Saturday, September 4, 2010

ದೊಡ್ಡವರೆಲ್ಲ ಜಾಣರಲ್ಲ. ..

ಅಜ್ಜ ಮೊಮ್ಮಕ್ಕಳ ನಡುವೆ ಸಾಮಾನ್ಯವಾಗಿ ಒಂದು ಮಧುರ ಬಾಂಧವ್ಯವಿರುತ್ತದೆ. ಮೊಮ್ಮಗುವಿನ ತಪ್ಪು ಅಜ್ಜನಿಗೆ ತಪ್ಪಾಗಿ ಕಾಣಿಸದೆ ಬಾಲಲೀಲೆಯಂತೆ ಕಾಣಿಸುತ್ತದೆ. ಮೊಮ್ಮಗುವಿಗಂತೂ ಅಜ್ಜನೇ ಪ್ರಪಂಚ.

ಆದರೆ ಈ ಮಾದಜ್ಜ ಮಾತ್ರ ಸ್ವಲ್ಪ ವಿಚಿತ್ರ. ಶ್ರೀಮಂತ ಒಂಟಿ ಮುದುಕ. ಅವನ ಆರಡಿಯ ಗೌರವ ವರ್ಣದ ದೇಹ ನೋಡಿದರೇ ಭಯ-ಭಕ್ತಿ ಉಂಟಾಗುತ್ತಿತ್ತು. ಯಾರನ್ನೂ ಸುಲಭಕ್ಕೆ ನಂಬುವುದಿಲ್ಲ. ಯಾರನ್ನು ಹಚ್ಚಿಕೊಳ್ಳುತ್ತಲೂ ಇರಲಿಲ್ಲ. ವೇದ-ತರ್ಕ ಅಂತ ಬಹಳ ಓದಿಕೊಂಡಿದ್ದ. ಸಿಕ್ಕಾಪಟ್ಟೆ ಮಡಿ, ತಾಸುಗಟ್ಟಲೆ ದೇವರಪೂಜೆ ಮಾಡುತ್ತಿದ್ದ. ಅವನಿಗೆ ಎದುರು ಹೇಳುವವರೇ ಇಲ್ಲ.

ನಮಗೆ ದೂರದ ಸಂಬಂಧಿ. ಒಂಟಿತನ ಬೇಸರ ತರಿಸಿದಾಗಲೆಲ್ಲ ನಮ್ಮ ಮನೆಗೆ ಬರುತ್ತಾನೆ. ಅವನು ಬಂದ ಎಂದರೆ ಎಲ್ಲರಿಗೂ ತಲೆನೋವು. ಆದರೂ ಪಾಪ ವಯಸ್ಸಾಗಿದೆ. ಹಿಂದೆ ಮುಂದೆ ದಿಕ್ಕಿಲ್ಲದವನು ಎಂದು ಉಪಚರಿಸುತ್ತಿದ್ದರು.

ಅದರಲ್ಲೂ ಮಕ್ಕಳಿಗಂತೂ ಬಹಳ ಕಿರಿಕಿರಿ. ಪ್ರತಿಯೊಂದಕ್ಕೂ ಮಾದಜ್ಜನ ಗೊಣಗಾಟವಿರುತ್ತಿತ್ತು. ಮಕ್ಕಳು ಅವನ ಎದುರು ಹಾದು ಹೋದರೂ ಸಾಕು ಮಾದಜ್ಜನ ಬಾಯಿಗೆ ಅವರು ಬಿದ್ದರು ಅಂತಲೇ ಅರ್ಥ. ಮಾದಜ್ಜ ಬಂದ ಅಂದರೆ ಸಾಕು ನಾವು ಮಕ್ಕಳೆಲ್ಲ ಇಲಿ ತರಹ ಮೂಲೆ ಸೇರಿಕೊಂಡುಬಿಡುತ್ತಿದ್ದೆವು. ಅವನ ಬೈಗುಳಗಳೇ ಹಾಗಿರುತ್ತಿದ್ದವು. ನಮ್ಮ ಆತ್ಮವಿಶ್ವಾಸ, ನಗು ಎಲ್ಲ ಅವನ ಬೈಗುಳದ ಎದುರು ಪುಡಿಪುಡಿ ಆಗಿಬಿಡುತ್ತಿದ್ದವು. ಯಾವ ಕ್ಷಣದಲ್ಲಿ ಮಾದಜ್ಜನ ಬೈಗುಳ ಬಂದು ಎರಗುತ್ತೋ ಅಂತ ಟೆನ್ಷನ್‌ಲೇ ದಿನ ಕಳೆಯುತ್ತಿದ್ದೆವು.

ಒಂದು ಶನಿವಾರ ಮನೆಗೆ ಹೋದಾಗ ಮಾದಜ್ಜನೂ ಬಂದಿದ್ದ. ಅವನನ್ನು ನೋಡಿದಾಕ್ಷಣ ನನ್ನ ಅರ್ಧ ಉತ್ಸಾಹ ಬತ್ತಿಹೋಗಿತ್ತು. ನಾನು ಫ್ರಾಕು ಬಿಟ್ಟು ಚೂಡಿದಾರ ಹಾಕಿ ಕಾಲೇಜಿಗೆ ಹೋಗಲು ಪ್ರಾರಂಭಿಸಿದ ಮೇಲೆ ಇದೇ ಮೊದಲ ಬಾರಿಗೆ ಅವನು ನನ್ನನ್ನು ನೋಡಿದ್ದು. ಮೇಲಿನಿಂದ ಕೆಳಗಿನವರೆಗೆ ಒಮ್ಮೆ ನೋಡಿ, "ಈ ಕಾಲದ ಹೆಣ್ಣುಮಕ್ಕಳೋ, ಅವರ ವೇಷವೋ ಎಂದು ಮೂಗು ಮುರಿದ. ಒಮ್ಮೆಲೇ ಸಿಟ್ಟು ಬಂತು. ಆದರೂ ಅಮ್ಮ ಹೇಳುತ್ತಿದ್ದ 'ಮನುಷ್ಯನ ವ್ಯಕ್ತಿತ್ವಕ್ಕೆ ಗೌರವವಿಲ್ಲದಿದ್ದರೂ ಕೊನೇ ಪಕ್ಷ ಅವನ ವಯಸ್ಸಿಗಾದರೂ ಗೌರವ ನೀಡಬೇಕು' ಎನ್ನುವ ಮಾತು ನೆನಪಾಗಿ ಸುಮ್ಮನಾದೆ.

ಅಡುಗೆ ಮನೆಗೆ ಓಡಿಹೋದವಳೇ ಅಮ್ಮನ ಕುತ್ತಿಗೆಗೆ ಜೋತುಬಿದ್ದು ಕಾಲೇಜಿನ ಕಥೆ ಎಲ್ಲ ಹೇಳುತ್ತ ಜೋರಾಗಿ ನಗುತ್ತಿದ್ದೆ. ಮತ್ತೆ ಮಾದಜ್ಜನ ಪ್ರವೇಶವಾಯಿತು. 'ಈಗಿನ ಕಾಲದ ಮಕ್ಕಳಿಗೆ ಹಿರಿಯರು ಅನ್ನುವ ಗೌರವವೇ ಇಲ್ಲ. ನಾವೆಲ್ಲ ಅಪ್ಪ ಅಮ್ಮರಿಂದ ಮಾರು ದೂರ ನಿಂತುಮಾತನಾಡುತ್ತಿದ್ದೆವು' ಎಂದು ಗೊಣಗಿದ. ಇವತ್ತು ಸುಮ್ಮನಿರಲು ಸಾಧ್ಯವೇ ಇಲ್ಲ ಎನ್ನುವಷ್ಟು ಕೋಪ ಬಂತು. ಅಮ್ಮನ ಕಣ್ಸನ್ನೆ ನೋಡಿ ನನ್ನ ಪಾಡಿಗೆ ನಾನು ಹೋದೆ.

ಚಿಕ್ಕಂದಿನಿಂದಲೂ ಅಣ್ಣನ ಅಂಗಿ-ಪ್ಯಾಂಟು ಅಂದರೆ ನನಗಿಷ್ಟ. ಅದನ್ನು ಮನೆಯಲ್ಲಷ್ಟೇ ಹಾಕುತ್ತಿದ್ದೆ. ಅದಕ್ಕೆ ಯಾರ ತಕರಾರೂ ಇರಲಿಲ್ಲ. ಮಾದಜ್ಜ ನೋಡಿದವನೇ 'ನಿನ್ನಲ್ಲಿ ಒಂದೂ ಹುಡುಗಿಯರ ಲಕ್ಷಣವೇ ಇಲ್ಲ ಎಂದು ಜರೆದ. ಮಾದಜ್ಜನ ಮಾತು ನನ್ನಲ್ಲಿದ್ದ ಸ್ವಾಭಿಮಾನ, ಸ್ತ್ರೀತ್ವ ಕೆಣಕಿದಂತಾಯಿತು.

ಎಲ್ಲಿತ್ತೋ ಧೈರ್ಯ ಗೊತ್ತಿಲ್ಲ. 'ಮಾದಜ್ಜ, ಸ್ತ್ರೀತ್ವವನ್ನು ಅಳೆಯುವ ಮಾಪಕ ಯಾವುದು? ನಿನ್ನ ಪ್ರಕಾರ ಯಾವ ಲಕ್ಷಣ ಇದ್ದರೆ ಅವಳು ಸ್ತ್ರೀ ಆಗುತ್ತಾಳೆ? ಎಂದು ಸ್ವಲ್ಪ ಜೋರಾಗಿ ಕೇಳಿದ್ದೆ. ಮಾದಜ್ಜ ನನ್ನ ಅನಿರೀಕ್ಷಿತ ಪ್ರಶ್ನೆಯಿಂದ ಕಂಗಾಲಾಗಿಬಿಟ್ಟಿದ್ದ. ಉತ್ತರಕ್ಕಾಗಿ ಮಾದಜ್ಜ ತಡವರಿಸುತ್ತಿದ್ದಾಗಲೆ ನಾನು ಮುಂದುವರಿಸಿದೆ.

'ತಲೆ ಬಗ್ಗಿಸಿಕೊಂಡು, ಗಟ್ಟಿಯಾಗಿ ಮಾತನಾಡದೆ, ಜೋರಾಗಿ ನಗದೆ ಇದ್ದುಬಿಡುವುದೇ ಹುಡುಗಿಯರ ಲಕ್ಷಣವಾ? ಒಬ್ಬಳು ಹೂವು ಮುಡಿದುಕೊಂಡು, ದೊಡ್ಡ ಕುಂಕುಮ ಇಟ್ಟು ಕೈತುಂಬ ಬಳೆ ತೊಟ್ಟುಕೊಂಡು ಮನದ ತುಂಬ ಹುಳುಕು ತುಂಬಿಕೊಂಡರೆ ಅವಳು ನನ್ನ ಪ್ರಕಾರ ಸ್ತ್ರೀಯೇ ಅಲ್ಲ! ಸಹನೆ, ಆದರಾತಿಥ್ಯ, ಬೇರೆಯವರ ಕಷ್ಟಕ್ಕೆ ಸ್ಪಂದಿಸುವುದು, ಎಲ್ಲರನ್ನೂ ಸಮಾನವಾಗಿ ನೋಡುವುದು ಇವೆಲ್ಲ ಸ್ತ್ರೀ ಆದವಳಲ್ಲಿ ಇರಬೇಕಾದದ್ದು. ಅದು ನನ್ನಲ್ಲಿದೆ!! ಎಂದು ಆವೇಶದಿಂದ ಕೂಗಿದ್ದೆ.

ಮಾದಜ್ಜ ಮರು ಮಾತಾಡಲಿಲ್ಲ. ಅಪ್ಪ ಅಮ್ಮ ನನ್ನ ಕೂಗಾಟ ಕೇಳಿ ಓಡಿಬಂದಿದ್ದರು. ಅಮ್ಮ ನನಗೆ ಬೈದು ಮಾದಜ್ಜನ ಕ್ಷಮೆ ಕೇಳಲು ಹೇಳಿದಳು. ನಾನು ಒಲ್ಲದ ಮನಸ್ಸಿನಿಂದ ತಪ್ಪಾಯ್ತು ಅಂತಲೂ ಹೇಳಿದ್ದೆ. ಇವತ್ತು ಮಾದಜ್ಜ ಬಂದಿದ್ದ. ಸರಿಯಾಗೇ ಮಾತನಾಡಿಸಿದೆ. ಆದರೆ ಮುಖ ತಿರುಗಿಸಿಕೊಂಡ. ಅವನನ್ನು ಬದಲಾಯಿಸುವ ಅಗತ್ಯ ನನಗಿಲ್ಲ. ಅದು ಸಾಧ್ಯವೂ ಇಲ್ಲ. ವಯಸ್ಸು ಹೆಚ್ಚಿದರೆ, ದೊಡ್ಡ ದೊಡ್ಡ ಗ್ರಂಥ ಪಠಿಸಿದ ಮಾತ್ರಕ್ಕೆ ಮನಸ್ಸು ಬೆಳೆಯದು.

3 comments:

Manu said...

ತುಂಬಾ ಚೆನ್ನಾಗಿ ಬರೆದಿದ್ದೀರಾ .!

Manu said...

ತುಂಬಾ ಚೆನ್ನಾಗಿ ಬರೆದಿದ್ದೀರಾ . ಈ ವಿಷಯದಲ್ಲಿ ಒಬ್ಬರ ಧೋರಣೆಯನ್ನು ಇನ್ನೊಬರು ಸಹಿಸುವ ಪ್ರಶ್ನೆ ಎದುರಾಗುತ್ತದೆ. ತಲೆಮಾರುಗಳ ಅಂತರವೂ ಇಲ್ಲಿ ಗಮನೀಯ.
ಬಹುಶಃ ಕೆಲ ವರ್ಷಗಳ ಬಳಿಕ "ನಾನು ಮಿನಿ ತೊಟ್ಟರೆ ಸುಮಜ್ಜಿಗೇನು ತೊಂದರೆ ?" ಎಂಬ ಶೀರ್ಷಿಕೆಯಡಿ ಒಂದು ಬ್ಲಾಗ್ ಬಂದರೆ ಅಚ್ಚರಿಯಿಲ್ಲ.

ಅನಂತ್ ರಾಜ್ said...

ಸು೦ದರ ನಿರೂಪಣೆ ಷೋಡಶಿ ಅವರೆ..ಧನ್ಯವಾದಗಳು

ಅನ೦ತ್