ಹೆಣ್ಣಿಗಿರಲಿ ಗಂಡಿಗಿರಲಿ ಹೆಚ್ಚಾಗಿ ಒಂದು ಆರೋಗ್ಯಕರವಾದ ಸ್ನೇಹ ಮೊಳೆಯುವುದು ಹೈಸ್ಕೂಲ್ ಜೀವನದಲ್ಲೇ. ಏಕೆಂದರೆ ಆ ಮುಗ್ಧ ಮನಸ್ಸು ಸ್ನೇಹಕ್ಕೆ ಹೇಳಿ ಮಾಡಿಸಿದಂಥಾದ್ದು. ನಾನು ನೋಡಿದಂತೆ ಜನರು ತಮ್ಮ ಹೈಸ್ಕೂಲ್ ಜೀವನವನ್ನು ಮೆಲುಕು ಹಾಕಿಕೊಳ್ಳುವಷ್ಟು ಜೀವನದ ಇನ್ಯಾವ ಕ್ಷಣಗಳನ್ನೂ ಅಷ್ಟು ಪ್ರೀತಿಯಿಂದ ನೆನಪು ಮಾಡಿಕೊಳ್ಳಲಾರರು. ನನ್ನ ಅಮ್ಮ ಈಗಲೂ ಕೂಡಾ ಅವಳ ಹೈಸ್ಕೂಲ್ ಸಖಿ ರಾಧೆಯನ್ನು ನೆನಪಿಸಿಕೊಳ್ಳುತ್ತಿರುತ್ತಾಳೆ.
ಒಮ್ಮೊಮ್ಮೆ, ಆ ಸ್ನೇಹಿತೆ ಮತ್ತೆ ಸಿಗಬಾರದೆ ಎಂದು ಪರಿತಪಿಸುತ್ತಿರುತ್ತಾಳೆ. "ಅಮ್ಮಾ ಯಾಕೆ ಸುಮ್ನೆ ಬೇಜಾರು ಮಾಡ್ಕೋತಿಯಾ? ಈ ಸಾರಿ ಅಜ್ಜಿಮನೆಗೆ ಹೋದಾಗ ಅವಳನ್ನು ಭೇಟಿ ಮಾಡುಎಂದೆ. "ಅವಳ ಸಂಸಾರದ ಗೋಳೇ ಅವಳಿಗೆ ಹೆಚ್ಚಾಗಿರಬಹುದು. ಈಗ ನಾನು ಹೋಗಿ ಅವಳಿಗೆ ಇನ್ನೂ ತ್ರಾಸು ಕೊಡಲಾ? ಮದುವೆಯಾದ ಮೇಲೆ ಅಷ್ಟೆ; ಅವರವರ ಸಂಸಾರ ಅವರವರಿಗೆ ಎಂದು ನಿಟ್ಟುಸಿರು ಬಿಟ್ಟಳು.
ಮುಂದೊಂದು ದಿನ ನಾನೂ ಕೂಡಾ ನನ್ನ ಕುಮ್ಮಿ, ಮಂಗು, ಪಚ್ಚಿ, ಪಕ್ಕಿ ... ಅವರನ್ನೆಲ್ಲ ನೆನಸಿಕೊಂಡು ಹೀಗೆ ಬೇಜಾರು ಮಾಡ್ಕೋಬಹುದಾ? ಅವರೆಲ್ಲ ನನ್ನ ಡೈರಿಯಲ್ಲೋ, ಸ್ಲಾಮ್ ಬುಕ್ಕಿನ ಹಾಳೆಗಳ ನಡುವೆಯೋ ಹೀಗೆ ಕೇವಲ ನೆನಪಾಗಿ ಉಳಿದುಬಿಡುತ್ತಾರಾ ? ಇವರೆಲ್ಲ ನಾನು ಮುದುಕಿಯಾಗಿ ಸಾಯುವ ತನಕ ಜೊತೆಯಲ್ಲಿರೋದಿಲ್ವಾ...? ನೆನೆಸಿಕೊಂಡ್ರೇ ಅಳು ಬರುತ್ತೆ....
ಹೈಸ್ಕೂಲ್ ದಿನಗಳೇ ಹಾಗೆ... ಜೀವನದ ಅಮೂಲ್ಯ ಕ್ಷಣಗಳು...
ಕಾಲೇಜ್‌ಗಳಲ್ಲೂ ಸ್ವಚ್ಛ ಸ್ನೇಹವಿರಬಹುದು. ಆದರೆ ನನಗೆ ತಿಳಿದಂತೆ ಅದಾಗಲೇ ಪ್ರೌಢವಾದ ಮನಸ್ಸು ಹುಚ್ಚುಕೋಡಿಯಂತೆ ಹರಿಯಲಾರದು; ತೀರ ಭಾವುಕವಾಗಿ ಮತ್ತೊಂದು ಜೀವವನ್ನು ಹಚ್ಚಿಕೊಳ್ಳಲಾರದು. ಅದಾಗಲೇ ಆ ಮನಸ್ಸು ತನ್ನ ಸುತ್ತಮುತ್ತಲಿನ ಸ್ವಾರ್ಥ, ದುರಾಸೆ, ಮೋಸಗಳನ್ನು ನೋಡಿ ಎಚ್ಚರವಾಗಿಬಿಟ್ಟಿರುತ್ತದೆ. ಯಾರಾದರೂ ಪ್ರಾಮಾಣಿಕವಾಗಿ, ನಿರುದ್ದೇಶದಿಂದ ಸ್ನೇಹಹಸ್ತ ಚಾಚಿದರೂ ಮೊಸರಿನಲ್ಲಿ ಕಲ್ಲು ಹುಡುಕುವಂತೆ 'ಸುಮ್‌ಸುಮ್ನೆ ಅವಳು ಅಥವಾ ಅವನ್ಯಾಕೆ ಫ್ರೆಂಡ್‌ಶಿಪ್ ಬಯಸ್ತಾನೆ?' ನನ್ನಿಂದ ಏನೋ ಕೆಲಸ ಆಗಬೇಕು ಅನಿಸುತ್ತೆ ಎಂದು ಅಲ್ಲಿಂದಲೇ ಅನುಮಾನ ಶುರು...
'ಮಾತಿನ ಮಲ್ಲಿಯಾದ ನನಗೆ ("ಮಾತಿನಮಲ್ಲಿ" ಅಂದರೆ ಏನು ಹೊಗಳಿಕೆಯಲ್ಲ. ಪಚ್ಚಿಯ ಪ್ರಕಾರ 'ಮಲ್ಲ' ಅಥವಾ 'ಜಟ್ಟಿ' ಇದರ ಸ್ತ್ರೀಲಿಂಗ 'ಮಲ್ಲಿ'ಯಂತೆ!!) ಸ್ವಾಭಾವಿಕವಾಗಿಯೇ ಸ್ನೇಹಿತ- ಸ್ನೇಹಿತೆಯರು ಬಹಳ. ನಮ್ಮ ಪಕ್ಕಿಯ ಅಭಿಪ್ರಾಯ 'ಹುಡುಗಿ'ಯರ ನಡುವಿನ ಗೆಳೆತನ ಕ್ಷಣಿಕ. ಹುಡುಗರ ಗೆಳೆತನ, ಹುಡುಗ ಹುಡುಗಿಯ ಗೆಳೆತನ ಕೂಡಾ ಶಾಶ್ವತವಾಗಿರಬಹುದು. ಆದರೆ ಹುಡುಗಿಯರ ಗೆಳೆತನ ಮಾತ್ರ ಬೇಗನೇ ಮುರಿದು ಹೋಗುತ್ತದೆ'. ಅವನ ವಿಚಾರವನ್ನು ಪೂರ್ತಿ ಸುಳ್ಳು ಎನ್ನಲಾಗದು.ಏಕೆಂದರೆ ನಮ್ಮ ಕುಮ್ಮಿ-ಮಂಗಿ ಅದೆಷ್ಟು ಸಾರಿ ಮಾತು ಬಿಟ್ಟುಕೊಂಡು ಮತ್ತೆ ಸ್ನೇಹಿತರಾದರೋ ಅವರಿಗೇ ಲೆಕ್ಕವಿಲ್ಲ.
ಅದೇ ಪಚ್ಚಿ-ಪಕ್ಕಿಯ ಗೆಳೆತನ ಒಂದೇ ರೀತಿ ಸಾಗುತ್ತದೆ. ತಮ್ಮ ನಡುವೆ ಬಂದ ಮನಸ್ತಾಪಗಳನ್ನು ಅವರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಜಗಳ ಮಾಡಿಕೊಂಡ ಸ್ವಲ್ಪ ಹೊತ್ತಿಗೇ ಏನೂ ಆಗೇ ಇಲ್ಲ ಎನ್ನುವಂತೆ ಒಬ್ಬರ ಹೆಗಲ ಮೇಲೆ ಮತ್ತೊಬ್ಬರು ಕೈಹಾಕಿಕೊಂಡು ಕಾರಿಡಾರ್ ಸುತ್ತುತ್ತಿರುತ್ತಾರೆ. ಅದೇ ಕುಮ್ಮಿ, ಮಂಗಿ, ನಾನು ಎಲ್ಲ ಜಗಳ ಮಾಡಿಕೊಂಡರೆ ವಾರ-ತಿಂಗಳುಗಟ್ಟಲೆ ನಮ್ಮ ನಡುವೆ ಮೌನ ಸಮರ! ಹೀಗಿದ್ದರೂ ಯಾವುದೋ ಒಂದು ನೋಟ, ಬಾಯಿತಪ್ಪಿ ಬಂದ ಮಾತು... ಇಷ್ಟು ಸಾಕು ಸ್ನೇಹ ಮರುಜೀವ ಪಡೆಯಲು.
ನನಗೆ ವಿಚಿತ್ರ ಎನಿಸುವುದೆಂದರೆ ನಾನು ಓದಿದ, ನೋಡಿದ ಸಾಹಿತ್ಯ-ಸಿನಿಮಾಗಳಲ್ಲೆಲ್ಲ ಎಲ್ಲ ರೀತಿಯ ಸ್ನೇಹದ ಬಗ್ಗೆ ಹೇಳುತ್ತಾರೆ. ಆದರೆ ಎರಡು ಹುಡುಗಿಯರ ನಡುವೆ ಇರುವ ಸ್ನೇಹ ಸಂಬಂಧಗಳ ಕುರಿತು ಸಾಹಿತ್ಯದಲ್ಲಾಗಲಿ, ಸಿನಿಮಾಗಳಲ್ಲಾಗಲಿ ಕಂಡಿದ್ದು ವಿರಳ. ಎಂಟನೆಯ ಕ್ಲಾಸಿನ ಮುದ್ದು ಹುಡುಗಿ ಕಾವೇರಿ. ಒಂಬತ್ತನೆಯ ಕ್ಲಾಸಿನ ಸೋಡಾಬುಡ್ಡಿ ವಸು, ನಮ್ಮ ಕ್ಲಾಸಿನ ಉಷಾ, ಚೈತ್ರಾ, ಶಾರದಾ... ಹೀಗೆ
ಅನೇಕ ಸ್ನೇಹಿತೆಯರಿದ್ದರೂ ಕುಮ್ಮಿ-ಮಂಗಿ ಅದರಲ್ಲೂ ಕುಮ್ಮಿಯ ಕಂಡರೆ ನನಗೆ ವಿಶೇಷ ಒಲವು. ಅವಳಿಗೂ ಅಷ್ಟೆ. ಅವಳು ನನ್ನ ಮೇಲಿಟ್ಟಿರುವ ಪ್ರೀತಿಯ ಎದುರು ನನ್ನ ಸ್ನೇಹ ಏನೂ ಅಲ್ಲ. ಅವಳು ಏನಾದರೂ ನೆಲ್ಲಿಕಾಯಿ ತಂದರೆ ನನಗೇ ಅಗ್ರ ಪಾಲು. ಅಮ್ಮ ಏನಾದರೂ ಸಿಹಿ ತಿಂಡಿ ಮಾಡಿದರೆ ಕುಮ್ಮಿಗೆ ಒಂದು ಪಾಲು. ಸ್ಟಾಫ್‌ರೂಮ್‌ಗೆ ಹೋಗುವುದರಿಂದ ಹಿಡಿದು ಶಾಲೆಯ ಯಾವುದೇ ಜವಾಬ್ದಾರಿ ವಹಿಸಿಕೊಳ್ಳುವ ತನಕವೂ ಇಬ್ಬರೂ ಜೋಡಿಯಾಗಿಯೇ. ಈ ಸ್ನೇಹಕ್ಕೂ ಕಾರಣವಿಲ್ಲದಿಲ್ಲ.
3 comments:
ನಮಸ್ಕಾರ,
ಬರಹಗಳು ಮನದ ಭಾವಕೆ ಹಿಡಿದ ಕನ್ನಡಿ, ಹೆಚ್ಚು ಓದಿ ಮತ್ತೂ ಬರೆಯಿರಿ.
ಶುಭವಿರಲಿ ನಿಮಗೆ
-ಅಮರ
article tumba chennagide.....
keep it up......
nice article madam......
keep it up...
may i know which is ur native place......
Post a Comment