Saturday, March 15, 2008

ಪಿಯೂಸಿ ಎಂಬ ರೋಮಾಂಚನದ ಹೊಸ್ತಿಲಲ್ಲಿ ನಿಂತು...


ಪರೀಕ್ಷೆಗಳೆಲ್ಲ ಮುಗಿದಿದೆ. ಒಂದು ಕಡೆ ಸಂತೋಷವಾದರೆ ಇನ್ನೊಂದು ಕಡೆ ದುಃಖ; ಪ್ರೀತಿಯ ಶಾಲೆ ಬಿಟ್ಟುಹೋಗುವ ದುಃಖ... ನೆಲ್ಲಿಕಾಯಿಯಿಂದ ಹಿಡಿದು ಕಣ್ಣೀರತನಕ ಹಂಚಿಕೊಂಡ ಸ್ನೇಹಿತರನ್ನು ಬಿಟ್ಟುಹೋಗುವ ನೋವು.

ಸೊಕ್ಕಿನ ಸೋಡಾಬುಡ್ಡಿ ಸ್ಮಿತಾಳಿಂದ ಹಿಡಿದು 'ದೊಡ್ಡಪ್ಪ' ಸರ್ ತನಕ ಎಲ್ಲರ ಹತ್ತಿರವೂ ಆಟೋಗ್ರಾಫ್, ಸ್ಲ್ಯಾಮ್‌ಗಳನ್ನು ಹಾಕಿಸಿಕೊಂಡಾಗಿತ್ತು. ಸೆಂಡ್‌ ಆಫ್ ಕೂಡಾ ಮುಗಿದಿತ್ತು.

ಸೆಂಡ್‌ ಆಫ್ ದಿನ ಎಲ್ಲರ ಕಣ್ಣಲ್ಲೂ ನೀರು. ಮಾತು ಯಾರಿಗೂ ಬೇಡವಾಗಿತ್ತು. ಫೋಟೋ ಸೆಶನ್‌ನಲ್ಲಿ ಬಾರದಿದ್ದ ನಗು ತರಿಸಿಕೊಂಡು ಗ್ರೂಪ್ ಫೋಟೋ ತೆಗೆಸಿಕೊಂಡೂ ಆಗಿತ್ತು. ಎಲ್ಲರಿಗೂ ಮುಂದಿನ ಯೋಚನೆ...

ಮನೆ-ಶಾಲೆ ಎಂದು ಪುಟ್ಟ ಪ್ರಪಂಚದೊಳಗಿದ್ದ ನಾವೆಲ್ಲ ಕಾಲೇಜು ಎನ್ನುವ ಹೊರ ಜಗತ್ತಿಗೆ ಕಾಲಿಡಲಿದ್ದೇವೆ. ಏನೇನು ಅನುಭವಗಳು, ಸವಾಲು ಸಮಸ್ಯೆಗಳನ್ನು ಎದುರಿಸಲಿದ್ದೇವೋ ಏನೋ... ಪರಿಸ್ಥಿತಿಗಳು ನಮ್ಮನ್ನು ಹೇಗೇಗೆ ಬದಲಾಯಿಸುವುದೋ ಏನೋ... ಹತ್ತಿರದಲ್ಲೆಲ್ಲೂ ಕಾಲೇಜು ಇಲ್ಲದಿದ್ದುದರಿಂದ ಮನೆ ಬಿಟ್ಟು, ಅಪ್ಪ-ಅಮ್ಮನನ್ನು ಬಿಟ್ಟು ದೂರ ಇರುವುದು ಅನಿವಾರ್ಯ. ಹಗಲು-ರಾತ್ರಿ ಇದೇ ಚಿಂತೆ. ಮನೆ ಬಿಟ್ಟು ಹೇಗಿರಲಿ? ಕುಮ್ಮಿ, ಪಕ್ಕಿ, ಪಚ್ಚಿ, ಮಂಗಿ... ಇವರನ್ನೆಲ್ಲ ಬಿಟ್ಟು ಹೇಗಿರಲಿ? ಕಾಲೇಜು ಜೀವನದಲ್ಲಿ ಎಂತೆಂಥವರು ಸಿಗುತ್ತಾರೋ....


ಪ್ರತಿವಾರ ಅಮ್ಮನ ಕೈಯ ತಲೆಸ್ನಾನ, ಅಪ್ಪನ ಹೊಟ್ಟೆಯ ಮೇಲೆ ತಲೆಯಿರಿಸಿಕೊಂಡು ಟಿ.ವಿ ನೋಡುವ ಖುಷಿ- ಇವು ಯಾವುದೂ ಇರದು. ನನಗೆ ಗೊತ್ತು, ಇಷ್ಟು ದಿನ ಮನೆಯಲ್ಲಿ ಇದ್ದುದ್ದೇ ಬಂತು; ಇನ್ನು ಮುಂದೆ ವರ್ಷಾನುಗಟ್ಟಲೆ ನನ್ನ ಮನೆಯಲ್ಲಿ ಇರುವ ಅವಕಾಶ ಸಿಗದೆನೋ. ವಿದ್ಯಾಭ್ಯಾಸಕ್ಕೆಂದು ಮನೆ ಬಿಟ್ಟ ಹುಡುಗಿಗೆ; ಕಲಿತು ಮುಗಿದ ತಕ್ಷಣ ಮದುವೆ ಮಾಡಿ ಮತ್ತೊಂದು ಮನೆಗೆ ಕಳುಹಿಸಿಬಿಡುತ್ತಾರೆ.

ಬಹುಶಃ ಇನ್ನು ಕೆಲವೇ ದಿನಗಳು ಮಾತ್ರ ನಾನು ಈ ಮನೆಯಲ್ಲಿರುತ್ತೇನೆ. ಆಮೇಲೆ ಶಾಶ್ವತವಾಗಿ ಈ ಮನೆಗೆ ಕೇವಲ ಕೆಲ ದಿನಗಳ ಅತಿಥಿ ಮಾತ್ರ... ಈ ದುಃಖ ಒಂದು ಕಡೆಯಾದರೆ ಪಿಯೂಸಿನಲ್ಲಿ ಯಾವ ವಿಷಯ ತೆಗೆದುಕೊಳ್ಳಬೇಕು ಎಂಬ ಗೊಂದಲ ಮತ್ತೊಂದೆಡೆ.

ಒಬ್ಬೊಬ್ಬರದು ಒಂದೊಂದು ಸಲಹೆ. ಸಂಬಂಧಿಗಳು, ಸೀನಿಯರ್ಸ್. ಎಲ್ಲರೂ ತಮಗೆ ಸರಿ ಎನಿಸಿದ ವಿಷಯ ಸೂಚಿಸಿ ಅದನ್ನೇ ಆಯ್ಕೆ ಮಾಡಿಕೋ, ಮುಂದೆ ಒಳ್ಳೆಯ ಫ್ಯೂಚರ್ ನಿನ್ನದಾಗುತ್ತದೆ ಎನ್ನುವವರೆ. ಅದರಲ್ಲೂ ಮುಖ್ಯವಾಗಿ ಸೈನ್ಸ್ ತಗೋ ಎನ್ನುವ ಒತ್ತಡ. ಯಾರಾದರೂ ಪರಿಚಯಸ್ಥರು ಸಿಕ್ಕಾಗ 10th ಮುಗಿಯಿತು ಎಂದರೆ ಸಾಕು. ಸಲಹೆಗಳ ಕೊಳದಲ್ಲಿ ಅದ್ದಿ ಅದ್ದಿ ತೆಗೆಯುತ್ತಾರೆ. ಆದರೆ ಪುಣ್ಯಕ್ಕೆ ಬೇರೆಯವರಂತೆ ಅಪ್ಪ-ಅಮ್ಮ ನನ್ನ ಮೇಲೆ ಇದ್ಯಾವುದೇ ಒತ್ತಡ ಹೇರಿರಲಿಲ್ಲ.

ಲ್ಯಾಬ್ ಗಳಲ್ಲಿ ಕುಳಿತು ಆ ಎಕ್ವಿಪ್ ಮೆಂಟ್ ಗಳ ಮಧ್ಯೆ ನಾನೂ ಒಂದು ಎಕ್ವಿಪ್ ಮೆಂಟ್ ಆಗುವುದು ನನಗಿಷ್ಟವಿರಲಿಲ್ಲ. ಅಣ್ಣ ಸೈನ್ಸ್ ತೆಗೆದುಕೊಂಡು ಪೇಚಾಡುವುದನ್ನು ನೋಡೇ ಅದಕ್ಕೆ ಕೈಮುಗಿದಿದ್ದೆ. ತಲೆಗೆ ಹೋಗದ ಗಣಿತದಿಂದ ಕಾಮರ್ಸ್ ಕಷ್ಟವೆನಿಸುತ್ತದೆ. ನನ್ನಂತಹ ಭಾವುಕಜೀವಿಗಳಿಗೆ ಹೇಳಿ ಮಾಡಿಸಿದ್ದಂತಹದ್ದು 'ಆರ್ಟ್ಸ್'.

'ಆರ್ಟ್ಸ್' ಕಂಡರೆ ಬಹಳ ಜನ ಮೂಗು ಮುರಿಯುತ್ತಾರೆ. ಬಹುಶಃ 'ಆರ್ಟ್ಸ್ ನಿಂದ ಬರುವ ಸಂಪಾದನೆ ಕಡಿಮೆ' ಎನ್ನವುದೇ ಇದಕ್ಕೆ ಕಾರಣವಿರಬೇಕು. 'ಆರ್ಟ್ಸ್ ಬಹಳ ಸುಲಭ. ಕೆಲಸಕ್ಕೆ ಬಾರದವರು, ಏನೋ ಒಂದು ಡಿಗ್ರಿ ಪಡೆಯಬೇಕು ಎನ್ನುವವರು, ಸೋಮಾರಿಗಳು 'ಆರ್ಟ್ಸ್' ವಿಷಯ ತೆಗೆದುಕೊಳ್ಳುತ್ತಾರೆ ಎನ್ನುವ ಭಾವನೆ ಜನರ ಮನಸ್ಸಿನಲ್ಲಿ ಮನೆಮಾಡಿಬಿಟ್ಟಿದೆ.

ಓದುವ ಒತ್ತಡ ಕಡಿಮೆ, ಅಪರಿಚಿತವಲ್ಲದ ವಿಷಯಗಳಿರುವುದರಿಂದ ಏನಾದರೂ ನಾಲ್ಕು ಸಾಲು ಬರೆಯಬಹುದು ಎನ್ನುವ ಧೈರ್ಯದಿಂದ 'ಆರ್ಟ್ಸ್' ವಿದ್ಯಾರ್ಥಿಗಳು ಸೈನ್ಸ್ ವಿದ್ಯಾರ್ಥಿಗಳಿಗಿಂತ ಹಾಯಾಗಿ ಓಡಾಡಿಕೊಂಡಿರುತ್ತಾರೆ. ಇದಕ್ಕೆ ಅದು ಸೋಮಾರಿಗಳ ವಿಷಯ ಆಗಿಬಿಟ್ಟಿದೆಯೋ ಏನೋ...

ಯಾರು ಏನೇ ಹೇಳಲಿ; ನನಗಂತೂ 'ಆರ್ಟ್ಸ್' ಮೇಲೆ ಪ್ರೀತಿ. ಟ್ಯೂಷನ್ನು, ಕ್ಲಾಸು, ಅಸೈನ್ ಮೆಂಟು ಎಂದು ಹೈರಾಣಾಗುವ ಸೈನ್ಸ್ ವಿದ್ಯಾರ್ಥಿಗಳನ್ನು ಕಂಡರೆ ಮರುಕ ಹುಟ್ಟುತ್ತದೆ. ನಿಜ, 'ಆರ್ಟ್ಸ್' ವಿದ್ಯಾರ್ಥಿಗಳಿಗೆ ಅಭ್ಯಾಸದ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳವ ಅವಶ್ಯಕತೆ ಇಲ್ಲ. ಆದ್ದರಿಂದಲೇ ಅವರು ಇನ್ನಿತರ ಕಡೆ ಗಮನ ಹರಿಸಲು ಸಾಧ್ಯವಿದೆ. ಅಕಸ್ಮಾತ್ ಫೇಲಾದರೂ ಅಷ್ಟು ಫೀಲ್ ಆಗಲಾರರು.

ಅದೇ, ಎಕ್ಯುಪ್‌ಮೆಂಟ್, ಟ್ಯೂಷನ್, ಕ್ಲಾಸು, ಟೆಸ್ಟ್‌ಗಳು ಎಂದು ದಿನದ ಹದಿನಾಲ್ಕು-ಹದಿನೈದು ತಾಸು ಅಭ್ಯಾಸದಲ್ಲೇ ಮುಳುಗಿರುವ ವಿದ್ಯಾರ್ಥಿ ಫೇಲ್ ಆದರೆ, ಆ ಆಘಾತವನ್ನು 17-18ರ ಎಳೆಯ ಮನಸ್ಸು ಸಹಿಸಿಕೊಳ್ಳಲು ಸಾಧ್ಯವಿದೆಯೆ? 'ಆರ್ಟ್ಸ್' ತೆಗೆದುಕೊಂಡು ಡಾಕ್ಟರ್ ಆಗಲು ಸಾಧ್ಯವಿಲ್ಲದಿರಬಹುದು, ಆದರೆ ಅದಕ್ಕಾಗಿ ಇಷ್ಟೆಲ್ಲ ಬೆಲೆ ತೆರಲು ನಾನು ಸಿದ್ಧಳಿಲ್ಲ!

1 comment:

Chevar said...

good posts. very nice to read. Baravanige munduvariyali