Friday, January 17, 2014

ಇನ್ನೂ ಸುಂದರವಾಗಿ ಬದುಕಲು ಅವಕಾಶವಿರುವಾಗ...

ನ್ನ ಹಾಸ್ಟೇಲ್ ಪಕ್ಕದಲ್ಲಿ ಒಂದು ದಂಪತಿಗಳಿದ್ದಾರೆ. ಅವರೇನು ಮುದುಕರಲ್ಲ ಹೆಂಡತಿ ವೀಣಕ್ಕಳಿಗೆ ಸುಮಾರು ಮೂವತ್ತೈದಾಗಿದ್ದರೆ, ಅವಳ ಗಂಡನಿಗೆ ಸುಮಾರು ನಲವತ್ತಾಗಿರಬಹುದು.
 ಇಬ್ಬರು ಮಕ್ಕಳು. ಅವರನ್ನು ಓದಲೆಂದು ದೂರವೆಲ್ಲೋ ಕಳುಹಿಸಿದ್ದಾರೆ. ಅಥವಾ ಇವರ ಕಾದಾಟದಲ್ಲಿ ಮಕ್ಕಳು ಬಡವಾಗಬಾರದೆಂದು ಯಾರೋ ಸಂಬಂಧಿಗಳೇ ಮಕ್ಕಳನ್ನು ಕರೆದೊಯ್ದಿದ್ದಾರೊ ಗೊತ್ತಿಲ್ಲ.
ವೀಣಕ್ಕ ಮತ್ತವಳ ಗಂಡ ಯಾವಾಗಲೂ ಕಾದಾಡುತ್ತಿರುತ್ತಾರೆ. ಒಬ್ಬರ ಮಾತು ಇನ್ನೊಬ್ಬರಿಗೆ ಸೇರಿಬರುವುದಿಲ್ಲ. ವಾದ ವಿವಾದಿಳಲ್ಲೇ ದಿನ ದೂಡುತ್ತಾರೆ.
ವೀಣಕ್ಕ ಮಾತಿನಲ್ಲಿ ಸ್ವಲ್ಪ ನೇರ. ಅವಳ ಗಂಡನೋ ಶಾರ್ಟ್ ಟೆಂಪರ್.. ಜಗಳ ಮಾಡಿಕೊಳ್ಳಲು ಪ್ರಾರಂಭಿಸಿದರೆಂದರೆ ನಮ್ಮ ಹಾಸ್ಟೇಲ್ ತನಕ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಇವರ ಜಗಳ ನೋಡುವುದು ನಮಗೆಲ್ಲ ಮೋಜು. ವೀಣಕ್ಕ ಸರಿಯೋ ಅಥವಾ ಅವಳ ಗಂಡನೋ ಎನ್ನುವ ಬಗ್ಗೆ ನಮ್ಮನಮ್ಮಲ್ಲೇ ಚರ್ಚೆ ನಡೆಯುತ್ತಿತ್ತು.
ಇವತ್ತು ನಾನು ಕುಮ್ಮಿ ಅದೇ ವಿಷಯವಾಗಿ ಮಾತನಾಡಿಕೊಂಡೆವು.. ವೀಣಕ್ಕ ಸ್ವಲ್ಪ ತನ್ನ ಲೈಫ್ ಸ್ಟೈಲನ್ನು ಬದಲಾಯಿಸಿಕೊಂಡರೆ ಅವರ ಜಗಳ ಕಡಿಮೆ ಆಗಬಹುದು ಎಂದು ಕುಮ್ಮಿ ತನ್ನ ಅಭಿಪ್ರಾಯ ಮಂಡಿಸಿದಳು. ಇರಬಹುದು...
ಹೆಂಗಸರಿಗೆಲ್ಲ ಮೂವತ್ತು ದಾಟಿದ ಮೇಲೆ ಏನಾಗುತ್ತದೆ? ತಾನು ಸುಂದರವಾಗಿ ಕಾಣಬೇಕು ಎನ್ನುವ ಹಂಬಲವೆಲ್ಲ ಯಾಕೆ ಬತ್ತಿಹೋಗುತ್ತದೆ? ವಯಸ್ಸಾಯಿತು, ಇನ್ನು ಹೇಗೆ ಇದ್ದರೇನು? ಯಾರನ್ನು ಮೆಚ್ಚಿಸಬೇಕಿದೆ ಎನ್ನುವ ಮನೋಭಾವ..
ವೀಣಕ್ಕ ನಿಜಕ್ಕೂ ಸುಂದರಿ. ಆದರೆ ತನ್ನ ಸೌಂದರ್ಯದ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ಯಾವುದೋ ಬಣ್ಣದ ಸೀರೆ ಸುತ್ತಿಕೊಂಡು (ಉಟ್ಟುಕೊಂಡು ಎನ್ನುವುದಕ್ಕಿಂತ `ಸುತ್ತಿಕೊಂಡು' ಎನ್ನುವುದೇ ಸೂಕ್ತ) ಅದಕ್ಕೆ ಸ್ವಲ್ಪವೂ ಹೊಂದಿಕೆಯಾಗದ ಬಣ್ಣದ ರವಿಕೆ. ಕೂದಲನ್ನು ಮನಸ್ಸು ಬಂದರೆ ಬಾಚಿದಳು, ಇಲ್ಲವಾದರೆ ಇಲ್ಲ. ಸ್ನೋ, ಪೌಡರ್ ಎಲ್ಲ ಎಲ್ಲೋ ನೆಂಟರ ಮನೆಗೆ ಹೋಗುವಾಗ ಮಾತ್ರ.
 ನಮ್ಮೊಂದಿಗೆಲ್ಲ ಸಲಿಗೆಯಿಂದಿರುವ ವೀಣಕ್ಕನಿಗೆ  ಎಷ್ಟೋ ಸಾರಿ ಹೇಳಿದ್ದೇನೆ, ``ನೀನು ಇಷ್ಟು ಚೆನ್ನಾಗಿದ್ದೀಯಾ, ಸ್ವಲ್ಪ ನೀಟಾಗಿ ಡ್ರೆಸ್ ಮಾಡಿಕೊಂಡರೆ ಇನ್ನೂ ಚೆನ್ನಾಗಿ ಕಾಣಿಸುತ್ತೀಯಾ'' ಎಂದು. ಅದಕ್ಕೆ ಅವಳದ್ದು ಯಾವಾಗಲೂ ನೀರಸ ಪ್ರತಿಕ್ರಿಯೆ ``ಅಯ್ಯೋ ಬಿಡೆ ಸುಮಿ, ಅದೆಲ್ಲ ನಿಮ್ಮ ವಯಸ್ಸಿಗೇ ಆಯ್ತು. ನಾನು ಊರ ದಾರಿಯಲ್ಲಿ ನಡೆದುಕೊಂಡು ಹೋದರೆ ಸಾಕು, ಎಲ್ಲ ಕೈಬಾಯಿ ಬಿಟ್ಟುಕೊಂಡು ನೋಡುತ್ತಿದ್ದರು.. ಮದುವೆ ಅಂತ ಒಂದಾಯ್ತು ನೋಡು, ಇನ್ಯಾಕೆ ಶೃಂಗಾರ ಅಲಂಕಾರವೆಲ್ಲ? ಮಕ್ಕಳು ವಯಸ್ಸಿಗೆ ಬರುವಷ್ಟು ವರ್ಷವಾಯಿತು ಮದುವೆಯಾಗಿ. ಇನ್ನು ಅಲಂಕಾರ ಮಾಡಿಕೊಂಡರೆ ಜನರು ನಗುತ್ತಾರೆ ಅಷ್ಟೆ''
ಇದು ಕೇವಲ ವೀಣಕ್ಕ ಅಂತಲ್ಲ, ಹೀಗೆ ಸಂಬಂಧಿಗಳಲ್ಲಿ ನೆರೆಹೊರೆಯಲ್ಲಿ ಸುಮಾರು ಜನರನ್ನು  ನೋಡಿದ್ದೀನಿ, ಇದೇ ದೃಷ್ಟಿಕೋನ. ಮದುವೆಯಾಗಿ ಹತ್ತು ವರ್ಷಕ್ಕೇ ವೈರಾಗ್ಯ ಬಂದವರಂತೆ ಆಡುತ್ತಾರೆ. ಇನ್ನು ತನ್ನ ಜೀವನವೆಲ್ಲ ಗಂಡ ಮಕ್ಕಳಿಗೇ ಮೀಸಲು ಎನ್ನುವಂತೆ ಆಡುತ್ತಾರೆ. ಬೇರೆಯವರಿಗೆ ಹೋಗಲಿ ತನಗೆ ತಾನು ಚೆನ್ನಾಗಿ ಕಾಣಬೇಕು ಎನ್ನುವಂತಹ ಬೇಸಿಕ್ ಆಸೆಗಳನ್ನೂ ಕಡೆಗಣಿಸಿಬಿಡುತ್ತಾರೆ!
ದಿನದ ಇಪ್ಪತ್ನಾಲ್ಕು ಗಂಟೆಯೂ ಪೌಡರ್ರು ಮೆತ್ತಿಕೊಳ್ಳ ಬೇಕಂತಲ್ಲ. ಂಣಟeಚಿs ಬೆಳಗಿನ ಮನೆಗೆಲಸ ಮುಗಿಸಿ, ಸ್ನಾನ ಮಾಡಿ ನೀಟಾಗಿ ಡ್ರೆಸ್ ಮಾಡಿಕೋಬಹುದು..
ವೀಣಕ್ಕನಿಗೂ ಅದೇ ರೀತಿ ಇರಲು ಆಸೆ. ಆದರೆ ಒಂದು ರೀತಿಯ ಜೀವನ ರೂಢಿಯಾದದ್ದರಿಂದಲೋ ಏನೋ, ಯಾರು ಏನೆಂದುಕೊಂಡಾರೋ ಎನ್ನುವ ಅಳುಕೋ, ಅಂತೂ ಅವಳು change ಆಗಲು ಸಿದ್ಧಳಿಲ್ಲ.. ಇದೇ ಪರಿಸ್ಥಿತಿ ನಮಗೂ ಬರುತ್ತದಾ? ನಾವೂ ಒಂದು ದಿನ ಹೀಗೆ ಆಗಿಬಿಡ್ತೀವಾ..?

Saturday, March 31, 2012

ಕಾಂತನಿಲ್ಲದ ಮೇಲೆ ಏಕಾಂತ ಯಾತಕೋ...


ಯಾಕೋ ಗೊತ್ತಿಲ್ಲ, ಇಷ್ಟು ದಿನ ಕಾಡದ ಏಕಾಂತ ಇತ್ತೀಚೆಗೆ ಕಾಡುತ್ತಿದೆ. ಮೊದಲೆಲ್ಲ ಕುಮ್ಮಿ ಮತ್ತಿತ್ತರ ಗೆಳತಿಯರಿದ್ದರಾಯಿತು, ನನ್ನ ಒಂಟಿತನವೆಲ್ಲ ದೂರಾಗಿ ಬಿಡುತ್ತಿತ್ತು. ಆದರೆ ಈಗ ಗೆಳತಿಯರೆಲ್ಲ ಜೊತೆಗಿದ್ದರೂ ಏನೋ ಒಂದು ತರಹದ ಒಂಟಿತನ ಕಾಡುತ್ತಿದೆ. ಈ ಗೆಳತಿಯರ ಸ್ನೇಹಕ್ಕೆ ಮಿಗಿಲಾದ ಸಾಂಗತ್ಯವೊಂದು ಬೇಕೆನಿಸುತ್ತಿದೆ.

ನನ್ನ ಕ್ಲಾಸಿನ ವಾಣಿ ಅವಳ ಗೆಳೆಯನ ಕೈಹಿಡಿದುಕೊಂಡು ಹೋಗುತ್ತಿದ್ದರೆ ನನಗೂ ಏನೋ `ಕಡಿಮೆಯ ಅನುಭವ...

ರವಿಬೆಳಗೆರೆಯ `ನೀ ಹೀಂಗ ನೋಡಬ್ಯಾಡ ನನ್ನ' ಕಾದಂಬರಿಯ ಹೀರೋ ಶಿಶಿರಚಂದ್ರನ`ಸಾಫ್ಟ್' ಕಣ್ಣುಗಳಂತೆ ಸುಂದರ ಕಣ್ಣುಗಳ ಹುಡುಗ ವಿವೇಕ. ಆ ದಿನ ರಾತ್ರಿ ಬಸ್ ತಪ್ಪಿ ಪೇಚಾಡುತ್ತಿದ್ದ ನನ್ನನ್ನು ಸೇಫ್ ಆಗಿ ಮನೆ ತಲುಪಿಸಿದ ಆಪದ್ಬಾಂಧವ...

ಮಹಾ ಸಂಯಮಿಯಂತೆ ವರ್ತಿಸುತ್ತಾನೆ. ಬೇಕಾದಷ್ಟಕ್ಕೆ ಮಾತು...

ಅವನ ಮೇಲೆ ಆಸಕ್ತಿಯಿದ್ದರೂ ಆ ಭಾವನೆ ಪ್ರೇಮ ಅಂದುಕೊಳ್ಳುವ ಧೈರ್ಯವಿಲ್ಲ. ಕ್ಲಾಸಿನಲ್ಲಿ ಅವನು ಪದೆಪದೆ ನನ್ನೆಡೆಗೆ ನೋಡುತ್ತಿದ್ದರೆ ಏನೋ ಸಂತೋಷವೆನಿಸುತ್ತದೆ. ಆದರೆ ಅವನೂ ನನ್ನನ್ನು ಇಷ್ಟಪಡುತ್ತಾನೆ ಎಂದುಕೊಳ್ಳುವಷ್ಟು ನಂಬಿಕೆ ಇಲ್ಲ.

ಅಷ್ಟಕ್ಕೂ ಇದೇನಾ ಪ್ರೇಮ ಎನ್ನುವುದೂ ಗೊತ್ತಿಲ್ಲ. ಕುಮ್ಮಿ, ಶೀಲಕ್ಕರನ್ನು ಕೇಳೋಣವೆಂದರೆ ಅವರು ನಿಜವಾಗಿಯೂ ನಾನು ವಿವೇಕನನ್ನು ಪ್ರೀತಿಸುತ್ತಿದ್ದೇನೆ ಎಂದುಕೊಂಡುಬಿಟ್ಟರೆ?!

ಅಲ್ಲದೆ ನನ್ನಷ್ಟಕ್ಕೆ ನಾನು ಏನೇನೋ ಕಲ್ಪನೆ ಮಾಡಿಕೊಂಡು, ಅವನ ಮೇಲೆ ಇಲ್ಲದ ಭಾವನೆ ಬೆಳೆಸಿಕೊಂಡು, ಏನೇನೋ ಕನಸು ಕಂಡು ಆಮೇಲೆ ಅವನು "ನನಗೆ ನಿನ್ನ ಮೇಲೆ ಆ ರೀತಿ ಯಾವುದೇ ಭಾವನೆಗಳೇ ಇಲ್ಲ" ಎಂದು ಹೇಳಿಬಿಟ್ಟರೆ, ಅದಕ್ಕಿಂತ ಅವಮಾನ ಬೇಕಾ...

ಈ ಜಂಜಾಟವೆಲ್ಲ ಯಾಕೆ? ಮೊದಲು ಓದು. ಈ ಲವ್ವು ಗಿವ್ವು ಎಲ್ಲ ಆಮೇಲೆ. ಈಗಲೆ ಪ್ರೀತಿ ಎಂದೆಲ್ಲ ತಲೆ ಕೆಡೆಸಿಕೊಂಡರೆ ಓದಿ ಏನಾದರೂ ಸಾಧಿಸಬೇಕು ಎನ್ನುವ ನನ್ನ ಕನಸುಗಳಿಗೆಲ್ಲ ಭಂಗ ಬಂದುಬಿಡುತ್ತದೆಯೊ! ಆ ಕಾಲ ಬಂದಾಗ ನೋಡಿಕೊಳ್ಳೋಣ. ಸದ್ಯಕ್ಕೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಓದಬೇಕು... ನಂತರದ್ದೆಲ್ಲ ಆಮೇಲೆ. ಹೀಗೆಲ್ಲ ಸಾವಿರ ಸಾರಿ ಅಂದುಕೊಳ್ಳುತ್ತೇನೆ.

ಆದರೆ ಈ ಮನಸ್ಸು ಹಟ ಹಿಡಿಯುತ್ತದೆ. ಈ ರೀತಿಯ ಒಂಟಿತನ ಕಾಡುವಾಗಲೆಲ್ಲ ನನ್ನ ನಿರ್ಧಾರಗಳೆಲ್ಲ ನೀರಿನಂತೆ ಹರಿದು ಹೋಗಿಬಿಡುತ್ತದೆ... ಬುದ್ಧಿ ಕಣ್ಣುಮುಚ್ಚಿ ಕುಳಿತುಬಿಡುತ್ತದೆ!

ನನ್ನ ಭಾವನೆಗಳನ್ನೆಲ್ಲ ಒಂದು ಪುಟ್ಟ ಪತ್ರದಲ್ಲಿ ಬರೆದು ಅವನಿಗೆ ತಲುಪಿಸಿಬಿಡಲೆ ಎನಿಸುತ್ತದೆ. ಆದರೆ ಅದನ್ನು ಓದಿ ನಕ್ಕುಬಿಟ್ಟರೆ!? ಅಪ್ಪ-ಅಮ್ಮನಿಗೆ ಗೊತ್ತಾದರೆ ಏನು ಅಂದುಕೊಂಡಾರು...ಎಂಬ ಭಯ ಕಾಡಿ ಸುಮ್ಮನಾಗಿಬಿಡುತ್ತೇನೆ.

ಈ ರಚ್ಚೆ ಹಿಡಿಯುವ ಮನಸ್ಸನ್ನು ಸುಮ್ಮನಾಗಿಸುವುದು ನಿಜಕ್ಕೂ ಕಷ್ಟ! ಗೆಳತಿಯರು, ಹರಟೆ, ಸಿನಿಮಾ, ನಮ್ಮ ಮನೆಯ ಹಿಂದಿನ ಬೆಟ್ಟ-ಗುಡ್ಡ... ಕೊನೆಗೆ ಈ ಡೈರಿ ಕೂಡಾ... ಸಮಾಧಾನ ಮಾಡಲು ಸೋತು ಹೋಗುತ್ತವೆ.

ಕಷ್ಟ ಎಂದು ಈ ಮನಸಿನ ಮಾತು ಕೇಳಿದರೆ...

ಈ ವಯಸ್ಸಿನಲ್ಲಿ ಪ್ರೀತಿಯಂಥಾ ಒಂದು ಸಂಬಂಧವನ್ನು ನನ್ನ ಕೈಲಿ ನಿಭಾಯಿಸಲು ಸಾಧ್ಯವಿದೆಯಾ? ಒಂದು ವೇಳೆ ಅಪ್ಪ ಅಮ್ಮ ಒಪ್ಪದಿದ್ದರೆ ಅವರನ್ನು ಎದುರು ಹಾಕಿಕೊಳ್ಳುವ ಧೈರ್ಯ ಇದೆಯಾ? ಊಹುಂ, ಖಂಡಿತ ಅದು ಸಾಧ್ಯವಿಲ್ಲ...

ಆದರೆ ಸಂಜೆಗಳನ್ನು ಅಸಹನೀಯವನ್ನಾಗಿಸುವ ಈ ಭಾವನೆಗಳನ್ನು ಹೇಗೆ ಕಟ್ಟಿಹಾಕಲಿ? ಜೋಡಿ ಪ್ರೇಮಿಗಳನ್ನು ನೋಡಿದಾಗಲೆಲ್ಲ ಪರಿತಪಿಸುವ ಮನಸಿಗೆ ಏನೆಂದು ಉತ್ತರಿಸಲಿ?

Saturday, July 9, 2011

ಶೋಷಣೆಯ ಸ್ವರೂಪವೊಂದು ಬದಲಾಗಿದೆಯ?...


ಅಜ್ಜಿ ಏನೇ ಹೇಳಲಿ, ಅವಳ ಅಭಿಪ್ರಾಯ ಏನೇ ಇರಲಿ ನನಗಂತೂ ಅಬ್ಬೆಯ ಮೇಲಿನ ಅಭಿಪ್ರಾಯ ಬದಲಾಗುವುದಿಲ್ಲ. ಅಬ್ಬೆಯನ್ನು ನೋಡಿದಾಗಲೆಲ್ಲ ಸ್ತ್ರೀ ಶೋಷಣೆಯ ಒಂದು ನಮೂನೆಯಾಗಿಯೇ ಕಾಣುತ್ತಾಳೆ.

ಗಂಡ ಸತ್ತಾಗ ಕತ್ತಿನಲ್ಲಿದ್ದ ತಾಳಿಯನ್ನು ತೆಗೆಯಲ್ಲಿಲ್ಲ ಎನ್ನುವ ಚಿಕ್ಕ ಕಾರಣಕ್ಕೇ ಅಷ್ಟೆಲ್ಲ ಅವಮಾನಕ್ಕೆ ಒಳಗಾದವಳು... ಸ್ವಾಭಾವಿಕ ಆಸೆಗಳನ್ನು ಆಪ್ತ ಗೆಳತಿ ಎಂದುಕೊಂಡವಳ ಹತ್ತಿರ ಹಂಚಿಕೊಂಡಿದ್ದಕ್ಕೇ ಆ ಆಪ್ತಗೆಳತಿಯ ನಿಷ್ಠೂರಕ್ಕೆ ಒಳಗಾದವಳು... ಸಾಯುವತನಕ ಪ್ರೀತಿಯನ್ನು ಕಾಣದೆ ಬದುಕುವ ಅನಿವಾರ್ಯತೆಗೆ ಒಳಗಾದವಳು... ಅಂಥವಳ ಮೇಲೆ ದ್ವೇಷವಾದರೂ ಹೇಗೆ ಹುಟ್ಟೀತು?

ಈ ವೈಧವ್ಯದ ಹೆಸರಿನಲ್ಲಿ ಸ್ತ್ರೀಯರು ಅನುಭವಿಸುವ ಹಿಂಸೆಗಿಂತ 'ಸಹಗಮನವೇ ಉತ್ತಮವಾದುದೇನೋ... ಆದರೆ ಅಮಾನುಷ ಎಂದು ಆ ಪದ್ಧತಿಯನ್ನು ಕೈಬಿಡಲಾಯಿತಂತೆ! ಹೆಣ್ಣು ತನ್ನ ಪ್ರಮುಖ ಹಕ್ಕೆಂದು ತಿಳಿಯುವ ಸೌಂದರ್ಯವನ್ನು ತನ್ನ ಸಮಾಧಾನಕ್ಕೆಂದು ವೈಧವ್ಯದ ಹೆಸರಿನಲ್ಲಿ ಹಾಳುಗೆಡವುದು ಅಮಾನುಷವಲ್ಲವೇ?! 'ಜೀವನ ಪೂರ್ತಿ ಸಂತೋಷ, ಪ್ರೀತಿ ಏನೂ ಇಲ್ಲದೆ ಒಂದು ವಸ್ತುವಿನಂತೆ ಬಾಳು' ಹೇರುವುದು ಅಮಾನುಷವಲ್ಲವೇ?

ಇದನ್ನೆಲ್ಲ ಅಜ್ಜಿಯನ್ನು ಕೇಳಬೇಕು ಎಂದುಕೊಳ್ಳುತ್ತೇನೆ. ಆದರೆ "ಹೌದು, ಎರಡಕ್ಷರ ಕಲಿತದ್ದಕೆ ಬುದ್ಧಿವಂತೆ ಅಂದುಕೊಂಡುಬಿಟ್ಟೆಯಾ? ಬೇರೆ ಏನಾದರೂ ಕೆಲಸ ಇದ್ದರೆ ನೋಡು ನಡೆ" ಎನ್ನುವ ಬೈಗುಳವಲ್ಲದೆ ಮತ್ತೇನೂ ಅಜ್ಜಿಯಿಂದ ನಿರೀಕ್ಷಿಸುವಂತಿಲ್ಲ.

ಹೌದು... ಈಗ ನಮ್ಮ ತಲೆಮಾರಿನಲ್ಲಿ ವೈಧವ್ಯದ ಹೆಸರಿನ ಶೋಷಣೆ ಇಲ್ಲ. ಮರುಮದುವೆ ಸ್ವಲ್ಪ ಕಷ್ಟ ಎನಿಸಿದರೂ ಒಪ್ಪಿಕೊಳ್ಳುತ್ತಾರೆ. ಆದರೆ... ಆದರೆ ಶೋಷಣೆ ಎನ್ನುವುದು ಸಂಪೂರ್ಣವಾಗಿ ಮಾಯವೇನೂ ಆಗಿಲ್ಲ. ಸ್ವರೂಪ ಬದಲಾಗಿದೆ ಅಷ್ಟೇ!

ಇಷ್ಟೆಲ್ಲ ಮಾಡಿದರೂ ಚಕಾರವೆತ್ತದ ಅಬ್ಬೆ... ಕೆಲವೊಮ್ಮೆ ಅಪ್ಪನ ತಪ್ಪಿದ್ದರೂ ಸಹಿಸಿಕೊಂಡು ಸುಮ್ಮನಿರುವ ಅಮ್ಮ... ಬಸವ ಕುಡಿದುಬಂದು ಹೊಡೆದರೂ ವರ್ಷಕ್ಕೊಂದು ಅವನಿಗೊಂದು ಮಗು ಹೆತ್ತುಕೊಡುವ ಕೆಲಸದ ಮಾದಿ...ಒಂದು ರೀತಿ ಇವರೆಲ್ಲ ಶೋಷಣೆಗೆ ಒಳಗಾಗುತ್ತಿರುವವರೇ ಅಲ್ಲವೆ?

ಕಾಲೇಜಿನಿಂದ ಹೊರಬಿದ್ದರೆ ಎಷ್ಟು ಹೊತ್ತಿಗೆ ಮನೆ ಸೇರಿಕೊಳ್ಳುತ್ತೀನೋ ಎನಿಸುತ್ತದೆ. ಒಂದು ಹೆಣ್ಣು ಮನೆಯಿಂದ ಹೊರಬಿದ್ದಳು ಎಂದರೆ ಕಣ್ಣಲ್ಲೇ ಮೈಸವರುವ ನೂರಾರು ಕಣ್ಣುಗಳು... ರಾತ್ರಿ ಸ್ವಲ್ಪ ತಡವಾದರೂ ಶೀಲವನ್ನೇ ಶಂಕಿಸುವ ನಾಲಗೆಗಳು... ಬಸ್ಸು, ಜನನಿಬಿಡ ಪ್ರದೇಶಗಳಲ್ಲಂತೂ ಸ್ತ್ರೀಯರ ಸ್ಥಿತಿ ದೇವರಿಗೇ ಪ್ರೀತಿ... ಸಿಕ್ಕಿದ್ದೇ ಛಾನ್ಸು ಎಂದು ಕಂಡಕಂಡ ಕಡೆಯಲೆಲ್ಲ ಮುಟ್ಟುವ ಪೋಲಿ ಕೈಗಳನ್ನು ಮುರಿದು ಹಾಕಿಬಿಡುವ ಕೋಪ ಬರುತ್ತದೆ...ಆದರೆ ಆ ಧೈರ್ಯವೂ ಇಲ್ಲ. ಅಷ್ಟು ಶಕ್ತಿಯೂ ಇಲ್ಲ.

ಹುಡುಗಿಯರನ್ನು ಕಂಡರೆ ಓವರ್ ಆಕ್ಟಿಂಗ್ ಮಾಡುವ ಹಿಸ್ಟರಿ ಲೆಕ್ಚರರ್ ನ್ನಂತೂ ಚಚ್ಚಿಹಾಕಿಬಿಡುವಷ್ಟು ಕೋಪ ಬರುತ್ತದೆ. ಆದರೆ ಮಾರ್ಕ್ಸ್, ನೋಟ್ಸ್ ಎಂದು ಅವನ ಮುಂದೆ ಹಲ್ಲು ಕಿರಿಯುವ ಅನಿವಾರ್ಯತೆ...

ಹೀಗೆ ವಿಚಾರ ಮಾಡುತ್ತ ಕುಳಿತರೆ ಹೆಣ್ಣು ಜನ್ಮವೇ ಒಂದು ಕರ್ಮ ಎಂದು ಅನಿಸಲಿಕ್ಕೆ ಪ್ರಾರಂಭವಾಗುತ್ತದೆ...

ಛೇ... ನಾಳೆ ಹಿಸ್ಟರಿ ನೋಟ್ಸ್ ಸಬ್‌ಮಿಟ್ ಮಾಡಬೇಕು... ಇನ್ನೆಲ್ಲಿ ತಪ್ಪು ಕಂಡುಹಿಡಿದು ಕಾಟ ಕೊಡುತ್ತಾನೋ ಪುಣ್ಯಾತ್ಮ...

Saturday, April 16, 2011

ಅಬ್ಬೆ! ಅದೊಂದು ಮುಂಡೇದು!!

ವಿಧವೆ ಎಂದರೆ ಹೀಗಿರಬೇಕು, ಸುಮಂಗಲಿ ಎಂದರೆ ಹೀಗಿರಬೇಕು. ಹೆಣ್ಣು ಅಂದರೆ ಹೀಗಿರಬೇಕು, ಗಂಡು ಎಂದರೆ ಹೀಗಿರಬೇಕು-ಹೀಗೆ ಎಲ್ಲ ಶಬ್ದಗಳಿಗೂ ಸಮಾಜ ಒಂದು ಕಲ್ಪನೆಯನ್ನು ಬೆಳೆಸಿಕೊಂಡಿದೆ. ಅದಕ್ಕೆ ಸ್ವಲ್ಪ ಧಕ್ಕೆ ಬಂದರೂ ಸಮಾಜದ ಚುಚ್ಚು ನೋಟ, ಮಾತು ಎದುರಿಸಲೇಬೇಕು. ಸುತ್ತಲಿನ ಸಮಾಜ ನೀಡುವ ಹಿಂಸೆಗಿಂತ ಮನಸಿನ ವಿರುದ್ಧ ನಡೆವ ನೋವೇ ಲೇಸು ಎಂದು ಎಷ್ಟೋ ಬದುಕುತ್ತಾರೆ. ಇದಕ್ಕೆ ಅಬ್ಬೆಯ ಜೀವನ ಒಂದು ಉದಾಹರಣೆಯಷ್ಟೆ.

ಅಪ್ಪ, ಅಜ್ಜ ಎಲ್ಲರೂ ಅವರಿಗೆ ತಿಳಿದಷ್ಟು ಹೇಳಿದರೂ ಅಬ್ಬೆಯ ಬಗ್ಗೆ ಇನ್ನೂ ತಿಳಿದುಕೊಳ್ಳುವ ಬಯಕೆಯನ್ನು ನನ್ನ ಕೈಲಿ ಹತ್ತಿಕ್ಕಿಕೊಳ್ಳಲಾಗಲಿಲ್ಲ.

ಅಬ್ಬೆಯ ಬಗ್ಗೆ ಇವರೆಲ್ಲರಿಗಿಂತ ಬಲ್ಲವಳು ಅಜ್ಜಿ. ಆದರೆ ಅಜ್ಜಿಯ ಹತ್ತಿರ ಅಬ್ಬೆಯ ಬಗ್ಗೆ ಕೇಳಲು ಭಯ. ಅಜ್ಜಿಗೆ ಮುಂಚಿನಿಂದಲೂ ಏನೋ ಅಸಮಾಧಾನ. ಅವಳೆದುರು ಅಬ್ಬೆಯ ಸುದ್ದಿ ಎತ್ತಿದರೆ ಸಾಕು 'ಅದೊಂದು ಮುಂಡೇದು' ಅಂತಲೇ ಶಪಿಸುತ್ತಿದ್ದಳು. ಆದರೆ ಇವತ್ತು ಅಜ್ಜಿ ಏನೇ ಹೇಳಿದರೂ ಸರಿ, ಅಬ್ಬೆಯ ಬಗ್ಗೆ ಕೇಳಲೇಬೇಕು ಎಂದು ನಿರ್ಧರಿಸಿದ್ದೆ. ಅಜ್ಜಿಯನ್ನು ದಿನವಿಡೀ ಬಿಟ್ಟುಬಿಡದೆ ಕಾಡಿದೆ.

ಅಜ್ಜಿ ಅಬ್ಬೆಗೆ ಬೈಯುವ ಎಂದಿನ ಶೈಲಿಯಲ್ಲಿ 'ಅದೊಂದು ಮುದುಕಿ (ಅಜ್ಜಿಗೆ ತಾನೂ ಮುದುಕಿ ಎನ್ನುವುದು ಮರೆತುಹೋಗಿರಬೇಕು!) ಎಂದೇ ಪ್ರಾರಂಭಿಸಿದಳು. ಅಜ್ಜಿ ಅಬ್ಬೆ ಸರಿಸುಮಾರು ಸಮಾನ ವಯಸ್ಕರು. ಅಬ್ಬೆಯ ಗಂಡ ಸಾಯುವ ಹೊತ್ತಿಗೆ ಆಗಷ್ಟೇ ಅಜ್ಜಿ ಅಜ್ಜನ ಮದುವೆಯಾಗಿ ಬಂದಿದ್ದಳಂತೆ.

ಗಂಡ ಸತ್ತಾಗ ಅಬ್ಬೆಗೆ ಏಳೋ ಎಂಟೋ ವಯಸ್ಸು. ಅಬ್ಬೆಯ ಅಳು ನೋಡಿದರೆ ಎಂಥವರಿಗಾದರೂ ಪಾಪ ಅನ್ನಿಸುತ್ತಿತ್ತಂತೆ. ಜೋರಾಗಿ ಅಳುತ್ತಿದ್ದಳಂತೆ. ಅವಳಿಗೆ ಗಂಡ ಸತ್ತ ಎನ್ನುವ ದುಃಖಕ್ಕಿಂತ ತನ್ನ ಬಳೆ, ಒಡವೆಗಳನ್ನು ತೆಗೆದು, ತಲೆ ಬೋಳಿಸಿ, ಕೆಂಪು ಸೀರೆ ಉಡಿಸುತ್ತಾರೆ ಎನ್ನುವುದೇ ಅವಳ ಅಳುವಿಗೆ ಕಾರಣವಾಗಿತ್ತಂತೆ. ಗಂಡನ ಶವ ಸಂಸ್ಕಾರಕ್ಕೆ ಅಬ್ಬೆಯನ್ನು ಹಿಡಿದು ಎಳೆದುಕೊಂಡು ಬರಲು ನಾಲ್ಕೈದು ಜನ ಬೇಕಾಯಿತಂತೆ.

'ಅಯ್ಯೋ! ನನ್ನ ಕೂದಲು ತೆಗೆಯಬೇಡಿ, ನನ್ನ ಕಾಲುಂಗುರ... ನನ್ನ ಬಳೆ...' ಎಂದು ಕೂಗುತ್ತಿದ್ದಳಂತೆ. ಯಾರು ಏನೇ ಹೇಳಿದರೂ ಮಾಡಿದರೂ ತನ್ನ ಮಾಂಗಲ್ಯ ಸರಕ್ಕೆ ಇರುವ ತಾಳಿಯನ್ನು ತೆಗೆದುಕೊಡಲಿಲ್ಲವಂತೆ. ಅದನ್ನು ಅಬ್ಬೆ ಒಂದು ದಾರಕ್ಕೆ ಪೋಣಿಸಿ ಇಂದೂ ಧರಿಸುತ್ತಾಳಂತೆ.

ಅಬ್ಬೆಗೆ ಸುಮಾರು 15-16 ಆಗುವವರೆಗೂ ಅಬ್ಬೆ-ಅಜ್ಜಿ ಒಳ್ಳೆಯ ಸ್ನೇಹದಿಂದಲೇ ಇದ್ದರಂತೆ.. ಸಂಜೆ ತಿರುಗಾಡಲು ಅಂತ ಹೋದರೆ ಅಬ್ಬೆ ಅಜ್ಜಿಯ ಹತ್ತಿರ ಏನೇನೋ ಹೇಳುತ್ತಿದ್ದಳಂತೆ. 'ನನಗೆ ಹಾಗೆ ಆಸೆಯಾಗುತ್ತದೆ, ಹೀಗೆ ಆಸೆಯಾಗುತ್ತದೆ ಎನ್ನುತ್ತಿದ್ದಳಂತೆ. 'ಛೀ, ಅಸಹ್ಯ. ಎಲ್ಲ ಬಿಟ್ಟವಳು ಅವಳು' ಎಂದು ಅಜ್ಜಿ ಮುಖ ಸಿಂಡರಿಸಿಕೊಂಡಳು.

ಅಂದಿನಿಂದ ಅಜ್ಜಿ ಅಬ್ಬೆಯೊಂದಿಗೆ ಮಾತು ಬಿಟ್ಟಳಂತೆ. ಇದಿಷ್ಟು ಅಜ್ಜಿಯಿಂದ ತಿಳಿದು ಬಂದಿದ್ದು . ಅಜ್ಜಿ ತನ್ನದೇ ಅದ ದೃಷ್ಟಿಕೋನದಲ್ಲಿ ಅಬ್ಬೆಯ ಬಗ್ಗೆ ಹೇಳಿದ್ದಳು. ಆದರೆ ಅಬ್ಬೆಯಲ್ಲಿ ನನಗಾವ ದೋಷವೂ ಕಾಣಿಸುತ್ತಿಲ್ಲ...ಯಾಕೆಂದರೆ... ಅಬ್ಬೆ! ಅದೊಂದು ಮುಂಡೇದು!!

Saturday, April 9, 2011

ಸ್ವಂತಿಕೆಯೂ, ಡಿಪೆಂಡೆನ್ಸಿಯೂ..

ಸಂಬಂಧಗಳು ಅಂದರೆ ಹೀಗೆ... ಒಂದು ರೀತಿಯಲ್ಲಿ ಬಗೆಹರಿಯದ ಗೊಂದಲಗಳು. ಯಾವ ಸಂಬಂಧಗಳನ್ನು ಹೇಗೆ ನೋಡಬೇಕೋ, ಯಾರ ಜೊತೆ ಹೇಗೆ ಇರಬೇಕೋ, ಅದನ್ನು ಹೇಗೆ ನಿಭಾಯಿಸಬೇಕೋ... ಎಲ್ಲ ಬರಿ ಗೋಜಲು...ಗೋಜಲು.

ಭಾರತೀಯ ಗೆಳೆತನದ ನಂತರ ಮಾನವ ಸಂಬಂಧಗಳು, ಅದರೊಳಗೆ ಆಧಾರಪಡುವುದು, ಪ್ರೀತಿ, ಅಗತ್ಯ... ಹೀಗೆ ಮೊದಲಾದವುಗಳ ಬಗ್ಗೆ ವಿಪರೀತ ಸೀರಿಯಸ್ಸಾಗಿ ವಿಚಾರ ಮಾಡಲೇಬೇಕಾಗಿ ಬಂದಿದೆ.

ಯಾರಾದರೂ ನನ್ನ ಮೇಲೆ ಮಾನಸಿಕವಾಗಿ ಡಿಪೆಂಡ್ ಆದರೆ ಭಾರವೆನಿಸುತ್ತದೆ. ಅದೇ ರೀತಿ ನಾನೂ ಕೂಡಾ ಯಾರಿಗಾದರೂ ಭಾರ ಎನಿಸಿರಬಹುದಲ್ಲ! ನಾನೂ ಸಂಪೂರ್ಣವಾಗಿ ಭಾವನಾತ್ಮಕವಾಗಿ ಸ್ವತಂತ್ರಳಾದರೆ? ಯಾವುದಕ್ಕೂ

ಯಾರನ್ನೂ ಅವಲಂಬಿಸದಿದ್ದರೆ...? ಹೀಗೆ ಬಹಳ ದಿನಗಳಿಂದ ಅಂದುಕೊಂಡಿದ್ದೆ. ಆದರೆ ಇದು ತಪ್ಪು ಎಂದು ಬೇಗನೇ ತಿಳಿಯಿತು.

ನನಗೆ ತಿಳುವಳಿಕೆ ಬಂದಾಗಿನಿಂದಲೂ ಅಮ್ಮನೇ ತಲೆ ಸ್ನಾನ ಮಾಡಿಸುತ್ತಿದ್ದಿದ್ದು, ದಿನಾ ಕೂದಲು ಬಾಚುವುದೂ ಅವಳದೇ ಕೆಲಸ. ಇವರೆಡು ಕೆಲಸಗಳನ್ನು ಅವಳೇ ಮಾಡಿಕೊಡಬೇಕಿತ್ತು. ಇನ್ಯಾರು ಮಾಡಿದ್ರೂ ಸರಿಯೇ ಆಗುತ್ತಿರಲಿಲ್ಲ. ಇದೇ

ಕಾರಣದಿಂದ ಅಮ್ಮನ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಯಾವ ಸಂಬಂಧಿಕರ ಮನೆಯಲ್ಲೂ ಉಳಿಯುತ್ತಿರಲಿಲ್ಲ. ಉಳಿದರೂ 2 ದಿನಗಳಲ್ಲೇ ವಾಪಸ್.

ನನ್ನ ಈ ಸ್ವಭಾವದಿಂದ ಅಮ್ಮನೋ ಬೇಸತ್ತು ಹೋಗಿದ್ದಳು. "ನೀನಂತೂ ಯಾವಾಗ ನಿನ್ನ ಕೆಲಸಗಳನ್ನು ಮಾಡಿಕೊಳ್ಳಲು ಕಲಿಯುತ್ತಿಯೋ... ಮದುವೆಯಾಗಿ ಗಂಡನ ಮನೆ ಸೇರಬೇಕಾದವಳು. ಅಲ್ಲಿ ಹೇಗೆ ನಿಭಾಯಿಸುತ್ತಿಯೋ... ನಿನ್ನ

ಅಮ್ಮ ನಿನಗೆ ಕಲಿಸಿದ್ದೇ ಇದನ್ನ ಎಂದು ಕೇಳುವ ಹಾಗೆ ಮಾಡುತ್ತಿಯೋ ಏನೋ ಅಂತ ಗೊಣಗುತ್ತಲೇ ತಲೆ ಸ್ನಾನ ಮಾಡಿಸುತ್ತಿದ್ದಳು. ಇದು ಪ್ರತಿ ವಾರದ ಗೊಣಗಾಟವಾದ್ದರಿಂದ ಆ ಬಗ್ಗೆ ಬಹಳ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಆಗೆಲ್ಲ

ಇನ್ನು ಮುಂದೆ ನಾನೇ ತಲೆಸ್ನಾನ ಮಾಡಿಕೊಳ್ಳಬೇಕು. ಅಮ್ಮನ ಮೇಲೆ ಡಿಪೆಂಡ್ ಆಗಲೇಬಾರದು ಎನಿಸುತ್ತಿತ್ತು. ಆದರೆ ಅಮ್ಮನ ಕೈಯಿಂದ ಸ್ನಾನ ಮಾಡಿಸಿಕೊಳ್ಳುವ ಆನಂದ ಕಳೆದುಕೊಳ್ಳಲು ಸಿದ್ಧಳಿರಲಿಲ್ಲ.

ಈಗ ಕಾಲೇಜಿಗೆ ಸೇರಿದ ಮೇಲೆ ಆ ಅವಕಾಶ ತಪ್ಪಿ ಹೋಗಿತ್ತು. ಹಾಸ್ಟೆಲಿನಲ್ಲಿ ನಾನೇ ತಲೆಸ್ನಾನ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಇವತ್ತು ಮನೆಗೆ ಬಂದಾಗ ಇನ್ನು ಅಮ್ಮನಿಂದ ಬೈಸಿಕೊಳ್ಳುವುದೇಕೆಂದು ನಾನೇ ತಲೆಸ್ನಾನ

ಮಾಡಿಕೊಂಡೆ. ಬಾತ್ ರೂಮಿನ ಬಾಗಿಲು ತೆರೆದಾಗ ಎದುರಿಗೆ ಅಮ್ಮ ನಿಂತಿದ್ದಳು. ಅವಳ ಕಣ್ಣತುಂಬ ನೀರಿತ್ತು!!

ಒಂದು ತರಹದ ಅಸಮಾಧಾನದಲ್ಲಿ "ನೀನೆ ಸ್ನಾನ ಮಾಡಿಕೊಂಡ್ಯಾ ಅಂತ ಕೇಳಿದಳು. ನನಗೆ ಒಂದು ಸಲ ಗಲಿಬಿಲಿ. ನಾನು ಏನು ಮಾಡಿದೆ ಎಂದು ಅಮ್ಮ ಈ ಪ್ರಶ್ನೆ ಕೇಳುತ್ತಿದ್ದಾಳೆ? ಕಣ್ಣೀರು ಹಾಕುವಂತಹದ್ದು ಆಗಿದ್ದಾದರೂ ಏನು?

"ಮೊದಲೆಲ್ಲ ನಾನು ಇಲ್ಲದೆ ತಲೆ ಸ್ನಾನ ಮಾಡಿದವಳೇ ಅಲ್ಲ. ನಾನು ಬರುವವರೆಗೂ ಅಮ್ಮ ಬಾರೆ, ಸ್ನಾನ ಮಾಡಿಸೆ ಎಂದು ಕರೆಯುತ್ತಿದ್ದೆ. ಈಗ ಎಲ್ಲ ದೊಡ್ಡವರಾಗಿಬಿಟ್ಟೀದ್ದೀರಲ್ಲ. ರೆಕ್ಕೆ ಬಲಿತಿದೆ. ಹಾರಿಹೋಗಲು ಇನ್ನೇನು? ಇನ್ನು ಮುಂದೆ

ಅಮ್ಮನೂ ಬೇಡ. ಅಪ್ಪನೂ ಬೇಡ. ಎಲ್ಲ ನೀವೇ ಮಾಡಿಕೊಳ್ಳಿ ಎನ್ನುತ್ತಾ ಕಣ್ಣೀರಾದಳು.

ಅಮ್ಮನ ದುಃಖಕ್ಕೆ ಅರ್ಥ ಕಂಡಿತ್ತು. ಮಾನವ ಸಂಬಂಧಗಳಲ್ಲಿ ಕನಿಷ್ಠ ಮಟ್ಟದ ಡಿಪೆಂಡೆನ್ಸಿ ಬೇಕೇಬೇಕು. ಇಲ್ಲವೆಂದರೆ ನಮ್ಮನ್ನು ಪ್ರೀತಿಸುವಾರಿಗೆ ಇನ್ ಸೆಕ್ಯುರಿಟಿ ಕಾಡುವಂತೆ ಮಾಡಿಬಿಡುತ್ತೇವೆ.-ಸುಮಿ