Saturday, October 2, 2010

ಸ್ವಾತಂತ್ರ್ಯ ಎಂದರೆ..?

ಪ್ರೈಮರಿ ಸ್ಕೂಲಿಗೆ ಹೋಗುವಾಗ ಹೋಮ್‌ವರ್ಕ್ ಭಾರದಿಂದ ಬಸವಳಿದು ಹೋಗುತ್ತಿದ್ದೆ. ಬೆಳಗಿನಿಂದ ಸಂಜೆಯವರೆಗೆ ನಾಲ್ಕು ಗೋಡೆಯ ನಡುವೆ ಕೂರಿಸಿಕೊಂಡು, ಹೊಡೆದು, ಬಡಿದು ತಲೆಗೆ ತುಂಬುವುದಲ್ಲದೇ ಕೈ ನೋವು ಬರುವ? ಬರೆಯಲು ಬೇರೆ ಕೊಡುತ್ತಿದ್ದರು. ಬರೆಯದಿದ್ದರೆ ಅದಕ್ಕೆ ಶಿಕ್ಷೆ ಬೇರೆ. ಯಾವಾಗ ಈ ಹಿಂಸೆ ಮುಗಿಯುತ್ತದೋ ಅನಿಸುತ್ತಿತ್ತು.

ಯಾವಾಗಲೂ ಅಪ್ಪನನ್ನು 'ಯಾವಾಗ ಈ ಶಾಲೆ ಮುಗಿಯುತ್ತದೆ?' ಎಂದು ಕೇಳುತ್ತಿದ್ದೆ. ಆಗ ಅಪ್ಪ "10ನೇ ಕ್ಲಾಸ್ ತನಕ ಮಾತ್ರ. ಕಾಲೇಜಿನಲ್ಲಿ ಈ ಎಲ್ಲ ಗೋಳು ಇರುವುದಿಲ್ಲ. ಮೊದಲು ಚೆನ್ನಾಗಿ ಓದಿ ಎಸ್‌ಎಸ್‌ಎಲ್‌ಸಿ ಓದಿ ಮುಗಿಸು ಎಂದು
ಸಮಾಧಾನಪಡಿಸುತ್ತಿದ್ದರು.

ನಿಜ, ಈಗ ನನಗೆ ಹೋಮ್‌ವರ್ಕ್ ಮಾಡದಿದ್ದರೆ ಯಾರೂ ಬೈಯುವವರಿಲ್ಲ, ಹೊಡೆಯುವವರಿಲ್ಲ. ನೋಟ್ಸ್ ಕೊಡುತ್ತಾರೆ, ಹೋಮ್‌ವರ್ಕ್ ಕೂಡ ಕೊಡುತ್ತಾರೆ. ಬೇಕಾದವರು ಮಾಡಬಹುದು. ಇಲ್ಲದವರು ಇಲ್ಲ. ಮಾಡದಿದ್ದರೆ ಯಾಕೆ ಮಾಡಿಲ್ಲ

ಎಂದೂ ಕೇಳುವುದಿಲ್ಲ. ಫುಲ್ ಫ್ರೀ. ಈ ಸ್ವಾತಂತ್ರ್ಯವನ್ನು ಕಾಲೇಜಿಗೆ ಸೇರಿದ ಆರು ತಿಂಗಳು ಅನುಭವಿಸಿದೆ. ಈಗ ಅದರ ಪರಿಣಾಮ ಕಾಣಿಸುತ್ತಿದೆ. ಪ್ರಿಲ್ಮನರಿ ಪರೀಕ್ಷೆಗಳಲ್ಲಿ ಜಸ್ಟ್ ಪಾಸ್! ಇಷ್ಟು ಕಡಿಮೆ ಮಾರ್ಕ್ಸ್ ಯಾವತ್ತೂ ತೆಗೆದುಕೊಂಡವಳಲ್ಲ. ಅಪ್ಪ-ಅಮ್ಮನಿಗೆ ಏನುಹೇಳಲಿ? ಈಗ ಬಹಳ ಪಶ್ಚಾತ್ತಾಪವಾಗುತ್ತಿದೆ.

ಏನೇನು ಮಾಡಿದೆ ಈ ಆರು ತಿಂಗಳಲ್ಲಿ? ಫ್ರೆಂಡ್ಸ್,ಫಿಲ್ಮ್, ಹೊಟೇಲ್, ಪಿಕ್‌ನಿಕ್...ಇಷ್ಟೂ ನೆನಪಿಗೆ ಬರುತ್ತಿರುವುದು. ಸ್ಟಡಿಗೆ ಅಂತ ಕುಳಿತಿರುವುದು.. ಊಹುಂ, ನೆನಪಿಗೇ ಬರ್ತಾ ಇಲ್ಲ. 30 ಫಿಲ್ಮ್, ಎಂಟು ಹತ್ತು ಟ್ರಿಪ್, ಹೊಟೇಲ್‌ಗಳಿಗೆ ತಿರುಗಿದ್ದಂತೂ ಲೆಕ್ಕವೇ ಇಡಲು ಸಾಧ್ಯವಿಲ್ಲ. ವಾರಕ್ಕೆ ಒಂದು ಸಿನಿಮಾವನ್ನಾದರೂ ನೋಡಲೇ ಬೇಕು. ಒಳ್ಳೆಯದು ಬಂದರೆ ಎರಡು, ಮೂರು.. ಹೀಗೆ.

ಬೇಗನೆ ಕ್ಲಾಸು ಮುಗಿದರೆ ಸರಿ, ಇಲ್ಲದಿದ್ದರೆ ಕ್ಲಾಸ್ ಬಂಕ್. ನನ್ನ ಫ್ರೆಂಡ್ಸ್ ಮನೆಗಳ ಹತ್ತಿರ ಇರುವ ಯಾವ ಒಳ್ಳೆ ಸ್ಪಾಟ್‌ನ್ನೂ ಬಿಟ್ಟಿಲ್ಲ. ಹೊಟೇಲ್‌ಗಳಿಗೆ ಎಷ್ಟು ದುಡ್ಡು ಸುರಿದಿದ್ದೇವೋ.. ಅಪ್ಪ-ಅಮ್ಮ ಅಷ್ಟು ಓದು ಇಷ್ಟು ಓದು ಅಂತ ಯಾವತ್ತೂ ಒತ್ತಾಯ ಮಾಡಿದವರಲ್ಲ. ಈಗ ಕಡಿಮೆ ಮಾರ್ಕ್ಸ್ ಬಂದಿದೆ ಎಂದು ಬೈಯುವವರೂ ಅಲ್ಲ. ಆದರೂ.. ಏನೋ ಒಂಥರಾ.. ನನ್ನ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎನ್ನುವ ಗಿಲ್ಟ್.

ಆ ಟೈಮ್‌ಗೆ ಎಂಜಾಯ್ ಮಾಡಿದ ಖುಷಿ ಎಲ್ಲ ರಿಸಲ್ಟ್ ನೋಡಿದಾಕ್ಷಣ ಬತ್ತಿ ಹೋಗಿದೆ. ಹೀಗಾಗುತ್ತದೆ ಎಂದು ಗೊತ್ತಿದ್ದರೆ ಖಂಡಿತ ಸ್ಟಡಿಸನ್ನೆಲ್ಲ ಇಷ್ಟು ನೆಗ್ಲೆಟ್ ಮಾಡುತ್ತಿರಲಿಲ್ಲ... ಸ್ವಾತಂತ್ರ್ಯ ಎಂದರೆ... ಹೌದು, ಇದೇನೂ ಕೊನೆಯ ಪರೀಕ್ಷೆಯಲ್ಲ. ನಾನು ಮತ್ತೆ ಚೆನ್ನಾಗಿ ಓದಿ ಒಳ್ಳೆಯ ಮಾರ್ಕ್ಸ್ ತೆಗೆದುಕೊಳ್ಳಬಹುದು. ಆದರೆ ನನಗೆ ಕಾಡುತ್ತಿರುವ ಪ್ರಶ್ನೆ ಎಂದರೆ, ಆಗ ಆಶಿಸುತ್ತಿದ್ದ ಸ್ಟಡೀಸ್‌ನಿಂದ ಮುಕ್ತಿಈಗ ದೊರಕಿದೆ.

ಆದರೆ ಅದು ಏಕೆ ಖುಷಿ ಕೊಡುತ್ತಿಲ್ಲ? ಕೊಟ್ಟರೂ ಯಾಕೆ ಕ್ಷಣಿಕ? ಹೇಳುವವರು ಕೇಳುವವರು ಇಲ್ಲ. ಯಾವುದಕ್ಕೂ ಒತ್ತಾಯ ಮಾಡುವವರು ಇಲ್ಲ. ಆದರೂ ಈ ಸ್ವಾತಂತ್ರ್ಯ ಕೊಡುತ್ತಿಲ್ಲ.ಯಾವುದೋ ಒಂದು ಮಿತಿ, ಅಂಕೆ ಬೇಕು ಅನಿಸುತ್ತಿದೆ. ಆಗ ಬೇಸರದಿಂದ ಹೋಮ್‌ವರ್ಕ್ ಮಾಡಿದರೂ ಏನೋ ಒಂಥರ ಸಮಾಧಾನವಿರುತ್ತಿತ್ತು. ಏನೋ ಒಂದು ಮಾಡಿ ಮುಗಿಸಿದ ಖುಷಿ ಇರುತ್ತಿತ್ತು. ಆದರೆನಾನು ಸ್ವಾತಂತ್ರ್ಯವನ್ನು ತಪ್ಪಾಗಿ ಗ್ರಹಿಸಿಕೊಂಡಿದ್ದೆ.

ಇನ್ನು ಮುಂದೆ ನನಗೆ ನಾನೇ ಒಂದು ಮಿತಿಯನ್ನು ಹಾಕಿಕೊಳ್ಳುತ್ತೇನೆ. ಚೆನ್ನಾಗಿ ಸ್ಟಡಿ ಮಾಡುತ್ತೇನೆ. ಅನಗತ್ಯವಾಗಿ ಸುತ್ತುವುದಿಲ್ಲ. ಈ ಸಾರಿ ಮನೆಗೆ ಹೋದಾಗ ಅಪ್ಪನ ಎದುರು ತಪ್ಪೊಪ್ಪಿಗೆ ಮಾಡಿಕೊಳ್ಳುತ್ತೇನೆ. ಆಗಲಾದರೂ ಈ ಗಿಲ್ಟ್‌ನಿಂದ ಮುಕ್ತಿ ದೊರೆಯಬಹುದು.

1 comment:

Gopalakrishna said...

ಮಲೆನಾಡ ಕುವರಿ..........
ಹೌದು ನೀವು ಹೇಳಿದ್ದು ಸರಿ, ಬಾಲ್ಯದಲ್ಲಿ ಆ ಹೋಮ್ ವರ್ಕ್ ಅಂದ್ರೆ ಏನೋ ಒಂಥರಾ ಅಸಡ್ಡೆಯಿತ್ತು. ಮಾಷ್ಟ್ರು ಕೊಟ್ಟ ಎಲ್ಲಾ ಹೋಮ್ ವರ್ಕ್ಸ್ ಮುಗಿಸಿದ್ರು ಮನದ ಮೂಲೆಯಲ್ಲಿ ಯಾವಾಗ ದೊಡ್ಡೋನು ಆಗ್ತೇನೆ...ಇದರಿಂದ ಯಾವಾಗ ಮುಕ್ತಿ ಸಿಗುತ್ತೆ ಅಂತ ಕಾಯ್ತಾಯಿದ್ದೆ. ಆದ್ರೆ ಇಂದು ಅನಿಸುತ್ತಿದೆ. ಆ ಬಾಲ್ಯ, ಆ ಸ್ಕೂಲ್, ಆ ಹೋಮ್ ವರ್ಕೇ ಚೆಂದ ಇತ್ತು. ಯಾಕಾದ್ರೂ ಬೆಳೆದು ಬಿಟ್ಟ್ನೋ ಅನಿಸ್ತುತಿದೆ ಕುವರಿ, ಅಂದು ಸ್ವಾತಂತ್ರ್ಯಕ್ಕಾಗಿ ಕಾಯುತ್ತಿದ್ದೆ. ಇಂದು ಸಿಕ್ಕಿರುವ ಸ್ವಾತಂತ್ರ್ಯದಿಂದ ಮುಕ್ತಿ ಸಿಗಬಾರದ ಅಂತ ಅನಿಸುತ್ತಿದೆ. ಏನೇ ಆಗಲಿ ಷೋಡಶಿ ಆ ದಿನಗಳೇ ಚೆಂದ ಇತ್ತು.