Showing posts with label ಅಜ್ಜ. Show all posts
Showing posts with label ಅಜ್ಜ. Show all posts

Saturday, October 2, 2010

ಸ್ವಾತಂತ್ರ್ಯ ಎಂದರೆ..?

ಪ್ರೈಮರಿ ಸ್ಕೂಲಿಗೆ ಹೋಗುವಾಗ ಹೋಮ್‌ವರ್ಕ್ ಭಾರದಿಂದ ಬಸವಳಿದು ಹೋಗುತ್ತಿದ್ದೆ. ಬೆಳಗಿನಿಂದ ಸಂಜೆಯವರೆಗೆ ನಾಲ್ಕು ಗೋಡೆಯ ನಡುವೆ ಕೂರಿಸಿಕೊಂಡು, ಹೊಡೆದು, ಬಡಿದು ತಲೆಗೆ ತುಂಬುವುದಲ್ಲದೇ ಕೈ ನೋವು ಬರುವ? ಬರೆಯಲು ಬೇರೆ ಕೊಡುತ್ತಿದ್ದರು. ಬರೆಯದಿದ್ದರೆ ಅದಕ್ಕೆ ಶಿಕ್ಷೆ ಬೇರೆ. ಯಾವಾಗ ಈ ಹಿಂಸೆ ಮುಗಿಯುತ್ತದೋ ಅನಿಸುತ್ತಿತ್ತು.

ಯಾವಾಗಲೂ ಅಪ್ಪನನ್ನು 'ಯಾವಾಗ ಈ ಶಾಲೆ ಮುಗಿಯುತ್ತದೆ?' ಎಂದು ಕೇಳುತ್ತಿದ್ದೆ. ಆಗ ಅಪ್ಪ "10ನೇ ಕ್ಲಾಸ್ ತನಕ ಮಾತ್ರ. ಕಾಲೇಜಿನಲ್ಲಿ ಈ ಎಲ್ಲ ಗೋಳು ಇರುವುದಿಲ್ಲ. ಮೊದಲು ಚೆನ್ನಾಗಿ ಓದಿ ಎಸ್‌ಎಸ್‌ಎಲ್‌ಸಿ ಓದಿ ಮುಗಿಸು ಎಂದು
ಸಮಾಧಾನಪಡಿಸುತ್ತಿದ್ದರು.

ನಿಜ, ಈಗ ನನಗೆ ಹೋಮ್‌ವರ್ಕ್ ಮಾಡದಿದ್ದರೆ ಯಾರೂ ಬೈಯುವವರಿಲ್ಲ, ಹೊಡೆಯುವವರಿಲ್ಲ. ನೋಟ್ಸ್ ಕೊಡುತ್ತಾರೆ, ಹೋಮ್‌ವರ್ಕ್ ಕೂಡ ಕೊಡುತ್ತಾರೆ. ಬೇಕಾದವರು ಮಾಡಬಹುದು. ಇಲ್ಲದವರು ಇಲ್ಲ. ಮಾಡದಿದ್ದರೆ ಯಾಕೆ ಮಾಡಿಲ್ಲ

ಎಂದೂ ಕೇಳುವುದಿಲ್ಲ. ಫುಲ್ ಫ್ರೀ. ಈ ಸ್ವಾತಂತ್ರ್ಯವನ್ನು ಕಾಲೇಜಿಗೆ ಸೇರಿದ ಆರು ತಿಂಗಳು ಅನುಭವಿಸಿದೆ. ಈಗ ಅದರ ಪರಿಣಾಮ ಕಾಣಿಸುತ್ತಿದೆ. ಪ್ರಿಲ್ಮನರಿ ಪರೀಕ್ಷೆಗಳಲ್ಲಿ ಜಸ್ಟ್ ಪಾಸ್! ಇಷ್ಟು ಕಡಿಮೆ ಮಾರ್ಕ್ಸ್ ಯಾವತ್ತೂ ತೆಗೆದುಕೊಂಡವಳಲ್ಲ. ಅಪ್ಪ-ಅಮ್ಮನಿಗೆ ಏನುಹೇಳಲಿ? ಈಗ ಬಹಳ ಪಶ್ಚಾತ್ತಾಪವಾಗುತ್ತಿದೆ.

ಏನೇನು ಮಾಡಿದೆ ಈ ಆರು ತಿಂಗಳಲ್ಲಿ? ಫ್ರೆಂಡ್ಸ್,ಫಿಲ್ಮ್, ಹೊಟೇಲ್, ಪಿಕ್‌ನಿಕ್...ಇಷ್ಟೂ ನೆನಪಿಗೆ ಬರುತ್ತಿರುವುದು. ಸ್ಟಡಿಗೆ ಅಂತ ಕುಳಿತಿರುವುದು.. ಊಹುಂ, ನೆನಪಿಗೇ ಬರ್ತಾ ಇಲ್ಲ. 30 ಫಿಲ್ಮ್, ಎಂಟು ಹತ್ತು ಟ್ರಿಪ್, ಹೊಟೇಲ್‌ಗಳಿಗೆ ತಿರುಗಿದ್ದಂತೂ ಲೆಕ್ಕವೇ ಇಡಲು ಸಾಧ್ಯವಿಲ್ಲ. ವಾರಕ್ಕೆ ಒಂದು ಸಿನಿಮಾವನ್ನಾದರೂ ನೋಡಲೇ ಬೇಕು. ಒಳ್ಳೆಯದು ಬಂದರೆ ಎರಡು, ಮೂರು.. ಹೀಗೆ.

ಬೇಗನೆ ಕ್ಲಾಸು ಮುಗಿದರೆ ಸರಿ, ಇಲ್ಲದಿದ್ದರೆ ಕ್ಲಾಸ್ ಬಂಕ್. ನನ್ನ ಫ್ರೆಂಡ್ಸ್ ಮನೆಗಳ ಹತ್ತಿರ ಇರುವ ಯಾವ ಒಳ್ಳೆ ಸ್ಪಾಟ್‌ನ್ನೂ ಬಿಟ್ಟಿಲ್ಲ. ಹೊಟೇಲ್‌ಗಳಿಗೆ ಎಷ್ಟು ದುಡ್ಡು ಸುರಿದಿದ್ದೇವೋ.. ಅಪ್ಪ-ಅಮ್ಮ ಅಷ್ಟು ಓದು ಇಷ್ಟು ಓದು ಅಂತ ಯಾವತ್ತೂ ಒತ್ತಾಯ ಮಾಡಿದವರಲ್ಲ. ಈಗ ಕಡಿಮೆ ಮಾರ್ಕ್ಸ್ ಬಂದಿದೆ ಎಂದು ಬೈಯುವವರೂ ಅಲ್ಲ. ಆದರೂ.. ಏನೋ ಒಂಥರಾ.. ನನ್ನ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎನ್ನುವ ಗಿಲ್ಟ್.

ಆ ಟೈಮ್‌ಗೆ ಎಂಜಾಯ್ ಮಾಡಿದ ಖುಷಿ ಎಲ್ಲ ರಿಸಲ್ಟ್ ನೋಡಿದಾಕ್ಷಣ ಬತ್ತಿ ಹೋಗಿದೆ. ಹೀಗಾಗುತ್ತದೆ ಎಂದು ಗೊತ್ತಿದ್ದರೆ ಖಂಡಿತ ಸ್ಟಡಿಸನ್ನೆಲ್ಲ ಇಷ್ಟು ನೆಗ್ಲೆಟ್ ಮಾಡುತ್ತಿರಲಿಲ್ಲ... ಸ್ವಾತಂತ್ರ್ಯ ಎಂದರೆ... ಹೌದು, ಇದೇನೂ ಕೊನೆಯ ಪರೀಕ್ಷೆಯಲ್ಲ. ನಾನು ಮತ್ತೆ ಚೆನ್ನಾಗಿ ಓದಿ ಒಳ್ಳೆಯ ಮಾರ್ಕ್ಸ್ ತೆಗೆದುಕೊಳ್ಳಬಹುದು. ಆದರೆ ನನಗೆ ಕಾಡುತ್ತಿರುವ ಪ್ರಶ್ನೆ ಎಂದರೆ, ಆಗ ಆಶಿಸುತ್ತಿದ್ದ ಸ್ಟಡೀಸ್‌ನಿಂದ ಮುಕ್ತಿಈಗ ದೊರಕಿದೆ.

ಆದರೆ ಅದು ಏಕೆ ಖುಷಿ ಕೊಡುತ್ತಿಲ್ಲ? ಕೊಟ್ಟರೂ ಯಾಕೆ ಕ್ಷಣಿಕ? ಹೇಳುವವರು ಕೇಳುವವರು ಇಲ್ಲ. ಯಾವುದಕ್ಕೂ ಒತ್ತಾಯ ಮಾಡುವವರು ಇಲ್ಲ. ಆದರೂ ಈ ಸ್ವಾತಂತ್ರ್ಯ ಕೊಡುತ್ತಿಲ್ಲ.ಯಾವುದೋ ಒಂದು ಮಿತಿ, ಅಂಕೆ ಬೇಕು ಅನಿಸುತ್ತಿದೆ. ಆಗ ಬೇಸರದಿಂದ ಹೋಮ್‌ವರ್ಕ್ ಮಾಡಿದರೂ ಏನೋ ಒಂಥರ ಸಮಾಧಾನವಿರುತ್ತಿತ್ತು. ಏನೋ ಒಂದು ಮಾಡಿ ಮುಗಿಸಿದ ಖುಷಿ ಇರುತ್ತಿತ್ತು. ಆದರೆನಾನು ಸ್ವಾತಂತ್ರ್ಯವನ್ನು ತಪ್ಪಾಗಿ ಗ್ರಹಿಸಿಕೊಂಡಿದ್ದೆ.

ಇನ್ನು ಮುಂದೆ ನನಗೆ ನಾನೇ ಒಂದು ಮಿತಿಯನ್ನು ಹಾಕಿಕೊಳ್ಳುತ್ತೇನೆ. ಚೆನ್ನಾಗಿ ಸ್ಟಡಿ ಮಾಡುತ್ತೇನೆ. ಅನಗತ್ಯವಾಗಿ ಸುತ್ತುವುದಿಲ್ಲ. ಈ ಸಾರಿ ಮನೆಗೆ ಹೋದಾಗ ಅಪ್ಪನ ಎದುರು ತಪ್ಪೊಪ್ಪಿಗೆ ಮಾಡಿಕೊಳ್ಳುತ್ತೇನೆ. ಆಗಲಾದರೂ ಈ ಗಿಲ್ಟ್‌ನಿಂದ ಮುಕ್ತಿ ದೊರೆಯಬಹುದು.

Saturday, September 4, 2010

ದೊಡ್ಡವರೆಲ್ಲ ಜಾಣರಲ್ಲ. ..

ಅಜ್ಜ ಮೊಮ್ಮಕ್ಕಳ ನಡುವೆ ಸಾಮಾನ್ಯವಾಗಿ ಒಂದು ಮಧುರ ಬಾಂಧವ್ಯವಿರುತ್ತದೆ. ಮೊಮ್ಮಗುವಿನ ತಪ್ಪು ಅಜ್ಜನಿಗೆ ತಪ್ಪಾಗಿ ಕಾಣಿಸದೆ ಬಾಲಲೀಲೆಯಂತೆ ಕಾಣಿಸುತ್ತದೆ. ಮೊಮ್ಮಗುವಿಗಂತೂ ಅಜ್ಜನೇ ಪ್ರಪಂಚ.

ಆದರೆ ಈ ಮಾದಜ್ಜ ಮಾತ್ರ ಸ್ವಲ್ಪ ವಿಚಿತ್ರ. ಶ್ರೀಮಂತ ಒಂಟಿ ಮುದುಕ. ಅವನ ಆರಡಿಯ ಗೌರವ ವರ್ಣದ ದೇಹ ನೋಡಿದರೇ ಭಯ-ಭಕ್ತಿ ಉಂಟಾಗುತ್ತಿತ್ತು. ಯಾರನ್ನೂ ಸುಲಭಕ್ಕೆ ನಂಬುವುದಿಲ್ಲ. ಯಾರನ್ನು ಹಚ್ಚಿಕೊಳ್ಳುತ್ತಲೂ ಇರಲಿಲ್ಲ. ವೇದ-ತರ್ಕ ಅಂತ ಬಹಳ ಓದಿಕೊಂಡಿದ್ದ. ಸಿಕ್ಕಾಪಟ್ಟೆ ಮಡಿ, ತಾಸುಗಟ್ಟಲೆ ದೇವರಪೂಜೆ ಮಾಡುತ್ತಿದ್ದ. ಅವನಿಗೆ ಎದುರು ಹೇಳುವವರೇ ಇಲ್ಲ.

ನಮಗೆ ದೂರದ ಸಂಬಂಧಿ. ಒಂಟಿತನ ಬೇಸರ ತರಿಸಿದಾಗಲೆಲ್ಲ ನಮ್ಮ ಮನೆಗೆ ಬರುತ್ತಾನೆ. ಅವನು ಬಂದ ಎಂದರೆ ಎಲ್ಲರಿಗೂ ತಲೆನೋವು. ಆದರೂ ಪಾಪ ವಯಸ್ಸಾಗಿದೆ. ಹಿಂದೆ ಮುಂದೆ ದಿಕ್ಕಿಲ್ಲದವನು ಎಂದು ಉಪಚರಿಸುತ್ತಿದ್ದರು.

ಅದರಲ್ಲೂ ಮಕ್ಕಳಿಗಂತೂ ಬಹಳ ಕಿರಿಕಿರಿ. ಪ್ರತಿಯೊಂದಕ್ಕೂ ಮಾದಜ್ಜನ ಗೊಣಗಾಟವಿರುತ್ತಿತ್ತು. ಮಕ್ಕಳು ಅವನ ಎದುರು ಹಾದು ಹೋದರೂ ಸಾಕು ಮಾದಜ್ಜನ ಬಾಯಿಗೆ ಅವರು ಬಿದ್ದರು ಅಂತಲೇ ಅರ್ಥ. ಮಾದಜ್ಜ ಬಂದ ಅಂದರೆ ಸಾಕು ನಾವು ಮಕ್ಕಳೆಲ್ಲ ಇಲಿ ತರಹ ಮೂಲೆ ಸೇರಿಕೊಂಡುಬಿಡುತ್ತಿದ್ದೆವು. ಅವನ ಬೈಗುಳಗಳೇ ಹಾಗಿರುತ್ತಿದ್ದವು. ನಮ್ಮ ಆತ್ಮವಿಶ್ವಾಸ, ನಗು ಎಲ್ಲ ಅವನ ಬೈಗುಳದ ಎದುರು ಪುಡಿಪುಡಿ ಆಗಿಬಿಡುತ್ತಿದ್ದವು. ಯಾವ ಕ್ಷಣದಲ್ಲಿ ಮಾದಜ್ಜನ ಬೈಗುಳ ಬಂದು ಎರಗುತ್ತೋ ಅಂತ ಟೆನ್ಷನ್‌ಲೇ ದಿನ ಕಳೆಯುತ್ತಿದ್ದೆವು.

ಒಂದು ಶನಿವಾರ ಮನೆಗೆ ಹೋದಾಗ ಮಾದಜ್ಜನೂ ಬಂದಿದ್ದ. ಅವನನ್ನು ನೋಡಿದಾಕ್ಷಣ ನನ್ನ ಅರ್ಧ ಉತ್ಸಾಹ ಬತ್ತಿಹೋಗಿತ್ತು. ನಾನು ಫ್ರಾಕು ಬಿಟ್ಟು ಚೂಡಿದಾರ ಹಾಕಿ ಕಾಲೇಜಿಗೆ ಹೋಗಲು ಪ್ರಾರಂಭಿಸಿದ ಮೇಲೆ ಇದೇ ಮೊದಲ ಬಾರಿಗೆ ಅವನು ನನ್ನನ್ನು ನೋಡಿದ್ದು. ಮೇಲಿನಿಂದ ಕೆಳಗಿನವರೆಗೆ ಒಮ್ಮೆ ನೋಡಿ, "ಈ ಕಾಲದ ಹೆಣ್ಣುಮಕ್ಕಳೋ, ಅವರ ವೇಷವೋ ಎಂದು ಮೂಗು ಮುರಿದ. ಒಮ್ಮೆಲೇ ಸಿಟ್ಟು ಬಂತು. ಆದರೂ ಅಮ್ಮ ಹೇಳುತ್ತಿದ್ದ 'ಮನುಷ್ಯನ ವ್ಯಕ್ತಿತ್ವಕ್ಕೆ ಗೌರವವಿಲ್ಲದಿದ್ದರೂ ಕೊನೇ ಪಕ್ಷ ಅವನ ವಯಸ್ಸಿಗಾದರೂ ಗೌರವ ನೀಡಬೇಕು' ಎನ್ನುವ ಮಾತು ನೆನಪಾಗಿ ಸುಮ್ಮನಾದೆ.

ಅಡುಗೆ ಮನೆಗೆ ಓಡಿಹೋದವಳೇ ಅಮ್ಮನ ಕುತ್ತಿಗೆಗೆ ಜೋತುಬಿದ್ದು ಕಾಲೇಜಿನ ಕಥೆ ಎಲ್ಲ ಹೇಳುತ್ತ ಜೋರಾಗಿ ನಗುತ್ತಿದ್ದೆ. ಮತ್ತೆ ಮಾದಜ್ಜನ ಪ್ರವೇಶವಾಯಿತು. 'ಈಗಿನ ಕಾಲದ ಮಕ್ಕಳಿಗೆ ಹಿರಿಯರು ಅನ್ನುವ ಗೌರವವೇ ಇಲ್ಲ. ನಾವೆಲ್ಲ ಅಪ್ಪ ಅಮ್ಮರಿಂದ ಮಾರು ದೂರ ನಿಂತುಮಾತನಾಡುತ್ತಿದ್ದೆವು' ಎಂದು ಗೊಣಗಿದ. ಇವತ್ತು ಸುಮ್ಮನಿರಲು ಸಾಧ್ಯವೇ ಇಲ್ಲ ಎನ್ನುವಷ್ಟು ಕೋಪ ಬಂತು. ಅಮ್ಮನ ಕಣ್ಸನ್ನೆ ನೋಡಿ ನನ್ನ ಪಾಡಿಗೆ ನಾನು ಹೋದೆ.

ಚಿಕ್ಕಂದಿನಿಂದಲೂ ಅಣ್ಣನ ಅಂಗಿ-ಪ್ಯಾಂಟು ಅಂದರೆ ನನಗಿಷ್ಟ. ಅದನ್ನು ಮನೆಯಲ್ಲಷ್ಟೇ ಹಾಕುತ್ತಿದ್ದೆ. ಅದಕ್ಕೆ ಯಾರ ತಕರಾರೂ ಇರಲಿಲ್ಲ. ಮಾದಜ್ಜ ನೋಡಿದವನೇ 'ನಿನ್ನಲ್ಲಿ ಒಂದೂ ಹುಡುಗಿಯರ ಲಕ್ಷಣವೇ ಇಲ್ಲ ಎಂದು ಜರೆದ. ಮಾದಜ್ಜನ ಮಾತು ನನ್ನಲ್ಲಿದ್ದ ಸ್ವಾಭಿಮಾನ, ಸ್ತ್ರೀತ್ವ ಕೆಣಕಿದಂತಾಯಿತು.

ಎಲ್ಲಿತ್ತೋ ಧೈರ್ಯ ಗೊತ್ತಿಲ್ಲ. 'ಮಾದಜ್ಜ, ಸ್ತ್ರೀತ್ವವನ್ನು ಅಳೆಯುವ ಮಾಪಕ ಯಾವುದು? ನಿನ್ನ ಪ್ರಕಾರ ಯಾವ ಲಕ್ಷಣ ಇದ್ದರೆ ಅವಳು ಸ್ತ್ರೀ ಆಗುತ್ತಾಳೆ? ಎಂದು ಸ್ವಲ್ಪ ಜೋರಾಗಿ ಕೇಳಿದ್ದೆ. ಮಾದಜ್ಜ ನನ್ನ ಅನಿರೀಕ್ಷಿತ ಪ್ರಶ್ನೆಯಿಂದ ಕಂಗಾಲಾಗಿಬಿಟ್ಟಿದ್ದ. ಉತ್ತರಕ್ಕಾಗಿ ಮಾದಜ್ಜ ತಡವರಿಸುತ್ತಿದ್ದಾಗಲೆ ನಾನು ಮುಂದುವರಿಸಿದೆ.

'ತಲೆ ಬಗ್ಗಿಸಿಕೊಂಡು, ಗಟ್ಟಿಯಾಗಿ ಮಾತನಾಡದೆ, ಜೋರಾಗಿ ನಗದೆ ಇದ್ದುಬಿಡುವುದೇ ಹುಡುಗಿಯರ ಲಕ್ಷಣವಾ? ಒಬ್ಬಳು ಹೂವು ಮುಡಿದುಕೊಂಡು, ದೊಡ್ಡ ಕುಂಕುಮ ಇಟ್ಟು ಕೈತುಂಬ ಬಳೆ ತೊಟ್ಟುಕೊಂಡು ಮನದ ತುಂಬ ಹುಳುಕು ತುಂಬಿಕೊಂಡರೆ ಅವಳು ನನ್ನ ಪ್ರಕಾರ ಸ್ತ್ರೀಯೇ ಅಲ್ಲ! ಸಹನೆ, ಆದರಾತಿಥ್ಯ, ಬೇರೆಯವರ ಕಷ್ಟಕ್ಕೆ ಸ್ಪಂದಿಸುವುದು, ಎಲ್ಲರನ್ನೂ ಸಮಾನವಾಗಿ ನೋಡುವುದು ಇವೆಲ್ಲ ಸ್ತ್ರೀ ಆದವಳಲ್ಲಿ ಇರಬೇಕಾದದ್ದು. ಅದು ನನ್ನಲ್ಲಿದೆ!! ಎಂದು ಆವೇಶದಿಂದ ಕೂಗಿದ್ದೆ.

ಮಾದಜ್ಜ ಮರು ಮಾತಾಡಲಿಲ್ಲ. ಅಪ್ಪ ಅಮ್ಮ ನನ್ನ ಕೂಗಾಟ ಕೇಳಿ ಓಡಿಬಂದಿದ್ದರು. ಅಮ್ಮ ನನಗೆ ಬೈದು ಮಾದಜ್ಜನ ಕ್ಷಮೆ ಕೇಳಲು ಹೇಳಿದಳು. ನಾನು ಒಲ್ಲದ ಮನಸ್ಸಿನಿಂದ ತಪ್ಪಾಯ್ತು ಅಂತಲೂ ಹೇಳಿದ್ದೆ. ಇವತ್ತು ಮಾದಜ್ಜ ಬಂದಿದ್ದ. ಸರಿಯಾಗೇ ಮಾತನಾಡಿಸಿದೆ. ಆದರೆ ಮುಖ ತಿರುಗಿಸಿಕೊಂಡ. ಅವನನ್ನು ಬದಲಾಯಿಸುವ ಅಗತ್ಯ ನನಗಿಲ್ಲ. ಅದು ಸಾಧ್ಯವೂ ಇಲ್ಲ. ವಯಸ್ಸು ಹೆಚ್ಚಿದರೆ, ದೊಡ್ಡ ದೊಡ್ಡ ಗ್ರಂಥ ಪಠಿಸಿದ ಮಾತ್ರಕ್ಕೆ ಮನಸ್ಸು ಬೆಳೆಯದು.

Saturday, June 12, 2010

ಅಜ್ಜ... ನನಗೆ ನೀನು ಬೇಕಜ್ಜ...


ನನಗನ್ನಿಸಿದಂತೆ ಒಬ್ಬಳು ಹುಡುಗಿ ಒಬ್ಬ ಹುಡುಗನೊಂದಿಗೆಎಕೆ? ಆಳವಾದ ಪ್ರೀತಿಯಲ್ಲಿರಲಿ; ಬೇರೆ ಹುಡುಗರನ್ನು ಇಷ್ಟ ಪಡದೇ ಹೋಗಲಾರಳು. ಅವಳು ಹೇಳಿಕೊಳ್ಳುವುದಿಲ್ಲ;

ಅಷ್ಟೇ.. ಹೇಳಿಕೊಂಡರೆ ಆಗಲಿರುವ ಅನಾಹುತದ ಬಗ್ಗೆ ಅವಳು ಯೋಚಿಸಿಯೇ ಸುಮ್ಮನಾಗಿಬಿಡುತ್ತಾಳೆ. ಮುಚ್ಚಿಟ್ಟರೆ ಯಾರಿಗೂ ಗೊತ್ತಾಗುವುದಿಲ್ಲ
ಸರಿ; ಆದರೆ ವಿಷಯ ಮಾತ್ರ ಸತ್ಯ ಆಗಿರುವುದಿಲ್ಲವೆ? ನನಗೆ ಗೊತ್ತು, ಇದನ್ನು ಡೈರಿಯಲ್ಲಲ್ಲದೆ ಇನ್ನೆಲ್ಲೂ ಹೇಳಲಾರೆ. ಹೇಳಿದರೆ ನನಗೂ 'ಫ್ಲರ್ಟ್ ಎನಿಸಿಕೊಳ್ಳುವ ಭಯ!

ಮುಂದಕ್ಕೆ...

ಅಪ್ಪನ ಮುಖ ದುಃಖದಿಂದ ಕಪ್ಪಿಟ್ಟಿತ್ತು... ನಾನೆಂದೂ ಈ ಸ್ಥಿತಿಯಲ್ಲಿ ಅಪ್ಪನನ್ನು ನೋಡಿಯೇ ಇರಲಿಲ್ಲ. ನನ್ನನ್ನು ಆದಷ್ಟು ಬೇಗನೆ ಕರೆದುಕೊಂಡು ಹೋಗಲು ಓಡಿ ಬಂದಿದ್ದರು. ಕಾಲೇಜಿನ ಹತ್ತಿರ."ಪುಟ್ಟಿ ಅಜ್ಜನಿಗೆ ಸಿರಿಯಸ್ಸು... ಬಾ ಮನೆಗೆ" ಅಷ್ಟೇ ನನ್ನೊಡನೆ ಅವರಾಡಿದ್ದ ಮಾತು. ಸರ್ ಹತ್ತಿರ ಅಪ್ಪ ಅದಾಗಲೇ ಮಾತನಾಡಿದ್ದಂತಿತ್ತು. ಬ್ಯಾಗ್ ಕೈಗೆತ್ತಿಕೊಂಡವಳೇ ಅಪ್ಪನ ಬೈಕ್ ಏರಿದ್ದೆ.

ನನಗೇನೂ ವಿಚಾರ ಮಾಡಲು ತೋಚುತ್ತಿರಲಿಲ್ಲ..."ಅಜ್ಜನಿಗೆಸೀರಿಯಸ್" ಎನ್ನುವ ಅಪ್ಪನ ಧ್ವನಿಯೇ ಕಿವಿಯಲ್ಲಿ ಗುಂಯ್‌ಗುಡುತ್ತಿತ್ತು. ವಯಸ್ಸಾದ ಕಾರಣದಿಂದ ಮತ್ತು ಸತತವಾಗಿ ಸೇದುತ್ತಿದ್ದ ಬೀಡಿಯಿಂದಾಗಿ ಕೆಮ್ಮು-ದಮ್ಮು ಸ್ವಲ್ಪ ಇದ್ದರೂ "ಸೀರಿಯಸ್" ಆಗುವಂತಹ ಯಾವುದೇ ಖಾಯಿಲೆ ಇರಲಿಲ್ಲ ನನ್ನಜ್ಜನಿಗೆ. ಆದರೆ ಅದ್ಹೇಗೆ ಒಂದೇ ಸಲಕ್ಕೆ ಅಜ್ಜನಿಗೆ ಈ ರೀತಿಯಾಯಿತೋ...

ನಾನು ಮನೆ ತಲುಪುವಷ್ಟವರಲ್ಲಿ ಅತ್ತೆ-ಮಾವಂದಿರು ಎಲ್ಲ ಅಜ್ಜನ ಸುತ್ತ ಕುಳಿತಿದ್ದರು.. ಅತ್ತೆಯಂದಿರು ಸೆರಗನ್ನು ಬಾಯಿಗಡ್ಡ ಹಿಡಿದು ಮುಸಿ- ಮುಸಿ ಅಳುತ್ತಿದ್ದರು. ಆರಡಿ ಎತ್ತರದ ನನ್ನಜ್ಜ ನಿಸ್ತೇಜನವಾಗಿ ಹಾಸಿಗೆ ಮೇಲೆ ಮಲಗಿದ್ದ. ಗೌರವ ವರ್ಣದ ಸುಂದರ ನನ್ನಜ್ಜನ ಮುಖ ಬಾಡಿಹೋಗಿತ್ತು. ಏನು ಹೇಳಲು ಪ್ರಯತ್ನಿಸುತ್ತಿದ್ದನೋ ಅಥವಾ ಹಾರಿ ಹೋಗಲಿರುವ ಉಸಿರನ್ನು ಹಿಡಿದಿಡುವ ಪ್ರಯತ್ನವೋ, ಆಗಾಗ ಬಾಯಿ ತೆರೆಯುತ್ತಿದ್ದ... ನನಗೆ ದುಃಖಕ್ಕಿಂತ ಹೆಚ್ಚು ಭಯವಾಗುತ್ತಿತ್ತು. ಅಪ್ಪ ನಿಧಾನವಾಗಿ ನನ್ನ ಕೈಹಿಡಿದುಕೊಂಡು ಅಜ್ಜನ ಹತ್ತಿರ ಕರೆದುಕೊಂಡು ಹೋದರು.

"ಅಪ್ಪಯ್ಯ, ನೋಡು ನಿನ್ನ ಮೊಮ್ಮಗಳು ಸುಮಿ ಬಂದಿದ್ದಾಳೆ ಎಂದು ಜೋರಾಗಿಯೇ ಹೇಳಿದರು. ಅರೆಕ್ಷಣ ಕತ್ತನ್ನು ಹೊರಳಿಸಿ ನೋಡಿದ್ದ ಅಜ್ಜ. ..ಅಪ್ಪ ಹೇಳಿದ್ದು ಕೇಳಿಸಿತೋ ಇಲ್ಲವೋ, ಅವನಿಗೆ ನನ್ನ ಗುರುತು ಸಿಕ್ಕಿತೋ ಇಲ್ಲವೋ ನನಗಂತೂ ಅರ್ಥವಾಗಲಿಲ್ಲ. ಅಜ್ಜನದು ಅದೇ ಕೊನೆಯ ನೋಟ... ಅಜ್ಜನ ತಲೆಯ ಪಕ್ಕ ಕುಳಿತು ಬಾಯಿಗೆ ನೀರುಹಾಕುತ್ತಲೇ ಇದ್ದ ಮಾವ ಅಜ್ಜನ ತುಟಿಯನ್ನು ಮೀರಿ ಹರಿಯುತ್ತಿದ್ದ ನೀರನ್ನು ನೋಡಿ ಅಜ್ಜ ಇನ್ನಿಲ್ಲವೆಂದ!

ಅಯ್ಯೋ! ಅಜ್ಜ... ನನ್ನಜ್ಜ.... ನನ್ನನ್ನು ಭುಜದ ಮೇಲೆ ಕುಳಿಸಿಕೊಂಡು ಊರೆಲ್ಲ ಮೆರೆಸಿದ ಅಜ್ಜ.. ಭಾವನೆಗಳ, ವಾಸ್ತವತೆಯ, ದುಃಖದ ಒತ್ತಡ ತಾಳಲಾಗದೆ ಕಂಪಿಸುತ್ತಿದ್ದೆ. ಅಪ್ಪನಿಗೆ ನನ್ನ ಸ್ಥಿತಿ ಕಂಡು ಕನಿಕರಕ್ಕಿಂತ ಹೆಚ್ಚು ಭಯವಾಗಿರಬೇಕು, ಓಡಿ ಬಂದು ನನ್ನನ್ನು ತಬ್ಬಿಕೊಂಡರು. 'ಅಜ್ಜ' ಎಂದು ಚೀರಿ ಅಪ್ಪನನ್ನು ಹಿಡಿದುಕೊಂಡು ಹಿಸ್ಟೀರಿಯ ಬಂದವಳಂತೆ ಅತ್ತೆ... ಅಪ್ಪ ಏನೇನೋ ಸಮಾಧಾನ ಮಾಡುತ್ತಿದ್ದರು. ಒಂದೂ ನನ್ನ ಕಿವಿ ಮುಟ್ಟುತ್ತಿರಲಿಲ್ಲ. ಮೈಯಲ್ಲ ಹೊತ್ತಿ ಉರಿದ ಭಾವನೆ...

ನಾನು ಅಜ್ಜನ ಜೊತೆ ಕಳೆದ ಕ್ಷಣಗಳೆಲ್ಲವೂ ಆ ಕ್ಷಣಾರ್ಧದಲ್ಲಿ ನನ್ನ ಮೇಲೆ ಧಾಳಿಯಿಟ್ಟಿದ್ದವು... ಒಂದೊಂದಾಗಿ ನೆನಪು ಮಿದುಳಿನಲ್ಲಿ ಹಾದು ಹೋದರೆ ಏನೂ ಅನ್ನಿಸದು. ಆದರೆ ಆ ನೆನಪುಗಳೆಲ್ಲ ಒಮ್ಮೆಲೇ ನುಗ್ಗಿಬಿಟ್ಟರೆ ನಿಭಾಯಿಸಿಕೊಳ್ಳುವುದು ಅಸಾಧ್ಯ. ನನ್ನ ಅಜ್ಜನ ಬಾಂಧವ್ಯವೇ ಹಾಗಿತ್ತು....

ಅಜ್ಜನಿಗೆ ನಾವು ಐದು ಜನ ಮೊಮ್ಮಕ್ಕಳಿದ್ದರೂ ನನ್ನನ್ನು ಕಂಡರೆ ಹೆಚ್ಚು ಪ್ರೀತಿ. ಯಾಕೆಂದರೆ ಚಿಕ್ಕವಳಿರುವಾಗ ಎಲ್ಲರಿಗಿಂತ ಹೆಚ್ಚು ಸಮಯವನ್ನು ಕಳೆಯುವುದೇ ಅಜ್ಜನೊಂದಿಗಾಗಿತ್ತು. ಅವನ ಬೀಡಿ ಮತ್ತು ಮೈನೋವಿಗಾಗಿ ಸವರಿಕೊಳ್ಳುತ್ತಿದ್ದ ಅಯೋಡೆಕ್ಸ್ ನ ವಾಸನೆ ಸೇರಿ ವಿಚಿತ್ರ ಪರಿಮಳ, ಉದ್ದನೆಯ ನಿಲುವಂಗಿ. ಫಳಫಳ ಹೊಳೆಯುವ ತಲೆ... ಎಲ್ಲ ನನಗಿಷ್ಟವಾಗಿತ್ತು.

ಅಜ್ಜನಿಗೆ ಸ್ವಲ್ಪ ಕಾಲುನೋವು ಆದರೂ ಸಾಕು "ಮಗ ಸ್ವಲ್ಪ ಕಾಲು ತಿಕ್ಕಿಕೊಡೆ ಎನ್ನುತ್ತಿದ್ದ. ಎಲ್ಲರೆದುರೂ "ನನ್ನ ಮೊಮ್ಮಗಳ ಕೈಗುಣ ಬಹಳ ಚೆನ್ನಾಗಿದೆ. ನಿನ್ನೆ ನನ್ನ ಕಾಲು ತಿಕ್ಕಿಕೊಟ್ಟಳು, ಕ್ಷಣಾರ್ಧದಲ್ಲಿ ನನ್ನ ನೋವು ಮಾಯ ಎಂದು ಹೊಗಳುತ್ತಿದ್ದ. ಅಜ್ಜನಿಗೆ ಬೆನ್ನುನೋವಾದಾಗ ಬ್ಯಾಲೆನ್ಸ್ ಮಾಡುತ್ತ ಅವನ ಬೆನ್ನ ಮೇಲೆ ಓಡಾಡುವುದೇ ಒಂದು ಮೋಜಾಗಿತ್ತು ನನಗೆ. ಅಮ್ಮ ನನಗೆ ಸ್ವಲ್ಪ ಬೈಯಲು ಬಂದರೂ ಸಾಕು ಓಡಿಹೋಗಿ ಅಜ್ಜನ ಬೆನ್ನಹಿಂದೆ ಸೇರುತ್ತಿದ್ದೆ. ಅಜ್ಜ ತನ್ನ ನೀಳ ಬೆರಳೆತ್ತಿ ಅಮ್ಮನೆಡೆಗೆ ತೋರಿದರೆ ಸಾಕು; ಅಮ್ಮ ಸುಮ್ಮನೆ ಒಳಹೋಗುತ್ತಿದ್ದರು.

ಹಾಗಾಗಿ ಅಜ್ಜ ನನಗೊಬ್ಬ ಆಪದ್ಭಾಂದವನಾಗಿದ್ದ. ನನ್ನ ಮೊಮ್ಮಗಳನ್ನು ದೊಡ್ಡ ಆಫೀಸರ್ ಮಾಡುತ್ತೇನೆ ಎಂದು ಬಂದವರೆದುರು ಹೊಗಳಿ ನನ್ನ ಅಟ್ಟಕೇರಿಸುತ್ತಿದ್ದ ನನ್ನಜ್ಜ... ಸುಳ್ಳೆ ಸುಳ್ಳೆ ಕಥೆ ಹೇಳಿ ತಾನೂ ನಕ್ಕು ನನ್ನನ್ನು ನಗಿಸುತ್ತಿದ್ದ ಅಜ್ಜ, ನನ್ನನ್ನು ನಾನು 'ರಾಜಕುಮಾರಿ ಎಂದೇ ಭಾವಿಸುವಂತೆ ಮಾಡಿದ ನನ್ನಜ್ಜ....

ಎಲ್ಲಿ ಹೋದೆ ಅಜ್ಜ... ಬಾ ಅಜ್ಜ.... ಅಮ್ಮ ಹೊಡೆಯಲು ಬಂದರೆ ಎಲ್ಲಿ ಬಚ್ಚಿಟ್ಟುಕೊಳ್ಳಲಿ...