Saturday, June 19, 2010

ಜನರು ಯಾಕೆ ಹೀಗೆ? ನನಗಂತೂ ಅರ್ಥವೇ ಆಗುತ್ತಿಲ್ಲ

ಅಜ್ಜ ತನ್ನ ನೀಳ ಬೆರಳೆತ್ತಿ ಅಮ್ಮನೆಡೆಗೆ ತೋರಿದರೆ ಸಾಕು; ಅಮ್ಮ ಸುಮ್ಮನೆ ಒಳಹೋಗುತ್ತಿದ್ದರು. ಹಾಗಾಗಿ ಅಜ್ಜ ನನಗೊಬ್ಬ ಆಪದ್ಭಾಂದವನಾಗಿದ್ದ. ನನ್ನ ಮೊಮ್ಮಗಳನ್ನು ದೊಡ್ಡ ಆಫೀಸರ್ ಮಾಡುತ್ತೇನೆ ಎಂದು ಬಂದವರೆದುರು ಹೊಗಳಿ ನನ್ನ ಅಟ್ಟಕೇರಿಸುತ್ತಿದ್ದ ನನ್ನಜ್ಜ... ಸುಳ್ಳೆ ಸುಳ್ಳೆ ಕಥೆ ಹೇಳಿ ತಾನೂ ನಕ್ಕು ನನ್ನನ್ನು ನಗಿಸುತ್ತಿದ್ದ ಅಜ್ಜ, ನನ್ನನ್ನು ನಾನು 'ರಾಜಕುಮಾರಿ' ಎಂದೇ ಭಾವಿಸುವಂತೆ ಮಾಡಿದ ನನ್ನಜ್ಜ....
ಮುಂದೆ...

ಕೆಲವೊಮ್ಮೆ ನನಗನಿಸುತ್ತದೆ, ಕೆಲವು ಜನರು ಎಷ್ಟೇ ಬುದ್ಧಿವಂತರಿರಲಿ, ಎಷ್ಟೇ ಉತ್ಕೃಷ್ಟ ಶಿಕ್ಷಣ ಪಡೆದಿರಲಿ ಕೀಳು ಪ್ರವೃತ್ತಿಯನ್ನು ಬಿಡಲಾರರು. ಉನ್ನತವಾಗಿ ವಿಚಾರ ಮಾಡಲಾರರು. ಸಂಕುಚಿತ ಮನೋಭಾವದವರಾಗಿ, ಆಚೀಚಿನವರ ಬಗ್ಗೆ ಕೆಳಮಟ್ಟದಲ್ಲಿ ವಿಚಾರ ಮಾಡುತ್ತ ತಾವೂ ನೆಮ್ಮದಿಯಾಗಿರದೇ ಉಳಿವರನ್ನೂ ನೆಮ್ಮದಿಯಾಗಿ ಇರಲು ಬಿಡುವುದಿಲ್ಲ.

ಬಹುಶಃ ಎಲ್ಲರಿಗೂ ಇಂಥವರು ಕಾಡುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ ವಯಸ್ಸಿಗೆ ಬಂದ ಹುಡುಗಿಯರನೇಕರು ಇಂಥ ಕಟುಕಿ ಮಾತನಾಡುವ ಕಟುಕರಿಂದ ಕುಟುಕಿಸಿಕೊಳ್ಳುತ್ತಾರೆ. ಒಮ್ಮೊಮ್ಮೆ ಈ ಕೊಂಕು ನುಡಿಯುವವರ ಕಾಟ ಎಲ್ಲಿಯವರೆಗಿರುತ್ತದೆ ಎಂದರೆ, ಆ ಹುಡುಗಿಯರು ಆತ್ಮಹತ್ಯೆಯ ತನಕ ಯೋಚಿಸಬೇಕು!

ನನ್ನ ಹಿಂದಿನ ಡೆಸ್ಕ್‌ನಲ್ಲಿ ಕುಳಿತುಕೊಳ್ಳುತ್ತಿದ್ದ ವೀಣಾ...ಏನು ತಪ್ಪು ಮಾಡಿದ್ದಳು ಅವಳು!? ತಾನು ಮಾಡದ ತಪ್ಪಿಗಾಗಿ ಅವಳಿಗೇಕೆ ಶಿಕ್ಷೆ?! ಸರಳವಾಗಿ ನಗುತ್ತ, ಎಲ್ಲರ ಜೊತೆಯೂ ಬೆರೆತರೆ ತಪ್ಪೆ? ಅಥವಾ ನಾಲ್ಕು ಜನರ ನಡುವೆ ಎದ್ದು ಕಾಣುವಂತೆ ಸುಮ್ದರವಾಗಿರುವುದು ತಪ್ಪೇ? ಅಥವಾ ಪ್ಯಾಂಟ್-ಶರ್ಟ್ ಹಾಕಿಕೊಂಡು ಬಂದಿದ್ದೇ ತಪ್ಪಾ? ಅಶ್ಲೀಲವಾಗಿ ಅವಳೆನೂ ಡ್ರೆಸ್ ಮಾಡ್ಕೋತಿರಲಿಲ್ಲ. ಆದರೂ ಅವಳು ಹುಡುಗಿಯರಾದಿಯಾಗಿ ಎಲ್ಲರ ಹರಿತ ದೃಷ್ಟಿಗೆ ಗ್ರಾಸವಾಗಿದ್ದಳು.

ಕಾಲೇಜಿಗೆ ಬಂದ ಕೆಲವೇ ದಿನಗಳಲ್ಲಿ ಅವಳ ಬಗ್ಗೆ ಅಪಪ್ರಚಾರ ಪ್ರಾರಂಭವಾಗಿತ್ತು. "ನಿನಗೆ ಗೊತ್ತಾ, ಅವಳ ಅಪ್ಪ-ಅಮ್ಮ ಎಷ್ಟು ಒಳ್ಳೆಯವರಂತೆ ಗೊತ್ತಾ? ಆದರೂ ಇವಳನ್ನು ನೋಡು ಹೇಗೆ ಆಡ್ತಾಳೆ ಅಂತ! ಅಂತ ಗೆಳತಿ ಅನ್ನಿಸಿಕೊಂಡವರೇ ಅವಳ ಬೆನ್ನ ಹಿಂದೆ ಮಾತನಾಡಿಕೊಳ್ಳುತ್ತಿದ್ದರು. ಈ ಹುಡುಗಿಯರು ಅವಳ ಬಗ್ಗೆ ಆಡಿಕೊಂಡಷ್ಟು ಕೆಟ್ಟದಾಗಿ ಹುಡುಗರೂ ಹೇಳುತ್ತಿರಲಿಲ್ಲ!

ಯಾರೋ ಅವಳು 'ಫಾಸ್ಟ್' ಎಂದು ಹಬ್ಬಿಸಿದ ಸುದ್ದಿ ಕಾಲೇಜ್ ಕ್ಯಾಂಪಸ್ ದಾಟಿ ಸುತ್ತಮುತ್ತಲೂ ಹರಡಿತ್ತು. ರಸ್ತೆಯಲ್ಲಿ ಜನರು ಅವಳನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಹೋಯಿತು. ಅವಳು ಕಾಲೇಜಿಗೆ ಬರುವಾಗ ತಲೆತಗ್ಗಿಸಿಕೊಂಡು ಬರುತ್ತಿದ್ದಳು. ಮೊದಲೆಲ್ಲ ಚೆನ್ನಾಗಿಯೇ ಮಾತನಾಡುತ್ತಿದ್ದವಳು ಈಗ ಯಾರ ಜೊತೆಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಆದರೂ ಸುದ್ದಿ ಹರಡಿಸುವವರ ದಾಹವಿನ್ನೂ ತೀರಿರಲಿಲ್ಲ.

ಆ ಚಿಕ್ಕ ಊರಿನಲ್ಲಿ ಸುದ್ದಿಯೊಂದು ಹರಡಿದರೆ ಸುಮಾರು ಒಂದು ತಿಂಗಳು ಚಾಲ್ತಿಯಲ್ಲಿರುತ್ತದೆ. ಇನ್ನು ಇಂಥ ಸುದ್ದಿ ಸಿಕ್ಕರಂತೂ ಕೇಳುವುದೇ ಬೇಡ. ಅವಳಿಗೆ ಈ ಹಿಂಸೆ ಎಷ್ಟು ಹೆಚ್ಚಾಯಿತೆಂದರೆ ಒಂದು ದಿನ ಕಾಲೇಜನ್ನೇ ಬಿಟ್ಟು ಹೋದಳು. ಎಲ್ಲಿ ಹೋದಳು ಎಂದು ಯಾರಿಗೂ ಗೊತ್ತಿಲ್ಲ. ಆಡಿಕೊಳ್ಳುವವರು ಮಾತ್ರ "ಯಾವನೋ ಒಬ್ಬನ ಜೊತೆ ಇರುವುದನ್ನು ಪ್ರಿನ್ಸಿಪಾಲರೇ ಸ್ವತಃ ನೋಡಿದರಂತೆ. ಆದ್ದರಿಂದ ಡಿಬಾರ್ ಮಾಡಿದರಂತೆ..." ಹೀಗೆ ಒಬ್ಬೊಬ್ಬರಿಗೆ ತೋಚಿದಂತೆ ಒಂದೊಂದು ಸುದ್ದಿಗಳು...

ಆದರೆ ನೈಜ ಸತ್ಯ ಯಾರಿಗೂ ಗೊತ್ತಿಲ್ಲ; ಅವರಿಗೆ ಅದು ಬೇಡ ಕೂಡ. ರೋಚಕವಾದ ಸುಳ್ಳು ಸುದ್ದಿ ಇರುವಾಗ ಸಪ್ಪೆ ಸತ್ಯ ಯಾರಿಗೆ ಬೇಕು? ಅಷ್ಟಕ್ಕೂ ಸತ್ಯ ವಿಷಯದ ಅಗತ್ಯ ಯಾರಿಗೆ ಇದೆ. ಅವರಿಗೆ ಬಾಯಿಯಲ್ಲಿ ಹಾಕಿಕೊಂಡು ಅಗೆಯಲು ಒಂದು ಸುದ್ದಿ ಬೇಕು ಅಷ್ಟೇ?. ನನಗೇನೂ ಅವಳು ಅಂತರಂಗ ಹಂಚಿಕೊಳ್ಳುವಷ್ಟು ಹತ್ತಿರದ ಗೆಳತಿಯಲ್ಲ. ಆದರೆ ಅವಳನ್ನು ನೋಡಿದರೆ ನಿಜಕ್ಕೂ ಕನಿಕರವಾಗುತ್ತದೆ.

'ಪ್ಯಾಂಟ್ ಹಾಕೊಂಡವರೆಲ್ಲ 'ಫಾಸ್ಟ್'.. ಸೀರೆ ಉಟ್ಟವರೆಲ್ಲ ಸಾಫ್ಟ್. ಜೋರಾಗಿ ನಕ್ಕರೆ ಜಾರಿಣಿ. ತಲೆ ಎತ್ತಿ ನಡೆದರೆ bold, ತಲೆತಗ್ಗಿಸಿ ನಡೆದರೆ Traditional'ಹೀಗೆ ಬ್ರ್ಯಾಂಡ್ ಮಾಡಿಬಿಡುತ್ತಾರೆ. ಜನರು ಯಾಕೆ ಹೀಗೆ? ನನಗಂತೂ ಅರ್ಥವೇ ಆಗುತ್ತಿಲ್ಲ...- ಸುಮಿ

No comments: