Monday, August 30, 2010

ಎಲ್ಲಿ ಹೋಯಿತು ಆ ಸಂಭ್ರಮಾಚರಣೆ?

ಪುಟ್ಟ ಮಕ್ಕಳಿರುವಾಗ ಅಗಸ್ಟ್ ೧೫, ಜನವರಿ ೨೬, ಗಾಂಧಿ ಜಯಂತಿ, ಮಕ್ಕಳ ದಿನಾಚರಣೆ ಯಾವುದೇ ವಿಶೇಷ ದಿನ ಇರಲಿ, ಎಷ್ಟು ಸಂಭ್ರಮವಿತ್ತು.. ಎರಡು ದಿನ ಮೊದಲಿನಿಂದಲೇ ತಯಾರಿ ಶುರುವಾಗುತ್ತಿತ್ತು.

ಬೆಳ್ಳನೆಯ ಹೊಚ್ಚ ಹೊಸ ಬ್ಲೌಸು, ನೀಲಿ ಲಂಗ.. ಮನ ತುಂಬಾ ಉತ್ಸಾಹ. "ಪೂಜೆ ಮಾಡಲಾದರೂ ಸ್ವಲ್ಪ ಹೂ ಇಡೆ" ಎಂಬ ಅಜ್ಜಿಯ ಕೂಗನ್ನೂ ಕಿವಿ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಮನೆಯ ದೇವರ ಪಾಲಿನ ಹೂವೆಲ್ಲ ಶಾಲೆಗೆ ಸೇರುತ್ತಿದ್ದವು. ಯಾರು ಹೆಚ್ಚಿಗೆ ಹೂವನ್ನು ತರುತ್ತಾರೆ ಎಂದು ನಮ್ಮ ನಮ್ಮಲ್ಲೇ ಕಾಂಪಿಟೇಶನ್.

ಈ ದಿನಾಚರಣೆಗಳು ಬಂದರೆ ಮನೆಯ ಹಿರಿಯರಿಗೆಲ್ಲ ತಲೆನೋವು. ಭಾಷಣ ಬರೆದುಕೊಡು ಎಂದು ಎಲ್ಲರಿಗೂ ದುಂಬಾಲು ಬೀಳುತ್ತಿದ್ದೆವು. 'ಮಾನ್ಯ ಅಧ್ಯಕ್ಷರೇ, ಪೂಜ್ಯ ಗುರುಗಳೇ..'ಎಂದು ಒಂಚೂರೂ ತಪ್ಪದಂತೆ ಕಷ್ಟಪಟ್ಟು ಉರುಹೊಡೆದು ಶಿಕ್ಷಕರಿಗೆ ಒಪ್ಪಿಸುವುದೇ ಒಂದು ಪ್ರಿಯ ಸಾಹಸವಾಗಿತ್ತು.

ಊರ ಹಿರಿಯರೊಬ್ಬರಿಗೇ ಅಧ್ಯಕ್ಷರ ಸ್ಥಾನ ಮೀಸಲಾಗಿರುತ್ತಿತ್ತು. ಪ್ರತಿ ವರ್ಷ ಅದೇ ಅಧ್ಯಕ್ಷರು, ಅದೇ ಭಾಷಣ ವರ್ಷವೊಂದು ಬದಲಾಗಿರುತ್ತಿತ್ತು ಅಷ್ಟೇ. ಉತ್ಸಾಹ ಮಾತ್ರ ಸ್ವಲ್ಪವೂ ಕಡಿಮೆಯಾಗುತ್ತಿರಲಿಲ್ಲ.

ಈ ದಿನಾಚರಣೆಗಳ ಉತ್ಸಾಹ ಒಂದು ರೀತಿಯದ್ದಾದರೆ ಚೌತಿ, ದೀಪಾವಳಿ, ಯುಗಾದಿ ಹಬ್ಬಗಳದ್ದೇ ಇನ್ನೊಂದು ರೀತಿ. ಹಬ್ಬ ಅಮ್ಮನ ಸುತ್ತಮುತ್ತ ತಿರುಗುತ್ತ, ಎಷ್ಟು ಹೊತ್ತಿಗೆ ಆ ಕಜ್ಜಾಯಗಳೆಲ್ಲ ನಮ್ಮ ಕೈಸೇರುತ್ತವೆಯೋ ಎಂಬ ತವಕ. ಜೀವ ಹೋಗುತ್ತದೆ ಎಂಬಷ್ಟು ಹೆದರಿಕೆಯಾದರೂ ಪಟಾಕಿ ಹೊಡೆಯುವ ಕಾತರ. ಹಬ್ಬದ ಮರುದಿನ ಮನೆ ತುಂಬ ಸೇರುವ ನೆಂಟರು. ಮಾತು ಬಿಟ್ಟು ಅದೆಷ್ಟು ದಿನಗಳಾಗಿವೆಯೋ ಎಂಬಂತೆ ಮಾತು.. ಮಾತು.. ಮಾತು.

ಉದ್ದದ ಊಟದ ಪಂಕ್ತಿ. ಒಂದು ಕಡೆ ಸೇರುವ ಮಕ್ಕಳ ಕೂಟ. ಆಹಾ ಎಷ್ಟು ಸುಂದರ ದಿನಗಳು.. ಆ ಎಳೇ ವಯಸ್ಸಿನಲ್ಲಿ ಹಬ್ಬಗಳ ಆಕರ್ಷಣೆಯೇ ಹಾಗಿರುತ್ತಿತ್ತು.

ಆದರೆ ಕೆಲವೇ ವರ್ಷಗಳಲ್ಲಿ ಅದೆಂತಹ ಬದಲಾವಣೆ! ಒಂದರೆಡು ದಿನ ನೆಂಟರಿಷ್ಟರೊಂದಿಗೆ ಸೇರಿ ಕಾಲ ಕಳೆಯಲು ಯಾರಿಗೂ ಟೈಮಿಲ್ಲ. ಮನೆ ಬಿಟ್ಟು ಬಹಳ ದಿನ ಇರುವಂತಿಲ್ಲ. ಏಕೆಂದರೆ ಇದು ವಿಭಕ್ತ ಕುಟುಂಬದ ಅನಿವಾರ್ಯತೆ. ಅಷ್ಟು ಒತ್ತಾಯ ಮಾಡಿ ಕರೆದರೆ ಊಟದ ಹೊತ್ತಿಗೆ ಬಂದು ಊಟ ಮುಗಿಸಿ ತಕ್ಷಣ ತಿರುಗಿ ಮನೆಗೆ. ಹರಕೆ ತೀರಿಸಲು ಬಂದವರಂತೆ ಭೇಟಿ. ತಮ್ಮವರ ಜೊತೆಗೆ ಮನ ಬಿಚ್ಚಿ ಮಾತನಾಡುವುದಿರಲಿ, ನಗಲೂ ಸಲುಗೆ ಇಲ್ಲ! ಇನ್ನು ಬಂದ ಮಕ್ಕಳಿಗೋ, ತಮಗೆ ಇವರೆಲ್ಲ ಏನು ಆಗಬೇಕೆಂದು ತಿಳಿಯದಷ್ಟು ಗೊಂದಲ.

ಇನ್ನು ರಾಷ್ಟೀಯ ದಿನಾಚರಣೆಗಳೋ... ಅವು ಕೇವಲ ಈಗ ರಜಾ ದಿನಗಳು ಅಷ್ಟೇ! ಅವತ್ತು ಫುಲ್ ರಿಲೀಫ್. ಹೈಸ್ಕೂಲ್ ತನಕ ಶಿಕ್ಷಕರ ಹೆದರಿಕೆಯಿಂದಲಾದರೂ ಹೋಗುತ್ತಿದ್ದೆವು. ಈಗ ಕಾಲೇಜಿಗೆ ಬಂದಮೇಲೆ ಅದೆಲ್ಲ ಸಿಲ್ಲಿ.. ಪ್ರಿನ್ಸಿ, ಕೆಲವು ಲೆಕ್ಚರರ್‌ಗಳು, ಅಟೆಂಡರುಗಳು ಕಾಟಾಚಾರಕ್ಕೆ ಎಂಬಂತೆ ಧ್ವಜ ಹಾರಿಸುತ್ತಾರೆ.

ಮನುಷ್ಯ ಬೆಳೆದಂತೆ ಯಾಕೆ ಈ ಎಲ್ಲ ಬದಲಾವಣೆ? ಈ ಆಚರಣೆಗಳು, ಸಂಭ್ರಮ ಕೇವಲ ಮಕ್ಕಳಿಗೆ ಮಾತ್ರವೇ ಸೀಮಿತವೆ?!