Tuesday, February 12, 2008

ಮುರುಕು ಕ್ಲಾಸಿನೊಳಗೆ ಅರಳುವ ಸುಂದರ ಪ್ರೇಮ....


ಅಮ್ಮನಿಗೆ ಏನೋ ಕೆಲಸ ಮಾಡಿಕೊಟ್ಟ ಶಾಸ್ತ್ರ ಮಾಡಿ ಶೀಲಕ್ಕನ ಮನೆಗೆ ಹಾರಿ ಹೋಗಿದ್ದೆ. ಆಗಷ್ಟೇ ತಲೆ ಸ್ನಾನ ಮಾಡಿ ಬಿಸಿಲಲ್ಲಿ ತನ್ನ ನೀಳ ಕೇಶರಾಶಿಯನ್ನು ಹರಡಿ ಕೂತಿದ್ದಳು ಶೀಲಕ್ಕ. ಅವಳ ಹತ್ತಿರ ಏನೋ ಹೇಳಿಕೊಳ್ಳಬೇಕು ಎನ್ನುವ ಭಾವ ಅವತ್ತು ಶೀಲಕ್ಕಳನ್ನು ಮತ್ತಷ್ಟು ಆಪ್ತೆಯನ್ನಾಗಿಸಿದ್ದವು. ಅದನ್ನು ಅರಿತವಳಂತೆ ನನ್ನ ಭಾವನೆಯ ತೀವ್ರತೆಗೆ ಸಮಾನವಾಗಿ ಸ್ಪಂದಿಸುತ್ತಾ ಕೇಳಿದಳು ಏನಾಯಿತೆಂದು. ಅವಳ ಜೊತೆ ಅಷ್ಟು ಸಲಿಗೆಯಿಂದಿದ್ದರೂ 'ಏನು ಅಂದುಕೊಳ್ಳುತ್ತಾಳೊ' ಎನ್ನುವ ಭಾವ ನನ್ನನ್ನು ತಡೆಯಿತಾದರೂ ಅವಳ ತಣ್ಣನೆಯ ನೋಟ ನನಗೆ ಹೇಳಿಕೊಳ್ಳಲು ಅನುವು ನೀಡಿತು.

"ಶೀಲಕ್ಕ ಇವತ್ತು ಬೆಳಗ್ಗೆನೇ ಅಮ್ಮನ ಜೊತೆ ಜಗಳ. ಹೆಣ್ಣುಮಕ್ಕಳು ಲೇಟ್ ಆಗಿ ಏಳಬಾರದು ಅಂತ ಅವಳ ವಾದ. ಅಣ್ಣ ಮಾತ್ರ ೮ ಗಂಟೆಗೆ ಎದ್ರೂ ಪರ್ವಾಗಿಲ್ಲ. ಬೆಳಿಗ್ಗೆ ಏಳು, ಒಳ್ಳೆದು ಅಂದ್ರೆ ಅದು ಬೇರೆ ಮಾತು ಆದ್ರೆ ಹೆಣ್ಮಕ್ಕಳು ಮಾತ್ರ ಬೇಗ ಏಳಬೇಕು ಅನ್ನೋದು ತಪ್ಪು. ನಂಗೂ ಬೆಳಗ್ಗೆ ಚಾದರದೊಳಗಿನ ಬೆಚ್ಚಗಿನತನವನ್ನು ಅನುಭವಿಸಬೇಕು ಅಂತಾ ಇರೋಲ್ವಾ? ಒಮ್ಮೊಮ್ಮೆ ನಂಗೂ ಬೇಗ ಏಳ ಬೇಕು ಅಂತೆನೋ ಅನ್ನಿಸುತ್ತೆ...ಆದ್ರೆ ಅಮ್ಮ ಆರಕ್ಕೇ ಎಬ್ಬಿಸಿದಕೂಡಲೇ ಸಿಟ್ಟು ಬರುತ್ತೆ. ಅವಳು ಹೇಳಿದ ಹಾಗೆ ಕೇಳಬೇಕು ಅನ್ನಿಸೋದೇ ಇಲ್ಲ. ಇದು ಬರೀ ಬೇಗ ಏಳೋ ವಿಷಯಕ್ಕಷ್ಟೆ ಸಂಬಂಧಿಸಿಲ್ಲ.

ಎಲ್ಲದಕ್ಕೂ, ಕುಳಿತಿದ್ದಕ್ಕೆ ನಿಂತಿದ್ದಕ್ಕೆ 'ದೊಡ್ಡವಳಾಗಿದೀಯಾ, ಇನ್ನಾದ್ರೂ ಸುಧಾರಿಸು'ಅಂತಾಳೆ. ಸಾಲ್ದೂ ಅಂತಾ ಅಪ್ಪನೂ ಕೆಲವೊಮ್ಮೆ ಅಮ್ಮನ ಮಾತಿಗೆ ತಲೆಯಾಡಿಸ್ತಾರೆ. ನನಗೆ ಬೇಕಾದ ಹಾಗೆ ಇರೋಕೆ ಬಿಡಲ್ಲ. ಜೀವನದ ಮೇಲೆ ಜಿಗುಪ್ಸೆ ಹುಟ್ಟಿಸಿ ಬಿಡ್ತಾರೆ ಇವರೆಲ್ಲ ಸೇರಿ. ಇವ್ರೆಲ್ಲ ನನ್ನ ಅರ್ಥನೇ ಮಾಡ್ಕೊಳಲ್ಲ' ನನ್ನ ಅಮ್ಮನ ಮೇಲೆ ಆಪಾದನೆಯ ಪಟ್ಟಿ ಬೆಳೆಯುತ್ತಲೇ ಇತ್ತು.

ಶೀಲಕ್ಕನಿಗೆ ಏನೆನ್ನಿಸಿತೋ ಏನೋ ಒಮ್ಮೆಲೆ 'ಕೂಸೆ, ನಿನಗೆ ಏನೆನ್ನಿಸುತ್ತೋ ಅದನ್ನೆಲ್ಲ ಬರಿ. ನೀನು ಡೈರಿ ಬರೆಯೋಕೆ ಸ್ಟಾರ್ಟ್ ಮಾಡು' ಎಂದಳು. ಇವಳೂ ನನ್ನ ಜೊತೆ ಸೇರಿ ಅಮ್ಮಂದಿರಿಗೆಲ್ಲ ಬಯ್ತಾಳೆ ಅಂದ್ಕೊಂಡ್ರೆ ಇದೆನೋ ಡೈರಿ ಬರಿ ಅಂತಾಳಲ್ಲ?! ನನ್ನ ಟೆನ್ಷನ್‌ಗೂ ಡೈರಿಗೂ ಏನು ಸಂಬಂಧ? ಶೀಲಕ್ಕನನ್ನು ಕೇಳಿಯೇ ಬಿಟ್ಟೆ 'ನಾನೇನೋ ಅಂದ್ರೆ...ಡೈರಿ ಬರಿ ಅಂತಿಯಲ್ಲ? ಡೈರಿ ಬರೆದ್ರೆ ಏನು ಉಪಯೋಗ? ಬರೆಯುವುದು ಹೇಗೆ ಅಂತಾನೂ ಗೊತ್ತಿಲ್ಲ, ಸಿನೆಮಾದಲ್ಲಿ ಹೀರೋಯಿನ್ ಬರಿತಾಳೆ ಅಂತ ಅಷ್ಟೆ ನಂಗೆ ಗೊತ್ತಿರೋದು' ಅಂತ ಚಿಕ್ಕ ಮುಖ ಮಾಡಿದೆ.

'ಹಾಂಗಲ್ಲ ಕೂಸೇ..ನಾನೂ ಮೊದಲು ಅಮ್ಮನ ಹತ್ತಿರ ಜಗಳ ಮಾಡ್ತಿದ್ದೆ. ಚಿಕ್ಕ ವಿಷ್ಯಕ್ಕೂ ಸಿಟ್ಟು, ಯಾವತ್ತೂ ನನ್ನ ತಪ್ಪೇ ಇರೊಲ್ಲ ಅಂತ ವಾದ. ನನ್ನ ಒಬ್ಬ ಗೆಳತಿಯ ಒತ್ತಾಯಕ್ಕೆ ನಾನೂ ಡೈರಿ ಬರೆಯಲು ಪ್ರಾರಂಭಿಸಿದೆ ನೋಡು..ಒಂದೆಂದೇ ಅರ್ಥವಾಗತೊಡಗಿತು; ಜೀವನವನ್ನು ಸೂಕ್ಷ್ಮವಾಗಿ ಗಮನಿಸುವ ಸಾಮರ್ಥ್ಯ, ನನ್ನ ತಪ್ಪುಗಳು, ಆ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬಗೆ..ಸಂಬಂಧಗಳನ್ನು handle ಮಾಡೋದು..ಹೀಗೆ.

ಹಾಂ! ಮತ್ತೊಂದು ವಿಷಯ, ಬರೀ ಡೈರಿ ಬರೆದಷ್ಟಕ್ಕೆ ಯಾರೂ ಉದ್ಧಾರ ಆಗಲ್ಲ. ಸರಿ ಎಂದು ಕಂಡುಬಂದ ವಿಷಯಗಳನ್ನು ಅಳವಡಿಸಿಕೊಳ್ಳುವುದು, ಹಳೆ ಪುಟಗಳನ್ನು ತಿರುವಿಹಾಕೋದು ಎಲ್ಲಾ ಮಾಡ್ತಾ ಇದ್ರೆ ನಿಜವಾಗ್ಲೂ ಡೈರಿ ಖುಷಿ ನೀಡುತ್ತದೆ'
ಶೀಲಕ್ಕ ನನ್ನಲ್ಲಿ ಹೊಸ ವಿಚಾರ ಬಿತ್ತಿದ್ದಳು. ಶೀಲಕ್ಕನ ಹತ್ತಿರ ಅದು-ಇದು ಅಂತ ಸ್ವಲ್ಪ ಹರಟೆ ಕೊಚ್ಚಿ ಮನೆಗೆ ಮರಳಿದ್ದೆ.

ಅವತ್ತು ರಾತ್ರಿ ಮಲಗುವ ಮುನ್ನ ಅಪ್ಪ ಕೊಟ್ಟ LIC ಡೈರಿಯ ಕಪ್ಪು ಮೈಯನ್ನು ಪ್ರೀತಿಯಿಂದ ಸವರಿ ಬರೆಯಲು ಅಣಿಯಾದೆ. ಆ ಕಡೆ ಹಳ್ಳಿಯೂ ಅಲ್ಲದ, ಪಟ್ಟಣವೂ ಅಲ್ಲದ, ಮುರುಕು ಚಾ ಅಂಗಡಿ, ಭಟ್ಟರ ಪೆಪ್ಪರ್‌ಮೆಂಟ್ ಅಂಗಡಿ ಮಾತ್ರ ಇರುವ ಮಲೆನಾಡಿನ ಪುಟ್ಟ ಊರಲ್ಲಿ ನನ್ನ ಹೈಸ್ಕೂಲ್ ಇದೆ. ಅಲ್ಲಿ ನಾನು ಹತ್ತನೇ ತರಗತಿ. ಪ್ರತಿ ಸಾರಿ ಮೊದಲನೇ ರ್ರ್ಯಾಂಕ್ ಗಳಿಸುವಷ್ಟು ಬುದ್ಧಿವಂತಳಲ್ಲ, ಆದರೆ ಫಸ್ಟ್ ಕ್ಲಾಸ್‌ಗೆ ತೊಂದರೆ ಇರಲಿಲ್ಲ. ಆಟದಲ್ಲೂ ಏನು ಛಾಂಪಿಯನ್ ಅಲ್ಲ, ಆದರೆ ವಾಲಿಬಾಲ್, ಚೆಸ್ ಇಷ್ಟ.

ನನ್ನಂತದೇ ನಾಲ್ಕೈದು ತುಂಟ ಹುಡುಗಿಯರನ್ನು ಕಟ್ಟಿಕೊಂಡು ತರಲೆ ಮಾಡಿಕೊಂಡು ತಿರುಗುತ್ತಿದ್ದೆ. ಎಲ್ಲ ಶಿಕ್ಷಕರು, ಸ್ವಲ್ಪ ಹಾರಾಡುವ ಹುಡುಗರಿಗೆಲ್ಲ ಅಡ್ಡಹೆಸರುಗಳನ್ನು ದಯಪಾಲಿಸಿ ಮರೆಯಲ್ಲಿ ಆಡಿಕೊಂಡು ನಗುತ್ತಿದ್ದೆವು. ಬೇಸಿಗೆಯಲ್ಲಿ ಉಪ್ಪು ಮಾವಿನಕಾಯಿ, ಚಳಿಗಾಲ ಬಂತೆಂದರೆ ಹುಣಸೆಕಾಯಿ, ನೆಲ್ಲಿಕಾಯಿ..ಹೀಗೆ ಆಯಾ ಕಾಲಕ್ಕೆ ಏನು ಹಣ್ಣು-ಕಾಯಿಗಳು ಬೆಳೆಯುತ್ತವೋ ಅವೆಲ್ಲ ಎಲ್ಲರ ಬ್ಯಾಗ್‌ಗಳಲ್ಲಿ ಹೇರಳವಾಗಿ ಸಿಗುತ್ತಿದ್ದವು. ಅದನ್ನೆಲ್ಲ ತಿನ್ನುತ್ತಾ ಯಾವಾಗಲೂ ನಗುತ್ತ, ನಗಿಸುತ್ತ ಕ್ಲಾಸ್ ತುಂಬಾ ಓಡಾಡಿಕೊಂಡಿರುತ್ತಿದ್ದೆ.

ಆದರೆ ನನ್ನದು ಡಬ್ಬಾ ಸರ್ಕಾರಿ ಹೈಸ್ಕೂಲು! ಮಳೆಗಾಲದಲ್ಲಿ ಸೋರುವ, ಅಂಗವಿಕಲ ಡೆಸ್ಕ್-ಬೆಂಚ್‌ಗಳ ಈ ಸ್ಕೂಲು ನೋಡಲು ಕುರೂಪಿ. ಆದರೆ ಸುತ್ತಮುತ್ತಲ ಪರಿಸರ; ಆ ಬೆಟ್ಟ, ಬಯಲು ಬಲು ಸುಂದರ. ಆ ಹಸುರಿನನಡುವೆ ಅರಳುವ ಮುಗ್ಧ ಮನಸ್ಸಿನ ಚಂದವೇ ಮತ್ತೊಂದು ರೀತಿಯದು...

ಮುಂದಿನ ಭಾಗಕ್ಕೆ ಕಾಯಿರಿ...

No comments: