Saturday, March 31, 2012

ಕಾಂತನಿಲ್ಲದ ಮೇಲೆ ಏಕಾಂತ ಯಾತಕೋ...


ಯಾಕೋ ಗೊತ್ತಿಲ್ಲ, ಇಷ್ಟು ದಿನ ಕಾಡದ ಏಕಾಂತ ಇತ್ತೀಚೆಗೆ ಕಾಡುತ್ತಿದೆ. ಮೊದಲೆಲ್ಲ ಕುಮ್ಮಿ ಮತ್ತಿತ್ತರ ಗೆಳತಿಯರಿದ್ದರಾಯಿತು, ನನ್ನ ಒಂಟಿತನವೆಲ್ಲ ದೂರಾಗಿ ಬಿಡುತ್ತಿತ್ತು. ಆದರೆ ಈಗ ಗೆಳತಿಯರೆಲ್ಲ ಜೊತೆಗಿದ್ದರೂ ಏನೋ ಒಂದು ತರಹದ ಒಂಟಿತನ ಕಾಡುತ್ತಿದೆ. ಈ ಗೆಳತಿಯರ ಸ್ನೇಹಕ್ಕೆ ಮಿಗಿಲಾದ ಸಾಂಗತ್ಯವೊಂದು ಬೇಕೆನಿಸುತ್ತಿದೆ.

ನನ್ನ ಕ್ಲಾಸಿನ ವಾಣಿ ಅವಳ ಗೆಳೆಯನ ಕೈಹಿಡಿದುಕೊಂಡು ಹೋಗುತ್ತಿದ್ದರೆ ನನಗೂ ಏನೋ `ಕಡಿಮೆಯ ಅನುಭವ...

ರವಿಬೆಳಗೆರೆಯ `ನೀ ಹೀಂಗ ನೋಡಬ್ಯಾಡ ನನ್ನ' ಕಾದಂಬರಿಯ ಹೀರೋ ಶಿಶಿರಚಂದ್ರನ`ಸಾಫ್ಟ್' ಕಣ್ಣುಗಳಂತೆ ಸುಂದರ ಕಣ್ಣುಗಳ ಹುಡುಗ ವಿವೇಕ. ಆ ದಿನ ರಾತ್ರಿ ಬಸ್ ತಪ್ಪಿ ಪೇಚಾಡುತ್ತಿದ್ದ ನನ್ನನ್ನು ಸೇಫ್ ಆಗಿ ಮನೆ ತಲುಪಿಸಿದ ಆಪದ್ಬಾಂಧವ...

ಮಹಾ ಸಂಯಮಿಯಂತೆ ವರ್ತಿಸುತ್ತಾನೆ. ಬೇಕಾದಷ್ಟಕ್ಕೆ ಮಾತು...

ಅವನ ಮೇಲೆ ಆಸಕ್ತಿಯಿದ್ದರೂ ಆ ಭಾವನೆ ಪ್ರೇಮ ಅಂದುಕೊಳ್ಳುವ ಧೈರ್ಯವಿಲ್ಲ. ಕ್ಲಾಸಿನಲ್ಲಿ ಅವನು ಪದೆಪದೆ ನನ್ನೆಡೆಗೆ ನೋಡುತ್ತಿದ್ದರೆ ಏನೋ ಸಂತೋಷವೆನಿಸುತ್ತದೆ. ಆದರೆ ಅವನೂ ನನ್ನನ್ನು ಇಷ್ಟಪಡುತ್ತಾನೆ ಎಂದುಕೊಳ್ಳುವಷ್ಟು ನಂಬಿಕೆ ಇಲ್ಲ.

ಅಷ್ಟಕ್ಕೂ ಇದೇನಾ ಪ್ರೇಮ ಎನ್ನುವುದೂ ಗೊತ್ತಿಲ್ಲ. ಕುಮ್ಮಿ, ಶೀಲಕ್ಕರನ್ನು ಕೇಳೋಣವೆಂದರೆ ಅವರು ನಿಜವಾಗಿಯೂ ನಾನು ವಿವೇಕನನ್ನು ಪ್ರೀತಿಸುತ್ತಿದ್ದೇನೆ ಎಂದುಕೊಂಡುಬಿಟ್ಟರೆ?!

ಅಲ್ಲದೆ ನನ್ನಷ್ಟಕ್ಕೆ ನಾನು ಏನೇನೋ ಕಲ್ಪನೆ ಮಾಡಿಕೊಂಡು, ಅವನ ಮೇಲೆ ಇಲ್ಲದ ಭಾವನೆ ಬೆಳೆಸಿಕೊಂಡು, ಏನೇನೋ ಕನಸು ಕಂಡು ಆಮೇಲೆ ಅವನು "ನನಗೆ ನಿನ್ನ ಮೇಲೆ ಆ ರೀತಿ ಯಾವುದೇ ಭಾವನೆಗಳೇ ಇಲ್ಲ" ಎಂದು ಹೇಳಿಬಿಟ್ಟರೆ, ಅದಕ್ಕಿಂತ ಅವಮಾನ ಬೇಕಾ...

ಈ ಜಂಜಾಟವೆಲ್ಲ ಯಾಕೆ? ಮೊದಲು ಓದು. ಈ ಲವ್ವು ಗಿವ್ವು ಎಲ್ಲ ಆಮೇಲೆ. ಈಗಲೆ ಪ್ರೀತಿ ಎಂದೆಲ್ಲ ತಲೆ ಕೆಡೆಸಿಕೊಂಡರೆ ಓದಿ ಏನಾದರೂ ಸಾಧಿಸಬೇಕು ಎನ್ನುವ ನನ್ನ ಕನಸುಗಳಿಗೆಲ್ಲ ಭಂಗ ಬಂದುಬಿಡುತ್ತದೆಯೊ! ಆ ಕಾಲ ಬಂದಾಗ ನೋಡಿಕೊಳ್ಳೋಣ. ಸದ್ಯಕ್ಕೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಓದಬೇಕು... ನಂತರದ್ದೆಲ್ಲ ಆಮೇಲೆ. ಹೀಗೆಲ್ಲ ಸಾವಿರ ಸಾರಿ ಅಂದುಕೊಳ್ಳುತ್ತೇನೆ.

ಆದರೆ ಈ ಮನಸ್ಸು ಹಟ ಹಿಡಿಯುತ್ತದೆ. ಈ ರೀತಿಯ ಒಂಟಿತನ ಕಾಡುವಾಗಲೆಲ್ಲ ನನ್ನ ನಿರ್ಧಾರಗಳೆಲ್ಲ ನೀರಿನಂತೆ ಹರಿದು ಹೋಗಿಬಿಡುತ್ತದೆ... ಬುದ್ಧಿ ಕಣ್ಣುಮುಚ್ಚಿ ಕುಳಿತುಬಿಡುತ್ತದೆ!

ನನ್ನ ಭಾವನೆಗಳನ್ನೆಲ್ಲ ಒಂದು ಪುಟ್ಟ ಪತ್ರದಲ್ಲಿ ಬರೆದು ಅವನಿಗೆ ತಲುಪಿಸಿಬಿಡಲೆ ಎನಿಸುತ್ತದೆ. ಆದರೆ ಅದನ್ನು ಓದಿ ನಕ್ಕುಬಿಟ್ಟರೆ!? ಅಪ್ಪ-ಅಮ್ಮನಿಗೆ ಗೊತ್ತಾದರೆ ಏನು ಅಂದುಕೊಂಡಾರು...ಎಂಬ ಭಯ ಕಾಡಿ ಸುಮ್ಮನಾಗಿಬಿಡುತ್ತೇನೆ.

ಈ ರಚ್ಚೆ ಹಿಡಿಯುವ ಮನಸ್ಸನ್ನು ಸುಮ್ಮನಾಗಿಸುವುದು ನಿಜಕ್ಕೂ ಕಷ್ಟ! ಗೆಳತಿಯರು, ಹರಟೆ, ಸಿನಿಮಾ, ನಮ್ಮ ಮನೆಯ ಹಿಂದಿನ ಬೆಟ್ಟ-ಗುಡ್ಡ... ಕೊನೆಗೆ ಈ ಡೈರಿ ಕೂಡಾ... ಸಮಾಧಾನ ಮಾಡಲು ಸೋತು ಹೋಗುತ್ತವೆ.

ಕಷ್ಟ ಎಂದು ಈ ಮನಸಿನ ಮಾತು ಕೇಳಿದರೆ...

ಈ ವಯಸ್ಸಿನಲ್ಲಿ ಪ್ರೀತಿಯಂಥಾ ಒಂದು ಸಂಬಂಧವನ್ನು ನನ್ನ ಕೈಲಿ ನಿಭಾಯಿಸಲು ಸಾಧ್ಯವಿದೆಯಾ? ಒಂದು ವೇಳೆ ಅಪ್ಪ ಅಮ್ಮ ಒಪ್ಪದಿದ್ದರೆ ಅವರನ್ನು ಎದುರು ಹಾಕಿಕೊಳ್ಳುವ ಧೈರ್ಯ ಇದೆಯಾ? ಊಹುಂ, ಖಂಡಿತ ಅದು ಸಾಧ್ಯವಿಲ್ಲ...

ಆದರೆ ಸಂಜೆಗಳನ್ನು ಅಸಹನೀಯವನ್ನಾಗಿಸುವ ಈ ಭಾವನೆಗಳನ್ನು ಹೇಗೆ ಕಟ್ಟಿಹಾಕಲಿ? ಜೋಡಿ ಪ್ರೇಮಿಗಳನ್ನು ನೋಡಿದಾಗಲೆಲ್ಲ ಪರಿತಪಿಸುವ ಮನಸಿಗೆ ಏನೆಂದು ಉತ್ತರಿಸಲಿ?