Tuesday, February 5, 2008

ಡೈರಿಗೆ ಮುನ್ನುಡಿ


ಯಾಕೋ ಕನ್ನಡಿ ಬಹಳ ಪ್ರಿಯ ಎನಿಸುತ್ತದೆ. ದಾರಿಯಲ್ಲಿ ನಡೆದು ಹೋಗುತ್ತಿದ್ದರೆ ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಎನ್ನುವ ಭಾವ ಕಚಕುಳಿ ಇಡುತ್ತದೆ. ಕ್ಲಾಸಿನಲ್ಲಿ ಹುಡುಗ ಕದ್ದು ನೋಡಿದಾಗ ಆಗುವ ನಾಚಿಕೆ, ರಸ್ತೆಯಲ್ಲಿ ಅಪರಿಚಿತ ಹಸಿದ ಕಣ್ಣುಗಳ ಭೀತಿ...ಎಲ್ಲಾ ಭಾವನೆಯನ್ನು ಹೇಳಿಕೊಳ್ಳುವ ಆಸೆ, ಆದರೆ ಹೇಳಲಾಗದ ಸಂಕಟ. ಯಾರಿಗೆ ಹೇಳಲಿ? ಯಾಕೆ ಹೇಳಲಿ? ಹೇಳಿದರೆ ಅರ್ಥವಾಗುತ್ತದಾ ಬೇರೆಯವರಿಗೆ? ಏನೋ ಗೊತ್ತಿಲ್ಲ.

ಆದರೆ ನನ್ನ ಡೈರಿಗೆ ಮಾತ್ರ ಅದು ಪೂರ್ತಿ ಅರ್ಥವಾಗುತ್ತದೆ. ಡೈರಿ ಅಂತಾ ನಾನು ದಿನಾ ಬರೆಯುವ ರೂಢಿ ಇರಿಸಿಕೊಂಡಿಲ್ಲ. ಒಂದೊಂದು ದಿನ ಮನಸಿಗೆ ಒಂಥರ ಕಿರಿಕಿರಿ, ಒತ್ತಿಕೊಂಡು ಬರುವ ಏನೋ ತಳಮಳ ತಡೆಯಲು ಆಗದೇ ಇದ್ದಾಗ ಡೈರಿ ಬರವಣಿಗೆ ನನಗೆ ಹೃದಯದ ಬವಣೆ ಬರೆದು ಹಗುರಾಗಲು ದಾರಿಯಾಗುತ್ತದೆ.ನನಗೆ ವಿಶೇಷ ಎನಿಸಿದ ಏನೇ ಇರಲಿ; ಯಾರದೋ ಕಥೆ, ಎಲ್ಲೋ ಓದಿದ ಕವನ, ಯಾವತ್ತೋ ಆದ ಅನುಭವ, ಹೀಗೆ...ಎಲ್ಲಾ ಡೈರಿಯಲ್ಲಿ ತುಂಬಿಡುತ್ತೇನೆ. ನನಗಿಷ್ಟವಾದ ಇದರ ಕೆಲವು ಪುಟಗಳನ್ನೇ ನಿಮ್ಮೆದುರು ಇಡುತ್ತಿದ್ದೇನೆ.

ಎಲ್ಲದಕ್ಕಿಂದ ಮೊದಲು ನನ್ನ ಡೈರಿ ಬರವಣಿಗೆ ಹೇಗೆ ಪ್ರಾರಂಭವಾಯಿತು ಎಂದು ಹೇಳುತ್ತೇನೆ...ಮಲೆನಾಡಿನ ನನ್ನ ಪುಟ್ಟ ಹಳ್ಳಿಯಲ್ಲಿ ನೇರಲೆ, ಪೇರಲೆ, ನೆಲ್ಲಿಕಾಯಿ ಅಂತ ಹಕ್ಕಿಯ ಹಾಗೆ ಬೆಟ್ಟಗುಡ್ಡ ಅಲೆಯುತ್ತ,ಮನೆಯಲ್ಲಿ ಅಮ್ಮ ಮಾಡಿದ ರುಚಿ ಅಡಿಗೆ ಸವಿಯುತ್ತ ಆರಾಮವಾಗಿ ಇದ್ದವಳು ನಾನು. ಮೇಷ್ಟ್ರು ಕೊಟ್ಟ ಹೋಂ ವರ್ಕ್‌ಗಳನ್ನೆಲ್ಲ ಅಚ್ಚುಕಟ್ಟಾಗಿ ಮುಗಿಸುವುದೊಂದೇ ಅಂದಿನ ನನ್ನ ಜೀವನದ ದೊಡ್ಡ ಸವಾಲು. 16 ವರ್ಷವಾದರೂ ನನಗೆ ಡೈರಿ ಬರೆಯುವುದು ಅಂದರೇನು ಗೊತ್ತಿರಲಿಲ್ಲ. ಎಲ್ಲ ಶೀಲಕ್ಕ ಹೇಳಿಕೊಟ್ಟದ್ದು. ನನ್ನ ತಳಮಳ ತಣಿಯಲು `ಡೈರಿ' ಬರೆಯುವ ದಾರಿ ಹೇಳಿದವಳು. ಆದ್ದರಿಂದ ನನ್ನ 'ಶೋಡಷ ವಯಸ್ಸಿನ ಆದರ್ಶ'ಶೀಲಕ್ಕಳ ಬಗ್ಗೆ ನಿಮಗಿಷ್ಟು ಹೇಳುವುದು ಒಳಿತು.

ಪಕ್ಕದ ಮನೆ ಶೀಲಕ್ಕ, ನನಗಿಂತ ಐದು ವರ್ಷ ದೊಡ್ಡವಳು. ಸುಂದರಿ ಎನ್ನಬಹುದಾದ ಚಹರೆ.ಬಹುತೇಕ ನನ್ನ ಕನಸುಗಳ ಅಡಿಪಾಯ ಇವಳೇ.ದೊಡ್ಡ ಕಾಲೇಜಿಗೆ ಹೋಗುವವಳು,ಬಣ್ಣ-ಬಣ್ಣದ ಬಟ್ಟೆ ತೊಡುವವಳು. ನಮ್ಮ ಹಾಗೆ ಯುನಿಫಾರ್ಮಿನ ಬಂಧನವಿಲ್ಲ, ಹೇರ್‌ಪಿನ್ ತರಲೂ ಅಪ್ಪನನ್ನು ಅವಲಂಬಿಸುವ ಅವಶ್ಯಕತೆ ಇಲ್ಲ. ನಮ್ಮ ಶಾಲೆ ಬಿಟ್ಟು ಅವಳು ಕಾಲೇಜು ಸೇರಿ ವರ್ಷಗಳೇ ಕಳೆದರೂ ಅವಳ ಬಗ್ಗೆ ಮಾತುಗಳು ನಮ್ಮ ಶಾಲೆಯ ಹರಟೆಯಲ್ಲಿಬಂದು ಹೋಗುತ್ತಿರುತ್ತವೆ. ಎಲ್ಲರೂ ಅವಳನ್ನು`ಜೋರು ಹುಡುಗಿ' ಎಂದು ಮೂಗು ಮುರಿದರೂ, ಏನೋ ನಂಗೆ ಅವಳ ಮೇಲೆ ಒಂಥರಾ ಪ್ರೀತಿ, ನಂಬಿಕೆ.

ಕಾಲೇಜಿಗೆ ಹೋಗಲು ಪಟ್ಟಣದಲ್ಲಿ ರೂಮು ಮಾಡಿಕೊಂಡಿದ್ದರಿಂದ ವಾರಕ್ಕೆ ಒಂದು ಸಾರಿ ಬಂದು ಹೋಗುತ್ತಾಳೆ. ಆಗ ನನಗೆ ಅವಳ ಸಾಮಿಪ್ಯ ಲಭ್ಯ. ಮಧ್ಯಾಹ್ನ ಅಮ್ಮನ ಕಣ್ಣು ತಪ್ಪಿಸಿ ಅವಳೊಡನೆ ಹೋದರೆ ಬರುವುದು ಸಂಜೆಯೇ. ಆಹಾ! ಎಷ್ಟು ವಿಷಯ ಹೇಳುತ್ತಾಳೆ. ಅವಳ ಕಾಲೇಜು, ಮೂರ್ಖ ಪ್ರೊಫೆಸರುಗಳು, ಅವರಿವರ ಪ್ರಣಯದ ಸುದ್ದಿ, ಅವಳ ರೂಮ್‌ಮೇಟುಗಳು ಇವುಗಳ ನಡುವೆಯೇ ತನ್ನ ಮನದ ಭಾವನೆಗಳು ಹೀಗೆ ಒಂದು ಕೂತೂಹಲ, ಸ್ವಾರಸ್ಯದ ಪ್ರಪಂಚವನ್ನೇ ನನ್ನ ಮುಂದೆ ತೆರೆದಿಟ್ಟು ಬಿಡುತ್ತಾಳೆ. 'ಕೂಸೇ,ಎಷ್ಟು ಮಜಾ ಆಗ್ತು ಗೊತ್ತಿದ್ದ' ಅಂತ ಅವಳು ಕಣ್ಣು ಮಿಟುಕಿಸಿ ನಗುತ್ತಿದ್ದರೆ ಇದೊಂದು ವರ್ಷ ಹೇಗೆ ಕಳೆಯುತ್ತದೆಯೋ, ಯಾವಾಗ ನಾನು ಕಾಲೇಜಿಗೆ ಹೋದೇನೋ ಎನಿಸುತ್ತದೆ.

ಅವಳಿಗೂ ನನಗೂ ಯಾವತ್ತೂ communication gap ಆದದ್ದೇ ಇಲ್ಲ. ನಾನು ಹೇಳುವ ಮೊದಲೇ 'ಏನೇ ಕೂಸೆ, ಎಂತಾ ಆತೆ?' ಅಂತ ಆತ್ಮೀಯತೆಯಿಂದ ಕೇಳುವಳು. ಆ ಕ್ಷಣ ನನಗೆ ಅನಿಸಿದ್ದನ್ನು ಪಟಪಟ ಹೇಳಿಬಿಡುತ್ತೇನೆ. ಅವಳು ಸರಿಯಾಗಿ ನನ್ನ ತುಮುಲ ಗ್ರಹಿಸಿರುತ್ತಾಳೆ ಮತ್ತು ಅದಕ್ಕೆ ಸೂಕ್ತ ಸಲಹೆ ನೀಡುತ್ತಾಳೆ. ಇದರಿಂದಲೇ ನನಗೆ ಅವಳು ಮತ್ತೂ ಇಷ್ಟವಾಗಿಬಿಡುತ್ತಾಳೆ.
- ಷೋಡಶಿ, ೨೭ ಏಪ್ರಿಲ್ ೨೦೦೭

No comments: