Saturday, April 16, 2011

ಅಬ್ಬೆ! ಅದೊಂದು ಮುಂಡೇದು!!

ವಿಧವೆ ಎಂದರೆ ಹೀಗಿರಬೇಕು, ಸುಮಂಗಲಿ ಎಂದರೆ ಹೀಗಿರಬೇಕು. ಹೆಣ್ಣು ಅಂದರೆ ಹೀಗಿರಬೇಕು, ಗಂಡು ಎಂದರೆ ಹೀಗಿರಬೇಕು-ಹೀಗೆ ಎಲ್ಲ ಶಬ್ದಗಳಿಗೂ ಸಮಾಜ ಒಂದು ಕಲ್ಪನೆಯನ್ನು ಬೆಳೆಸಿಕೊಂಡಿದೆ. ಅದಕ್ಕೆ ಸ್ವಲ್ಪ ಧಕ್ಕೆ ಬಂದರೂ ಸಮಾಜದ ಚುಚ್ಚು ನೋಟ, ಮಾತು ಎದುರಿಸಲೇಬೇಕು. ಸುತ್ತಲಿನ ಸಮಾಜ ನೀಡುವ ಹಿಂಸೆಗಿಂತ ಮನಸಿನ ವಿರುದ್ಧ ನಡೆವ ನೋವೇ ಲೇಸು ಎಂದು ಎಷ್ಟೋ ಬದುಕುತ್ತಾರೆ. ಇದಕ್ಕೆ ಅಬ್ಬೆಯ ಜೀವನ ಒಂದು ಉದಾಹರಣೆಯಷ್ಟೆ.

ಅಪ್ಪ, ಅಜ್ಜ ಎಲ್ಲರೂ ಅವರಿಗೆ ತಿಳಿದಷ್ಟು ಹೇಳಿದರೂ ಅಬ್ಬೆಯ ಬಗ್ಗೆ ಇನ್ನೂ ತಿಳಿದುಕೊಳ್ಳುವ ಬಯಕೆಯನ್ನು ನನ್ನ ಕೈಲಿ ಹತ್ತಿಕ್ಕಿಕೊಳ್ಳಲಾಗಲಿಲ್ಲ.

ಅಬ್ಬೆಯ ಬಗ್ಗೆ ಇವರೆಲ್ಲರಿಗಿಂತ ಬಲ್ಲವಳು ಅಜ್ಜಿ. ಆದರೆ ಅಜ್ಜಿಯ ಹತ್ತಿರ ಅಬ್ಬೆಯ ಬಗ್ಗೆ ಕೇಳಲು ಭಯ. ಅಜ್ಜಿಗೆ ಮುಂಚಿನಿಂದಲೂ ಏನೋ ಅಸಮಾಧಾನ. ಅವಳೆದುರು ಅಬ್ಬೆಯ ಸುದ್ದಿ ಎತ್ತಿದರೆ ಸಾಕು 'ಅದೊಂದು ಮುಂಡೇದು' ಅಂತಲೇ ಶಪಿಸುತ್ತಿದ್ದಳು. ಆದರೆ ಇವತ್ತು ಅಜ್ಜಿ ಏನೇ ಹೇಳಿದರೂ ಸರಿ, ಅಬ್ಬೆಯ ಬಗ್ಗೆ ಕೇಳಲೇಬೇಕು ಎಂದು ನಿರ್ಧರಿಸಿದ್ದೆ. ಅಜ್ಜಿಯನ್ನು ದಿನವಿಡೀ ಬಿಟ್ಟುಬಿಡದೆ ಕಾಡಿದೆ.

ಅಜ್ಜಿ ಅಬ್ಬೆಗೆ ಬೈಯುವ ಎಂದಿನ ಶೈಲಿಯಲ್ಲಿ 'ಅದೊಂದು ಮುದುಕಿ (ಅಜ್ಜಿಗೆ ತಾನೂ ಮುದುಕಿ ಎನ್ನುವುದು ಮರೆತುಹೋಗಿರಬೇಕು!) ಎಂದೇ ಪ್ರಾರಂಭಿಸಿದಳು. ಅಜ್ಜಿ ಅಬ್ಬೆ ಸರಿಸುಮಾರು ಸಮಾನ ವಯಸ್ಕರು. ಅಬ್ಬೆಯ ಗಂಡ ಸಾಯುವ ಹೊತ್ತಿಗೆ ಆಗಷ್ಟೇ ಅಜ್ಜಿ ಅಜ್ಜನ ಮದುವೆಯಾಗಿ ಬಂದಿದ್ದಳಂತೆ.

ಗಂಡ ಸತ್ತಾಗ ಅಬ್ಬೆಗೆ ಏಳೋ ಎಂಟೋ ವಯಸ್ಸು. ಅಬ್ಬೆಯ ಅಳು ನೋಡಿದರೆ ಎಂಥವರಿಗಾದರೂ ಪಾಪ ಅನ್ನಿಸುತ್ತಿತ್ತಂತೆ. ಜೋರಾಗಿ ಅಳುತ್ತಿದ್ದಳಂತೆ. ಅವಳಿಗೆ ಗಂಡ ಸತ್ತ ಎನ್ನುವ ದುಃಖಕ್ಕಿಂತ ತನ್ನ ಬಳೆ, ಒಡವೆಗಳನ್ನು ತೆಗೆದು, ತಲೆ ಬೋಳಿಸಿ, ಕೆಂಪು ಸೀರೆ ಉಡಿಸುತ್ತಾರೆ ಎನ್ನುವುದೇ ಅವಳ ಅಳುವಿಗೆ ಕಾರಣವಾಗಿತ್ತಂತೆ. ಗಂಡನ ಶವ ಸಂಸ್ಕಾರಕ್ಕೆ ಅಬ್ಬೆಯನ್ನು ಹಿಡಿದು ಎಳೆದುಕೊಂಡು ಬರಲು ನಾಲ್ಕೈದು ಜನ ಬೇಕಾಯಿತಂತೆ.

'ಅಯ್ಯೋ! ನನ್ನ ಕೂದಲು ತೆಗೆಯಬೇಡಿ, ನನ್ನ ಕಾಲುಂಗುರ... ನನ್ನ ಬಳೆ...' ಎಂದು ಕೂಗುತ್ತಿದ್ದಳಂತೆ. ಯಾರು ಏನೇ ಹೇಳಿದರೂ ಮಾಡಿದರೂ ತನ್ನ ಮಾಂಗಲ್ಯ ಸರಕ್ಕೆ ಇರುವ ತಾಳಿಯನ್ನು ತೆಗೆದುಕೊಡಲಿಲ್ಲವಂತೆ. ಅದನ್ನು ಅಬ್ಬೆ ಒಂದು ದಾರಕ್ಕೆ ಪೋಣಿಸಿ ಇಂದೂ ಧರಿಸುತ್ತಾಳಂತೆ.

ಅಬ್ಬೆಗೆ ಸುಮಾರು 15-16 ಆಗುವವರೆಗೂ ಅಬ್ಬೆ-ಅಜ್ಜಿ ಒಳ್ಳೆಯ ಸ್ನೇಹದಿಂದಲೇ ಇದ್ದರಂತೆ.. ಸಂಜೆ ತಿರುಗಾಡಲು ಅಂತ ಹೋದರೆ ಅಬ್ಬೆ ಅಜ್ಜಿಯ ಹತ್ತಿರ ಏನೇನೋ ಹೇಳುತ್ತಿದ್ದಳಂತೆ. 'ನನಗೆ ಹಾಗೆ ಆಸೆಯಾಗುತ್ತದೆ, ಹೀಗೆ ಆಸೆಯಾಗುತ್ತದೆ ಎನ್ನುತ್ತಿದ್ದಳಂತೆ. 'ಛೀ, ಅಸಹ್ಯ. ಎಲ್ಲ ಬಿಟ್ಟವಳು ಅವಳು' ಎಂದು ಅಜ್ಜಿ ಮುಖ ಸಿಂಡರಿಸಿಕೊಂಡಳು.

ಅಂದಿನಿಂದ ಅಜ್ಜಿ ಅಬ್ಬೆಯೊಂದಿಗೆ ಮಾತು ಬಿಟ್ಟಳಂತೆ. ಇದಿಷ್ಟು ಅಜ್ಜಿಯಿಂದ ತಿಳಿದು ಬಂದಿದ್ದು . ಅಜ್ಜಿ ತನ್ನದೇ ಅದ ದೃಷ್ಟಿಕೋನದಲ್ಲಿ ಅಬ್ಬೆಯ ಬಗ್ಗೆ ಹೇಳಿದ್ದಳು. ಆದರೆ ಅಬ್ಬೆಯಲ್ಲಿ ನನಗಾವ ದೋಷವೂ ಕಾಣಿಸುತ್ತಿಲ್ಲ...ಯಾಕೆಂದರೆ... ಅಬ್ಬೆ! ಅದೊಂದು ಮುಂಡೇದು!!

2 comments:

ಕನಸು ಕಂಗಳ ಹುಡುಗ said...

ಹೂಂ...ಆಗಿನ ಕಾಲ ಹಂಗಿತ್ತು....
ಬಾಟಲಿಯೊಳಗಿನ ಬದುಕು.....
ಬಾಟಲಿಯ ಮುಚ್ಚಳವನ್ನು ತೆರೆದರೆ
ಒಂದೋ ಈಡೇರದ ಆಸೆಯ ಪರಿಮಳ
ಇಲ್ಲಾ ವ್ಯಥೆಯ ನಿತ್ಯ ದುರ್ನಾಥ...


ಚಂದ ಬರೆದಿರಿ...

Manu said...

ಚೆನ್ನಾಗಿ ಬರೆದಿದ್ದೀರಿ. ಆದರೆ , 'ಸಮಾಜ ಒಂದು ಕಲ್ಪನೆಯನ್ನು ಬೆಳೆಸಿಕೊಂಡಿದೆ' ಎಂಬ ಮಾತನ್ನು ಕುರಿತು ನನ್ನ ಅನಿಸಿಕೆಗಳು.
'ಮೂರ್ಖ ಸಮಾಜ' ಎಂಬ ಭಾವನೆಯನ್ನು ಬದಿಗಿಟ್ಟು ಈ ಕೆಳಗಿನದನ್ನು ಓದಿ.
ಸಮಾಜ ನಮ್ಮ ನಿಮ್ಮ ಅನುಭವ ಮತ್ತು ಕಾಲಮಾನಕ್ಕಿಂತ ಪ್ರಾಚೀನವಾದುದು. ಸಮಾಜ ಎಂಬುದು ಅಸ್ತಿತ್ವಕ್ಕೆ ಬಂದುದೇ ಮನುಷ್ಯನ ಉಗಮವಾದಾಗಿನಿಂದ , ಪ್ರಾಚೀನ ಶಿಲಾಯುಗದಿಂದ ಎಂದರೂ ತಪ್ಪಾಗಲಾರದು. ಸಮಾಜವನ್ನು ರೂಪಿಸಲು ಹಾಗೂ ನಿಯಮ ಕಟ್ಟಳೆಗಳನ್ನು ವಿಧಿಸಲು ಕಾರಣವಾದ ಅಂಶಗಳು ಕೇವಲ ಆಯಾ ಕಾಲಘಟ್ಟಕ್ಕೆ ಸೀಮಿತವಾದದ್ದಾಗಿಲ್ಲದೇ ಮಾನವನ ಮೂಲಭೂತ ಸ್ವಭಾವ , ಗುಣಗಳನ್ನೂ ಕೂಡ ಅವಲಂಬಿಸಿವೆ. ವಿಧವೆ ಹೀಗೇ ಇರಬೇಕು , ಸುಮಂಗಲಿ ಹೀಗೇ ಇರಬೇಕು ಎಂಬುದನ್ನು ಸಮಾಜ ನಿಯಮಿಸಲು ಮಾನವನ ದೈಹಿಕ ,ಮಾನಸಿಕ ,ಪಾರಿಸರಿಕ ಹೀಗೆ ಹಲವು ಅಂಶಗಳು ಕಾರಣವಾಗಿವೆ . ಇವೆಲ್ಲವನ್ನು ರೆಲಿಜಿಯಸ ಸಿಂಬೋಲಿಸ್ಮ ಎಂದು ಸ್ಥೂಲವಾಗಿ ಹೇಳಬಹುದು.
ನಾನು ಇವನ್ನು ಇಲ್ಲಿ ವಿವರಿಸಲಿಚ್ಛಿಸಿವುದಿಲ್ಲ. ಕಟ್ಟಳೆಗಳು, ಚೌಕಟ್ಟು ಕೇವಲ ವಿಧವೆಗಷ್ಟೇ ಅಲ್ಲದೇ , ಸುಮಂಗಲಿಯಾಗಲಿ, ಗ್ರಹಸ್ಥನಾಗಲೀ, ಕಿಶೋರನಿಗಾಗಲೀ ಅನ್ವಯವಾಗುತ್ತವೆ. ಶತಮಾನಗಳ ಅವಧಿಯಲ್ಲಿ ಸಮಾಜ ಗಳಿಸಿರುವ ಅನುಭವವೇ ಈ ಕಟ್ಟಳೆಗಳನ್ನು ವಿಧಿಸಲು ಕಾರಣವಾಗಿರಬಹುದೇ ಹೊರತು ಬೇರೇನಲ್ಲ. ಹಾಗೆ ನೋಡಹೋದರೆ ಸಾರ್ವತ್ರಿಕವಾಗಿ ಬಳಕೆಯಲ್ಲಿರುವ ನಮ್ಮ ಸಂವಿಧಾನ ಮತ್ತು ನ್ಯಾಯಾಂಗಗಳೇ ಸಮಾಜದ ಮೂಲಭೂತ ನಿಯಮಗಳನ್ನಾಧರಿಸಿದೆ. ಸಮಾಜದ ನಿಯಮಗಳು (ಕಟ್ಟಳೆಗಳು ಎಂದು ಹೇಳಲಾರೆ) ಒಬ್ಬ ವ್ಯಕ್ತಿಯ ಒಳಿತಿಗಾಗಿ ರೂಪುಗೊಂಡಿದ್ದು , ಕಾಲಕ್ಕೆ ತಕ್ಕಂತೆ ಸುಧಾರಣೆಗಳಿಗೊಳಪಡುತ್ತಲೇ ಇವೆ. ಇದರರ್ಥ ಸಮಾಜ ಎಂದಿಗೂ ಸರಿ, ನಾವೇ ತಪ್ಪು ಎಂದೂ ಅಲ್ಲ.