Saturday, November 20, 2010

ಇವತ್ತು ಒಂದು ಹಿಂದಿ ವಾಕ್ಯ ಓದಿದೆ.

'ಅಗರ್ ತುಮ್ಹೆ ಪ್ಯಾರ್ ಕರ್‌ನೆ ಕೇ ಲಿಯೆ ವಕ್ತ್ ಕಮ್ ಪಡತೆ ಹೈ ತೊ, ಉಸೆ ನಫರತ್ ಕರನೆ ಮೆ ಕ್ಯೂ ಬರ್‌ಬಾದ್ ಕರ್‌ತೆ ಹೊ?' (ನಿನಗೆ ಪ್ರೀತಿ ಮಾಡಲು ಸಮಯವೇ ಇಲ್ಲವೆಂದಾದರೆ, ಅದನ್ನು ದ್ವೇಷ ಮಾಡಲು ಯಾಕೆ ಹಾಳು ಮಾಡುತ್ತೀಯಾ?) ಓದಿದಾಗಲಿಂದ ಯಾಕೋ ಬಹಳ ನನ್ನನ್ನು ಕಾಡುತ್ತಿದೆ..

ಬಹುಶಃ ಮುಂದೊಂದು ದಿನ ಈ ಡೈರಿಯನ್ನು ತೆರೆದು ಓದಿದರೆ ಮನುಷ್ಯರ ವಿರುದ್ಧ ದೂರಿನ ಒಂದು ದೊಡ್ಡ ಪಟ್ಟಿಯಂತೆ ಇರುತ್ತದೆಯೆನೋ! ಅಷ್ಟು ವಕ್ರಗಳನ್ನು ಕಾಣುತ್ತಿದ್ದೇನೆ ಈ ಮಾನವರಲ್ಲಿ. ಮನದಲ್ಲಿ ದಯೆ, ಪ್ರೀತಿ, ಮಮತೆಗಳಂತಹ ಉನ್ನತ ಗುಣಗಳನ್ನು ಸೃಷ್ಟಿಸಿದ ದೇವರು ಈ ಅಸೂಯೆ, ದ್ವೇಷ, ಹಿಂಸೆ, ಸ್ವಾರ್ಥಗಳನ್ನು ಏಕೆ ಇರಿಸಿದನೋ...

ದ್ವೇಷ ಅಸೂಯೆಗಳೂ ಒಮ್ಮೊಮ್ಮೆ ಒಳ್ಳೆಯದೇನೋ, ಆದರೆ ಇವುಗಳೇ ಉತ್ತಮ ಗುಣಗಳನ್ನು ನುಂಗಿ ಹಾಕುತ್ತವಲ್ಲ? ಇದು ಯಾಕೆ? ಪ್ರೀತಿ ಮಾಡಲು ಯಾರಿಗೂ ಸಮಯವಿಲ್ಲ. ಅದೇ ಏನಾದ್ರೂ ಜಗಳ, ದ್ವೇಷ ಮಾಡುವುದಿದ್ದರೆ ಎಲ್ಲರೂ ಒಂದಾಗಿಬಿಡುತ್ತಾರೆ! ಏನು ಕೂಗಾಟ, ಏನು ಪ್ರತಿಭಟನೆ...

ಇತಿಹಾಸ, ಮತ, ತತ್ವ, ಧರ್ಮ ಎಲ್ಲದರಲ್ಲೂ ಗೊಂದಲ. ದೇವರಿದ್ದಾನೆಯೋ ಇಲ್ಲವೋ, ನಂಬಿಕೆ ದೊಡ್ಡದೋ-ವಿಜ್ಞಾನವೋ, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇರಬೇಕೋ-ರಾಮ ಮಂದಿರವಿರಬೇಕೋ,ಬಸವಣ್ಣ ಯಾವ ಜಾತಿಯವನು, ಟಿಪ್ಪು ದೇಶಪ್ರೇಮಿಯೋ-ದ್ರೋಹಿಯೋ, ಮೊಘಲರು ಹಿಂದೂ ದೇವಾಲಯಗಳನ್ನು ಒಡೆದರೋ- ಇಲ್ಲವೊ..

ಯಾವನೋ ಒಬ್ಬ ಬುದ್ಧಿಜೀವಿ ಅನ್ನಿಸಿ(ಅಂದು)ಕೊಂಡವನು ತನ್ನ ವಿಚಾರ ಮಂಡಿಸುತ್ತಾನೆ. ಅವನದೊಂದು ಪಂಗಡ. ಅವನ ವಿರುದ್ಧ ವಿಚಾರದವನದೊಂದು ಪಂಗಡ. ಎಲ್ಲರಿಗೂ ತಮ್ಮ ವಾದವೇ ಸರಿ, ಕೊನೆ. ಅವರವರ ದೃಷ್ಟಿಯಲ್ಲಿ ಅವರವರ ವಿಚಾರ ಸರಿ. ಆದರೆ ಅದನ್ನು ಎಲ್ಲರೂ ಒಪ್ಪಲೇಬೇಕು ಎನ್ನುವ ಮನೋಭಾವ ಯಾಕೆ? ನಾನ್‌ಸೆನ್ಸ್!! ಯಾರ ಉದ್ಧಾರಕ್ಕಾಗಿ ಇವೆಲ್ಲ? ಈ ವಾದಗಳು ಹೊಟ್ಟೆತುಂಬಿಸುತ್ತವಾ? ಒಂದು ವೇಳೆ ದೇವರಿದ್ದಾನೆ ಎಂದು ಎಲ್ಲರೂ ಒಪ್ಪಿಕೊಂಡರೆ ದೇವರು ಬಂದು ಈ ಬಡತನ-ಕಷ್ಟಗಳನ್ನು ದೂರ ಮಾಡಿಬಿಡುತ್ತಾನಾ? ನಂಬಿಕೆಯೇ ದೊಡ್ಡದೆಂದು ಸಾಬೀತಾದರೆ ವಿಜ್ಞಾನದ ಬೆಳವಣಿಗೆ ನಿಂತು ಬಿಡುತ್ತದೆಯೆ?

ಬಸವಣ್ಣ ಕೆಳ ವರ್ಗದವನು ಎನ್ನುವುದೇ ಸತ್ಯವಾದರೆ ಅವನ ವಿಚಾರಗಳೂ ಕೀಳಾಗಿಬಿಡುತ್ತದೆಯೆ? ಮೊಘಲರು ಹಿಂದೂ ದೇವಾಲಯಗಳನ್ನು ಕೆಡವಿದ್ದುಹೌದಾದರೆ ಮೊಘಲರು ಮತ್ತೆ ಬಂದು ಆ ದೇವಾಲಯಗಳನ್ನು ಕಟ್ಟಿಕೊಡಲು ಸಾಧ್ಯವೇ? ಅಯೋಧ್ಯೆಯಲ್ಲಿ ಮಸೀದಿ ಮಂದಿರ ಎರಡನ್ನೂ ಕಟ್ಟಲು ಸಾಧ್ಯವಿಲ್ಲವೆ. ಬಸವಣ್ಣನ ಜಾತಿಯಾವುದಾದರೇನು ಅವರ ಉನ್ನತ ವಿಚಾರಗಳನ್ನು ಜಾತಿ ಮಂಕು ಮಾಡಲು ಸಾಧ್ಯವಿಲ್ಲ. ಯಾರು ಕೆಡವಿದರು ಯಾರು ಕಟ್ಟಿದರು ಎಂದು ಚರ್ಚಿಸುವುದಕ್ಕಿಂತ ನಮ್ಮ ಶ್ರೇಷ್ಠ ಸಂಸ್ಕೃತಿ ವಿಚಾರಗಳನ್ನು ಉಳಿಸಿ ಬೆಳೆಸಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು.

ಯಾರೂ ದ್ವೇಷವನ್ನು ಬಯಸುವುದಿಲ್ಲ. ಎಲ್ಲರಿಗೂ ಪ್ರೀತಿ, ಶಾಂತಿ ಬೇಕು. ಆದರೆ ಕೇವಲ ’ಬೇಕು ಎಂದರೆ ಆಯಿತೆ, ತನ್ನಿಂದಲೂ ಅದನ್ನು ಬೇರೆಯವರು ಬಯಸುತ್ತಾರೆಎನ್ನುವುದನ್ನು ಮರೆತುಬಿಡುತ್ತಾರೆ... ಹೌದು, ನಾನು ಇನ್ನೂ ಪ್ರಪಂಚವನ್ನು ಸರಿಯಾಗಿ ನೋಡಿಲ್ಲ. ಜೀವನಕ್ಕೆ ನೇರ ಮುಖಾಮುಖಿಯಾಗಿಲ್ಲ. ಚಿಂತನೆ ನಡೆಸುವಷ್ಟು ಅನುಭವಿಯೂ ನಾನಲ್ಲ. ಪರಿಸ್ಥಿತಿಗಳು ನನ್ನನ್ನು ಬದಲಿಸಬಹುದು. ಆದರೆ ಈ ಕ್ಷಣಕ್ಕೆ ನನಗೆ ಇದೇ ಸತ್ಯ, ಈ ವಿಚಾರವೇ ಸರಿ. ಖಂಡಿತ ಈ ವಿಚಾರಗಳನ್ನು ಯಾರೂ ಒಪ್ಪಬೇಕಾಗಿಲ್ಲ.

1 comment:

ರಂಗನಾಥ said...

ಚೆನ್ನಾಗಿದೆ ನಿಮ್ಮ ಲೇಖನ. ಆದರೆ ಶಾಂತಿ ಅನ್ನುವುದು ಕೇವಲ ಒಂದು ಧರ್ಮಕ್ಕೆ ಸೀಮಿತ ವಾಗಬಾರದು. ದುರಾದೃಷ್ಟವೆಂದರೆ ನಮ್ಮ ದೇಶದಲ್ಲಿ ಪ್ರತಿ ವಿಷಯಕ್ಕು ರಾಜಕೀಯ ಲೇಪ ವಿರುತ್ತದೆ.
Ranganath
http://ranganatha-ps.blogspot.com/