಜವಾಗಿಯೂ ಅವನ ಮೇಲೆ ಪ್ರೀತಿ ಆಗಿಬಿಟ್ಟಿದೆಯಾ? ಹೀಗೆಲ್ಲಾ ಅಂದುಕೊಂಡ್ರೆ ಯಾಕೋ ತುಂಬ ಭಯ ಆಗುತ್ತೆ...

ಏನೋ ತಪ್ಪು ಕೆಲಸ ಮಾಡ್ತಾ ಇದ್ದೇನೆ ಅನಿಸುತ್ತೆ. ಅಪ್ಪ ಅಮ್ಮನಿಗೆ ಮೋಸ ಮಾಡ್ತಾ ಇದೀನೆನೋ ಅಂತ ಫೀಲ್ ಆಗುತ್ತೆ. ನನ್ನ ವಯಸ್ಸಾದ್ರೂ ಏನು? ಈಗಿರೋ ನನ್ನ ಜವಾಬ್ದಾರಿ ಆದ್ರೂ ಏನು? ಚೆನ್ನಾಗಿ ಓದಲಿ ಮಗಳು ಅಂತ ಅಪ್ಪ ಅಮ್ಮ ಕಾಲೇಜಿಗೆ ಕಳಿಸಿದ್ರೆ ನಾನು ಮಾಡ್ತಾ ಇರೋದಾದ್ರೂ ಏನು! ಡೈರಿ ತುಂಬ ವಿವೇಕನ ಹೆಸರನ್ನು ಬರೆಯುತ್ತ ಕುಳಿತಿರೋದು!!

ಛೇ.. ನನ್ನ ಮೇಲೆ ನನಗೇ ಬೇಜಾರು ಆಗ್ತಾ ಇದೆ. ದಿನವಿಡೀ ಮೂಡೇ ಇಲ್ಲ. ಈಗಾಗಲೇ ಕುಮ್ಮಿಗೂ ನನ್ನ ಮೇಲೆ ಅನುಮಾನ ಮೂಡಿದೆ. Guilt ನಿಂದ ಮನೆಗೆ ಹೋದರೆ ಅಪ್ಪನ ಮುಖ ನೋಡಿ ಮಾತನಾಡೋಕೂ ಹೆದರಿಕೆ. ಯಾವುದಕ್ಕೂ ಒಂದು ಸಾರಿ ಶೀಲಕ್ಕನ ಭೇಟಿ ಮಾಡಿ ಮಾತನಾಡುವುದು ಒಳ್ಳೆಯದು.

ಇಂತಹದ್ದಕ್ಕೆಲ್ಲ ಶೀಲಕ್ಕನ ಬಿಟ್ಟು ಇನ್ಯಾರನ್ನು ಕೇಳಲಿ? ಅವಳು ಮಾತ್ರ ನನ್ನ ಪ್ರಶ್ನೆಗೆ ಉತ್ತರ ಕೊಡಬಲ್ಲಳು. ಈ ವಾರ ಮನಗೆ ಹೋದಾಗ ನನ್ನ ಪುಣ್ಯ ಎಂಬಂತೆ ದೂರದ ಊರಲ್ಲಿ ಕಲಿಯುತ್ತಿದ್ದ ಶೀಲಕ್ಕ ಕೂಡ ಬಂದಿದ್ದಳು. ಕಂಡಕೂಡಲೇ ನೇರ ಸ್ವಭಾವದ ಶೀಲಕ್ಕ ನೇರವಾಗಿ ಕೇಳಿದ್ದಳು, "ಪಿಯುಸಿ ಅಂತೀಯಾ ಲವ್ವು-ಗಿವ್ವು ಏನೂ ಇನ್ನೂ ಮಾಡಿಲ್ವಾ?" ಎಂದು ಕೇಳ್ತಾ ತುಂಟ ನಗೆ ಬೀರಿದಳು.

ಇಷ್ಟು ದಿನ ಮನದಲ್ಲೇ ಇರಿಸಿಕೊಂಡಿದ್ದ ಗೊಂದಲ, ತಳಮಳ ಎಲ್ಲ ಶೀಲಕ್ಕನ ಈ ಪ್ರಶ್ನೆಯಿಂದ ಕಣ್ಣೀರಾಗಿ ಹೊರಬಂತು.
ಗಾಬರಿಯಿಂದ ಶೀಲಕ್ಕ ಹತ್ತಿರ ಓಡಿಬಂದಳು. "ಏನಾಯ್ತೆ ಸುಮಿ.." ಕಕ್ಕುಲಾತಿಯಿಂದ ಕೇಳಿದಳು. ಅಂದು ರಾತ್ರಿ ಬಸ್ಸು ಕೆಟ್ಟು ವಿವೇಕ್ ಮನೆಯ ತನಕ ಬಿಟ್ಟು ಹೋದದ್ದು, ಕಾಲೇಜ್‌ನಲ್ಲಿ ಅವನು ಬೇಕಾದಷ್ಟಕ್ಕೆ ಮಾತನಾಡೋದು, ಡೈರಿ ತುಂಬ ಅವನ ಹೆಸರನ್ನೇ ಬರೆದುಕೊಂಡಿರೋದು.. ಎಲ್ಲ ವಿವರವಾಗಿ ಹೇಳಿದೆ.

ಶೀಲಕ್ಕ ಸಣ್ಣದಾಗಿ ನಕ್ಕು, "ಅವನಿಗೆ ನಿನ್ನ ಪ್ರೀತಿಯ ವಿಷಯ ಗೊತ್ತಾ?" ನಾನು ಇಲ್ಲವೆಂದು ತಲೆಯಾಡಿಸಿದೆ. "ಮತ್ತೆ ನೀನು ಯಾಕೆ ಇಷ್ಟೆಲ್ಲ ಅತ್ತು, tension ಮಾಡಿಕೊಳ್ತಾ ಇದಿಯಾ? ನೋಡು, ಕಷ್ಟದಲ್ಲಿ ಇರೋ ಸ್ತ್ರೀಗೆ ಸಹಾಯ ಮಾಡೋದು ಪುರುಷರ ಸಹಜ ಗುಣ. ತನ್ನ ರಕ್ಷಣೆ ಮಾಡಿದ ಪುರುಷನ ಕಡೆ ಸ್ವಾಭಾವಿಕವಾಗಿ ಸ್ತ್ರೀ ಸೆಳೆಯಲ್ಪಡುತ್ತಾಳೆ. ಈಗ ನಿನಗಾಗಿರುವುದೂ ಅಷ್ಟೆ.

ಇದಕ್ಕೆ ನೀನು ವಿಶೇಷ ಅರ್ಥ ಹಚ್ಚಿ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಮೊದಲು ಒಂದು ಹಂತದವರಗೆ ನಿನ್ನ ವಿದ್ಯಾಭ್ಯಾಸವನ್ನು complete ಮಾಡು. ಅಲ್ಲಿ ತನಕ ನಿನಗೆ ಯಾವುದು ಸರಿ, ಯಾವುದು ತಪ್ಪು, ಯಾವುದು ಪ್ರೀತಿ, ಯಾವುದು ಆಕರ್ಷಣೆ ಎಂದು ನಿರ್ಧರಿಸುವ ತಿಳುವಳಿಕೆ ಮೂಡಿರುತ್ತದೆ. ದುಡುಕ ಬೇಡ. ಎಳೇ ವಯಸ್ಸು ನಿಂದು. ನಾಳೆ ಕಾಲೇಜಲ್ಲಿ ಅವನನ್ನು ಸಹಜವಾಗಿ ಮಾತನಾಡಿಸು. ಅವನ ಮಾತುಗಳಿಗೆ ವಿಶೇಷ ಅರ್ಥ ಕಲ್ಪಿಸಬೇಡ. ಒಂದು ಒಳ್ಳೆಯ ಸ್ನೇಹ ಬೆಳೆಯಲಿ ನಿಮ್ಮಿಬ್ಬರ ನಡುವೆ... "

ಶೀಲಕ್ಕನ ಮಾತು ಕೇಳಿ ಒಮ್ಮೆ ಕಣ್ಣೆದುರು ಕಟ್ಟಿದ ಭ್ರಮೆಯ ಪೊರೆ ಕಳಚಿದಂತಾಯಿತು. ಇಲ್ಲದೆ ಹೋದದ್ದನ್ನೆಲ್ಲ ಕಲ್ಪಿಸಿಕೊಂಡು ಸುಮ್ಮನೇ ಕಾಲಹರಣ ಮಾಡಿದೆ. ನಾಳೆಯಿಂದ ಎಲ್ಲರ ಜೊತೆ ಹೇಗೆ ಇರುತ್ತೇನೋ ಅವನ ಜೊತೆಗೂ ಹಾಗೆ ಇರುತ್ತೇನೆ. ಈ ಪ್ರೀತಿಯ ಜಂಜಾಟವೆಲ್ಲ ಈಗಲೇ ಬೇಡ. ಹೊಸ ನಿರ್ಧಾರದೊಂದಿಗೆ, ಹೊಸ ಹುಮ್ಮಸ್ಸಿನಿಂದ ಶೀಲಕ್ಕನ ಮನೆಯಿಂದ ಹಿಂದಿರುಗಿದ್ದೆ.

Sunday, August 1, 2010

ಎಲ್ಲಿ ಹೋಯ್ತು ಆ ಮುಗ್ಧ ಸ್ನೇಹ...

ಹಿಂದೆ..
ಹಾಗಾದರೆ ಪ್ರೀತಿ ಅಂದರೆ ಹೀಗೆ ಇರುತ್ತಾ? ಇದ್ಯಾವುದಕ್ಕೂ ನನ್ನಲ್ಲಿ ಉತ್ತರವಿಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳುವುದಾದರೂ ಹೇಗೆ?
ಮುಂದೆ...

ಮನುಷ್ಯ ಬೆಳೆದಂತೆ ಅವನ ವಿಚಾರಗಳೂ ಎಷ್ಟು ಬದಲಾಗಿಬಿಡುತ್ತವೆ! ಅಥವಾ ಸಮಾಜವೇ ಅವನನ್ನು ಬದಲಾಯಿಸಿ ಬಿಡುತ್ತವೆಯೊ? 8-10 ವರ್ಷಗಳಲ್ಲಿ ಎಂತಹ ಬದಲಾವಣೆ!

ಜೊತೆಯಲ್ಲಿ ಆಡಿ ಬೆಳೆದ ಸ್ನೇಹಿತ ಅಪರಿಚಿತನಾಗಿಬಿಟ್ಟಿದ್ದ!! ನಾನು ದೊಡ್ಡ ಮನೆಯ ಮಗಳು ಎಂಬ ಕಾರಣವೋ ಅಥವಾ ಜಾತಿಯೋ ನಮ್ಮಿಬ್ಬರ ನಡುವೆ ಅಡ್ಡ ಬಂದಿದ್ದು? ಏನೇ ಇದ್ದರೂ ಮಾತನಾಡಿಸದ? ಕಂದಕವೆ?!

ವಿನಾಯಕ.. ಉಹುಂ ಗೊಣ್ಣೆ ವಿನ್ನಿ. ಆ ಹೆಸರೇ ಅವನಿಗೆ ಹೊಂದಿಕೆಯಾಗುವುದು. ನಾವೆಲ್ಲಾಅವನನ್ನು ಕರೆಯುತ್ತಿದ್ದುದೇ ಆ ಹೆಸರಿನಿಂದ. ಯಾವಾಗಲೂ ಮೂಗಿನಿಂದ ಸುರಿಯುತ್ತಿರುವ ಗೊಣ್ಣೆ, ಹರಕು ಮುರುಕು ಅಂಗಿಯ ತೋಳಿನಿಂದ ಅದನ್ನು ಒರೆಸಿಕೊಳ್ಳುವ ವ್ಯರ್ಥ ಪ್ರಯತ್ನ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಕೂಲಿಗೆ ಹೋಗುವ ಅವನಮ್ಮ ಅವನನ್ನು ಕೈಲಾದಷ್ಟು ಸ್ವಚ್ಛವಾಗಿ ಇಡುವ ಪ್ರಯತ್ನ ಮಾಡುತ್ತಿದ್ದಳು. ಆದರೆ ಅದೆಲ್ಲ ಕೆಲವೇ ಕ್ಷಣಗಳಲ್ಲಿ ಮಣ್ಣುಪಾಲು ಆಗುವುದೆಂದು ಅವಳಿಗೂ ಗೊತ್ತು. ಅಂತಹ ತುಂಟ ಅವನು. ಹಕ್ಕಿ, ಹೂವು, ಹಣ್ಣು, ಮರಗಳ
ಹೆಸರೆಲ್ಲ ಅವನಿಗೆ ಬಾಯಿಪಾಠ. ನಮಗೆಲ್ಲ ಒಂದು ಥರ ಸ್ಫೂರ್ತಿ, ಸೋಜಿಗವಾಗಿದ್ದ.

ಆದರೆ ಅವನು ಸಮಾಜದ ಕೆಳಸ್ತರದವನು. ಅವನ ಅಪ್ಪ-ಅಮ್ಮ ಮಾಡುತ್ತಿದ್ದದ್ದು ಕೂಲಿ ಕೆಲಸ. ನಾವು ಆ ಶಾಲೆಯಲ್ಲಿದ್ದ 8-10 ಮಕ್ಕಳು. ನಮಗೆ ಆ ಜಾತಿ ಭೇದವಿರಲಿಲ್ಲ. ನಾವೆಲ್ಲ ಒಟ್ಟಿಗೇ ಅ ಆ ಇ ಕಲಿತಿದ್ದು, ಆಡಿದ್ದು, ತಪ್ಪು ಲೆಕ್ಕ ಮಾಡಿ ಕಾವೇರಿ ಟೀಚರ್ ಹತ್ತಿರ ಬಾಸುಂಡೆ ಬರುವಂತೆ ಹೊಡೆಸಿಕೊಂಡಿದ್ದು..

ನಾನು ವಿನ್ನಿ ವಿನಿಮಯ ಮಾಡಿಕೊಂಡ ವಸ್ತುಗಳೆಷ್ಟೋ..ನನ್ನ ಬಳಪಕ್ಕೆ ಅವನ ಪುಟ್ಟ ಬಾತುಕೋಳಿ ಗೊಂಬೆ, ಮುರುಕು ಪೆನ್ನಿಗೆ ಬೆಂಕಿಪೊಟ್ಟಣದ ಚಾಪಾ... ಹೀಗೆ ಅದೆಷ್ಟೋ ಅವನ ಇಷ್ಟೊ ಇಷ್ಟದ ವಸ್ತುಗಳು ನನ್ನ ಸ್ಕೂಲ್ ಬ್ಯಾಗ್ ಸೇರಿದ್ದವು. ಶನಿವಾರ ಶಾಲೆಯಿಂದ ಮರಳುವಾಗ ಮಡಿಲು ತುಂಬುವಷ್ಟು ನೇರಳೆ ಹಣ್ಣು, ಕಾಡಿನ ಅಪರೂಪದ ಹಣ್ಣುಗಳು ವಿನ್ನಿಯ ಕೃಪೆಯಿಂದ ಸಿಗುತ್ತಿದ್ದವು. ನಮ್ಮ ನಡುವೆ ಮೇಲು ಕೀಳೆಂಬ ಭಾವ ಇರಲಿಲ್ಲ. ಅವನು ನಾಲ್ಕನೆ ಕ್ಲಾಸಿಗೆ ಶಾಲೆ ಬಿಟ್ಟಿದ್ದ. ಆದರೆ ದಾರಿಯಲ್ಲಿ ಸಿಕ್ಕರೆ 2-3 ವರ್ಷದವರೆಗೆ ನಮ್ಮಲ್ಲಿ ಅದೇ ಸಲುಗೆ ಇತ್ತು. ನಂತರ ನನ್ನ ಹೈಸ್ಕೂಲು, ಕಾಲೇಜು ಎಂದು ವಿನ್ನಿ ಮರೆತುಹೋಗಿದ್ದ..

ಆದರೆ ಇವತ್ತು ಏನಾಗಿಬಿಟ್ಟಿತ್ತು ಅವನಿಗೆ? ಬಾಲ್ಯದ ಒಳ್ಳೆಯ ಸ್ನೇಹಿತ. ಜೊತೆಯಲ್ಲೆ ಆಡಿ, ಕುಣಿದು, ಅತ್ತುಬೆಳೆದವರು. ಇವತ್ತು ನಮ್ಮ ಮನೆ ಜಗುಲಿ ಕಟ್ಟೆಯ ಮೇಲೆ ಕುಳಿತವನು ಮುಖ ತಿರುಗಿಸಿಕೊಂಡು ಅನಿವಾರ್ಯ ಎಂಬಂತೆ ನನ್ನ ಜೊತೆ ಮಾತನಾಡಿದ್ದ.. ಅದೂ ಬಹುವಚನ ಕೊಟ್ಟು!  "ಏನು.. ಸುಮಾ ಹೆಗಡ್ತೀರು... ಯಾವಾಗ ಬಂದ್ರಿ?...  ನಾನು "ಏನೋ ಗೊಣ್ಣೆ,ಹೇಗಿದಿಯಾ?" ಎಂದು ಸಲುಗೆಯಿಂದ ಮಾತನಾಡಲು ಹೊರಟವಳು...

ಆದರೆ ಅವನ ಬಹುವಚನ, ಮುಜುಗರ ನನ್ನ ಮಾತನ್ನು ಕಟ್ಟಿ ಹಾಕಿದ್ದವು..ನಾನು 'ಹೂಂ' ಎಂದು ತಲೆ ಅಲ್ಲಾಡಿಸಿ ಎದ್ದು ಒಳ ಹೋದೆ. ಯಾಕೋ... ಮಂಕು ಕವಿದಂತಾಗಿತ್ತು. ಎಲ್ಲಿ ಹೋಯ್ತು ಆ ಗೆಳೆತನ?

ಹೌದು.. ಇನ್ನು ಜೀವನವಿಡೀ ಆ ಕಂದಕವನ್ನು ನಾವಿಬ್ಬರೂ ಜೀವಂತವಾಗೇ ಇಡುತ್ತೇವೆ. ಜಾತಿಯ ಗೆರೆಯನ್ನು ನಾವಿಬ್ಬರೂ ದಾಟಲಾರೆವು. ಅಕಸ್ಮಾತ್ ನಾನು ಮೊದಲಿನ ಸ್ನೇಹವನ್ನು ಜೀವಂತವಾಗಿಸಲು ಯತ್ನಿಸಿದರೆ ಅವನೇ ಅದನ್ನು ಕೊಲ್ಲುತ್ತಾನೆ.. ಅಷ್ಟು ಕೀಳರಿಮೆ ಕಂಡಿದ್ದೇನೆ ಅವನ ಕಣ್ಣುಗಳಲ್ಲಿ!

ಕೇವಲ ಜಾತಿ ಬಂಧನದ ಬಗ್ಗೆ ಪಠ್ಯಪುಸ್ತಕಗಳಲ್ಲಿ ಓದಿದ್ದೆ... ಇವತ್ತು ಜೀವನದಲ್ಲಿ ಮೊದಲನೇ ಸಲ ನೇರವಾಗಿ ಅನುಭವಿಸಿದೆ...