Sunday, August 1, 2010

ಎಲ್ಲಿ ಹೋಯ್ತು ಆ ಮುಗ್ಧ ಸ್ನೇಹ...

ಹಿಂದೆ..
ಹಾಗಾದರೆ ಪ್ರೀತಿ ಅಂದರೆ ಹೀಗೆ ಇರುತ್ತಾ? ಇದ್ಯಾವುದಕ್ಕೂ ನನ್ನಲ್ಲಿ ಉತ್ತರವಿಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳುವುದಾದರೂ ಹೇಗೆ?
ಮುಂದೆ...

ಮನುಷ್ಯ ಬೆಳೆದಂತೆ ಅವನ ವಿಚಾರಗಳೂ ಎಷ್ಟು ಬದಲಾಗಿಬಿಡುತ್ತವೆ! ಅಥವಾ ಸಮಾಜವೇ ಅವನನ್ನು ಬದಲಾಯಿಸಿ ಬಿಡುತ್ತವೆಯೊ? 8-10 ವರ್ಷಗಳಲ್ಲಿ ಎಂತಹ ಬದಲಾವಣೆ!

ಜೊತೆಯಲ್ಲಿ ಆಡಿ ಬೆಳೆದ ಸ್ನೇಹಿತ ಅಪರಿಚಿತನಾಗಿಬಿಟ್ಟಿದ್ದ!! ನಾನು ದೊಡ್ಡ ಮನೆಯ ಮಗಳು ಎಂಬ ಕಾರಣವೋ ಅಥವಾ ಜಾತಿಯೋ ನಮ್ಮಿಬ್ಬರ ನಡುವೆ ಅಡ್ಡ ಬಂದಿದ್ದು? ಏನೇ ಇದ್ದರೂ ಮಾತನಾಡಿಸದ? ಕಂದಕವೆ?!

ವಿನಾಯಕ.. ಉಹುಂ ಗೊಣ್ಣೆ ವಿನ್ನಿ. ಆ ಹೆಸರೇ ಅವನಿಗೆ ಹೊಂದಿಕೆಯಾಗುವುದು. ನಾವೆಲ್ಲಾಅವನನ್ನು ಕರೆಯುತ್ತಿದ್ದುದೇ ಆ ಹೆಸರಿನಿಂದ. ಯಾವಾಗಲೂ ಮೂಗಿನಿಂದ ಸುರಿಯುತ್ತಿರುವ ಗೊಣ್ಣೆ, ಹರಕು ಮುರುಕು ಅಂಗಿಯ ತೋಳಿನಿಂದ ಅದನ್ನು ಒರೆಸಿಕೊಳ್ಳುವ ವ್ಯರ್ಥ ಪ್ರಯತ್ನ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಕೂಲಿಗೆ ಹೋಗುವ ಅವನಮ್ಮ ಅವನನ್ನು ಕೈಲಾದಷ್ಟು ಸ್ವಚ್ಛವಾಗಿ ಇಡುವ ಪ್ರಯತ್ನ ಮಾಡುತ್ತಿದ್ದಳು. ಆದರೆ ಅದೆಲ್ಲ ಕೆಲವೇ ಕ್ಷಣಗಳಲ್ಲಿ ಮಣ್ಣುಪಾಲು ಆಗುವುದೆಂದು ಅವಳಿಗೂ ಗೊತ್ತು. ಅಂತಹ ತುಂಟ ಅವನು. ಹಕ್ಕಿ, ಹೂವು, ಹಣ್ಣು, ಮರಗಳ
ಹೆಸರೆಲ್ಲ ಅವನಿಗೆ ಬಾಯಿಪಾಠ. ನಮಗೆಲ್ಲ ಒಂದು ಥರ ಸ್ಫೂರ್ತಿ, ಸೋಜಿಗವಾಗಿದ್ದ.

ಆದರೆ ಅವನು ಸಮಾಜದ ಕೆಳಸ್ತರದವನು. ಅವನ ಅಪ್ಪ-ಅಮ್ಮ ಮಾಡುತ್ತಿದ್ದದ್ದು ಕೂಲಿ ಕೆಲಸ. ನಾವು ಆ ಶಾಲೆಯಲ್ಲಿದ್ದ 8-10 ಮಕ್ಕಳು. ನಮಗೆ ಆ ಜಾತಿ ಭೇದವಿರಲಿಲ್ಲ. ನಾವೆಲ್ಲ ಒಟ್ಟಿಗೇ ಅ ಆ ಇ ಕಲಿತಿದ್ದು, ಆಡಿದ್ದು, ತಪ್ಪು ಲೆಕ್ಕ ಮಾಡಿ ಕಾವೇರಿ ಟೀಚರ್ ಹತ್ತಿರ ಬಾಸುಂಡೆ ಬರುವಂತೆ ಹೊಡೆಸಿಕೊಂಡಿದ್ದು..

ನಾನು ವಿನ್ನಿ ವಿನಿಮಯ ಮಾಡಿಕೊಂಡ ವಸ್ತುಗಳೆಷ್ಟೋ..ನನ್ನ ಬಳಪಕ್ಕೆ ಅವನ ಪುಟ್ಟ ಬಾತುಕೋಳಿ ಗೊಂಬೆ, ಮುರುಕು ಪೆನ್ನಿಗೆ ಬೆಂಕಿಪೊಟ್ಟಣದ ಚಾಪಾ... ಹೀಗೆ ಅದೆಷ್ಟೋ ಅವನ ಇಷ್ಟೊ ಇಷ್ಟದ ವಸ್ತುಗಳು ನನ್ನ ಸ್ಕೂಲ್ ಬ್ಯಾಗ್ ಸೇರಿದ್ದವು. ಶನಿವಾರ ಶಾಲೆಯಿಂದ ಮರಳುವಾಗ ಮಡಿಲು ತುಂಬುವಷ್ಟು ನೇರಳೆ ಹಣ್ಣು, ಕಾಡಿನ ಅಪರೂಪದ ಹಣ್ಣುಗಳು ವಿನ್ನಿಯ ಕೃಪೆಯಿಂದ ಸಿಗುತ್ತಿದ್ದವು. ನಮ್ಮ ನಡುವೆ ಮೇಲು ಕೀಳೆಂಬ ಭಾವ ಇರಲಿಲ್ಲ. ಅವನು ನಾಲ್ಕನೆ ಕ್ಲಾಸಿಗೆ ಶಾಲೆ ಬಿಟ್ಟಿದ್ದ. ಆದರೆ ದಾರಿಯಲ್ಲಿ ಸಿಕ್ಕರೆ 2-3 ವರ್ಷದವರೆಗೆ ನಮ್ಮಲ್ಲಿ ಅದೇ ಸಲುಗೆ ಇತ್ತು. ನಂತರ ನನ್ನ ಹೈಸ್ಕೂಲು, ಕಾಲೇಜು ಎಂದು ವಿನ್ನಿ ಮರೆತುಹೋಗಿದ್ದ..

ಆದರೆ ಇವತ್ತು ಏನಾಗಿಬಿಟ್ಟಿತ್ತು ಅವನಿಗೆ? ಬಾಲ್ಯದ ಒಳ್ಳೆಯ ಸ್ನೇಹಿತ. ಜೊತೆಯಲ್ಲೆ ಆಡಿ, ಕುಣಿದು, ಅತ್ತುಬೆಳೆದವರು. ಇವತ್ತು ನಮ್ಮ ಮನೆ ಜಗುಲಿ ಕಟ್ಟೆಯ ಮೇಲೆ ಕುಳಿತವನು ಮುಖ ತಿರುಗಿಸಿಕೊಂಡು ಅನಿವಾರ್ಯ ಎಂಬಂತೆ ನನ್ನ ಜೊತೆ ಮಾತನಾಡಿದ್ದ.. ಅದೂ ಬಹುವಚನ ಕೊಟ್ಟು!  "ಏನು.. ಸುಮಾ ಹೆಗಡ್ತೀರು... ಯಾವಾಗ ಬಂದ್ರಿ?...  ನಾನು "ಏನೋ ಗೊಣ್ಣೆ,ಹೇಗಿದಿಯಾ?" ಎಂದು ಸಲುಗೆಯಿಂದ ಮಾತನಾಡಲು ಹೊರಟವಳು...

ಆದರೆ ಅವನ ಬಹುವಚನ, ಮುಜುಗರ ನನ್ನ ಮಾತನ್ನು ಕಟ್ಟಿ ಹಾಕಿದ್ದವು..ನಾನು 'ಹೂಂ' ಎಂದು ತಲೆ ಅಲ್ಲಾಡಿಸಿ ಎದ್ದು ಒಳ ಹೋದೆ. ಯಾಕೋ... ಮಂಕು ಕವಿದಂತಾಗಿತ್ತು. ಎಲ್ಲಿ ಹೋಯ್ತು ಆ ಗೆಳೆತನ?

ಹೌದು.. ಇನ್ನು ಜೀವನವಿಡೀ ಆ ಕಂದಕವನ್ನು ನಾವಿಬ್ಬರೂ ಜೀವಂತವಾಗೇ ಇಡುತ್ತೇವೆ. ಜಾತಿಯ ಗೆರೆಯನ್ನು ನಾವಿಬ್ಬರೂ ದಾಟಲಾರೆವು. ಅಕಸ್ಮಾತ್ ನಾನು ಮೊದಲಿನ ಸ್ನೇಹವನ್ನು ಜೀವಂತವಾಗಿಸಲು ಯತ್ನಿಸಿದರೆ ಅವನೇ ಅದನ್ನು ಕೊಲ್ಲುತ್ತಾನೆ.. ಅಷ್ಟು ಕೀಳರಿಮೆ ಕಂಡಿದ್ದೇನೆ ಅವನ ಕಣ್ಣುಗಳಲ್ಲಿ!

ಕೇವಲ ಜಾತಿ ಬಂಧನದ ಬಗ್ಗೆ ಪಠ್ಯಪುಸ್ತಕಗಳಲ್ಲಿ ಓದಿದ್ದೆ... ಇವತ್ತು ಜೀವನದಲ್ಲಿ ಮೊದಲನೇ ಸಲ ನೇರವಾಗಿ ಅನುಭವಿಸಿದೆ...

1 comment:

Harish - ಹರೀಶ said...

ಏನೆಂದು ಪ್ರತಿಕ್ರಿಯಿಸಬೇಕೆಂದೇ ಹೊಳೆಯುತ್ತಿಲ್ಲ.

>> ಇನ್ನು ಜೀವನವಿಡೀ ಆ ಕಂದಕವನ್ನು ನಾವಿಬ್ಬರೂ ಜೀವಂತವಾಗೇ ಇಡುತ್ತೇವೆ.
ಓದಿ ಬೇಸರವಾಯಿತು.. :-(

ನಿಮ್ಮ ಎಲ್ಲ ಲೇಖನಗಳೂ ಸುಂದರವಾಗಿವೆ. ಒಮ್ಮೆಲೇ ನಿಮ್ಮ ಹಳೆಯ ಲೇಖನಗಳನ್ನೆಲ್ಲ ಓದಿ ಮುಗಿಸಿದೆ. :-)