Tuesday, March 11, 2008

ಹೇಗೆ ಮರೆಯಲಿ ಗೆಳತಿ... ಆ ನಿನ್ನ ಬೆಚ್ಚಗಿನ ಪ್ರೀತಿ

ಕುಮ್ಮಿ-ನನ್ನ ನಡುವೆ ಹೊಟ್ಟೆಕಿಚ್ಚು, ಅಹಂ ಗಳಿಂದ ಬೇಕಾದಷ್ಟು ಸಾರೆ ಜಗಳವಾಗಿದೆ. ಆದರೆ 'ಗೆಳತಿ' ಎಂಬ ಬಾಂಧವ್ಯ ಆ ಸಂಬಂಧ ಕಡಿದು ಹೋಗದಂತೆ ಹಾಗೆ ಇಟ್ಟಿವೆ. ಈಗೆಲ್ಲ ಜಗಳವಾದರೆ ಯಾವ ಹೆದರಿಕೆಯೂ ಇಲ್ಲ. ಒಬ್ಬರಿಗೊಬ್ಬರು ಬಿಟ್ಟಿರುವುದು ಸಾಧ್ಯವಿಲ್ಲ ಎಂಬುದು ಇಬ್ಬರಿಗೂ ಚೆನ್ನಾಗಿ ಗೊತ್ತಿದೆ.
ಅದೊಂದು ಮಳೆಗಾಲದಲ್ಲಿ ಜ್ವರದಿಂದ ಶಾಲೆಗೆ ಹೋಗಲಾಗಲಿಲ್ಲ. 'ಸುಮಿ ನೋಟ್ಸ್' ಎನ್ನುತ್ತಾ ಆ ಜಡಿ ಮಳೆಯನ್ನು ಲೆಕ್ಕಿಸದೆ ಬಂದಿದ ಕುಮ್ಮಿ... ನನಗೆ ತಲೆಗೇ ಹತ್ತದ ಗಣಿತವನ್ನು ತಾಸುಗಟ್ಟಲೆ ಕುಳಿತು ಕಲಿಸಿದ ಕುಮ್ಮಿ... ಹಾಡಿನ ಕಾಂಪಿಟೇಷನ್ ನಲ್ಲಿ ನನಗೆ ಎರಡನೆ ಸ್ಥಾನ. ಕುಮ್ಮಿಗೆ ಮೊದಲ ಸ್ಥಾನ ಸಿಕ್ಕಾಗ "ಅಯ್ಯೋ, ನೀನೆ ಚೆನ್ನಾಗಿ ಹಾಡಿದ್ದೆ. ನನಗೆ ಯಾಕೆ ಕೊಟ್ಟರೋ" ಎಂದು ಪ್ರಾಮಾಣಿಕವಾಗಿ ಪರಿತಪಿಸಿದ ಕುಮ್ಮಿ...

ಕ್ಲಾಸಿನಲ್ಲಿ ತಿಂಗಳ ನೋವು ಶುರುವಾದಾಗ ನನ್ನನ್ನು ಮಗುವನ್ನು ಆರೈಕೆ ಮಾಡಿದ ಹಾಗೆ ಆರೈಕೆ ಮಾಡಿದ ಕುಮ್ಮಿ... ಹೇಗೆ ಮರೆಯಲು ಸಾಧ್ಯ ಅವಳನ್ನು? ಅವಳ ಆ ಪ್ರೀತಿಯನ್ನು? ಹುಡುಗಿ-ಹುಡುಗಿಯರ ನಡುವೆ ಸಾಮಾನ್ಯವಾಗಿರುವ ಹೊಟ್ಟೆಕಿಚ್ಚನ್ನು ಬದಿಗಿರಿಸಿ ಗೆಳೆತನ ಬೆಳೆಸಿದರೆ ಒಂದು ಸುಂದರವಾದ ಸಂಬಂಧ ಚಿಗುರುತ್ತದೆ.

'ಹೆಣ್ಣು ಮಕ್ಕಳಿಗೆ ಮದುವೆಯ ಮೊದಲು ಈ ಸ್ನೇಹ ಗೆಳೆತನ. ನಂತರ ಗಂಡನೆ ಎಲ್ಲಾ ಎಂದು ಕುಮ್ಮಿಯ ಅಜ್ಜಿ ನಾನು-ಕುಮ್ಮಿ ಕುಳಿತು ಮಾತಾಡುತ್ತಿದ್ದಾಗಲೆಲ್ಲ ಹೇಳುತ್ತಿರುತ್ತಾಳೆ. ಗಂಡ ಎಲ್ಲದೂ ಆಗಬಹುದು. ಆದರೆ ಗೆಳತಿ ಮಾತ್ರ ಆಗಲು ಅಸಾಧ್ಯ. ಗೆಳತಿಯೊಂದಿಗೆ ವಿಚಾರಗಳನ್ನೆಲ್ಲ ಅವನ ಜೊತೆಯೂ ಹಂಚಿಕೊಳ್ಳಲಾಗದಷ್ಟು ಸೂಕ್ಷ್ಮ ಎನ್ನುತ್ತಾಳೆ ಶೀಲಕ್ಕ. ಇರಬಹುದೇನೋ...

ಪುರುಷರು ಶ್ರೇಷ್ಠ ಎನ್ನುವ ನಮ್ಮ ಸಮಾಜದಲ್ಲಿ ಬೆಳೆದ ಹುಡುಗರು ಹುಡುಗಿಯರ ನೋವನ್ನು ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡಾರು? ಸಾಮಾನ್ಯವಾಗಿ ಹುಡುಗಿಯರದ್ದೆಲ್ಲ 'ನ್ಯಾರೋ ಮೈಂಡ್' ಎಂದು ತಲೆಯಲ್ಲಿ ತುಂಬಿಕೊಂಡಿರುವ ಕಾಸ್ಲಿನ 'ಸಂಪ್ರದಾಯವಾದಿ' ಹುಡುಗರೆಲ್ಲ ಮುಂದೆ ತಮ್ಮ ಹೆಂಡತಿಯರಿಗೆ ಎಷ್ಟು ಒಳ್ಳೆಯ ಗಂಡರಾದಾರು?

ಹುಡುಗರೂ ಒಳ್ಳೆಯ ಗೆಳೆಯರೇ, ಹುಡುಗಿಯರ ಸಂಕಟಗಳನ್ನು ಅರ್ಥ ಮಾಡಿಕೊಳ್ಳಬಲ್ಲವರೇ. ಆದರೆ ಒಬ್ಬ ಹುಡುಗಿ ಮತ್ತೊಬ್ಬ ಹುಡುಗಿಯನ್ನು ಅರ್ಥ ಮಾಡಿಕೊಂಡಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲವರಾರರು. ಹುಡುಗಿಯ ಸಂಕಟ ಅರ್ಥ ಮಾಡಿಕೊಳ್ಳಬಲ್ಲವರಾದರೂ ಅದಕ್ಕೆ ಸಂಪೂರ್ಣವಾಗಿ ಸ್ಪಂದಿಸಲಾರರು. ಕುಮ್ಮಿಗೆ ನನ್ನ ಒಂದು ಕಣ್ಣೋಟ ಅರ್ಥವಾಯಿತೆಂದು ಪಕ್ಕಿಗೆ ಅದು ಅರ್ಥವಾದೀತೆ?

ಇವತ್ತು ನನ್ನ ಅಚ್ಚುಮೆಚ್ಚಿನ ಲೇಖಕ ಹುಡುಗರ ನಡುವಿನ ಗೆಳೆತನದ ಬಗ್ಗೆ ಹೇಳುತ್ತ "ಹುಡುಗಿಯರ ನಡುವೆ ಹುಡುಗರಲ್ಲಿರುವಷ್ಟು ಗಾಢ ಗೆಳೆತನ ಬೆಳೆಯಲಾರದು. ಏಕೆಂದರೆ ಅವರಿಗೆ ಅವರದೇ ಆದ ಕಟ್ಟುಪಾಡುಗಳಿರುತ್ತವೆ. ಹುಡುಗರಿಗೆ ಇವುಗಳ ಬಂಧನವಿಲ್ಲ. ಕೆರೆ ಕಟ್ಟೆಗಳ ಮೇಲೆ ಕುಳಿತು ಮಾತನಾಡುತ್ತ ಬೆಳಗು ಹಾಯಿಸುತ್ತಾರೆ. ಗೆಳೆಯರೆಲ್ಲ ಸೇರಿ ಎಲ್ಲೋ ಒಂದು ಕಡೆ ಪಾರ್ಟಿ ಮಾಡುತ್ತಾರೆ. ಇವೆಲ್ಲ ಗೆಳೆಯರ ಸಂಬಂಧ ಗಾಢವನ್ನಾಗಿಸುತ್ತದೆ. ಆದರೆ ಹುಡುಗಿಯರಿಗೆ ಇಂತಹ ಅವಕಾಶಗಳೇ ಇಲ್ಲ ಎಂದು ಬರೆದಿದ್ದನ್ನು ಓದಿದೆ.

ಊಹುಂ. ನನ್ನ ಅಚ್ಚುಮೆಚ್ಚಿನ ಲೇಖಕ ಎಷ್ಟೆಂದರೂ ಲೇಖಕ; ಲೇಖಕಿಯಲ್ಲ. ಖಂಡಿತ ಅವನಿಗೆ ನಮ್ಮ ಹುಡುಗಿಯರಲ್ಲಿ ಎಂಥ ಗಾಢ ಗೆಳೆತನವಿರುತ್ತದೆ ಎನ್ನುವುದು ಅರ್ಥವಾಗಿರಲಾರದು. ಹೌದು. ನಮಗೆ ರಾತ್ರಿಯಿಡೀ ಕೆರೆ ಕುಂಟೆಯ ಮೇಲೆ ಕುಳಿತು ಬೆಳಗು ಹಾಯಿಸಲು ಅವಕಾಶವಿಲ್ಲದಿರಬಹುದು.

ಬಾರಿಗೆ ಗೆಳೆಯರ ಜೊತೆ ಹೋಗಿ ಹೊಟ್ಟೆ ತುಂಬ ಕುಡಿದು ಮಜ ಮಾಡಲು ಆಗದಿರಬಹುದು. ಆದರೆ ರಾತ್ರಿ ಅಕ್ಕಪಕ್ಕ ಹಾಸಿಗೆ ಹಾಸಿಕೊಂಡು ಪಿಸುಮಾತಿಗೆ ತೊಡಗಿದರೆ ಕಾಲದ ಮಿತಿ ನಮಗಿಲ್ಲ. ಸಂಜೆ ಸುಮ್ಮನೆ ನಾವು ಕೈಹಿಡಿದುಕೊಂಡು ಮನೆಯ ಹಿಂದಿನ ಬೆಟ್ಟ ಹತ್ತಿ ತುತ್ತತುದಿಯ ಕಲ್ಲುಬಂಡೆಯ ಮೇಲೆ ಕುಳಿತು ಮೌನವಾಗಿ ಸೂರ್ಯಾಸ್ತ ನೋಡುವ ನಮ್ಮ ಸುಖ ಯಾವ ಲೇಖಕನ ಪೆನ್ನಿಗೂ ನಿಲುಕಲಾರದು.

"ಅಯ್ಯೋ... ಹೀಗೇಕೆ ಆಗೋಯ್ತು" ಎಂದು ತಾನೂ ಕಣ್ಣೀರು ಸುರಿಸಿ, "ಆಗಿದ್ದು ಆಯ್ತು. ಹೀಗೆ ಮಾಡೋಣ" ಎನ್ನುತ್ತಾ ಗೆಳತಿಯ ಸಮಸ್ಯೆಯನ್ನು ಮತ್ತೊಬ್ಬ ಗೆಳತಿ ಹಗುರ ಮಾಡುವಂತೆ ಬಹುಶಃ ಮತ್ತ್ಯಾರೂ ಮಾಡಲಾರರು.ಮದುವೆಯಾದ ಹೆಂಗಸಿಗೆ ಗಂಡನ ಹತ್ತಿರ ಹೇಳಿದರೆ ಅವನಿಗೆ ಅನುಮಾನ, ತವರಿನಲ್ಲಿ ಹೇಳಿದರೆ ಅವಮಾನ. ಅನ್ಯರಲ್ಲಿ ಹೇಳಲು ಬಿಗುಮಾನ...ಹೀಗಿರುವಾಗ ಹಂಚಿಕೊಳ್ಳಲು ಹಳೆಯ ಸ್ನೇಹಿತೆಯಲ್ಲದೆ ಇನ್ಯಾರು ಬಂದಾರು?

ಯಾವುದ್ಯಾವುದೋ ಕಾರು ಬೈಕುಗಳ ಚರ್ಚೆ ನಾವು ಮಾಡದಿರಬಹುದು, ಆದರೆ ಅಮ್ಮ ನಿನ್ನೆ ಸಂಜೆ ಯಾಕೆ ಮೌನವಾಗಿದ್ದಳು ಎಂದು ಯೋಚಿಸುತ್ತೇವೆ. ಎಂತಹ ಕ್ರಿಕೆಟ್ ಟೀಮ್ ಕಟ್ಟಿದರೆ ಭಾರತ ಮುಂದಿನ ವರ್ಲ್ಡ್‌ಕಪ್ ಗೆಲ್ಲಬಹುದು ಎಂದು ವಾದಿಸುವಷ್ಟು ಜ್ಞಾನ ಇಲ್ಲದಿರಬಹುದು. ಆದರೆ ಮುಂದಿನ ವರ್ಷ ಕಾಲೇಜ್‌ನಲ್ಲಿ ಯಾವ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡರೆ ಉತ್ತಮ ಎನ್ನುವ ವಾದ ನಡೆದೇ ಇರುತ್ತದೆ.

ನಾಲ್ಕು ಜನ ಹುಡುಗಿಯರು ಸೇರಿದರೆ ಅಲ್ಲಿ ಇಲ್ಲದ ಐದನೆಯವಳ ಬಗ್ಗೆ ಹಗುರಾಗಿ ಮಾತನಾಡಿಕೊಳ್ಳಬಹುದು. ಆದರೆ ನಮ್ಮ ಗೆಳತಿಯೊಬ್ಬಳಿಗೆ ಕಾಟ ನೀಡು ಕಾಮಣ್ಣನಿಗೆ ಹೇಗೆ ಪಾಠ ಕಲಿಸಬಹುದು ಎಂದು ಒಗ್ಗಟ್ಟಾಗಿ ವಿಚಾರವನ್ನು ಕೂಡಾ ಮಾಡುತ್ತೇವೆ. ರವಿ ಕಾಣದ್ದನ್ನು ಕವಿ ಕಂಡನಂತೆ. ಆದರೆ ಕವಿಯೂ ಕಾಣದ್ದು ನಮ್ಮ ಗೆಳೆತನ; ಹುಡುಗಿಯರ ಸ್ನೇಹ

No comments: