Friday, March 4, 2011

ಭಾರವೆನಿಸುವ ಅವಳ ಗೆಳೆತನ...

ಹಿಂದೆ....
"ಯಾಕೆ ಅವಳಿಗೆ ಆ ತರ ಮಾಡುತ್ತೀಯಾ? ಪಾಪ. ಎಂದು ನನಗೇ ಬೈಯುತ್ತಾಳೆ. ನನಗೂ ಇದೆಲ್ಲ ಹೊಸದು"...ಮುಂದಕ್ಕೆ...

ಸಂಬಂಧಗಳನ್ನು ಸಂಭಾಳಿಸುವುದು ತುಂಬಾ ಕಷ್ಟವಪ್ಪ.. ಅಪ್ಪ ಅಮ್ಮ, ಅಣ್ಣ, ಅಕ್ಕ, ಅಜ್ಜಿ ಅಜ್ಜ..ಗೆಳೆಯ, ಗೆಳತಿ.. ಹೀಗೆ ಮಾನವ ಸಂಬಂಧಗಳಿಗೆ ಹೆಸರನ್ನು ನೀಡಿ, ಚೌಕಟ್ಟು ಮಾಡಿದ್ದರೂ ಮಾನವ ಸಂಬಂಧಗಳ ಉದ್ದ ಅಗಲಗಳನ್ನು ಅಳೆಯುವುದು ಅಸಾಧ್ಯ.

ಇತ್ತೀಚೆಗೆ ಭಾರತಿ ಏನಾದರೂ ಹಾಗೆ ಹೀಗೆ ಎಂದು ತನ್ನ ಪರ್ಸನಲ್ ವಿಷಯಗಳನ್ನು ಚರ್ಚೆ ಮಾಡಲು ಬಂದರೆ ಸಿಡುಕುತ್ತೇನೆ. ಸಾಕಪ್ಪಾ ಅವಳ ಸಹವಾಸ ಎನಿಸಿಬಿಟ್ಟಿದೆ. ಹೇಗಾದರೂ ಅವಳ ಕೈಯಿಂದ ತಪ್ಪಿಸಿಕೊಂಡರೆ ಸಾಕು ಎಂದೆನಿಸುತ್ತದೆ. ಕುಮ್ಮಿ, ಭಾರತಿ ಇಬ್ಬರೂ ನನಗೆ ಗೆಳತಿಯರೇ.. ಆದರೆ ಎಷ್ಟು ವ್ಯತ್ಯಾಸ. ನಾನು ಆ ಗೆಳೆತನವನ್ನು ನಿಭಾಯಿಸುವುದರಲ್ಲಿ ಅಜಗಜಾಂತರ.

ನಾನೂ ಬಹಳಷ್ಟು ಸಾರಿ ವಿಚಾರ ಮಾಡಿದ್ದೇನೆ.. ಭಾರತಿಯ ಗೆಳೆತನ ಯಾಕೆ ಉಸಿರುಕಟ್ಟಿಸುತ್ತದೆ ಎಂದು .. ಕುಮ್ಮಿ ಪ್ರತಿಯೊಂದಕ್ಕೂ ನನ್ನನ್ನು ಎದುರು ನೋಡುತ್ತ ಕುಳಿತುಕೊಳ್ಳುವುದಿಲ್ಲ. ಗೆಳತಿಯೆಂದು ನನ್ನನ್ನು ಬಹಳ ಹಚ್ಚಿಕೊಂಡರೂ ಯಾವುದಕ್ಕೂ ನನ್ನ ಮೇಲೆ ಡಿಪೆಂಡಾಗಿಲ್ಲ. ನಾನು ಅನ್ಯಾಯವಾಗಿ ಅವಳ ಮೇಲೆ ರೇಗಿದರೂ ತಪ್ಪೆಣಿಸುವುದಿಲ್ಲ. ಸ್ವಲ್ಪ ಹೊತ್ತಿಗೇ ನಾವಿಬ್ಬರೂ ಒಂದು. ಆದರೆ ಕುಮ್ಮಿ ಜೊತೆ ಒಂದು ತರಹ ಸ್ವಾತಂತ್ರ್ಯ ಅನುಭವಿಸುತ್ತೇನೆ.

ಆದರೆ ಭಾರತಿ ವಿಷಯದಲ್ಲಿ ಹಾಗಾಗುವುದೇ ಇಲ್ಲ. ಅಪ್ಪಿತಪ್ಪಿ ನಾನವಳ ಮೇಲೆ ರೇಗಿದರೆ ಮುಗಿದೇ ಹೋಯಿತು. ಒಂದು ನಾಲ್ಕು ದಿನ ಅದನ್ನೇ ಮನಸ್ಸಿನಲ್ಲಿರಿಸಿ ಕೊಳ್ಳುತ್ತಾಳೆ. ನನ್ನ ಪ್ರತಿ ಮಾತಿಗೂ ಅದರ ಹಿಂದಿನ ಅರ್ಥವನ್ನು ಹುಡುಕುತ್ತಾ ಹೊರಡುತ್ತಾಳೆ. ನೀನ್ಯಾಕೆ ಹೀಗೆ ಮಾಡಿದೆ, ಹಾಗೆ ಯಾಕೆ ಹೇಳಿದೆ ಎಂದು ಪ್ರಶ್ನೆಗಳಿಂದ ತಿವಿಯುತ್ತಾಳೆ... ಅಯ್ಯೋ, ಅವಳ ಜೊತೆ ಇರುವುದೊಂದು ದೊಡ್ಡ ಟಾರ್ಚರ್...

ಇದರಲ್ಲಿ ಅವಳ ತಪ್ಪೇನೂ ಇಲ್ಲ. ಆದರೆ ನನ್ನಿಂದ ಅವಳನ್ನು ಸಹಿಸಲೂ ಸಾಧ್ಯವಿಲ್ಲ. ಅವಳ ಜೊತೆ ಹೇಗೆ ಇರಬೇಕು, ಹೇಗೆ ಮಾತಾಡಬೇಕು ಎಂದೇ ಅರ್ಥವಾಗುವುದಿಲ್ಲ. ನನ್ನ ಯಾವ ಮಾತನ್ನು ಹೇಗೆ ಅರ್ಥೈಸಿಕೊಳ್ಳುತ್ತಾಳೋ, ಯಾವಾಗ ಅಳುತ್ತಾಳೋ... ಅವಳ ಜೊತೆ ಇರುವಷ್ಟು ಹೊತ್ತೂ ಒಂದು ತರಹ ಭಯದಲ್ಲೇ ಕಳೆಯುತ್ತೇನೆ..

ಭಾರತಿಗೆ ನನ್ನ ಈ ಭಾವನೆ ಅರ್ಥವಾಗುತ್ತಿಲ್ಲವೆ? ಖಂಡಿತ ಗೊತ್ತು. ಆದರೆ ಅದನ್ನು ಒಪ್ಪಿಕೊಳ್ಳಲು ಅವಳೇ ಸಿದ್ಧಳಿಲ್ಲ. ಪದೇ ಪದೇ ವಿವಿಧ ಪ್ರಶ್ನೆಗಳನ್ನು ಹಾಕಿ ನಾನು ಅವಳನ್ನು ನೆಗ್ಲೆಕ್ಟ್ ಮಾಡುತ್ತಿದ್ದೇನೆ ಎನ್ನುವುದನ್ನು ಕನ್‌ಫರ್ಮ್ ಮಾಡಿಕೊಳ್ಳುತ್ತಾಳೆ. ಭಾರತಿ ಗೆಳೆತನದಿಂದ ಸ್ವಲ್ಪ ಕಸಿವಿಸಿ ಉಂಡಿದ್ದರೂ, ಅದರಿಂದ ನಾನು
ಕಲಿತದ್ದು ಮಾತ್ರ ಬಹಳ.

ಯಾವುದೇ ಸಂಬಂಧವಿರಲಿ ಒಂದು ಮಿತಿ ಇದ್ದರೇ ಸುಂದರವಾಗಿರುತ್ತದೆ. ಹೌದು, ಪ್ರೀತಿಗೆ ಯಾವುದೇ ಗಡಿ, ಮಿತಿ ಇಲ್ಲ. ಆದರೆ ಅಂತ ಪ್ರೀತಿಯಂತಹ ಪ್ರೀತಿಯೂ ಅತಿಯಾದರೆ ವಿಷವಾಗುತ್ತದೆ, ಉಸಿರುಗಟ್ಟಿಸುತ್ತದೆ. ಯಂಡಮೂರಿ ಹೇಳುವಂತೆ 'ಪ್ರೀತಿ ಎಂದರೆ ನಮ್ಮ ಇಷ್ಟಗಳನ್ನು ಬಲಿಕೊಡುವುದಲ್ಲ. ನಮ್ಮ ಇಷ್ಟಗಳೊಂದಿಗೆ ಅವರ ಇಷ್ಟಗಳನ್ನೂ ಗೌರವಿಸುವುದೇ ಪ್ರೀತಿ'. ತನ್ನತನವನ್ನು ತೊರೆದು ಪ್ರೀತಿಸಿದರೆ ಖಂಡಿತ ಅದೊಂದು 'ಗ್ರೇಟ್' ಅಲ್ಲ.

ಅರಳಿಸುವುದೇ ಪ್ರೀತಿ, ಗೆಳೆತನ. ಸ್ನೇಹದ ಸಲುಗೆಯನ್ನು 'ಟೇಕನ್ ಫಾರ್ ಗ್ರ್ಯಾಂಟೆಡ್' ಎಂದುಕೊಂಡರೆ ತೊಂದರೆ ಗ್ಯಾರಂಟಿ. ಗೆಳೆತನದಲ್ಲಿ ಪರಸ್ಪರ ಸಮಾನ ಪ್ರೀತಿ ಇದ್ದರೆ ಸರಿ, ಸ್ವಲ್ಪ ಹೆಚ್ಚು ಕಡಿಮೆ ಆಯಿತು ಎಂದರೂ, ಹರಿದು ಹೋಗುವ ನಾಜೂಕು ಎಳೆ ಗೆಳೆತನ...-ಸುಮಿ

No comments: