ನಮ್ಮ ಕ್ಲಾಸ್ನ ಉಷಾ ಒಂಥರಾ... ನಾವೆಲ್ಲ ಅಮ್ಮ ಅಂತಾ ಸಿಕ್ಕಾಪಟ್ಟೆ ಹಚ್ಚಿಕೊಂಡುಬಿಟ್ಟಿದ್ದರೆ, ಉಷಾಳಿಗೆ ಅವಳಮ್ಮನ ಮುಖ ಕಂಡರೆ ಆಗುತ್ತಿರಲಿಲ್ಲ. ಯಾವಾಗಲೂ ಅವಳಮ್ಮನಿಗೆ ಬಯ್ಯುತ್ತಿದ್ದಳು. ನಮ್ಮಗಳ ಜೊತೆ ಹರಟೆ ಹೊಡೆಯಲು ಕುಳಿತರೆ ಒಮ್ಮೆಯಾದರೂ ಅವಳ ಅಮ್ಮನಿಗೆ ಬಯ್ಯದೆ ಹೋಗುತ್ತಿರಲಿಲ್ಲ.
"ಅಯ್ಯೊ, ನನ್ನ ಅಮ್ಮ! ಅವಳೊಬ್ಬಳು. ನನ್ನ ಮೇಲೆ ಸದಾ ಅನುಮಾನ. ನಾನು ಇಲ್ಲದ ಹೊತ್ತಿನಲ್ಲಿ ನನ್ನ ಸ್ಕೂಲ್ ಬ್ಯಾಗ್, ನೋಟ್ಸ್ ಗಳನ್ನು ಶೋಧಿಸುವುದು, ಸೂಲ್ಕಿನಿಂದ ಬರುವುದು 5 ನಿಮಿಷ ತಡವಾದರೂ ಪ್ರಶ್ನೆಗಳ ಮೇಲೆ ಪ್ರಶ್ನೆಗಳು. ನಾನು ಕುಳಿತಿದ್ದು ತಪ್ಪು, ನಿಂತಿದ್ದು ತಪ್ಪು. ಯಾವುದಾದರೂ ಹುಡುಗನ ಜೊತೆ ಮಾತನಾಡಿದ್ದು ಕಂಡರಂತೂ ರಣ ರಾದ್ಧಾಂತ" ಎಂದು ಉಷಾ ಯಾವಾಗಲೂ ಹೇಳುತ್ತಿದ್ದಳು.
ಹಾಗೆಂದು ಅವಳಮ್ಮ ಅವಳಿಗೆ ಸ್ವಂತತಾಯಿಯೇ. ನಮ್ಮೆಲ್ಲರ ಅಮ್ಮನಂತೆ ಸಾಮಾನ್ಯ ಅಮ್ಮ. ಆದರೂ ಉಷಾ ಏಕೆ ಅವರ ಮೇಲೆ ಹರಿಹಾಯುತ್ತಾಳೆ. ಎನ್ನುವುದು ಒಗಟಾಯಿತು. ಅಲ್ಲದೆ ಒಮ್ಮೊಮ್ಮೆ ಉಷಾ 'ಸರಿ' ಎನಿಸುತ್ತಿದ್ದಳು.
ಒಂದು ಭಾನುವಾರ ಶೀಲಕ್ಕನ ಜೊತೆ ಮಾತನಾಡುತ್ತ ಕುಳಿತಾಗ ಉಷಾಳ ವಿಷಯ ಎತ್ತಿದೆ. ಅವಳ 'ವಿಚಿತ್ರ' ವರ್ತನೆಯ ಬಗ್ಗೆಯೂ ಹೇಳಿದೆ. ಶೀಲಕ್ಕ ಒಮ್ಮೆ ನಕ್ಕು 'ಅವಳ ವರ್ತನೆ 'ವಿಚಿತ್ರ' ಅಲ್ಲ; ಅದು ಅವಳ ವಯಸ್ಸು. ಅಂದರೆ ಅದನ್ನು 'ಅಮ್ಮ ಮಗಳ ಕಾಂಟ್ರೋವರ್ಶಿಯಲ್ ಪಿರಿಯಡ್' ಎನ್ನಬಹುದು.
ಮಗಳು ಸುಮಾರು 14 ವರ್ಷ ತಲುಪುವುದರಲ್ಲಿ ತಾಯಿ ಸಾಮಾನ್ಯವಾಗಿ ೪೦ರ ಹೊಸ್ತಿಲನ್ನು ದಾಟಿರುತ್ತಾಳೆ. ಮಗಳು ಯೌವನದ ರೆಕ್ಕೆ ಕಟ್ಟಿಕೊಂಡು ಹಾರಲು ಸಿದ್ಧವಾದರೆ ಅಮ್ಮನ ಮೇಲೆ ವೃದ್ಧಾಪ್ಯದ ನೆರಳು ಚಾಚಲಾರಂಭಿಸುತ್ತದೆ. ಈ ಅವಧಿಯನ್ನೇ ತಾಯಿಗೂ ಮಗಳಿಗೂ ಒಂಥರಾ 'ಕಾಂಟ್ರೋವರ್ಷಿಯಲ್ ಪಿರಿಯಡ್' ಎನ್ನಬಹುದು.
ಹೆಣ್ಣು-ಗಂಡು ಎನ್ನುವ ಭೇದಭಾವವಿಲ್ಲದೆ ಎಲ್ಲರೊಡಗೂಡಿ ಆಟ ಆಡಿಕೊಂಡು ಬೆಳೆಯುತ್ತಿರುವ ಮಗಳು 13-14 ವರ್ಷ ಸಮೀಪಿಸಿದಳು ಎಂದಕೂಡಲೇ ತಾಯಿಯ ಆತಂಕದ ದೃಷ್ಟಿ ಮಗಳ ಮೇಲೆ ಹರಿದಿರುತ್ತದೆ. ಅವಳ 'ತಾಯಿ ಹೃದಯ' ಮಗಳ ರಕ್ಷಣೆಯ ಬಗ್ಗೆ ಚಿಂತಿಸುತ್ತಿರುತ್ತದೆ. ಮಗಳ ಸ್ನೇಹಿತರು, ಅವಳ ಜೊತೆ ಒಡನಾಡುವ 'ಗಂಡು'ಗಳ ಬಗ್ಗೆ ತಾಯಿ ಎಚ್ಚರಿಕೆಯಿಂದಿರುತ್ತಾಳೆ. ಯಾವನೋ ಒಬ್ಬನ ಜೊತೆ ಮಗಳು ಸ್ವಲ್ಪ ಹೆಚ್ಚು ಮಾತನಾಡುತ್ತಿದ್ದಾಳೆ ಎಂದರೆ ಮುಗಿಯಿತು; ತಾಯಿಯ ನೆಮ್ಮದಿ ಹಾರಿಹೋಗಿರುತ್ತದೆ.
'ಹೆಣ್ಣು ಮಕ್ಕಳ ಜವಾಬ್ದಾರಿ ಎಂದರೆ ಸೆರಗಲ್ಲಿ ಕೆಂಡ ಕಟ್ಟಿಕೊಂಡಂತೆ' ಎನ್ನುವ ಮಾತಿನ ಅನುಭವ ತಾಯಿಗೆ ಆಗತೊಡಗುತ್ತದೆ. ಇದರ ಪರಿಣಾಮವೇ ಮಗಳ ಆಟ. ತಿರುಗಾಟದ ಮೇಲೆ ಕಡಿವಾಣ, ನಡತೆಯ ಬಗ್ಗೆ ಎಚ್ಚರಿಕೆಯ ಮಾತುಗಳು ಮತ್ತು ಮೇಲಿನಿಂದ ಮೇಲೆ ಬೈಗುಳಗಳು. ಮಗಳೇ ಎಂದು ಮುದ್ದಿಸುತ್ತ, ಪ್ರಪಂಚದಲ್ಲಿ ಅತ್ಯಂತ ಹೆಚ್ಚು ನಂಬಿಕೆಯ ಅಮ್ಮನ ಕಣ್ಗಾವಲಿನ ಕಟ್ಟೆಚ್ಚರ ಕಣ್ಣಿಗೆ ಹರೆಯದ ಕಾಡಿಗೆ ಹಚ್ಚಿಕೊಳ್ಳುತ್ತಿರುವ ಮಗಳಿಗೆ ಒಗಟಾಗಿಬಿಡುತ್ತದೆ.
ಮೊದಲು ಯಾವುದಕ್ಕೂ ಬೇಡ ಅನ್ನದ ಅಮ್ಮ, ಈಗ ಯಾವ ಡ್ರೆಸ್ ಹಾಕಿಕೊಳ್ಳಬೇಕು ಎನ್ನುವುದರಿಂದ ಹಿಡಿದು; ಫ್ರೆಂಡ್ಸ್ ಜೊತೆ ಪಿಕ್ನಿಕ್ ಹೋಗುವ ತನಕ ತನ್ನ ಎಲ್ಲ ನಿರ್ಧಾರಗಳಲ್ಲೂ ಅಮ್ಮ ಮೂಗು ತೂರಿಸತೊಡಗಿರುವುದು ಮಗಳಿಗೆ ಸಹ್ಯವಾಗುವುದಿಲ್ಲ. ಸ್ವಾತಂತ್ರ್ಯದ ರುಚಿಯನ್ನು ಸ್ವಲ್ಪ-ಸ್ವಲ್ಪವೇ ನೋಡುತ್ತಿರುವ ಮಗಳು ಅಮ್ಮನ ಮುನ್ನೆಚ್ಚರಿಕೆಯನ್ನು ತನ್ನ 'ಸ್ವಾತಂತ್ರ್ಯದ ಅಪಹರಣ' ಎಂದೇ ಬಗೆಯುತ್ತಾಳೆ.
ಹರೆಯದ ಮುಖ್ಯ ಲಕ್ಷಣಗಳಲ್ಲೊಂದಾದ 'ವಿರೋಧ'ವನ್ನು ವ್ಯಕ್ತಪಡಿಸುತ್ತಾಳೆ. ತಾಯಿ ಯಾವುದನ್ನು ಮಾಡು ಎನ್ನುತ್ತಾಳೋ ಅದನ್ನು ಮಾಡದಿರುವುದು, ಯಾವುದನ್ನು ಮಾಡಬೇಡ ಎನ್ನುತ್ತಾಳೋ ಅದನ್ನೇ ಮಾಡುವುದು. ಅಮ್ಮನ ಪ್ರತಿ ಮಾತಿಗೂ ರೇಗುವುದು ಅಥವಾ ಅಮ್ಮನ ಮಾತಿಗೆ ಪ್ರತಿಕ್ರಿಯೆಯನ್ನೇ ತೋರಿಸದಿರುವುದು... ಹೀಗೆ ವಿವಿಧ ರೂಪದಲ್ಲಿ ತನ್ನ ವಿರೋಧ ತೋರಿಸುತ್ತ ತಾಯಿಗೆ ಒಂದು ತಲೆನೋವಾಗಿ ಪರಿಣಮಿಸಿಬಿಡುತ್ತಾಳೆ.
ಹರೆಯದ ನೂರಾರು ಗೊಂದಲಎದುರಿಸುತ್ತಿರುವ ಮಗಳು ಒಂದೆಡೆಯಾದರೆ, ಏರುತ್ತಿರುವ ವಯಸ್ಸು, ಆವರಿಸುತ್ತಿರುವ ಮುಪ್ಪಿನ ಭಯ, ಕಡಿಮೆಯಾಗುತ್ತಿರುವ ಗಂಡನ ಗಮನ, ಯಾರೂ ತನ್ನ ಬಗ್ಗೆ ಲಕ್ಷ್ಯವಹಿಸುತ್ತಿಲ್ಲ ಎನ್ನುವ ಕೊರಗು ಹೀಗೆ ಮುಂತಾದ ಕಾಂಪ್ಲೆಕ್ಸ್ಗಳಿಂದ ಅಮ್ಮ ಚಿಂತೆಯ ಗೂಡಾಗಿರುತ್ತಾಳೆ. ಈ ಅಸಮಾಧಾನಗಳನ್ನು ಮನೆಯವರ ಮೇಲೆ ಅಮ್ಮ ತೀರಿಸಿಕೊಳ್ಳುತ್ತಿರುತ್ತಾಳೆ.
ಈ ಜಗಳ ಶಾಶ್ವತವೇನೂ ಅಲ್ಲ. ಮಗಳಿಗೆ ವಯಸು-ಮನಸು ಬಲಿತಂತೆ ಜೀವನದ ನೈಜ ಸ್ಥಿತಿ, ತಾಯಿ ಕೂಡ ಕೂಡಾ ಮುಂಬರಲಿರುವ ಮುಪ್ಪಿಗೆ ಮಾನಸಿಕವಾಗಿ ಅಣಿಯಾಗಿರುತ್ತಾಳೆ. ತನ್ನ ಅಶಕ್ತತೆಯ ಜೀವನಕ್ಕೆ ಹೊಂದಿಕೊಂಡಿರುತ್ತಾಳೆ. ಅಲ್ಲದೆ ಬೇರೆ ಮನೆಗೆ ಶಾಶ್ವತವಾಗಿ ಹೋಗಲಿರುವ ಮಗಳ ಬಗ್ಗೆ ವಿಶೇಷ ಪ್ರೀತಿ ಬೆಳೆದಿರುತ್ತದೆ.
ಅಲ್ಲಿಗೆ ಈ 'ಕಾಂಟ್ರೋವರ್ಷಿಯಲ್ ಪಿರಿಯಡ್' ಮುಗಿದಿರುತ್ತದೆ. ಎಲ್ಲ ಅಮ್ಮ-ಮಗಳಲ್ಲೂ ಇದು ಸಾಮಾನ್ಯ. ಆದರೆ ಕೆಲವರಲ್ಲಿ ಹೆಚ್ಚು, ಕೆಲವರಲ್ಲಿ ಕಡಿಮೆ ಅಷ್ಟೆ. ಆದರೆ ಕೆಲವೊಮ್ಮೆ ಮಗಳಾದವಳು ಅವು ಸ್ಥಿತಿಯನ್ನು ಅರಿಯಲು ವಿಫಲವಾದರೆ ಈ ಜಗಳ ಮುಂದುವರಿಯಲೂಬಹುದು" ಎಂದು ಶೀಲಕ್ಕ ತನ್ನ ಮಾತನ್ನು ಮುಗಿಸಿದ್ದಳು.
ನನಗೂ ಅರ್ಥವಾಗಿತ್ತು... ಅಮ್ಮನೊಂದಿಗೆ ನಾನು ನಡೆದುಕೊಂಡಿದ್ದ್ದನ್ನೆಲ್ಲ ನೆನೆದೆ...ಮನಸ್ಸಿನಲ್ಲೇ ಹೇಳಿಕೊಂಡೆ... "ಅಮ್ಮ, ಇನ್ನೆಂದೂ ನಿನ್ನ ನೋಯಿಸಲಾರೆನು. ಸಾರಿ ಅಮ್ಮ.... "